Advertisement

ಅಪರಿಚಿತ ಬೀದಿಯ ಅಲೆದಾಟ-ಮನೆಕೆಲಸದಾಕೆ ಸಾಹಿತ್ಯದ ಮೂಲಕ ವಿಶ್ವದ ಮನಗೆದ್ದು ಬಿಟ್ಟಿದ್ದಳು!

10:22 AM Dec 19, 2019 | Suhan S |

ಮಾನವನಾದ ಮೇಲೆ ಕಷ್ಟಗಳ ಬೇಲಿಯನ್ನು ದಾಟಿಕೊಂಡೇ ಬರಬೇಕು. ಅದು ಯಾವ ಸಮಯ ಸಂದರ್ಭದಲ್ಲಿ ಬೇಕಾದರೂ ಆಗಲಿ ಕಷ್ಟಗಳು ಬಂದಾಗ ತಲೆ ತಗ್ಗಿಸದೆ ಮುನ್ನಡೆಯೆದ್ದರೆ ಮಾತ್ರ ಆತ ಒಂದು ನೆಮ್ಮದಿಯ ಜೀವನವನ್ನು ಬಾಳಬಹುದು.

Advertisement

ಪಶ್ಚಿಮ ಬಂಗಾಳದ ಮುರ್ಷಿದಾಬಾದ್ ನಲ್ಲಿ ತಾಯಿಯ ಪ್ರೀತಿ ಅಕ್ಕರೆಯ ಕೊರತೆಯಿಂದ ಬೆಳೆದ ಬೇಬಿ ಹಲ್ದಾರ್. ತಂದೆಯ ಆರೈಕೆಯಿಂದ ಹಾಗೂ ಪ್ರತಿನಿತ್ಯ ತಂದೆಯ ಹೊಡೆತ, ಬಡಿತದಿಂದ ಕಷ್ಟ ಪಟ್ಟು ಆರನೇ ತರಗತಿಯವರೆಗೆ ಶಾಲೆಯ ಮೆಟ್ಟಿಲು ಹತ್ತಿ ಅರ್ಧದಲ್ಲೇ ಕಲಿಕೆಯನ್ನು  ಬಲವಂತದಿಂದ ಮೊಟಕುಗೊಳಿಸುತ್ತಾರೆ.

ಬಾಲ್ಯವೇ ಕಬ್ಬಿಣದ ಬೇಲಿ ಆಯಿತು:  ತಾಯಿಯ ಪ್ರೀತಿಯನ್ನು ಪಡೆದು ಬೆಳೆಯಬೇಕಾದ ಮಗಳಿಗೆ ಸಿಗುವುದು ತಂದೆಯ ಕ್ರೂರ ವ್ಯಕ್ತಿತ್ವ ಮಾತ್ರ. ಬೇಬಿ ಹಲ್ದಾರ್ ನ ತಂದೆ ಎಲ್ಲಿಯವರೆಗೆ ಕಠೋರ ಮನಸ್ಸನ್ನು ಹೊಂದಿದ್ದರು ಎಂದರೆ,  ಆಗಷ್ಟೇ ಬಾಲ್ಯದ ದಿನಗಳನ್ನು ಕಳೆಯುತ್ತಾ, ಶಾಲೆಯಲ್ಲಿ ಗೆಳತಿಯರ ಜೊತೆ ಹರಟುತ್ತಾ , ಮನೆಯಲ್ಲಿ ಅಮ್ಮನ ಜೊತೆ ಅಡುಗೆ ಕೆಲಸಕ್ಕೆ ನೆರವಾಗುವ ಪುಟ್ಟ ಕೈಗಳು, ಹನ್ನೆರಡರ ಹರೆಯದಲ್ಲಿ ಮದುವೆ ಆಗುವ ಸ್ಥಿತಿಗೆ ಸಿಲುಕಿತು. ಬೇಬಿ ಹಲ್ದಾರ್ ನ ತಂದೆ, ಮಗಳನ್ನು ಅವಳಿಗಿಂತ ಎರಡು ಪಟ್ಟು ಹೆಚ್ಚಿನ ವಯಸ್ಸಿನ ವ್ಯಕ್ತಿಗೆ ಕೊಟ್ಟು ಮದುವೆ ಮಾಡಿಸುತ್ತಾರೆ. ಹೆಣ್ಣುತನ ಚಿಗುರು ಮೂಡುವ ವಯಸ್ಸಿನಲ್ಲೇ ಚಿವುಂಟಿ ಕಮರಿ ಹೋಗುತ್ತದೆ.

ನೆಮ್ಮದಿ ಕಾಣದ ಬದುಕು : ಬೇಬಿ ಹಲ್ದಾರ್ ತನ್ನ ಹನ್ನೆರಡನೇ ವಯಸ್ಸಿನಲ್ಲಿ ಮಗಳಿಗೆ ಜನ್ಮ ನೀಡುತ್ತಾರೆ. ಬಳಿಕ ಒಂದು ವರ್ಷದ ಅಂತರದಲ್ಲಿ ಮತ್ತೆರಡು ಮಗುವಿಗೆ ಜನ್ಮ ನೀಡುತ್ತಾರೆ. ಸಣ್ಣ ವಯಸ್ಸಿನಲ್ಲಿ ಮಕ್ಕಳನ್ನು ಸಾಕಿ ಸಲಹುವುದರ ಜೊತೆಗೆ ಕುಡುಕ ಗಂಡನ ದೌರ್ಜನ್ಯ ಹಾಗೂ ಹಿಂಸೆಯನ್ನು ತಡೆದುಕೊಂಡು ಗಟ್ಟಿ ಆಗುತ್ತಾಳೆ. ಪ್ರತಿನಿತ್ಯ ಗಂಡನ ಅತಿಯಾದ ವರ್ತನೆಯನ್ನು ಸಹಿಸುತ್ತಾ ಒಂದಿಷ್ಟು ವರ್ಷ ಹೇಗೂ ಸಂಸಾರ ನಿಭಾಯಿಸುತ್ತಾಳೆ. ಆದರೆ ಅದೊಂದು ದಿನ ತನ್ನ ಮೂರು ಮಕ್ಕಳನ್ನು ‌ಜೊತೆಯಾಗಿಸಿಕೊಂಡು ತನ್ನ ಗಂಡನನ್ನು ಧಿಕ್ಕರಿಸಿ ದಿಲ್ಲಿಗೆ ಹೊರಡುತ್ತಾಳೆ. ಒಂಟಿಯಾಗಿ ಜಗತ್ತನ್ನು ಗೆಲ್ಲಲು ಹೊರಟ ಹಠವಾದಿಯಂತೆ.

ಅಪರಿಚಿತ ಬೀದಿಯ ಅಲೆದಾಟದಲ್ಲಿ ಸಿಕ್ಕ “ಆಶ್ರಯ” :  ಬೇಬಿ ಹಲ್ದಾರ್ ತನ್ನ ಮೂರು ಮಕ್ಕಳ ಜೊತೆ ರೈಲಿನಲ್ಲಿ ನೇರವಾಗಿ ದಿಲ್ಲಿಯ ಗುರಗಾಂವ್ ಗೆ ತಲುಪುತ್ತಾರೆ. ಮೊದ ಮೊದಲು ಅಪರಿಚಿತ ಬೀದಿಯ ಅಲೆದಾಟ ಭಯಗೊಳಿಸಿದರೂ ನಂತರ ಅಲ್ಲಿ ಇಲ್ಲಿ ಮನೆ ಕೆಲಸದ ನೆಲೆಯನ್ನು ಗಟ್ಟಿಗೊಳಿಸಿ ಮಕ್ಕಳನ್ನು ಶಾಲೆಗೆ ಕಳುಹಿಸಲು ಆರಂಭಿಸುತ್ತಾಳೆ. ಹೀಗೆ ಮನೆ ಕೆಲಸದ ಅಲೆದಾಟದಲ್ಲಿ ಆಶ್ರಯವಾಗಿ ಸಿಗುವುದು ಬರಹಗಾರ ಹಾಗೂ ನಿವೃತ್ತ ಮಾನವಶಾಸ್ತ್ರ ಅಧ್ಯಾಪಕರಾದ ಪ್ರಮೋದ್ ಕುಮಾರ್.

Advertisement

ಅದೊಂದು ದಿನ‌ ಪ್ರಮೋದ್ ಕುಮಾರ್ ಸಂಶೋಧನೆಯನ್ನು ನಡೆಸುತ್ತಿದ್ದ ಸಮಯದಲ್ಲಿ ಬೇಬಿ ಹಲ್ದಾರ್ ಕಪಾಟಿನಲ್ಲಿ ಸಾಲಾಗಿ ಜೋಡಿಸಿಟ್ಟಿದ್ದ ಪುಸ್ತಕವೊಂದನ್ನು ನೋಡುತ್ತಾ ಅಲ್ಲೇ ಕೂರುತ್ತಾರೆ.‌ಇದನ್ನು ಗಮನಿಸಿದ ಪ್ರಮೋದ್ ಕುಮಾರ್ ಬೇಬಿ‌ ಹಲ್ದಾರ್ ನೊಳಗೆ ಅಡಗಿರುವ ಒಬ್ಬ ಓದುಗಳನ್ನು ಹಾಗೂ ಒಬ್ಬ ಬರಹಗಾರ್ತಿಯನ್ನು ಎಚ್ಚರಿಸುತ್ತಾರೆ.

ಪ್ರಮೋದ್ ಕುಮಾರ್ ಅವರು ಬೇಬಿ ಹಲ್ದಾರ್ ಗೆ ಓದುವ ಹವ್ಯಾಸ ಬೆಳೆಸಿಕೊಳ್ಳಲು ಪ್ರೇರೇಪಿಸುತ್ತಾರೆ. ಹಲ್ದಾರ್ ಪ್ರತಿ ರಾತ್ರಿ ತನ್ನೆಲ್ಲಾ ಕೆಲಸವನ್ನು ಮುಗಿಸಿ ಓದಲು ಆರಂಭಿಸುತ್ತಾರೆ. ಎಲ್ಲಿಯವರೆಗೆ ಅಂದರೆ ಹಲ್ದಾರ್ ತಸ್ಲೀಮಾ ನಸ್ರೀನ್ ಅವರ ‘ ಅಮರ್ ಮೆಯೆಬಾಲಾ’ ಕೃತಿಯನ್ನು ಓದಿ ಬಹಳಷ್ಟು ಪ್ರಭಾವಿತರಾಗುತ್ತಾರೆ. ನಂತರದಲ್ಲಿ ಓದಿನ ಹುಚ್ಚು ನಿಧಾನವಾಗಿ ಹೆಚ್ಚುತ್ತಾ ಹೋಗುತ್ತದೆ. ಓದುತ್ತಾ ಹೋದಂತೆ ಬರವಣಿಗೆಯ ಶೈಲಿಯೂ ದಕ್ಕುತ್ತದೆ.

ಮನೆ ಕೆಲಸದಾಕೆ ಮನಗೆದ್ದಳು … ಪ್ರತಿನಿತ್ಯ ಓದುವ ಹವ್ಯಾಸವನ್ನು ರೂಢಿಸಿಕೊಂಡ ಹಲ್ದಾರ್ ಬರವಣಿಗೆಯ ವಿಷಯದಲ್ಲಿ ತನ್ನದೇ ಅನುಭವಗಳನ್ನು ‌ಬರೆಯಲು ಆರಂಭಿಸುತ್ತಾಳೆ.‌ ಒಂದು ಪೆನ್ ಹಾಗೂ ಕಾಗದವನ್ನಿಟ್ಡುಕೊಂಡು ಪ್ರಮೋದ್ ಕುಮಾರ್ ಮುಂದೆ ಬರೆಯುತ್ತಾಳೆ. ಪ್ರಮೋದ್ ಕುಮಾರ್ ಹಲ್ದಾರ್ ಬರೆದದ್ದನ್ನು ಓದಿ ಶಹಬ್ಬಾಸ್ ಹೇಳಿ ಅಕ್ಷರಗಳನ್ನು ತಿದ್ದಿ ತೀಡುವ ಕಾಯಕವನ್ನು ಮಾಡುತ್ತಾರೆ. ಪ್ರಮೋದ್ ಕುಮಾರ್ ಹಲ್ದಾರ್ ಬರೆದ ಬರಹವನ್ನು ತನ್ನ ಸ್ನೇಹವಲಯಕ್ಕೆ ಕಳುಹಿಸಿ ಅಭಿಪ್ರಾಯ ಕೇಳಿ ಹಲ್ದಾರ್ ಇನ್ನಷ್ಟು ಬರೆಯಲು ಪ್ರೇರಣೆ ಆಗುತ್ತಾರೆ.

ಇದೇ ವೇಳೆಯಲ್ಲಿ ಹಲ್ದಾರ್ ಬಂಗಾಳಿಯಲ್ಲಿ  ‘ಆಲೋ ಆಂಧರಿ’ ಎನ್ನುವ ಮೊದಲ ಕೃತಿಯನ್ನು ಬರೆಯುತ್ತಾರೆ. ಇದನ್ನು 2002 ರಲ್ಲಿ ಪ್ರಮೋದ್ ಕುಮಾರ್ ಹಿಂದಿ ಭಾಷೆಗೆ ಅನುವಾದ ಮಾಡುತ್ತಾರೆ. ನಂತರದಲ್ಲಿ ಇದು ಇಂಗ್ಲಿಷ್ ಭಾಷೆಯಲ್ಲೂ ಅನುವಾದಗೊಳ್ಳುತ್ತದೆ. ಈ ಕೃತಿ ‌ಎಷ್ಟು‌ ಜನಪ್ರಿಯ ಪಡೆದುಕೊಳ್ಳುತ್ತದೆ ಅಂದರೆ ಕನ್ನಡ ಸೇರಿದಂತೆ ಜಗತ್ತಿನ ಹನ್ನೆರಡು ಭಾಷೆಯಲ್ಲಿ ಈ ಪುಸ್ತಕ ಪ್ರಕಟಗೊಳ್ಳುತ್ತದೆ.

ಇಂದು ಬೇಬಿ ಹಲ್ದಾರ್ ಹತ್ತು ಹಲವಾರು ಸಾಹಿತ್ಯದ ಕಾರ್ಯಕ್ರಮಗಳಿಗೆ ದೇಶ ವಿದೇಶ ಸುತ್ತಿ ಮಾತುಗಳನ್ನು ‌ಆಡಿ ಬರುತ್ತಾರೆ.

‘ಇಶತ್ ರೂಪಾಂತರ್’ ( ಬಂಗಾಳಿ) ಇವರ ಎರಡನೇ ಪುಸ್ತಕ ಕೂಡ ಅಪಾರ ಮನ್ನಣೆಯನ್ನು ಪಡೆದುಕೊಳ್ಳುತ್ತದೆ. 2014 ರಲ್ಲಿ ‘ಘರೆ ಫೆರರ್ ಪಾಥ್ ‘ ( ಬಂಗಾಳಿ)  ಜೀವನ ಚರಿತ್ರೆ ಸೇರಿದಂತೆ ಅನೇಕ ಪುಸ್ತಕಗಳನ್ನು ಬರೆದಿದ್ದಾರೆ. ತಮ್ಮ ಮಕ್ಕಳಿಗೆ ಉನ್ನತ ಮಟ್ಟದ ಶಿಕ್ಷಣವನ್ನು ನೀಡುತ್ತಿದ್ದಾರೆ. ಎಲ್ಲದಕ್ಕಿಂತ ಹೆಚ್ಚಾಗಿ ಹಲ್ದಾರ್ ಹೆಸರು ಅಂತಾರಾಷ್ಟ್ರೀಯ ಮಟ್ಟದಲ್ಲಿ ಮಿಂಚಿದರೂ ಅವರು ಮಾತ್ರ ತಂದೆಯ ಸಮಾನಾಗಿ ಪ್ರೀತಿ ಕೊಟ್ಟ ಪ್ರಮೋದ್ ಕುಮಾರ್ ಮನೆಯ ಕೆಲಸದಾಕೆ ಆಗಿಯೇ ಇದ್ದಾರೆ.

 

-ಸುಹಾನ್ ಶೇಕ್

Advertisement

Udayavani is now on Telegram. Click here to join our channel and stay updated with the latest news.

Next