ಸೌಂದರ್ಯ ಬಾಹ್ಯ ಸಂಗತಿಯಲ್ಲ ಅದು ಆಂತರ್ಯದ ವಿಷಯ ಎಂಬುದನ್ನು ಬಹುತೇಕ ಹುಡುಗಿಯರು ಅರ್ಥ ಮಾಡಿಕೊಳ್ಳುವುದಿಲ್ಲ. ನಾನು ಕಪ್ಪಗಿದ್ದೇನೆ, ದಪ್ಪಗಿದ್ದೇನೆ, ನನ್ನ ಕಣ್ಣು ಚೆನ್ನಾಗಿಲ್ಲ ಅಂತೆಲ್ಲ ಕೊರಗುತ್ತಾ ಕಾಲ ವ್ಯರ್ಥ ಮಾಡುತ್ತಾರೆ. ಆದರೆ, ಇವರೆಲ್ಲರಿಗಿಂತ ಭಿನ್ನವಾಗಿ ನಿಲ್ಲುವವರು ವಿನುತಾ ವಿಶ್ವನಾಥ್. ಬೆಂಕಿ ಅವಘಡದಲ್ಲಿ ಮುಖದ ಚರ್ಮ ಸುಟ್ಟು, ಸುಕ್ಕುಗಟ್ಟಿದ್ದರೂ ಆ ತಾಪ ಅವರ ಆತ್ಮವಿಶ್ವಾಸವನ್ನು ಕುಗ್ಗಿಸಿಲ್ಲ.
ರೂಪವ ನುಂಗಿದ ದೀಪ : ವಿನುತಾ ಮೂಲತಃ ಕುಂದಾಪುರದ ಹುಣ್ಸ್ಮಕ್ಕಿ ಎಂಬ ಕುಗ್ರಾಮದವರು. ಅವರ ತಂದೆ ಹಳ್ಳಿಯಲ್ಲಿ ಒಂದು ಸಣ್ಣ ಹೋಟೆಲ್ ನಡೆಸುತ್ತಿದ್ದರು. ಒಂದು ದಿನ ಹೋಟೆಲ್ ಬೆಂಚಿನ ಮೇಲೆ ಇಟ್ಟಿದ್ದ ಸೀಮೆ ಎಣ್ಣೆ ಬುಡ್ಡಿ ಆಯತಪ್ಪಿ ಆಕೆಯ ಮೈಮೇಲೆ ಬಿತ್ತು. ಆ ಅವಘಡದಲ್ಲಿ ಶೇ. 60ರಷ್ಟು ದೇಹ ಸುಟ್ಟು ಹೋಯ್ತು. ಆಗಿನ್ನೂ ವಿನುತಾ ಎರಡನೇ ತರಗತಿಯಲ್ಲಿದ್ದಳು. ತುಂಬಾನೇ ಮುದ್ದು ಮುದ್ದಾಗಿದ್ದ ಪುಟ್ಟ ಹುಡುಗಿಯ ಮುಖ ಕಪ್ಪುಗಟ್ಟಿತ್ತು, ಚರ್ಮ ಸುಕ್ಕುಗಟ್ಟಿತ್ತು.
ಮುಖ ಮುಚ್ಚಿಕೊಂಡು ಹೊರಗೆ ಬಾರಮ್ಮಾ…: ತಾನು ಜನರ ಕಣ್ಣಿಗೆ ಕುರೂಪಿಯಂತೆ ಕಾಣುತ್ತೇನೆ ಅಂತ ಓದು ಮುಗಿಸುವವರೆಗೂ ವಿನುತಾಗೆ ಅನಿಸಿಯೇ ಇರಲಿಲ್ಲವಂತೆ. ಯಾಕಂದ್ರೆ, ಮುಖದ ಮೇಲಿನ ಕಲೆಯನ್ನು ನ್ಯೂನತೆ ಅಂತ ಆಕೆ ಎಂದೂ ಭಾವಿಸಿಯೇ ಇರಲಿಲ್ಲ. ಎಲೆಕ್ಟ್ರಿಕಲ್ ಅಂಡ್ ಎಲೆಕ್ಟ್ರಾನಿಕ್ಸ್ ವಿಷಯದಲ್ಲಿ ಡಿಪ್ಲೊಮ ಮುಗಿಸಿದ ನಂತರ, ಕೆಲಸ ಹುಡುಕಲು ಹೊರಟಾಗಲೇ ಅವರಿಗೆ ಅವಮಾನ, ಅಪಮಾನದ ಅನುಭವವಾಗಿದ್ದು. ಒಂದೆರಡು ಕಡೆ ಇವರ ಮುಖದ ಸುಟ್ಟ ಕಲೆಗಳನ್ನು ಗುರಿಯಾಗಿಸಿ ಕೊಂಡು, ಕೆಲಸ ಕೊಡಲು ನಿರಾಕರಿಸಿಬಿಟ್ಟರು.
ಅದೇ ವೇಳೆಗೆ, ಪ್ರೀತಿಸುತ್ತಿದ್ದ ಹುಡುಗನೂ ಕಾರಣ ಹೇಳದೆ ದೂರಾಗಿದ್ದ. ಬೆಂಗಳೂರಿನ ಬಸ್ ಸ್ಟಾಪ್ ನಲ್ಲಿ, ಬಸ್‌ನಲ್ಲಿ ಕೆಲವರು ವಿನುತಾರ ಮುಖ ನೋಡಿ ಮೂತಿ ತಿರುವಿದರಂತೆ, ಇನ್ನೂ ಕೆಲವರು- “ನಿಮ್ಮಂಥವರು ಸಾರ್ವಜನಿಕ ಸ್ಥಳಗಳಿಗೆ ಬರುವಾಗ ಮುಖಕ್ಕೆ ಬಟ್ಟೆ ಕಟ್ಟಿಕೊಳ್ಳಬೇಕು. ಇಲ್ಲದಿದ್ದರೆ ಮಕ್ಕಳು ಹೆದರಿಕೊಳ್ಳುತ್ತಾರೆ’ ಎಂದು ನೇರವಾಗಿ ಹೇಳಿದಾಗಲೇ, ಸೌಂದರ್ಯಕ್ಕೆ ಜನ ಎಷ್ಟು ಪ್ರಾಮುಖ್ಯತೆ ಕೊಡುತ್ತಾರೆಂದು ವಿನುತಾಗೆ ಅರಿವಾಗಿದ್ದು. ಇಂತಹ ಸಂಗತಿಗಳು ನಡೆದಾಗೆಲ್ಲ, ಆಕೆ ಮೌನಕ್ಕೆ ಶರಣಾಗಿ, ನೋವು ನುಂಗುತ್ತಿದ್ದರು.
ಅಪ್ಪಿಕೊಂಡಿತು ರಂಗಭೂಮಿ : ವಿನುತಾರಿಗೆ ಚಿಕ್ಕಂದಿನಿಂದಲೂ ನಾಟಕ ನೋಡುವ ಹವ್ಯಾಸ ಇತ್ತು. ಶಾಲೆಯ ದಿನಗಳಲ್ಲಿ ಒಂದೆರಡು ನಾಟಕಗಳಲ್ಲಿ ಬಣ್ಣ ಕೂಡಾ ಹಚ್ಚಿದ್ದರು. ಬೆಂಗಳೂರಿಗೆ ಬಂದ ನಂತರ ನಾಟಕಗಳಲ್ಲಿ ಅಭಿನಯಿಸುವ ಇರಾದೆ ಇತ್ತಾದರೂ, ಹಿಂದಿನ ಅವಮಾನಗಳ ಕಾರಣದಿಂದ, ಹಿಂದೇಟು ಹಾಕುತ್ತಿದ್ದರು. ಕೊನೆಗೂ ಗೆಳೆಯ ಚೇತನ್‌ರ ಒತ್ತಾಯಕ್ಕೆ ಮಣಿದು ರಂಗಭೊಮಿಗೆ ಕಾಲಿಟ್ಟರು. ಅಲ್ಲಿ ಇವರ ಮುಖದ ಸೌಂದರ್ಯಕ್ಕಲ್ಲ, ಅಭಿನಯಕ್ಕೆ ಬೆಲೆ ಸಿಕ್ಕಿತು. ಆರು ವರ್ಷಗಳಿಂದ ರಂಗಭೂಮಿಯಲ್ಲಿ ಸಕ್ರಿಯವಾಗಿರುವ ವಿನುತಾ, ಸಂವಾದ ಬೆಂಗಳೂರು ರಂಗತಂಡದ ಕಲಾವಿದೆ.
ಹುಣ್ಸ್ಮಕ್ಕಿ ಹುಳು… : ಸಾಮಾಜಿಕ ಜಾಲತಾಣಗಲ್ಲಿ ಸಕ್ರಿಯರಾಗಿರುವ ವಿನುತಾ, ಅದೆಷ್ಟೋ ಹೆಣ್ಣುಮಕ್ಕಳಿಗೆ ಆತ್ಮವಿಶ್ವಾಸ ತುಂಬುವ ಕೆಲಸ ಮಾಡುತ್ತಿದ್ಧಾರೆ. ನನ್ನ ಮುಖದಲ್ಲಿ ಮೊಡವೆಗಳಿವೆ, ನಾನು ಕಪ್ಪಗಿದ್ದೀನಿ, ದಪ್ಪಗಿದ್ದೀನಿ ಎಂದು ಬಹಳಷ್ಟು ಹುಡುಗಿಯರು ಈಕೆಗೆ ಮೆಸೇಜ್ ಮಾಡುತ್ತಾರಂತೆ. ಅವರ ಕೀಳರಿಮೆ ತೊಡೆಯುವ ಉದ್ದೇಶದಿಂದ ವಿನುತಾ, ತನ್ನ ಜೀವನದ
ನೋವು-ನಲಿವುಗಳನ್ನೆಲ್ಲ ” ಹುಣ್ಸ್ಮಕ್ಕಿ ಹುಳು’ ಎಂಬ ಪುಸ್ತಕ ರೂಪದಲ್ಲಿ ಹೊರತರಲಿದ್ದಾರೆ. ಅವರ ಬದುಕಿನ ಕಥೆ ಸಿನೆಮಾ ಕೂಡಾ ಆಗಲಿದೆ. ಸದಾ ಹಸನ್ಮುಖೀಯಾಗಿ, ಅರಳು ಹುರಿದಂತೆ ಮಾತನಾಡುತ್ತೀರಲ್ಲ, ಇಷ್ಟಕ್ಕೆಲ್ಲ ಸ್ಫೂರ್ತಿ ಯಾರು ಅಂತ ಕೇಳಿದರೆ, ತನ್ನ ಸಾಮರ್ಥ್ಯ ಮೀರಿದ ಸಾಧನೆ ಮಾಡಿರುವ ಎಲ್ಲಾ ಹೆಣ್ಣು ಮಕ್ಕಳೂ ನನಗೆ ಸ್ಫೂರ್ತಿ ಅನ್ನುವ ವಿನುತಾರ ಬದುಕು ಇತರೆ ಹೆಣ್ಣುಮಕ್ಕಳಿಗೆ ಸ್ಫೂರ್ತಿಯಾಗಲಿ.
ಬಾಹ್ಯ ನಶ್ವರ ಆಂತರ್ಯವೇ ಈಶ್ವರ’ ಎಂದು ನಂಬಿಕೊಂಡಿದ್ದೇನೆ. ಯಾವತ್ತೂ ಕಣ್ಣಿನ ಮಾತನ್ನ ಕೇಳಬೇಡಿ. ಮನಸ್ಸಿನ ಮಾತಿಗೆ ಕಿವಿಗೊಡಿ. ಎಲ್ಲ ಕೀಳರಿಮೆಗಳನ್ನು ತೊಡೆದು ಸಾಧನೆಯ ದಾರಿಯಲ್ಲಿ ನಡೆಯಿರಿ.
-ವಿನುತಾ ವಿಶ್ವನಾಥ್
– ಫರ್ಮಾನ್ ಕೆ. ಪಟ್ಟನಾಯಕನಹಳ್ಳಿ