Advertisement

ಕತೆ: ಕಾಶೀಯಾತ್ರೆ

10:08 AM Dec 09, 2019 | mahesh |

ಕಾಂತಜ್ಜ ಕಾಲೆಳೆದುಕೊಂಡು ಸಂಭ್ರಮದಿಂದ ಹೋಗುವುದನ್ನೇ ಗಮನಿಸುತ್ತಿದ್ದೆ. ಅರೇ, ಇದೇನಿದು ಹೊಸ ಬಗೆ? ಯಾವತ್ತೂ ಇಷ್ಟು ಲವಲವಿಕೆಯನ್ನು ನಾನು ಅವರ ಮೊಗದಲ್ಲಿ ಕಂಡಿರಲಿಲ್ಲ. ದಿನವಿಡೀ ನಿರ್ಲಿಪ್ತ ಭಾವ. ಪರಿಚಯದ ತರಕಾರಿ ಅಂಗಡಿಯವನಲ್ಲಿ ಕೇಳಿದೆ. ಆತ ಒಂದು ಕ್ಷಣ ನನ್ನನ್ನೇ ದಿಟ್ಟಿಸಿ ನೋಡಿ ಹೇಳಿದ-

Advertisement

“”ಅರೇ ! ನಿಮಗೆ ಗೊತ್ತಿಲ್ವಾ? ಕಾಂತಜ್ಜ ಕಾಶಿಗೆ ಹೊರಟಿದ್ದಾರೆ. ಮೊನ್ನೆಯಿಂದ ಅವರು ಇದನ್ನು ಹೇಳದ ಜನವಿಲ್ಲ ಊರಿನಲ್ಲಿ. ಕಲ್ಲಿಗೂ, ಕಂಬಕ್ಕೂ ಹೇಳಿದ್ದಾರೆ ಅನ್ನಿಸುತ್ತೆ” ಆತ ನನ್ನನ್ನು ವಿಚಿತ್ರವಾಗಿ ನೋಡಿದ. ಅವನ ನೋಟದಲ್ಲಿ ನಾನು ಅನ್ಯ ಗ್ರಹದವನೇನೋ ಎಂಬ ಭಾವವಿತ್ತು. ಒಂದು ರೀತಿ ಬೇಸರವೂ ಆಯಿತು. ಕಾಂತಜ್ಜ ನನ್ನನ್ನು ಬಿಟ್ಟು ಉಳಿದ ಎಲ್ಲರಿಗೂ ಹೇಳಿದ್ರಾ ! ನಾನು ಪೇಟೆಗೆ ಹೋದರೆ ಅವರಿಗೆ ಪಾನ್‌ ಬೀಡಾ ತಪ್ಪದೇ ತಂದುಕೊಡುವವನು. ಅವರ ಮನೆಯ ಜಗಲಿ ಬದಿಯಲ್ಲೇ ನಾನು ದಿನಾ ಶಾಲೆಗೆ ಹೋಗುವುದು. ಆ ವಿಷಯವಿರಲಿ. ಅವರ ಮನೆಯ ಹಿತ್ತ¤ಲಿನ ಬಾಳೆಗಿಡ ಗೊನೆ ಹಾಕಿದರೆ ಮೊದಲು ಹಣ್ಣಾದ ಬಾಳೆಹಣ್ಣು ನನ್ನ ಮನೆಗೆ ! ಈಗ ಎರಡು ದಿನದಿಂದ ಬಿಡದೇ ಸುರಿದ ಮಳೆ ಮತ್ತು ಆರ್ಭಟವೆಬ್ಬಿಸಿದ ಗಾಳಿಯ ಗಲಾಟೆಗೆ ಶಾಲೆಗೆ ರಜ ಸಾರಿದ್ದರು. ಆ ಕಾರಣ ನಾನು ಶಾಲೆಯತ್ತ ಹೋಗಿರಲಿಲ್ಲ. ಇವತ್ತು ನನ್ನ ವಿದ್ಯಾರ್ಥಿಯೊಬ್ಬನ ಮನೆಗೆ ಮರಬಿದ್ದು ಹಾನಿಯಾಗಿದೆ ಅಂತ ಸುದ್ದಿ ಕೇಳಿ ಹೊಸಿಲು ದಾಟಿ ಹೊರಬಂದಿದ್ದೆ. ಮನಸ್ಸು ಯಾಕೋ ನನ್ನ ಅಪ್ಪಣೆಗೆ ಕಾಯದೇ ಮುದುಡಿ ಹೋಯಿತು. ಕಾಂತಜ್ಜನ ಬಗ್ಗೆ ಯೋಚಿಸುತ್ತ ಮನೆಯ ಕಡೆ ನಡೆದೆ.

ನಾನು ಆ ಊರಿನ ಸರಕಾರಿ ಶಾಲೆಗೆ ವರ್ಗಾವಣೆಯಾಗಿ ಸುಮಾರು ಎರಡು ವರ್ಷ ಆಯಿತು. ಅತ್ತ ತೀರಾ ಹಳ್ಳಿಯೂ ಅಲ್ಲ ಪೇಟೆಯೂ ಅಲ್ಲ ಎಂಬಂಥ ಪ್ರದೇಶ. ಯಾಕೋ ನನಗೆ ಪೇಟೆಯ ಬೂಟಾಟಿಕೆಯ ಬದುಕು ರೋಸಿ ಹೋಗಿತ್ತು. ಒಂದು ಸಣ್ಣ ನಗುವಿನಲ್ಲೂ ದೊಡ್ಡ ನಿರೀಕ್ಷೆಯ ಲೆಕ್ಕಾಚಾರ. ಇಲ್ಲಿ ಪ್ರತೀ ವರ್ತನೆಗೂ ಪ್ರತಿಫ‌ಲದ ಸಾಲ. ನನಗೆ ನಾನು ಉಸಿರಾಡುವ ಯಂತ್ರ ಎನ್ನಿಸುತ್ತಿತ್ತು. ಗುರು ಎನ್ನುವ ಪದ ನನ್ನನ್ನು ಹಂಗಿಸಿದ ಹಾಗೆ ಭಾಸವಾಗುತ್ತಿತ್ತು. ಈಗೀಗ ಈ ಶಬ್ದದ ಅರ್ಥವ್ಯಾಪ್ತಿ ನನಗೂ ಪ್ರಶ್ನೆಯಾಗುತ್ತಿತ್ತು. ನನ್ನನ್ನು ಒಬ್ಬ ಸಾಮಾನ್ಯ ಸರಕಾರಿ ನೌಕರನಂತೆ ಕಾಣುವ ಅವರ ವರ್ತನೆ ನನ್ನ ಇದ್ದ ಸ್ವಲ್ಪ ನೆಮ್ಮದಿಯನ್ನು ಹಾಳುಗೆಡವುತ್ತಿತ್ತು. ಎಲ್ಲದಕ್ಕೂ ಕೈಚಾಚಿಕೊಂಡು ಬರುವ ಸಂಬಂಧಿಕರು. ಇಲ್ಲ ಅಂದರೆ ಮುಗಿಯಿತು.

“ಇವರಿಗೆ ಮಕ್ಕಳು-ಮರಿ ಬೇರೆ ಇಲ್ಲ. ಯಾರಿಗೆ ಈ ರೀತಿ ಕಟ್ಟಿ ಇಡುವುದು’ ಎನ್ನುವ ಚುಚ್ಚುಮಾತು ಬೇರೆ. ಅವರು ಹೇಳುವುದು ಸರಿ. ಆದರೂ ಉಸಿರು ಇರೋವರೆಗೆ ಜೀವನ ಮಾಡಬೇಕಲ್ಲ. ಒಂದಿಷ್ಟು ನೆಮ್ಮದಿ ಇರಲಿ ಅಂತ ಮಡದಿಗೂ ಹೇಳದೆ ಕೇಳದೆ ವರ್ಗಾವಣೆ ಮಾಡಿಸಿಕೊಂಡೆ. ಇಷ್ಟನೋ ಕಷ್ಟನೋ ನನ್ನ ಬಿಟ್ಟಿರಲಾರದೆ, ಮನಸ್ಸಿಲ್ಲದ ಮನಸ್ಸಿನಿಂದ ನನ್ನ ಜೊತೆ ಈ ಹಳ್ಳಿಗೆ ಬಂದವಳು ನನ್ನ ಹೆಂಡತಿ. ಪೇಟೆಯ ಇಷ್ಟುದ್ದ ಜಾಗದಲ್ಲಿ “ಸ್ವತ್ಛ ಭಾರತ ಯೋಜನೆ’ಯನ್ನು ಅನುಸರಿಸಿದವಳಿಗೆ ಇಲ್ಲಿ ಅದು ಅಷ್ಟು ಸುಲಭದ ಮಾತಾಗಿರಲಿಲ್ಲ. ಬೆಳಗ್ಗೆದ್ದರೆ ಆಚೀಚೆ ಮನೆಯ ಕೋಳಿಗಳು ಬಂದು ಜಗಲಿ ತುಂಬ ಕೊಳಕು ಮಾಡಿಹೋಗುತ್ತಿದ್ದವು. ಅಂಗಳದ ತುಂಬಾ ತರಗೆಲೆ. ಹೊರಗೆ ಕಾಲಿರಿಸಿದರೆ ಎಲೆಯೆಡೆಯಲ್ಲಿ ಅವಿತಿದೆಯೋ ಎಂಬ ಭೀತಿ. ಈ ಪರಿಸ್ಥಿತಿಯಲ್ಲಿ ನಮಗೆ ಸಹಾಯಕ್ಕೆ ಬಂದವರೇ ಈ ಕಾಂತಜ್ಜ. ನನ್ನವಳ ಕಸಿವಿಸಿಯನ್ನು ಅರ್ಥ ಮಾಡಿಕೊಂಡವರೇ ಮೊದಲ ದಿನವೇ ಕಸಬರಿಗೆ ಕೈಯಲ್ಲಿ ಹಿಡಿದಿದ್ದರು.

“”ಏನಿದು? ನಾವು ಇದಕ್ಕೆ ಬೇರೆ ಹೆಂಗಸರನ್ನು ಹುಡುಕುತ್ತೇವೆ. ಗಂಡಸರ ಕೆಲಸವಾ ಇವೆಲ್ಲ?” ಎಂದು ನಾನೆಂದಾಗ, “”ಬಿಡ್ರೀ ಮಾಸ್ಟ್ರಾ. ಕೆಲಸದಾಗ ಹೆಣ್ಣು-ಗಂಡು ಅಂತ ಏನು? ನೀವು ನಮ್ಮೂರ ಶಾಲೆಗೆ ಗುರುಗಳಾಗಿ ಬಂದಿದ್ದೀರಿ. ನಿಮ್ಮ ಹೆಂಡತಿಗೆ ಸಹಾಯ ಮಾಡಿದೆ ಅಂದರೆ ಗುರುಪತ್ನಿ ಸೇವೆ ಮಾಡಿದ ಹಾಗೆ ಆಯ್ತಲ್ಲ” ಎಂದು ದೇಶಾವರಿ ನಗು ಬೀರಿದ್ದರು. ಪೇಟೆಯಲ್ಲಿ ಆಧುನಿಕ ಜನಗಳು ಓದಿ ಅರಗಿಸಿಕೊಳ್ಳಲಾಗದ್ದನ್ನು ಆ ಹಳ್ಳಿಯ ಹಿರಿಮನುಷ್ಯ ಆಳವಡಿಸಿಕೊಂಡಿದ್ದರು. ರಾತ್ರಿ ಮಡದಿಯ ಹತ್ತಿರ ಹಳ್ಳಿ ಜನರ ಮುಗ್ಧತೆಯ ಬಗ್ಗೆ ಭಾಷಣನೇ ಬಿಗಿದಿದ್ದೆ. ಸ್ವಲ್ಪ ದಿನದಲ್ಲಿ ಕಾಂತಜ್ಜ ಸುಲಭದಲ್ಲಿ ಎಲ್ಲದಕ್ಕೂ ಕೈಗೆಟಕುವ ಮನುಷ್ಯ ಆಗಿಬಿಟ್ಟರು.

Advertisement

ಆ ಹಳ್ಳಿಯಲ್ಲಿ ಎಲ್ಲಿ ಏನೇನೂ ಸಿಗುತ್ತದೆ, ಯಾರು ಎಂತ- ಎಲ್ಲಾ ವಿವರ ನಮಗೆ ಒದಗಿಸಿದ್ದರು. ನನ್ನವಳ ಸಣ್ಣದೊಂದು ಹೂದೋಟವೂ ಅವರ ಮೇಲುಸ್ತುವಾರಿಯೊಂದಿಗೆ ಹಸಿರು ಚೆಲ್ಲಿ ಮನೆಯಂಗಳಕ್ಕೆ ಹೊಸ ಶೋಭೆ ತಂದಿತು. ಆಗೆಲ್ಲ ಕಾಂತಜ್ಜ ಆ ಮನೆಯಲ್ಲಿ ನನ್ನಿಂದ ಮೊದಲು ಇದ್ದ ವ್ಯಕ್ತಿ ಬಗ್ಗೆ ಹೇಳಿಕೊಂಡದ್ದಿತ್ತು. ಆ ಮನುಷ್ಯನಿಗೆ ಎಲ್ಲ ಕೆಟ್ಟ ಚಟಗಳೂ ಇದ್ದವಂತೆ. ಮಕ್ಕಳಿಗೆ ಪಾಠ ಹೇಳುವ ಗುರುಗಳು ನೀವು, ನೀವೇ ಹೀಗಾದರೆ ಹೇಗೆ ಅಂತ ಬುದ್ಧಿ ಹೇಳ್ಳೋಕೆ ಹೋಗಿ ಆ ಮನುಷ್ಯ ಹೊಡೆಯಲು ಬಂದಿದ್ದನಂತೆ. ಹಾಗಾಗಿ, ನಾವು ಬಂದಾಗಲೂ ಬಹಳ ಆತಂಕ ಇತ್ತು ಕಾಂತಜ್ಜನಿಗೆ. ಎಂಥ ಮಂದಿಯೋ ಇವರು ಅಂತ. ಆದರೆ, ಲಕ್ಷಣವಾಗಿದ್ದ ನನ್ನವಳ ಕಂಡಾಗ ಅವರ ಅರ್ಧ ಆತಂಕ ದೂರ ಆಗಿತ್ತು ಅನ್ನಿಸುತ್ತೆ.

ಕಾಂತಜ್ಜ ಎಷ್ಟಾದರೂ ಅಲ್ಲೇ ಹುಟ್ಟಿ ಬೆಳೆದು ಅರ್ವತ್ತೈದರ ಅಂಚಿಗೆ ಬಂದು ನಿಂತವರು. ಚಿರಪರಿಚಿತ ಊರು ಮತ್ತು ಜನರು. ಊರವರಿಗೂ ಕಾಂತಜ್ಜ ಅಂದರೆ ಅಕ್ಕರೆಯೇ. ತಾನಾಯಿತು ತನ್ನ ಹೊಟ್ಟೆಪಾಡಿನ ಕೆಲಸ ಆಯಿತು. ಅಷ್ಟಕ್ಕೂ ಒಬ್ಬನ ಹೊಟ್ಟೆ ತುಂಬುವಷ್ಟು ಉತ್ಪತ್ತಿ ಅವರ ಜಾಗದಲ್ಲಿ ಇತ್ತು. ಕೆಲವೇ ದಿನದಲ್ಲಿ ಊರವರ ಬಾಯಿಯಲ್ಲಿ “ಕಾಂತಜ್ಜ ಮಾಸ್ಟ್ರ ಜನ’ ಅನ್ನುವಂತಾಯಿತು. ಆತ ನಮ್ಮ ಮನೆ ಸದಸ್ಯನೇ ಅನ್ನುವ ಹಾಗಾಯಿತು.

ನಿಧಾನವಾಗಿ ಅವರ ಮನೆಯ ವಿಚಾರ ತಿಳಿಯತೊಡಗಿತು. ನಾನಾಗಿ ಯಾವುದನ್ನೂ ಕೇಳಲಿಲ್ಲ. ಆದರೆ, ನನ್ನವಳು ಬಂದ ಒಂದು ತಿಂಗಳಿಗೆ ಕಾಂತಜ್ಜನ ಜೀವನ ವೃತ್ತಾಂತವನ್ನೆಲ್ಲ ದಾಖಲಿಸಿಕೊಂಡು ನನ್ನೆದುರು ವರದಿ ವಾಚಿಸಿದಳು. ಕಾಂತಜ್ಜನಿಗೆ ಇಬ್ಬರು ಮಕ್ಕಳು. ಹೆಂಡತಿ ಎರಡನೆಯ ಹೆರಿಗೆಯಲ್ಲಿ ದೇವರ ಪಾದ ಸೇರಿದಳು. ದೊಡ್ಡವಳು ಹೆಣ್ಣು. ಆ ಮಗುವಿಗೆ ಹತ್ತು ವರ್ಷ ಆಗಿತ್ತು. ತುಂಬ ವರ್ಷ ಇನ್ನೊಂದು ಮಗು ಬೇಕು ಅಂತ ಕಂಡ ದೇವರಿಗೆಲ್ಲ ಹರಕೆ ಹೊತ್ತು ಆನಂತರ ಹುಟ್ಟಿದವನು ಮಗ.

ಹೆಂಡತಿ ತೀರಿಹೋಗಿ ಎಲ್ಲರೂ ಮರುಮದುವೆಗೆ ಒತ್ತಾಯ ಮಾಡಿದರೂ ಅವರು ಅದನ್ನು ಕಿವಿಗೆ ಹಾಕಿಕೊಳ್ಳಲಿಲ್ಲ. ಹಸುಗೂಸಿಗೆ ಹತ್ತಿಬಟ್ಟೆಯಲ್ಲಿ ಹಸುಹಾಲು ಅದ್ದಿ ಕುಡಿಸಿ ಬೆಳೆಸಿದರು. ಹದಿನೆಂಟಕ್ಕೆ ಮಗಳ ಮದುವೆ ಆಯಿತು. ಅದೂ ಬಹಳ ದೂರದ ಊರಿಗೆ. ಕಾಂತಜ್ಜ ಹಾಗೂ ಹೀಗೋ ಇರೋ ಅರ್ಧ ಎಕರೆ ಜಾಗದಲ್ಲಿ ದುಡಿದು ಮಗನನ್ನು ತಕ್ಕ ಮಟ್ಟಿಗೆ ಓದಿಸಿದರು. ಅವನು ಈಗ ಪೇಟೆಯಲ್ಲಿ ಕೆಲಸದಲ್ಲಿ ಇದ್ದಾನೆ. ಅಲ್ಲೇ ಒಂದು ಹುಡುಗಿಯನ್ನು ನೋಡಿ ಮದುವೆ ಬೇರೆ ಆಗಿದ್ದಾನಂತೆ. ಅವನದ್ದು ಸರಕಾರಿ ಕೆಲಸ ಏನೂ ಅಲ್ಲ. ಬಾಡಿಗೆ ಮನೆ. ಒಂದು ಬೆಡ್‌ರೂಮಿನ ಮನೆಯಲ್ಲಿ ಈ ಮುದಿ ಅಪ್ಪನನ್ನು ಒಂದು ದಿನವೂ ಕರೆದು ಕೂರಿಸಲಿಲ್ಲ. ಹಾಗಂತ ಕಾಂತಜ್ಜನಿಗೆ ಬೇಜಾರಿಲ್ಲ. ಇನ್ನು ಹೆಣ್ಣುಮಗಳು ಸಾಕಷ್ಟು ಸಲ ಕರೆದರೂ ಕೊಟ್ಟ ಹೆಣ್ಣು ಕುಲಕ್ಕೆ ಹೊರಗೆ ಅಂತ ಕಾಂತಜ್ಜ ಅವಳ ಮನೆಗೆ ಅತಿಥಿಯ ಹಾಗೆ ಹೋಗಿ ಬರುತ್ತಾರೆ.

ಅಪ್ಪನ ಹಟ ಅರಿತ ಮಗಳು ಈಗ ಅವರನ್ನು ಒತ್ತಾಯ ಮಾಡುವುದಿಲ್ಲ. ಅವಳಿಗೂ ಗಂಡನ ಮನೆಯಲ್ಲಿ ಇರುವ ಸ್ವಾತಂತ್ರ್ಯ ಅಷ್ಟಕಷ್ಟೇ. ಮಗನೋ ವಾರಕ್ಕೋ ತಿಂಗಳಿಗೋ ಒಮ್ಮೆ ಬಂದು ಹೋಗುವವನು. ಹೆಕ್ಕಿ ರಾಶಿ ಹಾಕಿದ್ದ ತೆಂಗಿನಕಾಯಿಗಳನ್ನು ಒಂದೂ ಬಿಡದೆ ಗೋಣಿಗೆ ತುಂಬಿಸಿ ಒಯ್ಯುತ್ತಿದ್ದ. ಇತ್ತೀಚೆಗೆ ಅವನು ಈ ಜಾಗ ಮಾರಿ ಬಿಡೋಣ ಅಂತ ಒತ್ತಾಯ ಬೇರೆ ಮಾಡುವುದಕ್ಕೆ ಸುರು ಮಾಡಿದ್ದಾನಂತೆ. ಒಂದು ವೇಳೆ ಹಾಗೆ ಮಾಡಿದರೆ ಕಾಂತಜ್ಜನ ಮುಂದಿನ ಗತಿ ಏನು ಅಂತ ಗೊತ್ತಿಲ್ಲ. ಹೀಗೆಲ್ಲ ನನ್ನವಳು ಬೇಸರಪಟ್ಟುಕೊಂಡು ಹೇಳಿಕೊಂಡಿದ್ದಳು.

ಅದರ ನಡುವೆ ಇದೇನಿದು ಕಾಶಿಯಾತ್ರೆ? ನಾನು ನೇರವಾಗಿ ಕಾಂತಜ್ಜನ ಮನೆಗೆ ಹೋದೆ. ನನ್ನನ್ನು ಕಂಡಿದ್ದೇ ಕಾಂತಜ್ಜ ಓಡಿಬಂದರು. ಜಗಲಿಯಲ್ಲಿ ಮುರುಕಲು ಈಸೀಚೇರು ಇತ್ತು. ಅದನ್ನೇ ನನಗೆ ಕುಳಿತುಕೊಳ್ಳಲು ಮುಂದೆ ತಂದಿರಿಸಿದರು. ನಾನು ಮೌನವಾಗಿ ಕುಳಿತೆ. ಅವರೇ ಮಾತನಾಡಲಿ ಅನ್ನುವ ಭಾವ ನನ್ನದಾಗಿತ್ತು.

“”ಅರೇ ಮಾಸ್ಟ್ರಾ. ನಾನು ನಿಮ್ಮನ್ನೇ ಹುಡುಕುತ್ತಾ ಇದ್ದೆ. ನಾಡಿದ್ದು ಕಾಶಿಯಾತ್ರೆ ಹೊರಟಿದ್ದೀನಿ. ನನ್ನ ಬಹುದಿನದ ಕನಸು ನನಸಾಗುತ್ತಿದೆ. ಒಮ್ಮೆ ಕಾಶಿ ವಿಶ್ವನಾಥನ ದರ್ಶನ ಮಾಡಿ ಬರಬೇಕು ನನಗೆ. ಜನ್ಮ ಸಾರ್ಥಕ ಆಯ್ತು ಅಂತ ಅಂದುಕೊಳ್ತೀನಿ. ಸಾಯುವುದಂತೂ ಇದೇ ಊರಲ್ಲಿ ಬಿಡಿ”. ಅವರ ಮೊಗದಲ್ಲಿ ಸಂತಸ ತುಂಬಿ ತುಳುಕುತ್ತಾ ಇತ್ತು. ಅವರಿಗೆ ಕಾಶಿಗೆ ಹೋಗುವ ಆಸೆ ಇದ್ದಿದ್ದು ನನಗೆ ಹೊಸ ವಿಚಾರ ಆಗಿರಲಿಲ್ಲ. ಬಹಳ ಸರ್ತಿ ಈ ವಿಚಾರ ನನ್ನ ಹತ್ತಿರ ಹೇಳಿಕೊಂಡಿದ್ದರು.

“”ಪುಣ್ಯದ ಲೆಕ್ಕ ಬಿಡಿ. ಪಾಪ ಅಂತೂ ಮಾಡಿಲ್ಲ” ನನ್ನೆದುರು ಅವರು ಹಾಗೆ ಹೇಳಿಕೊಂಡಾಗ ನಾನೂ ತಮಾಷೆಗೆ ಅಂದಿದ್ದೆ- “”ಕಾಂತಜ್ಜ , ದೇವರ ಅಲ್ಲಿ ಇಲ್ಲಿ ಯಾಕೆ ಹುಡುಕುವಿರಿ? ಅವ ನಮ್ಮ ಜೊತೆಯಾಗ ಇದ್ದಾನೆ. ನೀವು ಅಲ್ಲಿ ಹೋದರೆ ಆ ಜನಜಂಗುಲಿಯಲ್ಲಿ ಸದ್ದುಗದ್ದಲದಲ್ಲಿ ನಿಮ್ಮ ಕಾಶಿ ವಿಶ್ವನಾಥನಿಗೆ ನಿಮ್ಮ ಪರಿಚಯವೇ ಸಿಗದು”. ನನ್ನ ಮಾತಿನಲ್ಲಿ ಅವರಿಗೆ ಸಹಮತವಿರಲಿಲ್ಲ ಎಂದು ಅವರ ಮುಖ ನೋಡಿಯೇ ಗೊತ್ತಾಗಿತ್ತು.

ಹೊರಟಿರುವುದೇನೋ ಸರಿ, ಆದರೆ, ಯಾರ ಜೊತೆ ಹೊರಟಿದ್ದಾರೆ? ಒಂಟಿಯಾಗಿ ಹೋಗುವುದಕ್ಕಂತೂ ಈ ವಯಸ್ಸಲ್ಲಿ ಅಸಾಧ್ಯ. “”ಅಲ್ಲ, ಯಾರ ಜೊತೆ ಹೊರಟಿರಿ ನೀವು? ಹೋಗುವ ಬರುವ ವ್ಯವಸ್ಥೆ ಎಲ್ಲಾ ಹೇಗೆ?” ನನ್ನ ಪ್ರಶ್ನೆಗೆ ಅವರ ಮುಖ ಮತ್ತೂ ಅರಳಿತು.

“”ಬೇರೆ ಯಾರು ಈ ಮದುಕನ ಆಸೆ ಈಡೇರಿಸುತ್ತಾರೆ? ನನ್ನ ಮಗನೇ ಹೇಳಿದ್ದು. ಅವನಿಗೆ ನಾಲ್ಕು ದಿನ ರಜೆ ಇದೆಯಂತೆ. ನಿನ್ನ ಬಹುದಿನದ ಆಸೆ ಅಲ್ವಾ ಅಪ್ಪ, ಈ ಸಲ ನಾನು ನಿನಗೆ ವಿಶ್ವನಾಥನ ದರ್ಶನ ಮಾಡಿಸ್ತೀನಿ ಅಂದಾಗ ಬೇಡ ಅನ್ನೋಕೆ ಆಗುತ್ತಾ?” ಕಾಂತಜ್ಜನ ಸ್ವರ ನಡುಗಿದ್ದು ನನ್ನ ಗಮನಕ್ಕೆ ಬಂತು. ಆದರೆ, ಆ ಮಾತು ನನಗೆ ಅಷ್ಟು ಹಿಡಿಸಲಿಲ್ಲ. ಯಾಕೆಂದರೆ ಮನೆ-ಜಾಗ ಮಾರುವ ವಿಚಾರವಾಗಿ ಬಂದಾಗಲೆಲ್ಲ ಮಗ ಎತ್ತರದ ಧ್ವನಿಯಲ್ಲಿ ಕೂಗಾಡುವುದನ್ನು ನಾನು ಕೇಳಿಸಿಕೊಂಡಿದ್ದೆ. ಅಲ್ಲದೆ, ಇತ್ತೀಚೆಗೆ ಕಾಂತಜ್ಜನ ಮಗ ವಿಪರೀತ ಕುಡಿತ, ಜೂಜಿನ ಚಟ ಬೆಳೆಸಿಕೊಂಡಿದ್ದಾನೆ ಅಂತ ಬೇರೆ ಊರವರು ಮಾತಾಡಿಕೊಳ್ಳುತ್ತಿರುವುದು ನನಗೆ ಗೊತ್ತು. ಆದರೆ, ನನಗೆ ಕಾಂತಜ್ಜನ ಉತ್ಸಾಹಕ್ಕೆ ನೀರೆರೆಚುವ ಮನಸ್ಸು ಇರಲಿಲ್ಲ.

“”ಆಗಲಿ ಬಿಡಿ. ಪರ ಊರು ಬೇರೆ ಜೋಪಾನವಾಗಿ ಹೋಗಿ ಬನ್ನಿ” ಎಂದು ಹೇಳಿದೆ.

ಅದಾಗಿ, ಕಾಂತಜ್ಜ ಕಾಶೀಯಾತ್ರೆ ಕೈಗೊಂಡು ಕೆಲವು ದಿನಗಳು ಕಳೆದವು. ಕಾಂತಜ್ಜ ಮರಳುವುದು ಕಾಣಲಿಲ್ಲ. ಬಂದವರು ಸ್ವಲ್ಪ ದಿನದ ಮಟ್ಟಿಗೆ ಮಗನ ಮನೆಯಲ್ಲಿ ತಂಗಿದರೇನೋ ಅಂದುಕೊಂಡೆ. ನಂತರ ಒಂದು ಸುದ್ದಿ ನಿಧಾನವಾಗಿ ಊರಲ್ಲಿ ಹಬ್ಬಿತು. ಅದು ನನ್ನ ಕಿವಿಗೆ ಅದು ತಲುಪಲು ಹೆಚ್ಚು ದಿನ ಬೇಕಾಗಲಿಲ್ಲ. ಶಾಲೆಯಲ್ಲಿ ಮಕ್ಕಳೇ ನನ್ನಲ್ಲಿ ಹೇಳಿದ್ದು ! ಕಾಂತಜ್ಜ ಕಾಶಿಯಲ್ಲಿ ಕಳೆದು ಹೋದರಂತೆ! ಎಲ್ಲಿ ಹುಡುಕಿದರೂ ಸಿಗಲಿಲ್ಲವಂತೆ!

ಛೆ! ಮನಸ್ಸಿಗೆ ಬಹಳ ಘಾಸಿಯಾಗಿತ್ತು. ರಾತ್ರಿ ಕಣ್ಣು ಮುಚ್ಚಿದ ಕೂಡಲೇ ಕಾಂತಜ್ಜನ ಮಗುವಿನಂಥ‌ ಮುಖ ಕಣ್ಣೆದುರು ಬರುತ್ತಿತ್ತು. ದೇವಸ್ಥಾನದ ಎದುರು ನಜ್ಜುಗುಜ್ಜಾದ ಅಲ್ಯುಮಿನಿಯಂ ತಟ್ಟೆ ಹಿಡಿದ ಕಾಂತಜ್ಜನ ಕಲ್ಪನೆ ನನಗರಿವಿಲ್ಲದಂತೆ ನನ್ನೆದೆಯಲ್ಲಿ ನಡುಕ ಹುಟ್ಟಿಸುತ್ತಿತ್ತು. ಯಾರಲ್ಲೂ ಯಾವುದಕ್ಕೂ ಕೈಚಾಚದ ಮನುಷ್ಯ ಗುರುತು-ಪರಿಚಯ ಇಲ್ಲದ ಊರಲ್ಲಿ ಹೇಗಿರಬಹುದು. ನನಗೆ ರಾತ್ರೆ ಪೂರ್ತಿ ನಿದ್ರೆ ಬರಲಿಲ್ಲ. ಹಗಲು ಮಕ್ಕಳಿಗೆ ಪಾಠ ಮಾಡುವುದಕ್ಕೂ ಆಗಲಿಲ್ಲ.

ನನ್ನ ಪರಿಸ್ಥಿಯನ್ನು ಗಮನಿಸಿ ನನ್ನವಳು ರೇಗಿದಳು. “”ಮಕ್ಕಳಿಗಿಲ್ಲದ ಚಿಂತೆ ನಿಮಗ್ಯಾಕೆ. ಮಗಳಾದರೂ ಏನು ಎತ್ತಾ ಅಂತ ವಿಚಾರಿಸುವುದಕ್ಕೆ ಬರಲಿಲ್ಲ”. ಹೌದೆನ್ನಿಸಿತು. ಆದರೂ ಈ ಯೋಚನೆಯಿಂದ ಹೊರಬರಲಾಗಲಿಲ್ಲ. ಯಾರ್ಯಾರಲ್ಲೋ ಕೇಳಿ ಮಗನ ಫೋನ್‌ ನಂಬರ್‌ ಪಡಕೊಂಡು ಕರೆ ಮಾಡಿದೆ. ನನ್ನ ಧ್ವನಿ ಕೇಳಿದ ಕೂಡಲೇ ಅಳುವುದಕ್ಕೆ ಸುರು ಮಾಡಿದ. “”ಜನಜಂಗುಳಿಯಲ್ಲಿ ಎಲ್ಲಿ ಕೈತಪ್ಪಿದ್ರು ಅಂತ ಗೊತ್ತಾಗಲಿಲ್ಲ. ಎರಡು ದಿನ ಎಲ್ಲ ಹುಡುಕಿ ಕೈ ಸೋತು ಊರಿಗೆ ಬಂದಿದ್ದೀನಿ”

“”ಹಾಗೆ ಬಿಟ್ಟು ಬರೋದಾ? ಅವರಿಗೆ ಅಲ್ಲಿನ ಭಾಷೆ ಬರಲ್ಲ. ಊಟ ಏನು ಮಾಡುತ್ತಾರೆ? ಎಲ್ಲಿ ಮಲಗುತ್ತಾರೆ? ವಾಪಸು ಜೋಪಾನವಾಗಿ ಕರಕೊಂಡು ಬರಲು ಆಗದವನಿಗೆ ಈ ಕೆಲಸ ಯಾಕೆ ಬೇಕಿತ್ತು? ಪೊಲೀಸ್‌ ಕಂಪ್ಲೇಂಟ್‌ ಕೊಡು” ಅಂತ ಹೇಳಿ ಫೋನಿಟ್ಟೆ.

ಎಲ್ಲಾ ಏನೋ ಗೊಂದಲಮಯವಾಗಿ ಮನಸ್ಸನ್ನು ಕಾಡಿತ್ತು. ಒಂದು ತಿಂಗಳು ಆಗುವಾಗ ವಿಷಯ ಸ್ವಲ್ಪ ತಣ್ಣಗಾಯಿತು. ಒಂದು ದಿನ ಕಾಂತಜ್ಜನ ಮಗ ವಿಲೇಜ್‌ ಆಫೀಸರ್‌ ಹತ್ತಿರ ಜಾಗದ ವಿಚಾರ ಮಾತನಾಡುವುದು ತಿಳಿಯಿತು. ಆವತ್ತು ರಾತ್ರಿ ಕಾಂತಜ್ಜನ ಮಗ ನಮ್ಮ ಮನೆಗೆ ಬಂದ. ಬಂದವನೇ ನೇರ ವಿಚಾರಕ್ಕೆ ಬಂದ. “”ಕಾಣೆಯಾದವರನ್ನು ಸತ್ತವರು ಅಂತ ತೀರ್ಮಾನಿಸುವುದಕ್ಕೆ ಎಷ್ಟು ಅವಧಿ ಬೇಕು?” ಮೊದಲು ನನಗೆ ಆತನ ಪ್ರಶ್ನೆಯ ತಲೆಬುಡ ಅರ್ಥ ಆಗಲಿಲ್ಲ. ನಂತರ ನಿಧಾನಕ್ಕೆ ಹೊಳೆಯಿತು. ಇವ ಅಪ್ಪ ಮರಳುವ ನಿರೀಕ್ಷೆಯಲ್ಲಿ ಇಲ್ಲ ಅಂತ. ಇಷ್ಟ ಇಲ್ಲದಿದ್ದರೂ ನನಗೆ ಗೊತ್ತಿದ್ದ ಮಾಹಿತಿ ಪ್ರಕಾರ ಹೇಳಿದೆ, “”ಏಳು ವರ್ಷ ಬೇಕು”. ಆತನ ಮುಖ ಸಪ್ಪಗಾಯಿತು. ಅವನಿಗೆ ದುಡ್ಡಿನ ಆವಶ್ಯಕತೆ ಬಹಳ ಇತ್ತು. ಜಾಗ ಮಾರಬೇಕಾಗಿತ್ತು. ನಾನು ಆ ಸಂದರ್ಭವನ್ನು ಬಳಸಿಕೊಂಡೆ.

“”ನೋಡು, ನೀನು ಪೇಪರ್‌ನಲ್ಲಿ, ಟಿವಿಯಲ್ಲಿ ಅಪ್ಪನ ಪೋಟೋ ಹಾಕಿಸಿ ಹೇಗಾದರೂ ಅವರನ್ನು ಹುಡುಕಿಸು. ಈಗ ನಾಪತ್ತೆ ಆದವರನ್ನು ಹುಡುಕುವುದಕ್ಕೆ ಹಲವು ದಾರಿ ಇದೆ. ಕಾಶಿ, ತಿರುಪತಿ ಇಲ್ಲೆಲ್ಲಾ ಬೀದಿಬದಿ ಗೋಡೆಯ ಮೇಲೆಲ್ಲ ಕಾಣೆಯಾದವರ ಭಾವಚಿತ್ರ ಅಂಟಿಸಿರುತ್ತಾರೆ. ಅದರ ಬಗ್ಗೆ ತಿಳಿದವರಲ್ಲಿ ವಿಚಾರಿಸಿ ನೋಡು. ಇನ್ನೂ ಏಳು ವರ್ಷ ಕಾಯುವುದು ತಪ್ಪುತ್ತದೆ. ಅವರು ಸಿಕ್ಕರೆ ನಾನೇ ಜಾಗ ಮಾರೋಕೆ ಒಪ್ಪಿಸುತ್ತೀನಿ. ನನ್ನ ಮಾತಿಗೆ ಇಲ್ಲ ಅನ್ನಲ್ಲ. ನಾನೇ ಜಾಗವನ್ನು ತೆಗೋತೀನಿ. ಇದು ಸ್ವಲ್ಪ ಅಡ್ವಾನ್ಸ್‌ ಇರಲಿ” ಅಂತ ಅವನ ಕೈಗೆ ಐದು ಸಾವಿರ ಇಟ್ಟೆ. ದುಡ್ಡು ನೋಡಿದ ಕೂಡಲೇ ಆತನ ಮುಖ ಅರಳಿತು.

ಇದಾಗಿ, ಒಂದು ತಿಂಗಳಲ್ಲಿ ನಾನು ಕಾಯುತ್ತಿದ್ದ ಕಾಂತಜ್ಜ ಸಿಕ್ಕರಂತೆ ಎಂಬ ಶುಭ ಸುದ್ದಿ ಬಂತು. ಅಷ್ಟು ಹೊತ್ತಿಗೆ ನನ್ನ ಟ್ರಾನ್ಸ್‌ಫ‌‌ರ್‌ ಆರ್ಡರ್‌ ಕೂಡ ನನ್ನ ಕೈ ಸೇರಿತ್ತು. ಆವತ್ತು ನಾನು ಆ ಊರು ಬಿಡುವ ದಿನ. ಏನೋ ಒಳ್ಳೆಯ ಕೆಲಸ ಮಾಡಿದ ನೆಮ್ಮದಿ ಇತ್ತು. ಕಾಂತಜ್ಜನನ್ನು ಒಮ್ಮೆ ನೋಡಬೇಕು ಎಂಬ ಆಸೆ ಮೂಡಿತು. ಬೆಳಗ್ಗೆ ಬೆಳಗ್ಗೇನೇ ಕಾಂತಜ್ಜ ಅಂಗಳದಲ್ಲಿ ಹಾಜರಾದರು!

“”ಅರೇ ಕಾಂತಜ್ಜ ! ಯಾವಾಗ ಬಂದ್ರಿ? ಏನಾಯಿತು ಕಾಶಿಯಾತ್ರೆ? ಹೇಗೆ ಕಳೆದುಹೋದಿರಿ? ಇಷ್ಟು ದಿನ ಹೇಗೆ ಕಳೆದಿರಿ? ತುಂಬಾ ಕಷ್ಟ ಆಯಿತಾ?” ಸಾಲಾಗಿ ನನಗರಿವಿಲ್ಲದಂತೆ ನನ್ನ ಬಾಯಿಯಿಂದ ಪ್ರಶ್ನೆಗಳ ಸುರಿಮಳೆ! “”ಅದು ಬಿಡ್ರಿ. ದೊಡ್ಡ ಕಥೆ” ಎಂದು ಸುಮ್ಮನಾದರು ಕಾಂತಜ್ಜ. ನಾನು ಮತ್ತೆ ಒತ್ತಾಯಿಸಿದೆ. ಆಮೇಲೆ ಹೇಳತೊಡಗಿದರು, “”ಎಷ್ಟು ಮಂದಿ ಮಕ್ಕಳು ನನ್ನಂಥ ವೃದ್ಧರನ್ನು ಅನಾಥರಾಗಿಸಿ ಬಿಟ್ಟು ಹೋಗುತ್ತಾರೆ!” ಎಂದು ಮತ್ತೆ ನಿಲ್ಲಿಸಿದರು. “”ಏನಾಯಿತು ಕಾಂತಜ್ಜ?” ಒತ್ತಾಯಿಸುವ ಧಾಟಿಯಲ್ಲಿ ಮತ್ತೆ ಕೇಳಿದೆ. “”ಪುಣ್ಯ ! ನನ್ನ ಮಗ ಅಂಥವನಲ್ಲ ಬಿಡಿ” ಎಂದು ಹೇಳುವಾಗ ಗದ್ಗದಿತರಾದರು.

ನನಗೆ ಅಲ್ಪಸ್ವಲ್ಪ ಅರ್ಥ ಆಯಿತು. ಹೆಚ್ಚು ಹೊತ್ತು ಮಾತನಾಡಿಕೊಂಡು ನಿಲ್ಲಲು ಸಮಯವಿರಲಿಲ್ಲ. ಕಾಂತಜ್ಜನನ್ನು ಬಹಳ ಕಷ್ಟದಲ್ಲಿ ಬೀಳ್ಕೊಂಡೆ. ನಾನು, ನನ್ನ ಹೆಂಡತಿ ಕೂಡಲೇ ಹೊರಟು ನಿಂತೆವು.
ಕೈಯಲ್ಲಿ ಎರಡೆರಡು ಭಾರದ ಬ್ಯಾಗು, “”ಒಬ್ಬ ಮಗನಾದರೂ ಇರುತ್ತಿದ್ದರೆ ಈ ಗಂಟುಮೂಟೆ ಹೊತ್ತು ನಡೆಯುವಾಗ ನೆರವಾಗುತ್ತಿದ್ದ” ಎಂದಳು ನನ್ನ ಹೆಂಡತಿ ವಿಷಾದದಲ್ಲಿ. “”ಮತ್ತು ಕಾಶಿಯಾತ್ರೆಯನ್ನೂ ಮಾಡಿಸುತ್ತಿದ್ದ” ನಾನು ಮೆಲುದನಿಯಲ್ಲಿ ಹೇಳಿದ್ದು ಅವಳಿಗೆ ಕೇಳಿಸಿತೋ ಇಲ್ಲವೋ ಗೊತ್ತಿಲ್ಲ !

ರಾಜಶ್ರೀ ಟಿ. ರೈ

Advertisement

Udayavani is now on Telegram. Click here to join our channel and stay updated with the latest news.

Next