ಕೆಲ ಚಿತ್ರಗಳ ಶೀರ್ಷಿಕೆಗೆ ಅಡಿಬರಹವೇ ಹೈಲೈಟ್. ಹೌದು, ಸಿನಿಮಾದೊಳಗಿನ ಕಥೆ ಏನೆಂಬುದನ್ನು ಹೇಳುವಷ್ಟು ಪವರ್‌ಫುಲ್ ಒಂದು ಟ್ಯಾಗ್‌ಲೈನ್‌ಗಿರುತ್ತೆ. ಇಲ್ಲೀಗ ಹೇಳಹೊರಟಿರುವ ವಿಷಯ, “ಕಾಣದಂತೆ ಮಾಯವಾದನು’ ಚಿತ್ರಕ್ಕೆ ಸಂಬಂಧಿಸಿದ್ದು. ಈ ಶೀರ್ಷಿಕೆಗೊಂದು ಅಡಿಬರಹ ಬೇಕು ಅಂತ ಚಿತ್ರತಂಡ, ಸ್ಪರ್ಧೆಯೊಂದನ್ನು ಏರ್ಪಡಿಸಿತ್ತು. ಸುಮಾರು 3 ಸಾವಿರಕ್ಕೂ ಹೆಚ್ಚು ಟ್ಯಾಗ್‌ಲೈನ್‌ಗಳು ಚಿತ್ರತಂಡದ ವಿಳಾಸಕ್ಕೆ ಬಂದಿದ್ದವು. ಆ ಪೈಕಿ “ಕಾಲವಾದವನ ಪ್ರೇಮಕಾಲ’,” ಜೀವ ನಿಂತರೂ ಪ್ರೇಮ ತುಂತುರು’, “ಜೀವ ಹೋದ ಪ್ರೇಮ ಯೋಧ’ ಸೇರಿದಂತೆ ಇನ್ನಷ್ಟು ಟ್ಯಾಗ್‌ಲೈನ್‌ಗಳು ಸೇರಿದ್ದವು. ಆ ಪೈಕಿ ಐದನ್ನು ಆಯ್ಕೆ ಮಾಡಿಕೊಂಡ ಚಿತ್ರತಂಡ ಕೊನೆಗೆ, “ಗೋರಿ ಆದ್ಮೇಲೆ ಹುಟ್ಟಿದ್ ಸ್ಟೋರಿ’ ಅಡಿಬರಹ ಅಂತಿಮವಾಗಿದೆ. ಈ ಟ್ಯಾಗ್‌ಲೈನ್ ಕೊಟ್ಟ ಪ್ರತಿಭಾವಂತ ಕುಂದಾಪುರದ ಪ್ರಾಧ್ಯಾಪಕ ನರೇಂದ್ರ ದೇವಾಡಿಗ ಅವರಿಗೆ ಚಿತ್ರತಂಡ ನಗದು 50 ಸಾವಿರ ಬಹುಮಾನವನ್ನೂ ಕೊಟ್ಟಿದೆ. ಇಂತಿಪ್ಪ, “ಕಾಣದಂತೆ ಮಾಯವಾದನು’ ಚಿತ್ರ ಪ್ರೇಕ್ಷಕರ ಮುಂದೆ ಬರಲು ಸಜ್ಜಾಗಿದೆ.
ಈ ಚಿತ್ರಕ್ಕೆ ವಿಕಾಸ್ ಹೀರೋ. ಚಿತ್ರಕಥೆ ಮತ್ತು ಸಂಭಾಷಣೆ ಜವಾಬ್ದಾರಿಯೂ ಇವರದೇ. ಇವರಿಗೆ ಸಿಂಧುಲೋಕನಾಥ್ ನಾಯಕಿ. ಇನ್ನು, ಈ ಚಿತ್ರವನ್ನು ರಾಜ್ ಪತ್ತಿಪಾಟಿ ನಿರ್ದೇಶನ ಮಾಡಿದ್ದಾರೆ. ಎಲ್ಲಾ ಸರಿ, ಏನಿದು “ಕಾಣದಂತೆ ಮಾಯವಾದನು’ ಕಥೆ? ಈ ಪ್ರಶ್ನೆಗೆ ಉತ್ತರ, ಹೀರೋ ಆರಂಭದಲ್ಲೇ ಕೊಲೆಗೀಡಾಗುತ್ತಾನೆ. ಆತನ ಪ್ರಾಣ ಹೋದರೂ, ಆತ್ಮ ಮಾತ್ರ ಅಲ್ಲೇ ಇರುತ್ತೆ. ಬಹುತೇಕ ಚಿತ್ರದಲ್ಲಿ ಆತ್ಮ ಸಾಕಷ್ಟು ಪವರ್ ಹೊಂದಿದ್ದು, ಕಾಟ ಕೊಡುವುದು ಸಹಜ. ಆದರೆ, ಇಲ್ಲಿ ಆತ್ಮ ಏನೆಲ್ಲಾ ಕೆಲಸ ಮಾಡುತ್ತೆ, ತನ್ನ ಕೊಲೆಗೈದವರ ಮೇಲೆ ಹೇಗೆ ಸೇಡು ತೀರಿಸಿಕೊಳ್ಳುತ್ತೆ ಅನ್ನೋದು ಕಥೆ ಎಂಬುದು ಚಿತ್ರತಂಡದ ಹೇಳಿಕೆ.
ಚಿತ್ರದಲ್ಲಿ ಉದಯ್ ನಟಿಸಿದ್ದಾರೆ. ಅವರ ನಿಧನದ ಬಳಿಕ ಆ ಪಾತ್ರವನ್ನು “ಭಜರಂಗಿ’ ಲೋಕಿ ಮುಂದುವರೆಸಿದ್ದಾರೆ. ಚಿ ಚಿತ್ರಕ್ಕೆ ಗುಮ್ಮಿನೇನಿ ವಿಜಯ್ ನಾಲ್ಕು ಹಾಡುಗಳಿಗೆ ಸಂಗೀತ ನೀಡಿದ್ದಾರೆ. ಸುಜ್ಞಾನ್ ಮೂರ್ತಿ ಅವರ ಛಾಯಾಗ್ರಹಣವಿದೆ. ಸುರೇಶ್ ಆರ್ಮುಗನ್ ಸಂಕಲನ ಮಾಡಿದರೆ, ವಿನೋದ್ ಸಾಹಸವಿದೆ. ಚಿತ್ರಕ್ಕೆ ಚಂದ್ರಶೇಖರ್ ನಾಯ್ಡು ಅವರೊಂದಿಗೆ ಸೋಮ್ ಸಿಂಗ್,ಪುಷ್ಪ ಸೋಮಸಿಂಗ್ ನಿರ್ಮಾಣಕ್ಕೆ ಸಾಥ್ ನೀಡಿದ್ದಾರೆ. ನವೆಂಬರ್‌ನಲ್ಲಿ ಚಿತ್ರ ಬಿಡುಗಡೆಯಾಗಲಿದೆ.