Advertisement

ಪುರಾಣ ಕಥನ: ಕೃಷ್ಣ  ಕರ್ಣ

06:00 AM Jul 15, 2018 | |

ಕರ್ಣ ಹೇಳಿದ, “”ಕೃಷ್ಣ , ನನ್ನ ಬದುಕೇ ಒಂದು ಅಗ್ನಿಕುಂಡ. ಮುಳ್ಳಿನ ಬೇಲಿ. ನಾನು ಹುಟ್ಟಿದೆನೇನೋ ಸರಿ, ಆದರೆ ಎಂಥ ಹುಟ್ಟು! ಹುಟ್ಟಿಸಿದ ಕುಂತಿ ನವಜಾತಶಿಶುವಾಗಿದ್ದ ನನ್ನನ್ನು ನದಿಯಲ್ಲಿ ತೇಲಿಬಿಟ್ಟಳು. ಹುಟ್ಟಿ ಕಣ್ಣು ಬಿಡುವುದಕ್ಕೂ ಮುನ್ನ ನಾನು ವಿಶಾಲ ನೀರಿನ ನಡುಭಾಗದಲ್ಲಿ ತೇಲುತ್ತಿದ್ದೆ. ಹೇಳು, ಅಕ್ರಮ ಸಂತಾನವಾಗಿ ಹುಟ್ಟಿದ್ದು ನನ್ನ ತಪ್ಪೆ?”

Advertisement

“”ಹುಟ್ಟಿ ಬಡಬಗ್ಗರ ಹಟ್ಟಿಯಲ್ಲಿ ಬೆಳೆದೆ. ಬಿಲ್ವಿದ್ಯೆ ಕಲಿಯ ಬೇಕೆಂದು ದ್ರೋಣಾಚಾರ್ಯರ ಬಳಿ ಬಂದಾಗ ನನ್ನನ್ನು ಇದಿರುಗೊಂಡಿದ್ದೇನು? ನಿರಾಸೆ! ನೀನು ಕ್ಷತ್ರಿಯನಲ್ಲ ! ಕೀಳುಜಾತಿಯಲ್ಲಿ ಹುಟ್ಟಿದ ಸೂತಪುತ್ರ! ದೂರವಿರು! ಎಂಬ ಕುತ್ಸಿತ ಮಾತುಗಳು! ಸರಿ, ಪರಶುರಾಮರು ಅಸ್ತ್ರಶಸ್ತ್ರಗಳ ವಿದ್ಯೆಯನ್ನೇನೋ ಕಲಿಸಿದರು. ಆದರೆ ನಾನು ಕ್ಷತ್ರಿಯ ಎಂಬುದು ಗೊತ್ತಾಗುತ್ತಲೇ ಶಾಪ ಕೊಟ್ಟೇಬಿಟ್ಟರು. ಅಗತ್ಯ ಬಿದ್ದಾಗ ನಿನಗೆ ಅಸ್ತ್ರಗಳು ಕೈ ಕೊಡಲಿ! ಅಬ್ಟಾ ಅದೆಂಥ ಉಗ್ರ ಶಾಪ! ಅಗತ್ಯ ಸಂದರ್ಭದಲ್ಲಿ ಮಾತ್ರ ವಿದ್ಯೆ ಕೈ ಕೊಡುವುದಾದರೆ ಅಂಥ ವಿದ್ಯೆಯನ್ನಾದರೂ ನಾನು ಯಾಕೆ ಸಂಪಾದಿಸಬೇಕಿತ್ತು? ಹಣದ ಅವಶ್ಯಕತೆ ಬಿದ್ದಾಗ ಒಂದೇ ಒಂದು ದಮ್ಮಡಿಯೂ ಉಳಿಯದಂತೆ ಆಗಿಹೋಗಲಿ ಎಂಬಂಥ ಶಾಪವಲ್ಲವೆ ಅದು?” 

“”ನನ್ನ ಬದುಕಿನ ದುರಂತಗಳ ಸರಮಾಲೆ ಮುಗಿದಿರಲಿಲ್ಲ. ದ್ರೌಪದಿಯ ಸ್ವಯಂವರದಲ್ಲಿ ಅದೆಂಥ ಕಡು ಅವಮಾನವನ್ನು ನುಂಗಬೇಕಾಗಿ ಬಂತೆಂಬುದು ಎಲ್ಲರಿಗೆ ಗೊತ್ತಿದೆ. ಕೌರವ ಪಾಂಡವರ ನಡುವೆ ಯುದ್ಧವೇರ್ಪಟ್ಟಾಗ ಕುಂತಿ, ನನ್ನ ತಾಯಿ, ಬಂದಳು. ತೊಟ್ಟ ಅಸ್ತ್ರವನ್ನು ಮತ್ತೆ ತೊಡೆನೆಂಬ ಮಾತು ಪಡೆದು ಹೋದಳು. ಮಾತಿನುದ್ದಕ್ಕೂ ಪಾಂಡವರನ್ನು ರಕ್ಷಿಸುವ ಹೊಣೆಯನ್ನು ನನ್ನ ಮೇಲೆ ಹೊರಿಸಿದಳೇ ಹೊರತು ಒಮ್ಮೆಯಾದರೂ, ಬಾಯಾತಿಗಾದರೂ, ಯುದ್ಧದಲ್ಲಿ ಗೆದ್ದುಬಾ ಎಂದು… ಸ್ವಂತ ತಾಯಿ… ಹರಸಲಿಲ್ಲ ! ಇನ್ನೊಬ್ಬ – ಇಂದ್ರ, ನನ್ನ ಕರ್ಣಕುಂಡಲಗಳನ್ನು ಕದಿಯುವುದಕ್ಕೆಂದೇ ಬಂದ. ಇಷ್ಟೆಲ್ಲ ದೌರ್ಭಾಗ್ಯಗಳ ಮಧ್ಯೆ ನನ್ನನ್ನು ಕೊನೆಯವರೆಗೆ ಕೈಹಿಡಿದದ್ದು ದುರ್ಯೋಧನ ಮಾತ್ರ. ಹಾಗಿರುವಾಗ ಆತನ ಸಖ್ಯವನ್ನು ನಾನು ಹೇಗೆ ಮುರಿಯಲಿ ಕೃಷ್ಣ? ಅವನ ಪರವಾಗಿ ನಿಲ್ಲುವುದು ಅಧರ್ಮ ಹೇಗಾದೀತು?”

ಕೃಷ್ಣ ನಕ್ಕ.  ಹೇಳಿದ, “”ನೀನು ನದೀತೀರದಲ್ಲಿ ಹುಟ್ಟಿದೆ, ನದಿಯ ಪಾಲಾದೆ, ಅಲ್ಲವೆ? ನಾನು ಹುಟ್ಟಿದ್ದು ಎಲ್ಲಿ ಎಂದು ಕೇಳು! ಸೆರೆಮನೆಯಲ್ಲಿ! ಇಂಥ ಜನ್ಮವನ್ನು ಯಾರಾದರೂ ಬಯಸಲು ಸಾಧ್ಯವೇ? ಹುಟ್ಟಿದ ಮರುಕ್ಷಣವೇ ನಾನು ನನ್ನ ತಾಯಿಯಿಂದ ಬೇರೆಯಾದೆ. ನನ್ನ ತಂದೆ ನನ್ನನ್ನು ದೂರದೊಂದು ಹಳ್ಳಿಗೆ ಬಿಟ್ಟುಬಂದರು. ಹೋಗುವ ದಾರಿಯುದ್ದಕ್ಕೂ ಮಳೆ, ಗಾಳಿ, ಸಿಡಿಲು. ನೀನಾದರೋ ಚಿಕ್ಕವನಿ¨ªಾಗಿಂದ ಕತ್ತಿ, ರಥ, ಕುದುರೆ, ಬಿಲ್ಲುಬಾಣಗಳಿತ್ಯಾದಿಯನ್ನು ನೋಡಿಕೊಂಡು ಬಂದವನು ಕರ್ಣ. ಆದರೆ, ನನ್ನ ಬಾಲ್ಯದಲ್ಲಿ ಏನಿತ್ತು? ಹಸು, ಕೊಟ್ಟಿಗೆ, ಸೆಗಣಿ, ಗಂಜಲ! ಹಸು ಮೇಯಿಸುತ್ತ, ಸೆಗಣಿ ಬಾಚುತ್ತ, ಇದೇ ಜೀವನವೆಂದು ಬಗೆದ ಜನರೊಂದಿಗೆ ಬಾಳುತ್ತಿದ್ದವನು ನಾನು. ಅಷ್ಟರಮೇಲೂ, ಅನಿಷ್ಟಕ್ಕೆಲ್ಲ ಇವನೇ ಕಾರಣ ಎಂದು ಜನ ನನ್ನನ್ನು ಬೆಟ್ಟುಮಾಡುತ್ತಿದ್ದರು. ನನ್ನನ್ನು ಕೊಲ್ಲಲು ಅದೆಷ್ಟು ಪ್ರಯತ್ನಗಳಾದವು ಹೇಳು, ರಾಕ್ಷಸರು ಅದೆಷ್ಟೆಲ್ಲ ಬಗೆಯಲ್ಲಿ ನನ್ನ ಮೇಲೆ ಮುರಕೊಂಡುಬಿದ್ದರು ಹೇಳು”

“”ನಾನೂ ಓದಬೇಕು, ವಿದ್ಯೆ ಸಂಪಾದಿಸಬೇಕು ಎಂದು ನಿರ್ಧರಿಸಿ ಗುರುಕುಲ ಸೇರುವ ಹೊತ್ತಿಗೆ ನನಗೆ ಹದಿನಾರು ವರ್ಷಗಳಾಗಿಬಿಟ್ಟಿದ್ದವು. ಬಾಕಿ ಹುಡುಗರು ತಮ್ಮ ಜ್ಞಾನಾರ್ಜನೆ ಮುಗಿಸಿ ಆಶ್ರಮದಿಂದ ಹೊರಬರುವ ಹೊತ್ತಿನಲ್ಲಿ ನಾನು ವಿದ್ಯಾರ್ಥಿಯಾಗಿ ಸೇರಿದ್ದೆ. ಇನ್ನು ಗೃಹಸ್ಥ ಜೀವನ ಹೇಗಿತ್ತೆಂದು ಕೇಳುತ್ತೀಯಾ? ಅದಿನ್ನೊಂದು ಕತೆ. ಮದುವೆಯಾದವರನ್ನು ನಾನು ಮನಃಪೂರ್ವಕ ಪ್ರೀತಿಸಿರಲಿಲ್ಲ. ಯಾರನ್ನು ನಿಜವಾಗಿ ಪ್ರೀತಿಸಿದ್ದೆನೋ ಅವರನ್ನು ಮದುವೆಯಾಗಲಿಲ್ಲ. ದೈತ್ಯನೊಬ್ಬ ಕೂಡಿಹಾಕಿದ್ದ ಹೆಂಗಸರನ್ನು ಬಿಡಿಸಿದ್ದರಿಂದ ಅವರೆಲ್ಲರಿಗೂ ನಾನು ಪತಿಯಾದೆ. ಬಯಸದೆ ಬಂದ ಜವಾಬ್ದಾರಿಯದು. ಜರಾಸಂಧನಿಂದ ಜೀವ ಉಳಿಸಲಿಕ್ಕಾಗಿ ನಾನು ಊರಿನೆಲ್ಲರನ್ನೂ ಹೊರಡಿಸಿಕೊಂಡು ಮಥುರೆಯಿಂದ ದ್ವಾರಕೆಗೆ ಹೋಗಬೇಕಾಯಿತು. ಹೊಸ ಪರಿಸರ, ಹೊಸ ಜನ. 

Advertisement

ಅಲ್ಲಿ ನಾವು ಬಿಡಾರ ಹೂಡಿ ಹೊಸ ನಗರವನ್ನು ಕಟ್ಟಿಕೊಳ್ಳಬೇಕಾಗಿತ್ತು. ಮಥುರೆಯಿಂದ ಹೊರಟಾಗ ನಾನು ಕೇಳಿದ ಮಾತುಗಳಾದರೂ ಎಂಥಾದ್ದು! ಹೇಡಿ ಎಂದರು. ರಟ್ಟೆಯಲ್ಲಿ ಬಲವಿಲ್ಲದೆ ಓಡಿಹೋಗುತ್ತಿದ್ದಾನೆ, ಪುಕ್ಕಲ ಎಂದರು. ಎಲ್ಲ ಗೇಲಿ, ಅಪಮಾನಗಳನ್ನೂ ಸ್ಥಿತಪ್ರಜ್ಞನಾಗಿ ನಾನು ಸಹಿಸಿಕೊಳ್ಳಬೇಕಾಯಿತು” “”ಕರ್ಣ! ಕುರುಕ್ಷೇತ್ರದಲ್ಲಿ ನೀನು ಗೆದ್ದದ್ದೇ ಆದರೆ ಧುರ್ಯೋದನನ ಪ್ರೀತಿಗೆ ನೀನು ಸಂಪೂರ್ಣವಾಗಿ ಪಾತ್ರನಾಗುತ್ತಿ. ಪ್ರೀತಿಯಿಂದ ಅರ್ಧರಾಜ್ಯವನ್ನೇ ನಿನಗೆ ಬಿಟ್ಟುಕೊಟ್ಟಾನೇನೋ. ಅಥವಾ ಸಿಂಹಾಸನದ ಪಕ್ಕದಲ್ಲೇ ಮತ್ತೂಂದನ್ನಿಟ್ಟು ನಿನ್ನನ್ನು ಕುಳ್ಳಿರಿಸಿಯಾನೋ ಏನೋ. ಜಯದಿಂದ ಲಭಿಸುವ ಎಲ್ಲ ಭೋಗಭಾಗ್ಯಗಳಿಗೂ ನೀನು ವಾರಸುದಾರ. ಆದರೆ ನನಗೆ? ಈ ಯುದ್ಧ ಗೆಲ್ಲಿಸಿಕೊಟ್ಟರೆ ನನಗೇನು ಸಿಗುತ್ತದೆ ಎಂದು ಭಾವಿಸಿದ್ದಿ? ಅಣ್ಣತಮ್ಮಂದಿರು ಹೇಳುತ್ತಾರೆ – ನಮಗೆ ಬೇಡಿತ್ತು, ಆದರೂ ಆ ಕುಟಿಲ ಈ ಯುದ್ಧ ಮಾಡಿಸಿದ! ಲಕ್ಷಾಂತರ ಜನರ ಸಾವಿಗೆ ಕಾರಣನಾದ. ದಾಯಾದಿಗಳೇ ಪರಸ್ಪರ ಕೊಂದುಕೊಳ್ಳುವ ಹಾಗೆ ಮಾಡಿದ. ಅಣ್ಣತಮ್ಮಂದಿರು ಎದುರೆದುರು ನಿಂತು ಸೆಣಸುವಂತೆ ಮಾಡಿದ”

ಕೌಂತೇಯ! ಪ್ರತಿಯೊಬ್ಬನಿಗೂ ಜೀವನದಲ್ಲಿ ಒಂದಿಲ್ಲೊಂದು ಸವಾಲು ಇದ್ದೇ ಇರುತ್ತದೆ. ನಿನಗೆ ನಿನ್ನ ಜೀವನ ಅಗ್ನಿಕುಂಡ ಅನ್ನಿಸಿದರೆ ನನ್ನದನ್ನು ನೋಡು. ಜೀವನ ಯಾರಿಗೂ ಹೂವಿನ ಹಾಸಿಗೆಯಲ್ಲ. ಯಾರಿಗೂ ಸುಲಭಗ್ರಾಹ್ಯವೂ ಅಲ್ಲ. ಜೀವನದಲ್ಲಿ ಏನೇ ಏರುಪೇರುಗಳು ಬಂದರೂ, ಆ ಎಲ್ಲ ಸಂದರ್ಭಗಳಲ್ಲಿ ನೀನು ಏನನ್ನೇ ಮಾಡಿದರೂ ಯಾವುದು ಸರಿ ಎಂಬುದು ನಿನ್ನ ಒಳಮನಸ್ಸಿಗೆ ಗೊತ್ತಿರುತ್ತದೆ. ಅದನ್ನೇ ಧರ್ಮ ಎನ್ನುವುದು. ಆತ್ಮಸಾಕ್ಷಿ ಯಾವುದನ್ನು ನುಡಿಯುತ್ತದೋ ಅದೇ ಧರ್ಮ. ಆತ್ಮಸಾಕ್ಷಿ ಸತ್ತ ದಿನ ನಾವು ಧರ್ಮದಿಂದ ವಿಮುಖರಾದೆವು, ಅಧರ್ಮಿಗಳಾದೆವು ಎಂದೇ ಅರ್ಥ. ನಾವು ಎಷ್ಟು ಅನ್ಯಾಯಕ್ಕೊಳಗಾದರೂ ಎಷ್ಟೊಂದು ಅಪಮಾನವನ್ನು ನುಂಗಬೇಕಾಗಿ ಬಂದರೂ ಎಷ್ಟೊಂದು ಸಲ ಕೆಳಗೆ ಬಿದ್ದರೂ ಮೀಸೆ ಮಣ್ಣಾದರೂ ಮುಖ್ಯವಾಗುವುದು ಯಾವುದು ಗೊತ್ತಾ? ನಾವು ಆ ಪರಿಸ್ಥಿತಿಗಳಿಗೆ ಹೇಗೆ ಪ್ರತಿಕ್ರಿಯಿಸಿದೆವು ಎನ್ನುವುದು. ಜೀವನದಲ್ಲಿ ಮೇಲಿಂದ ಮೇಲೆ ಸಮಸ್ಯೆಗಳು, ದುಃಖಗಳು, ಅವಮಾನಗಳು ಬಂದವೆನ್ನುವುದು ನಾವು ತಪ್ಪು ಮಾಡಲು ನಮಗೆ ಸಿಗುವ ಪರವಾನಗಿಯಲ್ಲ. ಜೀವನದ ಗಮ್ಯ ನಿರ್ಧಾರವಾಗುವುದು ನಾವು ಯಾವ ಚಪ್ಪಲಿಯನ್ನು ತೊಡುತ್ತೇವೆ ಎಂಬುದರಿಂದ ಅಲ್ಲ, ಯಾವ ದಾರಿಯಲ್ಲಿ ನಮ್ಮ ಹೆಜ್ಜೆಗಳನ್ನು ಊರುತ್ತೇವೆ ಎಂಬುದರಿಂದ.

ರೋಹಿತ್‌ ಚಕ್ರತೀರ್ಥ

Advertisement

Udayavani is now on Telegram. Click here to join our channel and stay updated with the latest news.

Next