Advertisement

ಕತೆ: ಆರ್ಥಿಕ ಶಿಸ್ತು

11:50 AM Apr 27, 2020 | mahesh |

ಸುನಿಲ್‌ ಮತ್ತು ಅರುಣ್‌ ಒಂದೇ ಶಾಲೆಯಲ್ಲಿ ಓದುತ್ತಿದ್ದರು. ಸ್ವಾರಸ್ಯವೆಂದರೆ, ಈ ಮಕ್ಕಳ ಅಪ್ಪಂದಿರೂ ಒಂದೇ ಕ್ಷೇತ್ರದಲ್ಲಿ ಕೆಲಸ ಮಾಡುತ್ತಿದ್ದರು. ಅವರಿಬ್ಬರ ಸಂಪಾದನೆಯೂ ಒಂದೇ ಆಗಿತ್ತು. ಆದರೆ, ಈ ಎರಡು ಕುಟುಂಬಗಳ ಜೀವನಶೈಲಿಯಲ್ಲಿ ತುಂಬಾ ವ್ಯತ್ಯಾಸಗಳಿದ್ದವು. ಸುನಿಲ್‌ ಅವರ ತಂದೆ- ತಾಯಿ, ತುಂಬಾ  ಖರ್ಚು ಮಾಡುತ್ತಿದ್ದರು. ವಾರಕ್ಕೊಮ್ಮೆ ಹೊಸ ಬಟ್ಟೆ
ಖರೀದಿಸುತ್ತಿದ್ದರು. ಅಲ್ಲದೆ, ಸುನಿಲ್‌ಗೆ ಕೈತುಂಬಾ ಪಾಕೆಟ್‌ ಮನಿ ಕೊಡುತ್ತಿದ್ದರು. ಅರುಣನ ತಂದೆ- ತಾಯಿ ಖರ್ಚು ಮಾಡುತ್ತಲೇ ಇರಲಿಲ್ಲ. ಸುನಿಲ್ ಪಾಕೆಟ್‌ ಮನಿಯ ಹಣದಿಂದ ಚಾಕ್ಲೆಟ್‌, ಐಸ್‌ ಕ್ರೀಮುಗಳನ್ನು ದಂಡಿಯಾಗಿ ತಿನ್ನುತ್ತಿದ್ದ. ಅರುಣನಿಗೆ, ತಿಂಗಳಿಗೊಮ್ಮೆ ಮಾತ್ರ ಪುಡಿಗಾಸಿನಷ್ಟು ಮೊತ್ತ ಪಾಕೆಟ್‌ ಮನಿಯಾಗಿ ಸಿಗುತ್ತಿತ್ತು. ಅರುಣನಿಗೆ, ತನ್ನ ತಂದೆ- ತಾಯಿ ಯಾಕೆ
ಹೀಗೆ ಎಂದು ಬೇಸರವಾಗುತ್ತಿತ್ತು. ಕೆಲ ಸಮಯದ ನಂತರ, ಅರುಣ ಒಂದು ಬದಲಾವಣೆಯನ್ನು ಗಮನಿಸಿದ. ಸುನಿಲ್, ಮುಂಚಿನಷ್ಟು ಖರ್ಚು ಮಾಡುತ್ತಿರಲಿಲ್ಲ. ಅಲ್ಲದೆ, ದಿನವೂ ಶಾಲೆಗೆ ಕಾರಿನಲ್ಲಿ ಬರುತ್ತಿದ್ದವನು, ಈಗ ರಿಕ್ಷಾದಲ್ಲಿ ಬರತೊಡಗಿದ. ಒಂದು ದಿನ ಸಂಜೆ ಶಾಲೆಯಿಂದ ವಾಪಸ್ಸಾದ ಅರುಣನಿಗೆ, ಮನೆಯಲ್ಲಿ ಅಚ್ಚರಿ ಕಾದಿತ್ತು.

Advertisement

ಸುನಿಲನ ತಂದೆ ಮನೆಗೆ ಬಂದಿದ್ದರು. ಅವರು ಅರುಣನ ತಂದೆಯೊಡನೆ ಅದೇನೋ ಮಾತನಾಡುತ್ತಿದ್ದರು. ಆಮೇಲೆ, ಅರುಣನಿಗೆ ಎಲ್ಲಾ ವಿಚಾರ ತಿಳಿಯಿತು. ಸುನಿಲನ ತಂದೆಯವರಿಗೆ
ವ್ಯಾಪಾರದಲ್ಲಿ ನಷ್ಟವಾಗಿ, ಆರ್ಥಿಕ ತೊಂದರೆಗೆ ಸಿಲುಕಿದ್ದರು. ಇದೀಗ ಹಣದ ನೆರವನ್ನು ಕೋರಲು ಅರುಣನ ತಂದೆಯ ಬಳಿಗೆ ಬಂದಿದ್ದರು. ಅರುಣನ ತಂದೆ ಸಹಾಯ ಮಾಡುವ
ಭರವಸೆ ನೀಡಿದ ನಂತರ, ಅವರಿಗೆ ಧನ್ಯವಾದಗಳನ್ನು ಅರ್ಪಿಸಿ ಅಲ್ಲಿಂದ ಹೊರಟರು. ಅಂದು ಅರುಣನಿಗೆ ತನ್ನ ತಂದೆ- ತಾಯಿಯ ಕುರಿತು ತುಂಬಾ ಹೆಮ್ಮೆಯಾಯಿತು. ಆರ್ಥಿಕ ಶಿಸ್ತು ಇಲ್ಲದಿದ್ದರೆ, ಮಿತಿ ಹಾಕಿಕೊಳ್ಳದಿದ್ದರೆ ಏನಾಗುತ್ತದೆ ಎನ್ನುವುದು ಅವನಿಗೆ ಗೊತ್ತಾಯಿತು.

Advertisement

Udayavani is now on Telegram. Click here to join our channel and stay updated with the latest news.

Next