Advertisement

ವಿಧಿಯ ಆಟದ ಮುಂದೆ ; ಆಟೋ ಓಡಿಸಿ ಬದುಕು ಗೆದ್ದವನ ಯಶೋಗಾಥೆ..

08:13 PM Apr 15, 2020 | Suhan S |

ಜೀವನದಲ್ಲಿ ಅಂದುಕೊಂಡ ಗುರಿಗಳನ್ನು ಸಾಧಿಸಲು ಹೊರಟವನ ದಾರಿ ಕಲ್ಲು‌ ಮುಳ್ಳುಗಳಿಲ್ಲದೆ ಸುಗಮವಾಗಿ ಇರುವುದು ಕೆಲವೊಬ್ಬರಿಗೆ ಮಾತ್ರ. ಆ ಕೆಲವೊಬ್ಬರಲ್ಲೂ ಅದೃಷ್ಟವಂಚಿತರು ಇರುತ್ತಾರೆ. ಆದರೆ ಆ ಅದೃಷ್ಟವಂಚಿತರ  ಬಾಳಿನಲ್ಲಿ ವಿಧಿ ಬೇರೇನೋ ಭಿನ್ನವಾದದ್ದನ್ನು ಇಟ್ಟಿರುತ್ತದೆ ಅನ್ನುವುದಕ್ಕೆ ಸಾಕ್ಷಿ ಕೇರಳದ ಕೊಚ್ಚಿಯ ಶ್ರೀಕಾಂತ್.

Advertisement

ಇಂದು ಶ್ರೀಕಾಂತ್ ಹಾಗೂ ಅವರ ‘ಹೆಲೋ ಬಡ್ಡಿ’ ಆಟೋ ಕೇರಳದ ಅಲುವಾ ನಗರದಲ್ಲಿ ಜನಪ್ರಸಿದ್ದಿಯಾಗಿದೆ. ಕರತುಕೋಜ್ಹಿ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲುವ ಶ್ರೀಕಾಂತ್ ರ ಆಟೋ ಸ್ಥಳೀಯರಿಂದ ಚಿರಪರಿಚಿತ ಹಾಗೂ ಪ್ರಶಂಸನೀಯವನ್ನು ಪಡೆದಿದೆ. ಅದಕ್ಕೆ ಕಾರಣ ಶ್ರೀಕಾಂತರ ಆಟೋ ಭಿನ್ನವಾಗಿದ್ದು, ಅವರ ಮನಸ್ಸು ಮಾನವೀಯತೆಯನ್ನು ಸಾರುವಂತದ್ದಾಗಿದೆ. ಎಲ್ಲರ ಹಾಗೆ ಶ್ರೀಕಾಂತ್ ಪ್ರತಿನಿತ್ಯದ ಗಳಿಗೆಯಲ್ಲಿ ಅವಸರದ ವೇಗದಲ್ಲಿ ಆಟೋ ಚಲಾಯಿಸುವ ಚಾಲಕನಲ್ಲ. ಶ್ರೀಕಾಂತ್ ಒಬ್ಬ ವಿಕಲಚೇತನ.

ಬದುಕು ಬದಲಾಯಿಸಿದ  ಅವಘಡ; ಅವಕಾಶ ಸೃಷ್ಟಿಸಿತು : ಆಗಷ್ಟೇ ಐಟಿಐ ಶಿಕ್ಷಣವನ್ನು ಮುಗಿಸಿ‌ ಕೆಲಸಕ್ಕಾಗಿ ಅಲೆದಾಡುತ್ತಿದ್ದ ಶ್ರೀಕಾಂತ್ ಅದೊಂದು ದಿನ ತನ್ನ ಸ್ಕೂಟರ್ ನಲ್ಲಿ ಪ್ರಯಣಿಸುತ್ತಿದ್ದಾಗ ನಿಯಂತ್ರಣ ತಪ್ಪಿ ಕೆಳಗೆ ಬಿದ್ದರು. ಬಿದ್ದ ಏಟಿಗೆ ಕೆಲ ಸಮಯ ಆರಾಮವಾಗಿ ವಿಶ್ರಾಂತಿ ಪಡೆಯಲು ಮನೆಯಲ್ಲೇ ಇದ್ದ ಶ್ರೀಕಾಂತ್ ರಿಗೆ ವಿಧಿ ಬೇರೊಂದು ಆಘಾತವನ್ನು ‌ನಿಧಾನವಾಗಿಯೇ ಬದುಕಿನ ಒಳಗೆ ಪ್ರವೇಶ ಮಾಡಿಸಿತು. ಶ್ರೀಕಾಂತ್ ತೆಗೆದುಕೊಳ್ಳುತ್ತಿದ್ದ ಕೆಲವೊಂದು ಔಷಧಿ ದೇಹಕ್ಕೆ ಅಡ್ಡ ಪರಿಣಾಮ ಬೀರಿ ಅವರ ಕಾಲು ಹಾಗೂ ಬೆನ್ನಿನ ಭಾಗವನ್ನು ಶೇ. 60 ರಷ್ಟು ಪಾರ್ಶ್ವವಾಯು ಹಂತಕ್ಕೆ ತಂದೊಡ್ಡಿತು.

ಈ ಆಘಾತದ ನಡುವೆಯೂ ಶ್ರೀಕಾಂತ್ ಬದುಕಿನಲ್ಲಿ ಅರೆ ಕ್ಷಣಿಕ ಖುಷಿಯ ದಿನಗಳು ಬರುತ್ತವೆ. ಪಕ್ಕದೂರಿನ ಸ್ಥಳೀಯ ಕ್ಲಿನಿಕ್ ವೊಂದರಲ್ಲಿ ಗುಮಾಸ್ತರಾಗಿ ಒಂದು ಹುದ್ದೆ ಲಭಿಸುತ್ತದೆ. ಪ್ರತಿ ನಿತ್ಯ ಜೀವ ಸೆಳೆಯುವ ನೋವಿನ ಬೇಗೆಯನ್ನು ಇಟ್ಟುಕೊಂಡು ನಲ್ವತ್ತು ನಿಮಿಷ ಪಯಣ ಮಾಡುತ್ತಾರೆ‌. ಇದು ಅತಿಯಾದಾಗ ಶ್ರೀಕಾಂತ್ ಅವರ ನೋವು ಇನ್ನೂ ಹೆಚ್ಚಾಗಿ ಅವರ ಕಾಲುಗಳು ಸಂಪೂರ್ಣ ಊದಿಕೊಂಡು ಬಿಡುತ್ತದೆ. ಇದರಿಂದ ಶ್ರೀಕಾಂತ್ ಕುಳಿತುಕೊಂಡಲ್ಲಿಯೇ ಅಲುಗಾಡದ ಪರಿಸ್ಥಿತಿಗೆ ಬಂದು ಬಿಡುತ್ತಾರೆ. ಈ ನಡುವೆ ನೂರಾರು ಬಗೆಯ ಚಿಕಿತ್ಸಾ ವಿಧಾನಗಳು, ಸರ್ಜರಿ ನಡೆದು ಸ್ವಲ್ಪ ಸರಿಯಾಗುವ ಹೊತ್ತಿಗೆ ಒಂದು ವರ್ಷ ಕಳೆದು ಹೋಗುತ್ತದೆ. ಈ ಮಧ್ಯೆಯೇ ಇದ್ದ ಒಂದು ಕೆಲಸವೂ ಕೈ ಬಿಟ್ಟು ಹೋಗುತ್ತದೆ.

ಶ್ರೀಕಾಂತ್ ಕೆಲಸ ಮಾಡುತ್ತಿದ್ದ ಕಛೇರಿಯನ್ನು ಸರ್ಕಾರ ತನ್ನ ಅಧೀನಕ್ಕೆ ತೆಗೆದುಕೊಂಡು ಅಲ್ಲಿದ್ದ ಎಲ್ಲಾ ಉದ್ಯೋಗಿಗಳನ್ನು ಕೆಲಸದಿಂದ ಮುಕ್ತಿಗೊಳಿಸುತ್ತದೆ‌. ಕೆಲಸಗಾರರು ತಮ್ಮ ಕೆಲಸಕ್ಕಾಗಿ ಕಾನೂನಿನ ಮೊರೆ ಹೋಗುತ್ತಾರೆ. ಆ ಸಮಯದಲ್ಲಿ ನ್ಯಾಯಾಲಯ ನೀಡಿದ ತೀರ್ಪಿನಲ್ಲಿ ಕೆಲಸ ಕಳೆದುಕೊಂಡ ಎಲ್ಲಾ ಉದ್ಯೋಗಿಗಳಿಗೆ ಮತ್ತೆ ಕೆಲಸ ಸಿಗುತ್ತದೆ. ಶ್ರೀಕಾಂತ್ ಒಬ್ಬರನ್ನು ಬಿಟ್ಟು.

Advertisement

ಶ್ರೀಕಾಂತ್ ಹಾಗೆ ಸುಮ್ಮನೆ ಕೂರಲಿಲ್ಲ. ಅಂಗಡಿಗಳಲ್ಲಿ, ಬೇರೆ ಬೇರೆ ಶಾಪ್ ಗಳಲ್ಲಿ ದಿನನಿತ್ಯದ ಹೊಟ್ಟೆಪಾಡಿಗಾಗಿ ದುಡಿಯುತ್ತಾರೆ. ಈ ವೇಳೆಯಲ್ಲಿ ಶ್ರೀಕಾಂತ್ ರ ಸಂಬಂಧಿಕರು ಆಟೋವೊಂದು ತೆಗೆದುಕೊಂಡು ದುಡಿ ಎನ್ನುವ ಸಲಹೆಯನ್ನು ನೀಡುತ್ತಾರೆ. ಈ ಸಲಹೆಯನ್ನು ಶ್ರೀಕಾಂತ್ ಅನುಕರಣೆ ಮಾಡುವ ನಿಟ್ಟಿನಲ್ಲಿ ಆಟೋವೊಂದನ್ನು ತೆಗೆದುಕೊಳ್ಳುತ್ತಾರೆ ಅದುವೇ ‘ ಹೆಲೋ ಬಡ್ಡಿ’. ಈ ಆಟೋ ಶ್ರೀಕಾಂತ್ ಬದುಕಿನ ದಿಕ್ಕನ್ನೇ ಬದಲಾಯಿಸುತ್ತದೆ.

ಒಂದು ಆಟೋ ಹಲವು ವಿಶೇಷ : ಶ್ರೀಕಾಂತ್ ಅವರ ‘ಹೆಲೋ ಬಡ್ಡಿ’ ಆಟೋ ಜನರಿಗೆ ಇಷ್ಟವಾಗಲು ಕಾರಣ ಹಲವು ಇದೆ. ಪ್ರತಿನಿತ್ಯ ಅವಸರವಾಗಿ ಆಫೀಸಿಗೆ ಹೊರಡುವ ನಾವುಗಳು ಮೊಬೈಲ್ ಚಾರ್ಜ್ ನೋಡಿ ಬ್ಯಾಟರಿ ಲೋ ಆದದ್ದನ್ನು ಕಂಡು ಸಿಡುಕುಗೊಳ್ಳುತ್ತೇವೆ. ಆದರೆ ನೀವು ಶ್ರೀಕಾಂತ್ ಅವರ ಆಟೋದಲ್ಲಿ‌ ಪ್ರಯಾಣಿಸಿದರೆ ನಿಮಗೆ ಈ ಸಮಸ್ಯೆ ಆಗದು. ಏಕೆಂದರೆ ಅವರ ಆಟೋದಲ್ಲಿ ಮೊಬೈಲ್ ಚಾರ್ಜಿಂಗ್ ವ್ಯವಸ್ಥೆ ಇದೆ. ಹಾಗೆಯೇ ‌ನಿಮಗೆ ದಿನಪತ್ರಿಕೆ ಓದುವ ಹವ್ಯಾಸ ಇದ್ದರೆ ಇವರ ಆಟೋದಲ್ಲಿ ಮಲೆಯಾಳಂ, ತಮಿಳು ಹಾಗೂ ಇಂಗ್ಲೀಷ್ ಭಾಷೆಯ ದಿನಪತ್ರಿಕೆಗಳು ಪ್ರಯಾಣಿಕರ ಪಯಣಕ್ಕೆ ಜೊತೆಯಾಗುತ್ತವೆ. ಉಚಿತ ವೈಫೈ, ಗೂಗಲ್ ಪೇ, ಪೇಟಿಯಮ್, ಭೀಮ್ ನಂತಹ ಆನ್ಲೈನ್ ಪೇಮೆಂಟ್ ವ್ಯವಸ್ಥೆಯೂ ಇವರ ‘ಹೆಲೋ ಬಡ್ಡಿ’ ಆಟೋದಲ್ಲಿದೆ.

ಶ್ರೀಕಾಂತ್ ತನ್ನ ಆಟೋದಲ್ಲಿ ಪ್ರಯಾಣಿಕರ ಸುಗಮಕ್ಕಾಗಿ, ಐಷರಾಮಿ ಅನುಭವಕ್ಕಾಗಿ ಕಾರು ಸೀಟುಗಳನ್ನು ಅಳವಡಿಸಿದ್ದಾರೆ. ಹಾಗೂ ಅನಾರೋಗ್ಯ ಪೀಡಿತರಾಗಿ ತನ್ನ ಆಟೋವನ್ನು ಸದಾ ಆಸ್ಪತ್ರೆಯ ಮುಂಭಾಗದಲ್ಲಿ ನಿಲ್ಲಿಸುತ್ತಾರೆ. ಪ್ರತಿ ತಿಂಗಳು ತನ್ನ ದುಡಿತದಿಂದ 5 ಸಾವಿರ ರೂಪಾಯಿಯನ್ನು  ಆಸ್ಪತ್ರೆಯ ಚಿಕಿತ್ಸಾ ಖರ್ಚನ್ನು ಭರಿಸಲಾಗದ ಕುಟುಂಬಕ್ಕೆ ಆಸರೆಯಾಗುವ ನಿಟ್ಟಿನಲ್ಲಿ ಜಿಲ್ಲಾ ಆಸ್ಪತ್ರೆಗೆ ನೀಡುತ್ತಾರೆ. ಬಡವರಿಗೆ ಉಚಿತ ಸೇವೆಯನ್ನು ನೀಡುತ್ತಾರೆ.

ಇವರು ಐಎಸ್ಒದಿಂದ ಪ್ರಮಾಣೀಕರಿಸಲ್ಪಟ್ಟ ಭಾರತದ ಮೊದಲ ವಿಕಲ ಚೇತನ ಆಟೋಚಾಲಕ ಎಂಬ ಹಿರಿಮೆಯನ್ನು ಪಡೆದುಕೊಂಡಿದ್ದಾರೆ.

 

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next