Advertisement
ಏಪ್ರಿಲ್ 13 , 1944 ರಲ್ಲಿ ಅಹಮದಬಾದ್ ನ ಬಡ ಕೃಷಿ ಕುಟುಂಬದಲ್ಲಿ ಹುಟ್ಟಿದ ಕರ್ಸನ್ ಭಾಯಿ ಪಟೇಲ್, ರಸಾಯನಶಾಸ್ತ್ರದಲ್ಲಿ ಬಿಎಸ್ ಎಸ್ಸಿ ಪದವಿಯನ್ನುಗಳಿಸುತ್ತಾರೆ. ನಂತರ ಅಹಮದಬಾದ್ ನ ಲ್ಯಾಬ್ ವೊಂದರಲ್ಲಿ ಸಹಾಯಕನಾಗಿ ಹುದ್ದೆಯನ್ನು ಪಡೆಯುತ್ತಾರೆ. ಆದರೆ ಈ ಕೆಲಸದಲ್ಲಿ ನೆಮ್ಮದಿಯಿಲ್ಲದೆ ಸದಾ ಏನಾದರೂ ಒಂದು ಮಾಡಬೇಕೆನ್ನುವ ಯೋಚನೆಯಲ್ಲಿ ಇರುತ್ತಾರೆ. ಕೆಮೆಸ್ಟ್ರಿ ವಿದ್ಯಾರ್ಥಿಯಾಗಿದ್ದ ಕಾರಣ ಕರ್ಸನ್ ಭಾಯಿ ಪಟೇಲ್ ಬಿಡುವಿನ ವೇಳೆಯಲ್ಲಿ ಕೆಮಿಕಲ್ ಗಳನ್ನು ಬಳಸಿಕೊಂಡು ಏನೇನಾದರೂ ಮಾಡುತ್ತಿದ್ದರು. ಇದು ದಿನ ನಿತ್ಯದ ಹವ್ಯಾಸವಾಗಿ ಬೆಳೆದಾಗ ಅದೊಂದು ದಿನ ಕರ್ಸನ್ ಭಾಯಿ ಪಟೇಲ್ ರಿಗೆ ಕಡಿಮೆ ಖರ್ಚಿನಲ್ಲಿ ಉತ್ತಮ ಗುಣಮಟ್ಟವುಳ್ಳ ಡಿಟರ್ಜೆಂಟ್ ಪೌಡರ್ ವೊಂದನ್ನು ತಯಾರಿಸಬೇಕು ಎನ್ನುವ ಯೋಚನೆ ಬರುತ್ತದೆ. ಈ ಯೋಚನೆಯನ್ನು ಮರುದಿನದಿಂದಲೇ ಯೋಜನೆಯಾಗಿ ರೂಪಿಸಿಕೊಳ್ಳುವ ನಿಟ್ಟಿನಲ್ಲಿ ಕಾರ್ಯಪ್ರವೃತರಾಗುತ್ತಾರೆ.
Related Articles
Advertisement
ತನ್ನ ಮಗಳನ್ನು ಪ್ರೀತಿಯಿಂದ ನಿರ್ಮಾ ಎಂದು ಕರೆಯುತ್ತಿದ್ದ ಕರ್ಸನ್ ಭಾಯಿ ತಾನು ತಯಾರಿಸಿದ ಡಿಟರ್ಜೆಂಟ್ ಪೌಡರ್ ಗೆ ‘ನಿರ್ಮಾ’ ಎಂದು ಹೆಸರಿಡುತ್ತಾರೆ. ನಿರ್ಮಾ ಪೌಡರ್ ನೋಡು ನೋಡುತ್ತಿದ್ದಂತೆ ಗುಜರಾತ್ ನಲ್ಲಿ ತನ್ನ ಹಲವು ಶಾಖೆಯನ್ನು ಪ್ರಾರಂಭಿಸುತ್ತದೆ. ಮಾರುಕಟ್ಟೆಯಲ್ಲಿ ಉತ್ತಮ ರೀತಿಯಲ್ಲಿ ಹೆಸರುಗಳಿಸುತ್ತದೆ.
ಜನಪ್ರಿಯ ಜಾಹೀರಾತಿನಿಂದ ರಾತ್ರೋ ರಾತ್ರೀ ಪ್ರಸಿದ್ಧಿ : ನಿರ್ಮಾ ಪೌಡರ್ ಮಾರುಕಟ್ಟೆಯಲ್ಲಿ ಹೆಸರುಗಳಿಸಿದ್ರೂ, ಅಕ್ಕಪಕ್ಕದ ಅಂಗಡಿಗಳಿಗೆ ನಿರ್ಮಾ ಪೌಡರ್ ಸಾಲವಾಗಿ ನೀಡಲಾಗುತ್ತಿತ್ತು. ಸರಿಯಾದ ಸಮಯಕ್ಕೆ ಅಂಗಡಿ ಮಾಲಕರು ಹಣ ನೀಡಲು ಹಿಂದೇಟು ಹಾಕುತ್ತಿದ್ದರಿಂದ, ನಿರ್ಮಾದ ಸ್ಥಾಪಕರಾದ ಕರ್ಸನ್ ಭಾಯಿ ಎಲ್ಲಾ ಉದ್ಯೋಗಿಗಳಿಗೂ ಇನ್ನು ಮುಂದೆ ಸಾಲವಾಗಿ ಪೌಡರ್ ಗಳನ್ನು ನೀಡುವುದನ್ನು ನಿಲ್ಲಿಸಬೇಕೆಂದು ನಿರ್ಣಯ ಮಾಡುತ್ತಾರೆ.
ಕರ್ಸನ್ ಭಾಯಿ ಅಂದಿನ ಕಾಲದಲ್ಲಿ ಜನಮನದಲ್ಲಿ ಬೇರೂರಿದ್ದ ದೂರದರ್ಶನದಲ್ಲಿ ನಿರ್ಮದ ಕುರಿತು ಜಾಹೀರಾತು ನೀಡುತ್ತಾರೆ. “ಸಬ್ಕಿ ಪಸಂದ್ ನಿರ್ಮಾ, ವಾಷಿಂಗ್ ಪೌಡರ್ ನಿರ್ಮ…” ಈ ಹಾಡಿನ ಜಾಹೀರಾತು ಬಂದಾಗ ಪ್ರತಿಯೊಬ್ಬರ ತುಟಿ ತನ್ನಷ್ಟಗೆ ಮುಂದುವರೆದು ನಿರ್ಮಾದ ಜಾಹೀರಾತನ್ನು ಹಾಡುವಷ್ಟು ಪ್ರಸಿದ್ಧಿ ಆಗುತ್ತದೆ. ಎಲ್ಲೆಡೆಯಿಂದ ನಿರ್ಮಾದ ಬೇಡಿಕೆ ಹೆಚ್ಚುತ್ತದೆ. ನಿರ್ಮದ ತಯಾರಕರು ಸಾಲವಾಗಿ ಪೌಡರ್ ಗಳನ್ನು ನೀಡುವುದಿಲ್ಲ ಎನ್ನುವ ಪಟ್ಟಿಯನ್ನು ನಮೂದಿಸಿ ಎಲ್ಲೆಡೆ ನಿರ್ಮಾ ಪೌಡರನ್ನು ಕಳುಹಿಸುತ್ತಾರೆ. ನಂತರದಲ್ಲಿ ನಿರ್ಮಾದ ಜಾಹೀರಾತು ಜನಪ್ರಿಯ ನಟ ನಟಿಯರಿಂದ ಆಗುತ್ತದೆ. ನಿರ್ಮಾ ಮಾರುಕಟ್ಟೆಯಲ್ಲಿ ಬೇಡಿಕೆಯ ಬ್ರ್ಯಾಂಡ್ ಆಗುತ್ತದೆ.
ನಿರ್ಮಾ ಬ್ರ್ಯಾಂಡ್ ಎಷ್ಟು ಜನಪ್ರಿಯವಾಗುತ್ತದೆ ಎಂದರೆ ಮಾರುಕಟ್ಟೆಯಲ್ಲಿ ನಿರ್ಮಾ ಹೆಸರಿನಲ್ಲಿ ನಿರ್ಮಾ ಉಪ್ಪು, ನಿರ್ಮಾಸಕ್ಕರೆ, ನಿರ್ಮಾ ಸೋಪ್ .. ಹೀಗೆ ನಿರ್ಮಾದ ವಿವಿಧ ಪ್ರಾಡೆಕ್ಟ್ ಗಳು ಲಗ್ಗೆಯಿಡುತ್ತವೆ. ಮಗಳ ಹೆಸರು ನಿರ್ಮಾ ರೂಪದಲ್ಲಿ ಪ್ರಸಿದ್ದಿಗಳಿಸುತ್ತದೆ. ನಿರ್ಮಾ ಪ್ಯಾಕೆಟ್ ನಲ್ಲಿ ಮಗಳ ರೇಖಾ ಚಿತ್ರವನ್ನು ಸೃಷ್ಟಿಸುತ್ತಾರೆ.
ಒಂದು ಖಾಲಿ ಜಾಗದಲ್ಲಿ, ಒಂಟಿ ಹುಡುಗನ ಯೋಚನೆಯಿಂದ ಆರಂಭವಾದ ನಿರ್ಮಾ ಹಲವು ಸಮಾಜಮುಖಿ ಕೆಲಸವನ್ನು ಮಾಡುತ್ತಾ, ಅಹಮದಬಾದ್ ನಲ್ಲಿ ನಿರ್ಮಾ ವಿಶ್ವವಿದ್ಯಾನಿಲಯವನ್ನು ಸ್ಥಾಪಿಸಿದ್ದಾರೆ. ಇಂದು ಸುಮಾರು 17 ಸಾವಿರಕ್ಕೂ ಹೆಚ್ಚು ಮಂದಿ ನಿರ್ಮಾ ಸಂಸ್ಥೆಯಲ್ಲಿ ಕೆಲಸ ಮಾಡುತ್ತಿದ್ದಾರೆ. ವಾರ್ಷಿಕವಾಗಿ ಕೋಟಿಗಟ್ಟಲೆ ಆದಾಯವನ್ನು ನಿರ್ಮಾಗಳಿಸುತ್ತಿದೆ.
–ಸುಹಾನ್ ಶೇಕ್