Advertisement

ಟೂತ್ ಪೇಸ್ಟ್ ಎಂದಾಗ ನಮಗೆ ಮೊದಲು ನೆನಪಾಗೋದು “ಕೋಲ್ ಗೇಟ್”; ಈ ಕಂಪನಿ ಹುಟ್ಟಿದ್ದು ಹೇಗೆ?

08:54 AM Feb 20, 2020 | Suhan S |

ಒಂದು ಉತ್ಪನ್ನ ನಮ್ಮ ಜನಮಾನಸದಲ್ಲಿ, ನಮ್ಮ ದಿನಚರಿಯಲ್ಲಿ ಒಂದು ಭಾಗವಾಗಿ ಇರಬೇಕಾದರೆ ಅದನ್ನು ಬೆಳೆಸಿ ಉಳಿಸಿಕೊಂಡ ಬಂದ ಜನಪ್ರಿಯತೆಯೇ ಕಾರಣ. ಇದು ಪ್ರತಿ ಮನೆ ಮಂದಿಯ ಮುಂಜಾನೆಯ ಮೊದಲ ಆಯ್ಕೆ  ಕೋಲ್ ಗೇಟ್ ಟೂತ್‌ಪೇಸ್ಟ್ ಬೆಳೆದು ಬಂದ ಹಾದಿಯ ಪಯಣ.

Advertisement

ಕೋಲ್ ಗೇಟ್ ಪಯಣ ಆರಂಭವಾಗುವುದು 214 ವರ್ಷಗಳ ಹಿಂದೆ. 1783 ರ ಜನವರಿ 25 ರಂದು ಇಂಗ್ಲೆಂಡ್ ನಲ್ಲಿ ಹುಟ್ಟಿದ ವಿಲಿಯಂ ಕೋಲ್ ಗೇಟ್  ಕಟ್ಟಿದ ಸಂಸ್ಥೆಯೇ ಕೋಲ್ ಗೇಟ್ ಕಂಪನಿ.

ಹಿನ್ನಲೆ ಹಾಗೂ ಪ್ರೇರಣೆ : ಕೃಷಿ ಕುಟುಂಬದಿಂದ ಬಂದ ವಿಲಿಯಂ ತಂದೆ, ರಾಬರ್ಟ್ ಕೋಲ್ ಗೇಟ್. ಪ್ರತಿದಿನ ಕೃಷಿ ಭೂಮಿಯಲ್ಲಿ ಶ್ರಮವಹಿಸುತ್ತಾ, ಸ್ಥಳೀಯ ರಾಜಕೀಯ ಪಕ್ಷದಲ್ಲಿ ತೊಡಗಿಸಿಕೊಂಡು, ಬ್ರಿಟಿಷರಿಂದ ಸ್ವಾತಂತ್ರ್ಯಕ್ಕಾಗಿ ಧ್ವನಿ ಎತ್ತುತ್ತಾರೆ. ಇದೇ ಸಮಯದಲ್ಲಿ ಜೀವದ ಅಪಾಯದಿಂದ ರಾಬರ್ಟ್ ಕುಟುಂಬ 1798 ರ ವೇಳೆಯಲ್ಲಿ ಅಮೇರಿಕಾದ ಮೇರಿಲ್ಯಾಂಡ್ ಗೆ ಹೋಗಿ ನೆಲೆಸುತ್ತದೆ. ಅಮೇರಿಕಾದಲ್ಲಿ ರಾಬರ್ಟ್ ಕೋಲ್ ಗೇಟ್ ರಾಲ್ಫ್ ಮಹಿರ್ ಎನ್ನುವ ವ್ಯಕ್ತಿಯ ಜೊತೆ ಸೇರಿಕೊಂಡು ಸಾಬೂನು ಹಾಗೂ ಕ್ಯಾಂಡಲ್ ನ ಉದ್ಯಮವನ್ನು ಆರಂಭಿಸುತ್ತಾರೆ. ತಂದೆಯ ಜೊತೆಗೆ ಮಗ ವಿಲಿಯಂ ಕೋಲ್ ಗೇಟ್ ಸಣ್ಣ ಪುಟ್ಟ ಕೆಲಸಕ್ಕೆ ನೆರವಾಗುತ್ತಾರೆ. ದುರದೃಷ್ಟವಶಾತ್ ಈ ಉದ್ಯಮ ಕೇವಲ ಎರಡು ವರ್ಷದಲ್ಲಿ ಯಶಸ್ಸು ಕಾಣದೆ ಮುಚ್ಚಿ ಬಿಡುವ ಪರಿಸ್ಥಿತಿ ಎದುರಾಗುತ್ತದೆ. ಬಳಿಕ ಮತ್ತೆ ರಾಬರ್ಟ್ ಕೃಷಿ ಭೂಮಿಯ ಕಾಯಕದಲ್ಲಿ ನಿರತರಾಗುತ್ತಾರೆ.

ಆದರೆ ಹದಿನಾರು ವರ್ಷದ ಬಾಲಕ ವಿಲಿಯಂ ಕೋಲ್ ಗೇಟ್ ಗೆ ತಾನೊಂದು ಉದ್ಯಮವನ್ನು ಪ್ರಾರಂಭಿಸಬೇಕೆನ್ನುವ ಸಣ್ಣ ಕನಸು ಚಿಗುರುತ್ತದೆ.

ಮನೆ ಬಿಟ್ಟ ಪೋರ, ಯೋಜನೆಯನ್ನುರೂಪಿಸಿದ ಚತುರಹದಿನಾರರ ಹರೆಯದಲ್ಲಿ ವಿಲಿಯಂ ‌ಮನೆ ಬಿಡುತ್ತಾರೆ. ಕೆಲ ವರ್ಷ ಸಣ್ಣ ಪುಟ್ಟ ‌ಕೆಲಸ ಮಾಡುತ್ತಾ‌ ದಿನ ದೂಡುವ ವಿಲಿಯಂ ಅದೊಂದು ದಿನ ನ್ಯೂಯಾರ್ಕ್ ನಲ್ಲಿ  ಸಾಬೂನು ತಯಾರಿಸುವ ಕಂಪೆನಿಯೊಂದಕ್ಕೆ ಕೆಲಸಕ್ಕೆ ಸೇರಿ ಕೊಳ್ಳುತ್ತಾರೆ. ಕೆಲಸದೊಟ್ಟಿಗೆ ಕಾರ್ಯತಂತ್ರವನ್ನು ಕಲಿತುಕೊಳ್ಳುತ್ತಾರೆ. ಜನ ಹೇಗೆ ಕಂಪನಿಯ ಉತ್ಪನ್ನವನ್ನು ಮೆಚ್ಚುತ್ತಾರೆ. ಯಾಕೆ ತಿರಸ್ಕರಿ ಸುತ್ತಾರೆ. ಕಾರಣಗಳೇನು ಹಾಗೆ ಹೀಗೆ ಎನ್ನುವ ಎಲ್ಲಾ ರೂಪರೇಷೆಗಳನ್ನು ವಿಲಿಯಂ ತಿಳಿದುಕೊಂಡು ಎರಡು ವರ್ಷದ ಬಳಿಕ ತಾನೊಂದು ಉದ್ಯಮವನ್ನು ಆರಂಭಿಸಲು ಸಾಬೂನು ಕಂಪನಿಯ ಕೆಲಸ ಬಿಟ್ಟು ಹೊರ ಬರುತ್ತಾರೆ.

Advertisement

1806 ರ ವೇಳೆಯಲ್ಲಿ ಸಣ್ಣ ಮಟ್ಟದಲ್ಲಿ ವಿಲಿಯಂ ಅಂದುಕೊಂಡ ಸಾಬೂನು ಉತ್ಪನ್ನಗಳನ್ನು ತಯಾರಿಸುವ ಕಂಪೆನಿಯನ್ನು ಪ್ರಾರಂಭಿಸುತ್ತಾರೆ. ಅದಕ್ಕೆ ವಿಲಿಯಂ ಕೋಲ್ ಗೇಟ್ ಕಂಪೆನಿಯೆಂದು ಹೆಸರಿಡುತ್ತಾರೆ. ದಿನಗಳು ಉರುಳುತ್ತಿದ್ದಂತೆ ವಿಲಿಯಂರ ಕಂಪೆನಿಯೂ ಮೇಲ್ಮಟ್ಟಕ್ಕೆ ಬೆಳೆಯುತ್ತದೆ. ಆದರೆ ಅದೃಷ್ಟದ ನಡುವೆ ವಿಲಿಯಂನ ಆರೋಗ್ಯ ತೀರ ಹದಗೆಟ್ಟು ಹೃದಯಾಘಾತವಾಗಿ, ಕೆಲ ಸಮಯ ಬಳಲುತ್ತಾರೆ. ಈ ದಿನಗಳಲ್ಲಿ ಕೋಲ್ ಗೇಟ್ ಕಂಪನಿಯ ಮೌಲ್ಯ ಗಣನೀಯವಾಗಿ ಕುಸಿಯುತ್ತದೆ.

ಈತ ಅಪ್ಪಟ ದೈವ ಭಕ್ತ: ಆರೋಗ್ಯ ಹದಗೆಟ್ಟು ಮತ್ತೆ  ತನ್ನ ಉದ್ಯಮವನ್ನು ಉನ್ನತ ಮಟ್ಟಕ್ಕೇರಿಸಿದ ವಿಲಿಯಂ ಕೋಲ್ ಗೇಟ್, ಏನೇ ಮಾಡಿದರೂ ‌ಮೊದಲು ದೇವರಲ್ಲಿ ನಂಬಿಕೆಯಿಟ್ಟು‌ ಮುನ್ನಡೆಯುತ್ತಿದ್ದರು. ಈತ ಎಷ್ಟು ಅಪ್ಪಟ ದೈವ ಭಕ್ತ ಆಗಿದ್ದ ಅಂದ್ರೆ ದೇವರ ಹೆಸರಿನಲ್ಲಿ ಒಂದು ಖಾತೆಯನ್ನು ಸೃಷ್ಟಿಸಿ ಅದರಲ್ಲಿ ಉದ್ಯಮದ ಅರ್ಧ ಲಾಭಾಂಶವನ್ನು ತೆಗೆದು ಇಡುತ್ತಿದ್ದರು. ಶೇ.20 ರಿಂದ ಆರಂಭವಾದ ಲಾಭಾಂಶವನ್ನು, ಉದ್ಯಮದ ಲಾಭ ಹೆಚ್ಚುತ್ತಿದ್ದಂತೆ, ಶೇ. 50 ರಷ್ಟು ಲಾಭಾಂಶ ದೇವರ ಹೆಸರಿನ ಖಾತೆಗೆ ಹೋಗುತ್ತಿತ್ತು. ಕೋಲ್ ಗೇಟ್ ಜನಕ ವಿಲಿಯಂ ಯಶಸ್ವಿ ಉದ್ಯಮಿ ಆಗಿ 1857 ರ ಮಾರ್ಚ್ 25 ರಂದು ಇಹಲೋಕ ತ್ಯಜಿಸುತ್ತಾರೆ.

ಇದಾದ ಬಳಿಕ ಕೋಲ್ ಗೇಟ್ ಹೆಸರನ್ನು ಇನ್ನಷ್ಟು ಉತ್ತುಂಗಕ್ಕೇರಿಸುವಲ್ಲಿ ವಿಲಿಯಂನ ಮಕ್ಕಳು ಶ್ರಮ ವಹಿಸುತ್ತಾರೆ. ಕೋಲ್ ಗೇಟ್ ಟೂತ್ ಪೇಸ್ಟ್,ಕೋಲ್ ಗೇಟ್ ಸಾಬೂನು, ಕೋಲ್ ಗೇಟ್ ಶೇವಿಂಗ್ ಕ್ರೀಮ್, ಕೋಲ್ ಗೇಟ್ ಸುಗಂಧ ದ್ರವ್ಯ ದ ಮೂಲಕ ಜಗತ್ತಿನಾದ್ಯಂತ ಮಾರುಕಟ್ಟೆಯಲ್ಲಿ ಪರಿಚಯವಾಗುತ್ತದೆ.

ಕೋಲ್ ಗೇಟ್ ಜನಪ್ರಿಯತೆ ಹಾಗೂ ವಿಶ್ವಾಸಾರ್ಹ ಉತ್ಪನ್ನದ ಹಣೆಪಟ್ಟಿಯನ್ನು ಪಡೆಯುತ್ತದೆ. ‌ಜಗತ್ತಿನ 59 ನೇ ವಿಶ್ವಾಸಮಯ ಉತ್ಪನ್ನವಾಗಿ ಬೆಳೆದ ಕೋಲ್ ಗೇಟ್ ಇಂದು‌ 200 ಕ್ಕೂ ಅಧಿಕ ದೇಶಗಳ ಮಾರುಕಟ್ಟೆಯಲ್ಲಿದೆ. 34 ಸಾವಿರಕ್ಕೂ ಹೆಚ್ಚು ಕಾರ್ಮಿಕರು ಕೋಲ್ ಗೇಟ್ ಉತ್ಪನ್ನದ ಹಿಂದೆ ದುಡಿಯುತ್ತಿದ್ದಾರೆ. ಸಾಮಾಜಿಕ ಕ್ಷೇತ್ರದಲ್ಲಿ ಕೋಲ್ ಗೇಟ್ ಸೇವೆಯೂ ಅನನ್ಯವಾದದು.

ಇಂದಿಗೂ ಪ್ರತಿ ಮನೆಯಲ್ಲಿ ಟೂತ್ ಪೇಸ್ಟ್ ಯಾವುದೇ ಕಂಪೆನಿಯದು ಇರಲಿ, ನಮ್ಮ ಬಾಯಿಯಲ್ಲಿ ಬರುವುದು ಕೋಲ್ ಗೇಟ್ ಎಲ್ಲಿದೆ ಎನ್ನುವುದು..

 

 – ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next