ಕೆಲವೊಂದು ಪರಿಸ್ಥಿತಿಗಳು ನಮ್ಮನ್ನು ಪೂರ್ತಿಯಾಗಿ ಬದಲಾಯಿಸಿ ಬಿಡುತ್ತವೆ. ಸಂಕಷ್ಟಗಳು ಬಂದಾಗ ನಾವು ಕುಗ್ಗದೇ ದಿಟ್ಟರಾಗಿ ನಿಂತರೆ ಅಲ್ಲಿ ನಮ್ಮ ಸಾಮರ್ಥ್ಯವನ್ನು ಮೀರಿದ ಒಬ್ಬ ವ್ಯಕ್ತಿ ಹೊರ ಬರುತ್ತಾನೆ ಅವನೇ/ ಅವಳೇ ಸಾಧಕ ಅಥವಾ ಸಾಧಕಿ.
ಅಹಮದಬಾದ್ ನಲ್ಲಿ ಹುಟ್ಟಿದ ಅಂಕಿತಾ ಶಾ. ಬಾಲ್ಯದಿಂದ ಅಂಟಿಕೊಂಡ ಪೋಲಿಯೋದಿಂದ ತತ್ತರಿಸುತ್ತಾಳೆ. ಅಡ್ಡವಾಗಿ, ಓರೆ ಆಗಿ ಬೆಳೆದ ಕಾಲು, ಹೆಜ್ಜೆಗಳನ್ನು ಸರಿಯಾಗಿ ಇಟ್ಟು ನಡೆಯದ ಪರಿಸ್ಥಿತಿ. ಇಂಥ ಸ್ಥಿತಿಯಲ್ಲಿ ಬಾಲ್ಯ ಕಳೆಯುವ ಅಂಕಿತಾ ಅಂಗಳದಲ್ಲಿ ಆಡುವ ಆಟ, ಗೆಳತಿಯರೊಂದಿಗೆ ತಿರುಗುವ ದಾಹ, ಅಪ್ಪನೊಂದಿಗೆ ಪೇಟೆಗೆ ಹೋಗುವ ಖುಷಿ ಹೀಗೆ ಎಲ್ಲಾ ಕ್ಷಣಗಳಿಂದ ವಂಚಿತಳಾಗಿ ಪೋಲೀಯೋ ಪಿಡುಗಿನಿಂದ ಒಂದು ಸಂಕೋಲೆಯಲ್ಲಿ ಬಂಧಿಯ ಹಾಗೆ ಇರುತ್ತಾಳೆ.
ಈ ನಡುವೆ ಕಲಿಯುವ ಉಮೇದಿನಿಂದ ಕುಂಟುವ ತನ್ನ ಕಾಲಿನೊಂದಿಗೆ ಶಾಲಾ- ಕಾಲೇಜಿನ ಮೆಟ್ಟಿಲನ್ನು ಹತ್ತುತ್ತಾಳೆ. ದೇಹದ ನೊನ್ಯತೆಯನ್ನು ಮರೆತು, ಅಕ್ಷರಗಳನ್ನು ನಂಟು ಆಗಿಸಿಕೊಂಡು ಕಲಿಯುತ್ತಾಳೆ, ವರ್ಷಗಳು ಕಳೆದಂತೆ ಬೆಳೆಯುತ್ತಾಳೆ. ಕಾಲೇಜು ವ್ಯಾಸಂಗವನ್ನು ಪೂರ್ತಿಗೊಳಿಸಿ ಪದವಿಧಾರೆ ಆಗುತ್ತಾಳೆ.
ಹೊರೆಯಾಗಿಸಿದ ಕುಟುಂಬದ ಪರಿಸ್ಥಿತಿ : ಅಂಕಿತಾ ಪದವಿಯನ್ನು ಪೂರ್ತಿಗೊಳಿಸಿ ಕೆಲಸವನ್ನು ಹುಡುಕಲು ಆರಂಭಿಸುತ್ತಾಳೆ. ತನ್ನ ನೂನ್ಯತೆ ಹೆಚ್ಚಾಗಿ ಕಾಡುವುದು ಇದೇ ಸಂದರ್ಭದಲ್ಲಿ. ಎರಡು ಮೂರು ಕಡೆ ಸಂದರ್ಶನವನ್ನು ಕೊಟ್ಟು ಕುಗ್ಗಿದಾಗ ಕೊನೆಗೆ ಒಂದು ಕಡೆ ಸಣ್ಣ ಕೆಲಸ ದೊರೆಯುತ್ತದೆ. ಆದರೆ ಅದೃಷ್ಟ ಅಲ್ಲಿಯೂ ತನ್ನ ಆಟವನ್ನುಆಡುತ್ತದೆ. ಕೆಲವು ಸಮಯದ ಬಳಿಕ ಅಂಕಿತಾಳನ್ನು ಅವಳ ನೂನ್ಯತೆಯ ಕಾರಣದಿಂದ ಕೆಲಸದಿಂದ ವಜಾಗೊಳಿಸುತ್ತಾರೆ.
ಈ ಸಂದರ್ಭದಲ್ಲಿ ಅಂಕಿತಾ ಕುಗ್ಗಿ ಹೋಗುತ್ತಾಳೆ. ಆದರೆ ಸೋಲು ಒಪ್ಪಿಕೊಳ್ಳಲು ಸಿದ್ಧರಾಗಲ್ಲ. ಆದರೆ ಕುಟುಂಬದಲ್ಲಿ ಇದೇ ಸಮಯದಲ್ಲಿ ತಂದೆ ಕ್ಯಾನ್ಸರ್ ರೋಗಕ್ಕೆ ತುತ್ತಾಗುತ್ತಾರೆ . ಇದು ಅಂಕಿತಾಳನ್ನು ಒತ್ತಡದ ಪರಿಸ್ಥಿತಿಯಲ್ಲಿ ಸಿಲುಕಿಸುತ್ತದೆ. ಇದೇ ವೇಳೆಯಲ್ಲಿ ಅಂಕಿತಾ ಒಂದು ಧೃಡ ನಿರ್ಧಾರವನ್ನು ಮಾಡುತ್ತಾಳೆ. ಈ ನಿರ್ಣಯ ಅಂಕಿತಾಳನ್ನು ಸ್ವತಂತ್ರವಾಗಿ ಗಟ್ಟಿಗೊಳಿಸುತ್ತದೆ.
ಆಟೋ ಓಡಿಸಿ ಬದುಕು ಕಟ್ಟಿಕೊಂಡ ದಿಟ್ಟೆ: ಕೆಲಸದಿಂದ ವಜಾ,ಅಪ್ಪನ ಕ್ಯಾನ್ಸರ್ ಈ ಎಲ್ಲಾ ಪರಿಸ್ಥಿತಿಗಳು ಅಂಕಿತಾಳನ್ನು ಗಟ್ಟಿಗೊಳಿಸುತ್ತದೆ. ಸಮಾಜದ ಮುಂದೆ ನಾಲ್ಕು ಜನರೊಂದಿಗೆ ಬೆರೆಯಲು ಆರಂಭಿಸುತ್ತಾಳೆ. ಇಂದು ಅಹಮದಬಾದ್ ನ ನಗರದಲ್ಲಿ ಅಂಕಿತಾ ಅಪ್ಪನ ಚಿಕಿತ್ಸೆಗಾಗಿ, ತನ್ನ ದೇಹ ಸ್ಥಿತಿಯ ಬಗ್ಗೆ ಯೋಚಿಸದೇ ಆಟೋ ಓಡಿಸಿ ಸಾಮಾನ್ಯ ಜನರ ಬಾಳಿನಲ್ಲಿ ಮಾದರಿಯಾಗಿ ನಿಂತಿದ್ದಾಳೆ. ಮಹಿಳೆಯರು ಕ್ರೀಡೆಗಳಲ್ಲಿ ಪದಕ ಗೆಲ್ಲುತ್ತಾರೆ, ಸೇನೆಯಲ್ಲಿ ಸೇವೆ ಸಲ್ಲಿಸುತ್ತಾರೆ, ನಾನು ಆಟೋ ಓಡಿಸುವುದರಲ್ಲಿ ದೊಡ್ಡ ಮಾತು ಏನಿದೆ ಎನ್ನುತ್ತಾರೆ ಅಂಕಿತಾ. ಆಟೋ ಓಡಿಸಿ ಬದುಕು ಕಟ್ಟಿಕೊಂಡ ಪೋಲಿಯೋ ಪೀಡಿತೆಯ ಮಾದರಿ ಜೀವನ..
-ಸುಹಾನ್ ಶೇಕ್