Advertisement

ಕೈಯಲ್ಲಿ ಕಾಸಿಲ್ಲದೆ ಬಂದು ‘ಮುಂಬೈನ ಜೀವಂತ ಪ್ರತಿಮೆ’ಎಂಬ ಖ್ಯಾತಿಯ ಯುವಕನ ಬಗ್ಗೆ ಗೊತ್ತಾ?

12:10 PM Nov 14, 2019 | Suhan S |

ಕನಸುಗಳು ಯಾರಿಗೆ ಇರಲ್ಲ ಹೇಳಿ ? ರಸ್ತೆ ಬದಿ ಅಲೆಯುವ ಭಿಕ್ಷುಕನಿಗೂ ತಾನೊಂದು ಒಳ್ಳೆ ವ್ಯಕ್ತಿ ಆಗಬೇಕು ಎನ್ನುವ ಕನಸು ಇರುತ್ತದೆ. ಒಂದೊಳ್ಳೆ ಮಧ್ಯಮ ವರ್ಗದ ವ್ಯಕ್ತಿಗೂ ತಾನೊಂದು ಮನೆ ಕಟ್ಟಿ ಸುಖವಾಗಿರ ಬೇಕೆನ್ನುವ ಕನಸು ಇರುತ್ತದೆ. ಇನ್ನೂ ತಾನು ಕಲಿತ ಕ್ಷೇತ್ರದಲ್ಲೇ ಅಂದುಕೊಂಡ ಕೆಲಸ ಸಿಗಬೇಕೆನ್ನುವ ಕನಸು  ಕಾಣುವ ಅದೆಷ್ಟೋ ಮಂದಿಗೆ ಯಶಸ್ಸು ಅನ್ನುವ ‘ವಜ್ರ’ ಸಿಗುವುದು ಲೆಕ್ಕಕ್ಕೆ ಸಿಗುವ ವ್ಯಕ್ತಿಗಳಿಗೆ ಮಾತ್ರ.

Advertisement

ತಾನೊಂದು ನಟನಾಗಬೇಕು, ನಿರ್ದೇಶಕನಾಗಬೇಕು, ಕಿರುತೆರೆಯಲ್ಲಿ ಮಿಂಚಬೇಕು ಎನ್ನುವ ಕನಸು ಕಟ್ಟಿಕೊಂಡು ಮಾಯಾ ನಗರಿ ಮುಂಬಯಿಗೆ ಪಯಣ ಬೆಳೆಸಿ ಖಾಲಿ ಕೈಯಲ್ಲಿ ಅವಕಾಶಕ್ಕಾಗಿ ಅಲೆಯುವ ಅದೆಷ್ಟೋ ಮಂದಿಯನ್ನು ನಾವು ದಿನನಿತ್ಯ ನೋಡುತ್ತಲೇ ಇದ್ದೇವೆ. ಒಂದಲ್ಲ ಒಂದು ದಿನ ಅದೃಷ್ಟದ ಬಾಗಿಲು ತೆರೆಯುತ್ತದೆ ಎನ್ನುವ ನಂಬಿಕೆಯಲ್ಲಿ ಸಣ್ಣ ಪುಟ್ಟ ‌ಕೆಲಸಗಳನ್ನು ಮಾಡುತ್ತಾ ದಿನದೂಡುವ ತಾರಾ ಕನಸಿನ ಯುವಕರನ್ನು ಮುಂಬಯಿ ಬೆಳೆಸಿದೆ ಜೊತೆಗೆ ಕೆಲವರನ್ನು ಕುಗ್ಗಿಸಿದೆ. ಹಲವರನ್ನು ಸಾಧಿಸುವಂತೆ ಛಲದಿಂದ ಮುನ್ನುಗಿಸಿದೆ.

ಹೀಗೆ ತಾನು ಮುಂಬಯಿಗೆ ಹೋಗಬೇಕು, ನಟನಾಗಬೇಕು ಎನ್ನುವ ಸಾವಿರ ಕನಸಿನಲ್ಲಿ ತನ್ನ ಒಂದು ಕನಸು ಇಟ್ಟುಕೊಂಡು ಮುಂಬಯಿಗೆ ಪಯಣ ಬೆಳೆಸಿದವ ಉತ್ತರ ಪ್ರದೇಶದ ಗಿರ್ಜೇಶ್ ಗೌಡ್. ಆಗಷ್ಟೇ ಹತ್ತನೇ ತರಗತಿ ಮುಗಿಸಿ ಊರಿನ ಗದ್ದೆಯಲ್ಲಿ ಕೆಲಸ ಮಾಡುತ್ತಿದ್ದ ಗಿರ್ಜೇಶ್  ಅದೊಂದು ತಾನು ಮುಂಬಯಿಗೆ ಹೋಗಬೇಕು, ನಟನಾಗಬೇಕು ಎನ್ನುವ ದೂರದ ಕನಸೊಂದು ಮನದಲ್ಲಿ ಚಿಗುರುತ್ತದೆ. ಮುಂದೆ ಅದೇ ಚಿಗುರಿನ ಕನಸು ಇನ್ನಷ್ಟು ಗಟ್ಟಿಯಾಗಿ ಮುಂಬಯಿಗೆ ಹೋಗಲು ಸಿದ್ದನಾಗುತ್ತಾನೆ.

ಮನೆಯಲ್ಲಿ ತನಗೆ ಮುಂಬಯಿಗೆ ಹೋಗಬೇಕು ಅಲ್ಲಿ ಸೆಕ್ಯುರಿಟಿ ಕೆಲಸ ಮಾಡಿಕೊಂಡು ಇರುತ್ತೇನೆ ಎಂದು ಸುಳ್ಳು ನೆಪವನ್ನು ಹೇಳಿ ಆದಷ್ಟು ಬೇಗ ಮನೆಯಿಂದ ಹೊರಡಲು ಸಿದ್ಧನಾಗುತ್ತಾನೆ. ಆದರೆ ರೈಲಿನಲ್ಲಿ ಹೋಗಲು ಹಣಯಿಲ್ಲದೆ ಇನ್ನಷ್ಟು ದಿನ ಕಾದು, ಗೋಧಿ ವ್ಯಾಪಾರ ಮಾಡಿ ಹಣ ಉಳಿಸಿಕೊಂಡು ಕನಸಿನ ನಗರಿ ಮುಂಬಯಿಗೆ ಪಯಣ ಬೆಳೆಸುತ್ತಾನೆ.

ಮಾಯಾ ನಗರಿಯ ಅಲೆದಾಟ : ಗಿರ್ಜೇಶ್ ಗೆ ಆಗಷ್ಟೇ ಚಿಗುರು ಮೀಸೆಯ ಹರೆಯ. ಮನೆಯಲ್ಲಿ ಸುಳ್ಳು ಹೇಳಿಕೊಂಡು ಮುಂಬಯಿಗೆ ಬಂದು ನಟನಾಗುತ್ತೇನೆ ಎನ್ನುವ ಬಾಯಿ ಮಾತನ್ನೇ ಕನಸು ಅಂದುಕೊಂಡ ಆತನಿಗೆ ಮುಂಬಯಿ ನಿಜವಾದ ಜೀವನವನ್ನು ಪರಿಚಯಿಸುತ್ತದೆ. ತಾನು ಸುಲಭವಾಗಿ ನಟನಾಗಬಲ್ಲೆ ಅವಕಾಶ ಸಿಗಬಹುದು ಅಂದುಕೊಂಡವವನಿಗೆ ದಿನದೂಡಲು ಹಣವಿಲ್ಲದೆ ಒಂದು ರಾತ್ರಿ ಸ್ಟೇಷನ್ ನಲ್ಲಿ ಕಳೆಯುತ್ತಾನೆ. ಮರುದಿನದಿಂದ ಮುಂಬಯಿಯ ಅಂಧೇರಿ, ಬಾಂದ್ರದ ಕಡೆಯಲ್ಲಿ ‌ಫ್ರೋಡಕ್ಷನ್ ಹೌಸ್ ನಲ್ಲಿ ಕೆಲಸ ಸಿಗುವ ನಿರೀಕ್ಷೆಯಲ್ಲಿ ಅಲೆದಾಡುತ್ತಾನೆ. ಆದರೆ ಎಲ್ಲೂ ದಾರಿ ಕಾಣದೆ ಸುಮ್ಮನೆ ಕೂರುತ್ತಾನೆ.

Advertisement

ಅದೇ ಸಮಯದಲ್ಲಿ ಗಿರ್ಜೇಶ್ ಗೆ ಒಬ್ಬ ವ್ಯಕ್ತಿಯ ಪರಿಚಯವಾಗುತ್ತದೆ. ಆ ವ್ಯಕ್ತಿ ನೂರು ರೂಪಾಯಿ ಪಡೆದು ನಾನಾ ಕಡೆ ನಡೆಯುವ ಆಡಿಷನ್ ನಲ್ಲಿ ಭಾಗವಹಿಸಲು ಗಿರ್ಜೇಶ್ ಗೆ ಅವಕಾಶ ಮಾಡಿಕೊಡುತ್ತಾನೆ. ಆದರೆ ಎಲ್ಲಾ ಆಡಿಷನ್ ನಲ್ಲಿ ಕಾದು ಕಾದು ಅವಕಾಶ ಗಿಟ್ಟಿಸಿಕೊಂಡರೂ ಗಿರ್ಜೇಶ್ ಯಾವುದರಲ್ಲೂ ಯಶಸ್ಸು ಸಾಧಿಸುವುದಿಲ್ಲ. ಮುಂದೆ ಕ್ಯಾಮರಾವನ್ನು ನೋಡಿಕೊಂಡು ಸಣ್ಣ ಪುಟ್ಟ ತಾಂತ್ರಿಕ ಕೆಲಸವನ್ನು ಕಲಿಯುವ ಗಿರ್ಜೇಶ್ ಗೆ ತಾನು ನಟನಾಗಬೇಕು ವಿನಃ ಬೇರೆ ಯಾವ ಕೆಲಸ ಬೇಡ ಅನ್ನುವ ನಿರ್ಧಾರವನ್ನು ಗಟ್ಟಿಗೊಳಿಸುತ್ತಾನೆ.

ಯೂಟ್ಯೂಬ್ ನಲ್ಲಿತ್ತು ಅದೃಷ್ಟ.!  ಅದೊಂದು ದಿನ ಯೂಟ್ಯೂಬ್ ನಲ್ಲಿ ವೀಡಿಯೋಗಳನ್ನು ನೋಡುತ್ತಿದ್ದ ವೇಳೆಯಲ್ಲಿ ಗಿರ್ಜೇಶ್ ಗೆ ಪ್ರತಿಮೆಯೊಂದರ (Statue) ಹಾಸ್ಯಭರಿತ ವೀಡಿಯೋ ತುಣುಕೊಂದು ಕಣ್ಣಿಗೆ ಬೀಳುತ್ತದೆ. ತಾನು ಏನಾದರೂ ವಿಶೇಷವಾದದ್ದನ್ನು ಮಾಡಬೇಕು ಅನ್ನುವ ಗಿರ್ಜೇಶ್ ಅಲೋಚನೆಗೆ ಅಂದೇ ಒಂದು ಸ್ಪಷ್ಟತೆ ಸಿಗುತ್ತದೆ.

ಮರುದಿನ ಒಂದು ಅಂಗಿಯನ್ನು ಇಟ್ಟುಕೊಂಡು ಅದಕ್ಕೆ ಗೋಲ್ಡನ್ ಬಣ್ಣವನ್ನು ಲೇಪಿಸಿ ಬ್ಯಾಗ್ ಹಿಡಿದುಕೊಂಡು ಗೇಟ್ ವೇ ಆಫ್ ಇಂಡಿಯಾದ ಎದುರು ನಿಂತು ಮುಖಕ್ಕೆ ಗೋಲ್ಡನ್ ಬಣ್ಣದ ಮೇಕಪ್ ಮಾಡಿಕೊಂಡು ಒಂದು ಪ್ರತಿಮೆಯ ಹಾಗೆ ಸುಮ್ಮನೆ ನಿಲ್ಲುತ್ತಾನೆ ಅಷ್ಟೇ.!

ತನಗೆ ಅರಿವಿಲ್ಲದೆ ತಾನೊಂದು ಕಲಾವಿದನಾದ : ಮುಖಕ್ಕೆ ಮೇಕಪ್, ಕೋಟ್ ನ ಮೇಲೆ ಬಣ್ಣ, ಒಟ್ಟು ಇಡೀ ಮೈ ಗೋಲ್ಡನ್ ಕಲರ್, ಹಾಕಿಕೊಂಡು  ಜನಭರಿತ ಬೀದಿಯಲ್ಲಿ ಒಂದು ಡಬ್ಬಿಯನ್ನು ಇಟ್ಟುಕೊಂಡು ಪ್ರತಿಮೆಯ ಹಾಗೆ ನಿಲ್ಲಲು ಆರಂಭಿಸಿದ ಗಿರ್ಜೇಶ್ ನ ವಿಶಿಷ್ಟತೆಯನ್ನು ಕಂಡು ಜನ ಆಕರ್ಷಣೆಯಿಂದ ಹತ್ತಿರ ಬಂದು ಫೋಟೋ ಕ್ಲಿಕ್ಕಿಸಿಕೊಂಡು ಹೋಗಲು ಪ್ರಾರಂಭಿಸುತ್ತಾರೆ.

ಥೇಟು ಕಲ್ಲಿನ ಪ್ರತಿಮೆಯ ಹಾಗೆಯೇ ನಿಲ್ಲುವ ಈತನ ಕಲೆಗೆ ಜನ ಮೆಚ್ಚುಗೆ ಸೂಚಿಸುತ್ತಾರೆ. ಆದರೆ ಸಾರ್ವಜನಿಕ ಸ್ಥಳದಲ್ಲಿ ಈ ರೀತಿ ನಿಂತುಕೊಂಡಿರುವ ಗಿರ್ಜೇಶ್ ನನ್ನು ಪೊಲೀಸರು ಬಂಧಿಸಿ, ನೀನು ಭಿಕ್ಷೆ ಬೇಡುತ್ತಿದ್ದೀಯಾ ಎಂದು ಅವಮಾನ ಮಾಡಿ ಕಳಿಸುತ್ತಾರೆ. ಎಲ್ಲಾ ಜನರ ಮುಂದೆ ಈ ರೀತಿ ಪೊಲೀಸರು ವರ್ತಿಸಿದಾಗ ಗಿರ್ಜೇಶ್ ಗೆ ನಿರಾಶಭಾವ ಉಂಟಾಗುತ್ತದೆ.

ಏನೇ ಆದರೂ ಗಿರ್ಜೇಶ್ ಗೆ ತಾನು ಹೊಸ ಬಗೆಯ ಕಲೆಯನ್ನು ಹುಟ್ಟು ಹಾಕಿದ್ದೇನೆ ಎನ್ನುವ ಆತ್ಮವಿಶ್ವಾಸದಿಂದ ಮುಂದೆ ಪ್ರತಿದಿನ ಬೇರೆ ಸ್ಥಳ, ಮಾಲ್, ಬೀಚ್ ಗಳಲ್ಲಿ ಪ್ರತಿಮೆಯ ಹಾಗೆ ನಿಲ್ಲುತ್ತಾನೆ. ಇದು ಜನರಿಗೆ ಎಷ್ಟು ಇಷ್ಟ ಆಗುತ್ತದೆ ಅಂದರೆ ಜನ ಗಿರ್ಜೇಶ್ ನನ್ನು   ‘ಮುಂಬೈನ ಜೀವಂತ ಪ್ರತಿಮೆ’ (Living statue of mumbai) ಯ ಹೆಸರಿನಿಂದ ಗುರುತಿಸಲು ಆರಂಭಿಸುತ್ತಾರೆ.

ಕಲೆಯನ್ನು ಬೆಳೆಸುವ ಛಲ :  ಜೀವಂತ ಪ್ರತಿಮೆ ಆಗಿ ನಿಲ್ಲುವ ಗಿರ್ಜೇಶ್ ಜನಪ್ರಿಯತೆ ದಿ‌ನ ಕಳೆದಂತೆ ಹೆಚ್ಚುತ್ತ ಹೋಗುತ್ತದೆ. ನೂರಾರು ಮಂದಿ ಸೆಲ್ಫಿಗಾಗಿ ಮುಗಿಬೀಳುತ್ತಾರೆ. ತಾನು ದುಡಿಯುತ್ತಿದ್ದೇನೆ ಅದರ ಜೊತೆಗೆ ಒಂದು ಕಲೆಯನ್ನು ಬೆಳೆಸುತ್ತಿದ್ದೇನೆ ಅನ್ನುವುದು ಗಿರ್ಜೇಶ್ ಮಾತು. ಸಾಮಾಜಿಕ ಜಾಲತಾಣ ಸೇರಿದಂತೆ ಟಿಕ್ ಟಾಕ್ ನಲ್ಲಿ ಇವರಿಗೆ 8 ಲಕ್ಷಕ್ಕೂ ಅಧಿಕ ಹಿಂಬಾಲಕರು ಜೊತೆಗೆ ಹಲವು ಖಾಸಗಿ ಮಾಧ್ಯಮ ಹಾಗೂ ಪತ್ರಿಕೆಯಲ್ಲೂ   21 ರ ಹರೆಯದ ಗೀರ್ ಜೇಶ್ ಬೆಳಕು ಚೆಲ್ಲಿದ್ದಾನೆ. ಇತ್ತೀಚೆಗೆ ಹಿಂದಿಯ ಪ್ರಸಿದ್ಧ ಹಾಸ್ಯ ಕಾರ್ಯಕ್ರಮ ಕಪಿಲ್ ಶರ್ಮಾ ಶೋನಲ್ಲಿ ಅರ್ಧಗಂಟೆಗೂ ಹೆಚ್ಚು ಒಂದೇ ಸ್ಥಳದಲ್ಲಿ ಆಚೆ ಇಚೆ ಅಲುಗಡದೇ ನಿಂತು ಅಚ್ಚರಿ ಮೂಡಿಸಿದ್ದರು. ಗಿರ್ಜೇಶ್ ಮುಂದೆ ಇನ್ನಷ್ಟು ಜನಪ್ರಿಯರಾಗಲಿ,ಅವಕಾಶಗಳು ಹುಡುಕಿಕೊಂಡು ಬರಲಿ..

 

ಸುಹಾನ್ ಶೇಕ್

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next