ನನ್ನ ಸ್ನೇಹಿತೆ ಶಿಕ್ಷಕಿಯೊಬ್ಬಳು ಕಳೆದ ಗ್ರಾಮ ಪಂಚಾಯತ್ ಚುನಾವಣೆಗೆ ಕರ್ತವ್ಯಕ್ಕೆಂದು ಹೋದಾಗ ನಡೆದ ಘಟನೆ ಇದು. ಗ್ರಾಮ ಪಂಚಾಯತ್ ಚುನಾವಣ ಕರ್ತವ್ಯಕ್ಕೆ ಮತಗಟ್ಟೆ ಅಧಿಕಾರಿಯಾಗಿ ನಿಯೋಜನೆಗೊಂಡವರು ತಮ್ಮ ಮಸ್ಟರಿಂಗ್ ಕೇಂದ್ರದಿಂದ ಮತಪೆಟ್ಟಿಗೆಗಳೊಂದಿಗೆ ಮತದಾನ ಕೇಂದ್ರಕ್ಕೆ ಬೇಕಾಗುವ ಎಲ್ಲ ಸಲಕರಣೆಗಳನ್ನು ಪಡೆದು ಮತಗಟ್ಟೆ ಸೇರಿಕೊಳ್ಳುವುದು ಸಾಮಾನ್ಯ ಕ್ರಿಯೆ. ಹಾಗೆಯೇ ಇವರ ತಂಡದವರು ತಮ್ಮ ಸಲಕರಣೆಗಳನ್ನೆಲ್ಲ ಪಡೆದು ಮತದಾನ ನಡೆಯುವ ಕೇಂದ್ರ ತಲುಪಿದ ಮೇಲೆ ಮರುದಿನ ನಡೆಯುವ ಮತದಾನ ಪ್ರಕ್ರಿಯೆಗೆ ಸಿದ್ಧಗೊಳಿಸಿದ್ದಾರೆ.
ಮತಗಟ್ಟೆಯ ಹೊರ ಭಾಗದಲ್ಲಿ ಸೂಚನ ಪತ್ರ, ಸ್ಪರ್ಧಿಸಿದ್ದ ಅಭ್ಯರ್ಥಿಗಳ ವಿವರ, ಚಿಹ್ನೆಗಳ ಮಾಹಿತಿ ಪತ್ರವನ್ನು ಅಂಟಿಸಿ ಸಂಜೆಯ ತಣ್ಣಗಿನ ವಾತಾವರಣದಲ್ಲಿ ಬಿಸಿ ಬಿಸಿ ಚಹಾ ಹೀರುತ್ತ ಮತಗಟ್ಟೆಯಲ್ಲಿ ಅಧಿಕಾರಿಗಳು ಕುಳಿತಿದ್ದಾರೆ.
ಇದೇ ಸಮಯದಲ್ಲಿ ಚುನಾವಣೆಗೆ ಸ್ಪರ್ಧಿಸಿದ್ದ ಅಭ್ಯರ್ಥಿ ಒಬ್ಬರು ಬಂದು ಹೊರಗಡೆ ಅಂಟಿಸಿದ್ದ ಅಭ್ಯರ್ಥಿಗಳ ಮಾಹಿತಿ ಹಾಗೂ ಚಿಹ್ನೆಗಳನ್ನು ಗಮನಿಸಿದ್ದಾನೆ. ಗಮನಿಸಿದಾತ ಮೇಡಂ ಮೇಡಂ ನನ್ನ ಚಿಹ್ನೆ ಬದಲಾಯಿಸಿ ಅಂಟಿಸಿದ್ದೀರಾ? ಅವರ ಮಾತಿನಿಂದ ಗಾಬರಿ ಬಿದ್ದ ಮತಗಟ್ಟೆ ಅಧಿಕಾರಿಗಳು ಅವನತ್ತ ಧಾವಿಸಿ, ಏನಾಯ್ತು ಹೇಳಿ ಎಂದಾಗ. ಯಾರಿ ನನ್ನ ಗುರುತಿನ ತೆಂಗಿನಕಾಯಿಯನ್ನು ಒಡೆದದ್ದು. ನನಗೆ ಚುನಾವಣಾಧಿಕಾರಿಗಳು ನನಗೆ ಗುರುತು ಕೊಟ್ಟಿದ್ದು ಒಡೆಯದ ತೆಂಗಿನಕಾಯಿಯನ್ನು, ಇಲ್ಲಿ ನನ್ನ ತೆಂಗಿನಕಾಯಿ ಯಾರು ಒಡೆದಿದ್ದಾರೆ ಹೇಳಿ. ನಾನು ಇಲ್ಲಿ ನಾಳೆ ಮತದಾನ ಆಗಲು ಬಿಡುವುದಿಲ್ಲ. ನಾನು ಒಡೆಯದ ತೆಂಗಿನಕಾಯಿಯೊಂದಿಗೆ ಪ್ರಚಾರ ಮಾಡಿರುವೆ, ಇದೀಗ ಒಡೆದ ತೆಂಗಿನಕಾಯಿ ಕೊಟ್ಟರೆ ಹೇಗೆ ? ಅದು ನಾಳೆಯೇ ಚುನಾವಣೆ ಇದೆ ಅನ್ನುತ್ತ ರೊಚ್ಚಿಗೆದ್ದನು.
ಮತಗಟ್ಟೆ ಅಧಿಕಾರಿಗಳು ಅವನೊಂದಿಗೆ ಮಾತನಾಡಿದರೆ, ಇತ್ತ ಚುನಾವಣಾಧಿಕಾರಿಗೆ, ಪಿಆರ್‌ಒ ಫೋನ್ ಮಾಡಿ ವಿಷಯ ತಿಳಿಸಿದರು.
ನನ್ನ ಗುರುತು ತೆಂಗಿನಕಾಯಿ. ಅದು ಒಡೆಯದ ತೆಂಗಿನಕಾಯಿ. ನೀವು ಒಡೆದು ಎರಡು ಹೋಳು ಮಾಡಿಬಿಟ್ಟರೆ ಹೇಗೆ ಎಂಬ ಕೋಪದ ಮಾತು ಅಭ್ಯರ್ಥಿಯದು. ಸಮಾಧಾನ ಮಾಡುವ ಹೊಣೆ ಮತಗಟ್ಟೆ ಅಧಿಕಾರಿಗಳದ್ದು. ಈ ಎಲ್ಲ ಮಾತುಕತೆ ನಡೆಯುತ್ತಿರುವಾಗಲೇ ಚುನಾವಣಾಧಿಕಾರಿಗಳು, ಸೆಕ್ಟರ್ ಆಫೀಸರ್‌ಗಳು ಬಂದು ಅಭ್ಯರ್ಥಿಯೊಂದಿಗೆ ಮಾತನಾಡಿ, ಒಡೆದ ಕಾಯಿಯ ಪುರಾಣವನ್ನೆಲ್ಲ ಮತ್ತೂಮ್ಮೆ ಕೇಳಿ, ನೋಡಿ ಆ ಕಾಯಿಯನ್ನು ನಾವು ಒಡೆದಿಲ್ಲ. ಇದೆಲ್ಲ ಮುದ್ರಕರ ತಪ್ಪಿನಿಂದಾಗಿದೆ. ಸರಿಪಡಿಸುತ್ತೇವೆ ಎನ್ನುತ್ತ ಸಮಾಧಾನ ಪಡಿಸಲೆತ್ನಿಸುತ್ತಿದ್ದಾರೆ. ಆಗ ಅಭ್ಯರ್ಥಿಯು, ಅಲ್ಲ ನೀವು ಕೊಟ್ಟಿದ್ದು ಬಿಟ್ಟು ಅದು ಹ್ಯಾಗೇ ಬೇರೆ ಪ್ರಿಂಟ್ ಮಾಡ್ತಾರೆ ಅಂತ ವಾದ ಪ್ರಾರಂಭಿಸಿದ. ವಾದ ವಿವಾದವೆಲ್ಲಾ ಆಗಿ, ಕೊನೆಗೆ ನಾವು ಸರಿ ಪಡಿಸುತ್ತೇವೆ ಅಂಥ ಭರವಸೆಯ ಮಾತುಗಳನ್ನು ಅಧಿಕಾರಿಗಳು ನೀಡಿದರು. ಅಭ್ಯರ್ಥಿಯು ಸರಿಯಾಗದಿದ್ದರೆ ನಾನು ಬೆಳಗ್ಗೆ ಮತದಾನಕ್ಕೆ ಅವಕಾಶ ನೀಡುವುದಿಲ್ಲ ಎನ್ನುವ ಎಚ್ಚರಿಕೆ ನೀಡುತ್ತ ಹೊರ ನೆಡದಿದ್ದ.
ಅಭ್ಯರ್ಥಿಯ ಎಚ್ಚರಿಕೆ ನುಡಿ, ಕರ್ತವ್ಯದ ಕೂಗಿಗೆ ಎಲ್ಲರೂ ಜಾಗ್ರತೆಯಿಂದ ಹೊರಗಡೆಯ ಮಾಹಿತಿ ಪೋಸ್ಟರನ್ನು ಬೆಳಗಾಗುವುದರೊಳಗೆ ಸರಿಪಡಿಸಲಾಗಿತ್ತು. ಬ್ಯಾಲೆಟ್‌ನಲ್ಲಿ ಗುರುತು ಸರಿಯಾಗಿರುವ ಬಗ್ಗೆ ಅಧಿಕಾರಿಗಳು ಖಚಿತಪಡಿಸಿಕೊಂಡು ಮರುದಿನದ ಕರ್ತವ್ಯವನ್ನು ಯಾವುದೇ ಅಡತಡೆಯಿಲ್ಲದೆ ಯಶಸ್ವಿಯಾಗಿಸಿ ಬಂದಿದ್ದನ್ನು ಈಗಲೂ ನೆನೆದು, ಆ ದಿನದ ಭಯ ಇಂದು ತೆಂಗಿನಕಾಯಿ ಪುರಾಣ ಅನ್ನುತ್ತಾ ನೆನಪಿಸಿಕೊಂಡು ನಗುತ್ತಿರುತ್ತಾರೆ.
ಪಲ್ಲವಿ ಡಿ. ಡೊಳ್ಳಿನ
ಕೊಪ್ಪಳ