Advertisement
ಭಾದ್ರಪದ ಮಾಸದ ಚತುರ್ಥಿಯ ಹಿಂದಿನ ದಿನ ಬರುವ ಗೌರಿ ಹಬ್ಬ ಸುಮಂಗಲೆಯರಿಗೆ ಸಕಲ ಸೌಭಾಗ್ಯ ನೀಡುವ ಹಬ್ಬ. ಗೌರಿಯು ಕೈಲಾಸದಿಂದ ಭೂಮಿಗೆ ಭಾದ್ರಪದ ಶುಕ್ಲ-ತದಿಗೆಯಂದು ಬರುತ್ತಾಳೆ. ಅವಳನ್ನು ಕರೆದು ತವರು ಮನೆಯ ಆತಿಥ್ಯ ಮಾಡಿ ವಾಪಸ್ಸು ಮಗನೊಂದಿಗೆ ಕಳುಹಿಸಿಕೊಡುವುದೇ ಈ ಹಬ್ಬದ ವೈಶಿಷ್ಟ್ಯ. ಅಮ್ಮನನ್ನು ಮಾರನೆ ದಿನ ಮಗ ಗಣೇಶ ಬಂದು ಕೈಲಾಸಕ್ಕೆ ಕರೆದುಕೊಂಡು ಹೋಗುವುದು ಈ ಗೌರಿ ಗಣೇಶನ ಹಬ್ಬದ ವಿಶೇಷತೆ.
Related Articles
Advertisement
ಆಚರಣೆ ಹೇಗೆ :
ಗೌರಿಹಬ್ಬ ವಿಶೇಷವಾಗಿ ಹೆಂಗಳೆಯರ ಹಬ್ಬ. ಹಬ್ಬದ ಹಿಂದಿನ ದಿನವೇ ಗೌರಿ ವಿಗ್ರಹವನ್ನು ಮನೆಗೆ ತರಲಾಗುತ್ತದೆ. ಗೌರಿಯ ವಿಗ್ರಕ್ಕೆ ಅರಶಿಣ, ಕುಂಕುಮ, ಹೂವುಗಳಿಂದ ಅಲಂಕರಿಸುತ್ತಾರೆ. ನಂತರ ದೇವಿಯ ಮಂತ್ರಗಳನ್ನು ಹೇಳಿ ಗೌರಿಯನ್ನು ಆಹ್ವಾನಿಸುತ್ತಾರೆ. ನಂತರ ದೇವಿಯನ್ನು ಅಕ್ಕಿ ಹಾಗೂ ಧಾನ್ಯದಿಂದ ತಯಾರಿಸಿದ ದಿಬ್ಬದ ಬಟ್ಟಲಿನಲ್ಲಿ ಇರಿಸಲಾಗುತ್ತದೆ. ಬಳಿಕ ಗೌರಿ ದೇವಿಯ ಆಶೀರ್ವಾದ ಸಂಕೇತವಾಗಿ 16 ಸುತ್ತಿನ ದಾರವನ್ನು ಮಹಿಳೆಯರು ಕೈಗೆ ಸುತ್ತಿಕೊಳ್ಳುತ್ತಾರೆ. ವೃತದ ಬಳಿಕ ಬಾಗಿನಗಳನ್ನು ನೀಡಲಾಗುತ್ತದೆ. ನಂತರ ದೇವಿಯ ನೈವೇದ್ಯವಾಗಿ ಸಿಹಿ ತಿನಿಸು ಹೋಳಿಗೆ, ಒಬ್ಬಟ್ಟು ಮತ್ತು ಪಾಯಸವನ್ನು ಇಟ್ಟು, ಶಾಸ್ತ್ರಬದ್ದವಾಗಿ ಮನೆತನದ ಪದ್ದತಿಯಂತೆ ಒಂದು, ಮೂರು, ಒಂಬತ್ತು ಅಥವಾ ಹನ್ನೊಂದು ದಿನಗಳ ಕಾಲ ಮೂರ್ತಿಯನ್ನು ಇಟ್ಟು ಪೂಜಿಸಿ ನಂತರ ನೀರಿನಲ್ಲಿ ವಿಸರ್ಜಿಸಲಾಗುತ್ತದೆ.
ಏನಿದು ಬಾಗಿನ :
ಗೌರಿ ಹಬ್ಬದಂದು ವಿಶೇಶವಾಗಿ ಬಾಗಿನ ನೀಡುವ ಸಂಪ್ರದಾಯವಿದೆ. ತವರಿನೊಂದಿಗಿನ ಅವಿನಾಭಾವ ನಂಟು ಹೊಂದಿರುವ ಈ ಹಬ್ಬದಲ್ಲಿ ವಿವಾಹಿತ ಅಥವಾ ಅವಿವಾಹಿತ ಹೆಣ್ಣು ಮಕ್ಕಳಿಗೆ ಗೌರಿ ಹಬ್ಬದಲ್ಲಿ ಹೆತ್ತವರು ಅಥವಾ ಸೋದರ ಸಂಬಂಧಿಗಳು ಉಡುಗೊರೆ ನೀಡಿ ಹಾರೈಸುತ್ತಾರೆ. ಈ ಸ್ವರ್ಣಗೌರಿ ಹಬ್ಬದಲ್ಲಿಬಾಗಿನ ಕೊಡುವುದು ಒಂದು ವಿಶೇಷ. ಮೊರವನ್ನು ಶುಭ್ರಗೊಳಿಸಿ ಅದಕ್ಕೆ ಅರಿಶಿನ, ಕುಂಕುಮ ಹಚ್ಚಿ ಅದರಲ್ಲಿ ಧಾನ್ಯಗಳು, ತೆಂಗಿನಕಾಯಿ, ಬಿಚ್ಚೋಲೆ, ಕನ್ನಡಿ, ಬಳೆಗಳು, 5 ಬಗೆಯ ಹಣ್ಣುಗಳು, ರವಿಕೆ ಕಣ, ಸುಮಂಗಲಿಯರು ಉಪಯೋಗಿಸುವ ವಸ್ತುಗಳನ್ನು ಹಾಕಿ ಮೊರದ ಬಾಗಿನ ಸಿದ್ಧಪಡಿಸಿ ಗೌರಿಯ ಮುಂದಿಡುತ್ತಾರೆ. ಅದನ್ನು ಪೂಜೆಯಲ್ಲಿಪಾಲ್ಗೊಂಡ ಸುಮಂಗಲಿಯರಿಗೆ ನೀಡುತ್ತಾರೆ. ವಿವಾಹಿತ ಮಹಿಳೆಯರು ತನ್ನ ತಾಯಿಗೆ ಮತ್ತು ಅತ್ತಿಗೆಗೆ ಬಾಗಿನ ನೀಡುತ್ತಾರೆ. ಬಾಗಿನದಲ್ಲಿ ಅರಶಿನ, ಕುಂಕುಮ, ಕಪ್ಪುಬಳೆ, ಕರಿಮಣಿ, ಬಾಚಣಿಗೆ, ಕನ್ನಡಿ, ತೆಂಗಿನಕಾಯಿ, ಧಾನ್ಯಗಳು, ಅಕ್ಕಿ, ಗೋಧಿ ಮತ್ತು ಬೆಲ್ಲವನ್ನು ಇಡಲಾಗುತ್ತದೆ. ಶಕ್ತಿ ದೀವಿ ಗೌರಿಯನ್ನು ಶ್ರದ್ದೆ ಮತ್ತು ಭಕ್ತಿಯಿಂದ ಪೂಜಿಸಿದರೆ ನಮ್ಮ ಇಷ್ಟಾರ್ಥಗಳನ್ನು ಪೂರೈಸಿ ಸಂಸಾರದಲ್ಲಿ ಸುಖ, ಶಾಂತಿ ಸಂಮೃದ್ಧಿಯನ್ನು ನೀಡಿ ಕಾಪಾಡುತ್ತಾಳೆ ಎಂಬ ನಂಬಿಕೆ ಇದೆ.
ಪೂರ್ಣಿಮಾ ಪೆರ್ಣಂಕಿಲ