Advertisement

ಸಬ್ಸಿಡಿ ಸ್ಕೀಮ್‌ ಇಲ್ಲಂದ್ರ, ಸರ್ಕಾರ ನಡಸಾಕು ಯಾರೂ ಬರುದಿಲ್ಲ !

11:51 AM Sep 04, 2022 | Team Udayavani |

ಸಂಜಿಮುಂದ ಒಂದ್‌ ರೌಂಡ್‌ ಹಾಕಿ ಬರೂನು ಅಂತೇಳಿ ಯಜಮಾನ್ತಿನ ಬೈಕ್ಮ್ಯಾಲ ಹಿಂದ್‌ ಕುಂದ್ರಿಸಿಕೊಂಡು ಹೊಂಟಿದ್ನಿ. ಸಿಗ್ನಲ್ನ್ಯಾಗ ಒಬ್ಬ ಮನಷ್ಯಾ ಬಂದು ಚಾ ಕುಡ್ಯಾಕ್‌ ಒಂದ್‌ ಹತ್‌ ರೂಪಾಯಿ ಕೋಡ್ರಿ ಅಂದಾ. ನಾ ಕಿಸೆದಾಗ ಕೈ ಹಾಕಿ ರೊಕ್ಕಾ ಕೊಡಾಕ್‌ ಹೋದ್ನಿ. ಹಿಂದ್‌ ಕುಂತ್‌ ಯಜಮಾನ್ತಿ ಇಂತಾರಿಗೆಲ್ಲ ಕೇಳಿದಾಗೆಲ್ಲಾ ರೊಕ್ಕಾ ಕೊಡೂದ್ಕ ದುಡಿದು ಬಿಟ್ಟ ಇದ್ನ ದಂಧೆ ಮಾಡ್ಕೊತಾರು ಅಂತ ಯಾರೋ ಜನರಿಗೆ ರಾಜಕೀಯ ಪಕ್ಷಗೋಳು ಫ್ರೀ ಗಿಫ್ಟ್ ಕೊಡು ಯೋಜನೆ ಸ್ಟಾಪ್‌ ಮಾಡಸ್ರಿ ಅಂತ ಸುಪ್ರೀಂ ಕೋರ್ಟಿಗಿ ಹೋದಂಗ ಡೈರೆಕ್ಟಾಗಿ ಹೇಳಿದ್ಲು.

Advertisement

ನಾವು ಸರ್ವಜ್ಞನ ನಾಡಿನ್ಯಾರು. ಕೊಟ್ಟದ್ದು ಕೆಟ್ಟಿತೆನಬೇಡ. ಮುಂದೆ ಕಟ್ಟಿಹುದು ಬುತ್ತಿ ಸರ್ವಜ್ಞ ಅಂತ ಅಲ್ಲೇ ಸರ್ವಜ್ಞನ ವಚನಾ ಹೇಳಿದ್ನಿ. ಯಜಮಾನ್ತಿಗೆ ಸಿಟ್ಟು ಬಂದು, ಆತು ಹಂಗ ಎಲ್ಲಾರಿಗೂ ಕರ ಕರದ ಕೊಟ್‌ ಬಿಡು ಅಂದ್ಲು. ತ್ರಾಸ್ನ್ಯಾಗ ಇರಾರಿಗೆ ಹೆಲ್ಪ್ ಮಾಡೂದ್ರಾಗ ತಪ್ಪಿಲ್ಲ. ಎಲ್ಲಾರೂ ಫ್ರೀ ದುಡ್‌ ಸಿಗತೈತಿ ಅಂತ ಬಂದು ಬೇಡುದಿಲ್ಲ. ಅವರ ಪರಿಸ್ಥಿತಿ ಹಂಗ್‌ ಆಗಿರತೈತಿ ಅಂತ ಸಿಗ್ನಲ್ನಾಗ ವೇದಾಂತ ಹೇಳಿದ್ನಿ.

ಈ ದೇಶದಾಗ ರಾಜಕೀಯ ಪಕ್ಷಗೋಳು ಜನರಿಗೆ ಫ್ರೀ ಸ್ಕೀಮ್‌ ಕೊಡುದ್ರ ಬಗ್ಗೆನೂ ದೊಡ್ಡ ಮಟ್ಟದಾಗ ಚರ್ಚೆ ಆಗಾಕತ್ತೇತಿ. ಜನರಿಗೆ ಫ್ರೀ ಸ್ಕೀಮ್‌ ಕೊಡುದ್ರಿಂದ ಸರ್ಕಾರಗೋಳಿಗಿ ದೊಡ್ಡ ಮಟ್ಟದಾಗ ಆರ್ಥಿಕ ಭಾರ ಆಗಾಕತ್ತೇತಿ. ಇದ್ರಿಂದ ದೇಶದ ಅಭಿವೃದ್ಧಿ ಮಾಡಾಕ್‌ ಆಗವಾಲ್ದು ಅಂತ ಯಾರೋ ದೀಡ್‌ ಪಂಡಿತ್ರು ಕೋರ್ಟಿಗಿ ಹೋಗ್ಯಾರಂತ. ಸುಪ್ರೀಂ ಕೋರ್ಟ್ಯಾರು ರಾಜಕೀ ಪಕ್ಷದಾರಿಗೆ ನಿಮ್‌ ಅಭಿಪ್ರಾಯ ಹೇಳ್ರಿ ಮುಂದ್‌ ಏನ್‌ ಮಾಡಬೇಕೋ ಯೋಚನೆ ಮಾಡೂನು ಅಂತ ಹೇಳ್ಯಾರಂತ.

ಈ ದೇಶದಾಗ ರಾಷ್ಟ್ರಪತಿ, ಪ್ರಧಾನಿಯಿಂದ ಹಿಡಿದು ಲಾಸ್ಟ್ ಪರ್ಸನ್‌ ಮಟಾ ಸರ್ಕಾರಿ ಸವಲತ್ತುಗೋಳ್ನ ಯಾರ್ಯಾರಿಗೆ ಎಷ್ಟೆಷ್ಟ ಕೊಡ್ತಾರು ಅನ್ನೂದು ಚರ್ಚೆ ಆದ್ರ ಭಾಳ ಚೊಲೊ ಅಂತ ಅನಸ್ತೆತಿ. ಕೆಲವು ಮಂದಿ ಸರ್ಕಾರ ಫ್ರೀ ಸ್ಕೀಮ್ಗೊಳನ್ನ ರೈತರಿಗೆ, ಬಡವರಿಗೆ, ಕೂಲಿಕಾರರಿಗೆ ಅಷ್ಟ ಕೊಡಾಕತ್ತೇತಿ ಅಂತ ಅಂದ್ಕೊಂಡಂಗ ಕಾಣತೈತಿ.

ರಾಜಕಾರಣಿಗೋಳು, ಇಂಡಸ್ಟ್ರಿಯಲಿಷ್ಟು, ಸರ್ಕಾರಿ ಅಧಿಕಾರಿಗೋಳು ಎಲ್ಲಾರೂ ಸರ್ಕಾರಿ ಫ್ರೀ ಸ್ಕೀಮ್ಗೊಳನ್ಯಾಗ ಬದಕಾಕತ್ತಾರು. ಈ ದೇಶದಾಗ ಯಾ ಉದ್ಯಮಿ ಸರ್ಕಾರಿ ಜಮೀನು, ನೀರು, ಕರೆಂಟು ಸಬ್ಸಿಡಿ ಇಲ್ಲದ ಫ್ಯಾಕ್ಟರಿ ಹಾಕ್ಯಾರು? ಹತ್ತು ರೂಪಾಯಿದು ಬಂಡವಾಳ ಹೂಡಾಕ ಹತ್ತು ಸಾವಿರ ರೂಪಾಯಿದು ಸರ್ಕಾರಿ ಜಮೀನ್‌ ತೊಗೊಂಡು ರಿಯಲ್‌ ಎಸ್ಟೇಟ್‌ ಮಾಡಾರ ಜಾಸ್ತಿ ಅದಾರು. ಸರ್ಕಾರದ ಜಮೀನ್‌ ತೊಗೊಂಡು ಅದ್ನ ಬ್ಯಾಂಕ್ನಾಗ ಒತ್ತಿ ಇಟ್ಟು ದುಡ್ಡು ತೊಗೊಂಡು ಫ್ಯಾಕ್ಟರಿ ಕಟ್ಟಿಸಿ, ನಾನ ಜನರಿಗೆ ನೌಕರಿ ಕೊಟ್ಟೇನಿ ಅಂತ ಹೇಳಾರು ಎಷ್ಟು ಮಂದಿ ಸಬ್ಸಿಡ್ಯಾಗ ಸಾಲಾ ಮಾಡಿ ದೇಶಾ ಬಿಟ್ಟು ಓಡಿ ಹೋಗ್ಯಾರು ಅನ್ನೂದು ಸ್ವಲ್ಪ ಯೋಚನೆ ಮಾಡಬೇಕು.

Advertisement

ರಾಜಕಾರಣಿಗೋಳೆನು ಸ್ವಂತ ದುಡ್ಡಿನ್ಯಾಗ ರಾಜಕಾರಣ ಮಾಡ್ತಾರಾ? ಅವರೂ ಎಲ್ರೂ ಸರ್ಕಾರ ಸಬ್ಸಿಡ್ಯಾಗ ಬದಕಾಕತ್ತಾರು. ಒಮ್ಮಿ ಆರಿಸಿ ಬಂದ್ರು ಅಂದ್ರ, ಅವರು ಅಡ್ಯಾಡಾಕ ಕಾರು, ಉಳಕೊಳ್ಳಾಕ ಸರ್ಕಾರದ ಬಂಗ್ಲೆಗೆಲ್ಲಾ ಅವರೇನ ತಮ್ಮ ಕಿಸೆದಾಗಿನ ರೊಕ್ಕಾ ತಗದು ಕೊಡ್ತಾರು ? ಅದೂ ಫ್ರೀ ಸ್ಕೀಮ್ನ್ಯಾ ಗ ಜನರ ದುಡ್ಡ ಕೊಡುದು.

ರಾಜಕಾರಣ ಅಂದ್ರ ಸೇವಾ ಅಂತಾರು, ಜನರ ಸೇವಾ ಮಾಡಾಕ ಬರಾರು, ಫ್ರೀದಾಗ ಸರ್ಕಾರಿ ಕಾರು, ಬಂಗಲೇ ಯಾಕ್‌ ತೊಗೊಬೇಕು. ಮಂತ್ರಿ ಆದ ಮ್ಯಾಲೂ ಸ್ವಂತ ಮನ್ಯಾಗ ಇದ್ದು, ಸ್ವಂತ ಕಾರಿಗಿ ಪೆಟ್ರೋಲ್‌ ಹಾಕ್ಕೊಂಡು ತಿರಗ್ಯಾಡ್ಲಿ. ಅವಾಗ ರಾಜಕಾರಣದ ಹೆರ್ಸ ಮ್ಯಾಲ ಸಮಾಜ ಸೇವಾ ಮಾಡಾರು ಎಷ್ಟು ಮಂದಿ ಮುಂದ ಬರ್ತಾರೋ ಗೊತ್ತಕ್ಕೇತಿ.

ಸರ್ಕಾರ ರೈತರಿಗೆ, ಕಾರ್ಮಿಕರಿಗೆ, ಬಡವರಿಗೆ ಏನೋ ಸಬ್ಸಿಡಿ ಸ್ಕೀಮ್‌ ಮಾಡೇತಿ ಅಂದ್ರ ಅದನ್ನ ತೊಗೊಂಡು ಅವರು ಸುಮ್ನ ಕುಂತು ತಿನ್ನಾಕ ಆಗುದಿಲ್ಲ. ರೈತರಿಗೆ ಕರೆಂಟು, ಗೊಬ್ಬರಾ ಸಬ್ಸಿಡಿ ಕೊಟ್ರ ಆಂವ ಅದ್ನ ಮನ್ಯಾಗ ಇಟ್ಕೊಂಡು ತಿನ್ನಾಕ ಅಕ್ಕೇತಿ? ಆಂವ ಅದ ಕರೆಂಟು, ಗೊಬ್ಟಾರಾ ಬಳಸಿ ದೇಶಕ್ಕ ಬೇಕಾದ ಆಹಾರ ಉತ್ಪಾದನೆ ಮಾಡ್ತಾನು. ಕಾರ್ಮಿಕರು ದುಡಿಲಿಲ್ಲಾ ಅಂದ್ರ, ಫ್ಯಾಕ್ಟರಿಗೋಳು ನಡಿತಾವೆಂಗ, ಬಿಲ್ಡಿಂಗ್‌, ರೋಡು ಅಕ್ಕಾವೆಂಗ? ಜನರ ಕೈಯಾಗ ದುಡ್ಡು ಓಡ್ಯಾಡಿದ್ರ ಅವರು ಖರ್ಚು ಮಾಡ್ತಾರು. ಅದ ಸರ್ಕಾರಕ್ಕ ಟ್ಯಾಕ್ಸ್‌ ರೂಪದಾಗ ಬರತೈತಿ.

ಹಂಗ ನೋಡಿದ್ರ ಈ ದೇಶದ ದೊಡ್ಡ ಉದ್ಯಮಿ ಅಂದ್ರ ರೈತಾ. ಅವಂಗೇನು ಸರ್ಕಾರ ಸಬ್ಸಿಡ್ಯಾಗ ಜಮೀನು ಕೊಡುದಿಲ್ಲಾ. ಆಂವ ತನ್ನ ಸ್ವಂತ ಜಮೀನಿನ್ಯಾಗ ಬೆಳದು, ಲಾಭ ಇಲ್ಲಾಂದ್ರೂ ಕಡಿಮಿ ರೇಟಿನ್ಯಾಗ ಮಾರಿ ಜೀವನಾ ಮಾಡ್ತಾನು. ರೈತಗ ಸಬ್ಸಿಡಿ ಕಟ್‌ ಅಂದ್ರ, ರೈತನೂ ನನ್ನ ಹೆಂಡ್ತಿ ಮಕ್ಕಳಿಗಿ ಆಗುವಷ್ಟು ಬೆಳಕೊಂಡು ಅರಾಮ್‌ ಇರತೇನಿ ಬಿಡ್ರಿ ಅಂದಾ ಅಂದ್ರ, ಅಕ್ಕಿ, ಜ್ವಾಳಾ, ಗೋದಿ ತರಾಕ್‌ ಏನ್‌ ಪಾಕಿಸ್ತಾನ, ಶ್ರೀಲಂಕಾಕ್‌ ಹೊಕ್ಕಾರನ? ರೈತಾ ತಾ ಬೆಳೆದ ಬೆಳೆಗೆ ತಾನ ರೇಟ್‌ ಫಿಕ್ಸ್‌ ಮಾಡಾಕತ್ತಾ ಅಂದ್ರ, ಅಷ್ಟು ರೊಕ್ಕಾ ಕೊಟ್ಟು ಖರೀದಿ ಮಾಡಾಕ ಆಗದ ಜನರು ಶ್ರೀಲಂಕಾದಂಗ ದಂಗೆ ಏಳೂ ಪರಿಸ್ಥಿತಿ ಬರಬೌದು. ಹಣದುಬ್ಬರ ಗಣೇಶನ ಗಾಳಿಪಟಾ ಮ್ಯಾಲ್‌ ಹಾರಿದಂಗಾ ಹಾರಾಕ್‌ ಶುರು ಮಾಡ್ತೇತಿ.

ಕೋರ್ಟಿಗಿ ಹೋದಾವ್ರು ಶಾಣ್ಯಾ ಆಗಿದ್ರ, ಸರ್ಕಾರಿ ವ್ಯವಸ್ಥೆದಾಗಿರೋ ಪರ್ಸೆಂಟೇಜ್‌ ದಂಧೆ ತಡ್ಯಾಕ, ಸರ್ಕಾರ ಘೋಷಣೆ ಮಾಡೋ ಯೋಜನೆಗಳು ಲೇಟ್‌ ಆಗದಂಗ ನೋಡಕೊಳ್ಳಾಕ ಏನರ ತಾಕೀತ್‌ ಮಾಡಾಕ್‌ ಅಕ್ಕೇತನ ಅಂತ ಕೋರ್ಟಿಗಿ ಹೋಗಿದ್ರ ಚೊಲೊ ಇತ್ತು ಅನಸ್‌‚ತೈತಿ. ಯಾಕಂದ್ರ ಒಂದು ಯೋಜನೆ ನಲವತ್ತು ಪರ್ಸೆಂಟ್‌ ಲಂಚಾನ ಹೋದ್ರ ಕ್ವಾಲಿಟಿ ಎಲ್ಲಿ ಹುಡುಕೂದು? ಯೋಜನೆ ಲೇಟ್‌ ಆದಷ್ಟು ದುಡ್ಡು ಜಾಸ್ತಿ ಆಕ್ಕೊಂತ ಹೋಗಿ ಪರ್ಸೆಂಟೇಜಿನ್ಯಾರಿಗೆ ಲಾಭ ಅಕ್ಕೇತಿ ಬಿಟ್ರ, ಜನರಿಗೇನು ಉಪಯೋಗ ಆಗುದಿಲ್ಲ. ಕೆಲವರು ಶ್ರೀಮಂತ್ರ ಅಷ್ಟ ಟ್ಯಾಕ್ಸ್‌ ಕಟ್ಟತಾರು ಅನ್ನು ಭ್ರಮೆದಾಗ ಇದ್ದಂಗೈತಿ. ಹುಟ್ಟಿದ ಕೂಸು ಜಿಎಸ್ಟಿ ಕಟ್ಟೇ ದವಾಖಾನಿಂದ ಹೊರಗ ಬರತೈತಿ ಅನ್ನೂದು ತಿಳಕೊಳ್ಳುದು ಚೊಲೊ ಅನಸ್ತೈತೈತಿ.

ರಾಜಕಾರಣಿಗೋಳು ಫ್ರೀ ಸ್ಕೀಂ ಕೊಟ್ಟ ಕೂಡ್ಲೆ ಆರಿಸಿ ಬರತಾರು ಅನ್ನೂದು ಸುಳ್‌. ಹಂಗ್‌ ಆಗಿದ್ರ ಎಲ್ಲಾ ಭಾಗ್ಯ ಕೊಟ್ಟಿದ್ದ ಸಿದ್ರಾಮಯ್ಯನ ಅವರ ಕ್ಷೇತ್ರದ ಜನರು ಅಷ್ಟ್ ಅಂತರದಿಂದ ಸೋಲಸ್ತಿರಲಿಲ್ಲ. ಎಲೆಕ್ಷನ್‌ ನಡಿದ್ರೂ ಫ್ರೀಂ ಸ್ಕೀಮಿಗೂ ಸಂಬಂಧ ಇಲ್ಲಂತ ಅನಸ್ತೈತಿ. ಯಾಕಂದ್ರ ಎಂಎಲ್ಎ ಜನರಿಗಿ ಏನ್‌ ಬೇಕಾದ್ದು ಕೊಟ್ಟು, ಅವರ ಮನ್ಯಾಗ ಯಾರರ ಸತ್ರ ಮಾತ್ಯಾಡ್ಸಾಕ್‌ ಬರಲಿಲ್ಲ ಅಂದ್ರ ಸಿಟ್‌ ಮಾಡ್ಕೊಂಡು ಸೋಲಿಸ್ತಾರು. ಸಬ್ಸಿಡಿ ಸ್ಕೀಮ್‌ ನಿಲ್ಲಿಸಿದ್ರ ಪೊಲಿಟಿಕ್ಸ್‌ಗೆ ಬರಾರು ಯಾರು? ಇಂಡಸ್ಟ್ರಿ ಹಾಕಾರಾ ಯಾರು?

ಈಗ ಬಿಜೆಪಿ ಸರ್ಕಾರದಾಗ ಬೊಮ್ಮಾಯಿ ಸಾಹೇಬ್ರು ಭಾಳ್‌ ಸ್ಕೀಮ್‌ ಕೊಡಾಕತ್ತಾರು. ಆದ್ರೂ, ಬಿಜೆಪ್ಯಾರಿಗಿ ಮತ್‌ ಅಧಿಕಾರಕ್ಕ ಬರತೇವಿ ಅನ್ನೂ ನಂಬಿಕಿಲ್ಲ. ಅದ್ಕ ಮನ್ಯಾಗ ಕುಂತಿದ್ದ ಯಡಿಯೂರಪ್ಪನ ಕರಕೊಂಡು ಬಂದು ಮೋದಿ, ಅಮಿತ್‌ ಶಾ, ಬಾಜೂಕ ಕುಂದ್ರಿಸಿಕೊಳ್ಳಾಕತ್ತಾರು. ಬೊಮ್ಮಾಯಿ ಸ್ಕೀಮು, ಯಡಿಯೂರಪ್ಪ ಬ್ರ್ಯಾಂಡು, ಮೋದಿ ಟೂರು ಸೇರಿದ್ರ ವರ್ಕೌಟ್‌ ಆಗಬೌದು ಅಂತ ಅಂದದ್ಕೊಂಡಂಗ ಕಾಣತೈತಿ. ಅಂದ್ರ ಕರ್ನಾಟಕದ ಪೊಲಿಟಿಕ್ಸ್‌ ಏನು ಅಂತ ಅವರಿಗೆ ಅರ್ಥ ಆದಂಗ ಕಾಣತೈತಿ.

ಸಿದ್ರಾಮೋತ್ಸವ ಆದ ಮ್ಯಾಲ, ರಾಜ್ಯದಾಗ ಮುಂದಿನ ಮುಖ್ಯಮಂತ್ರಿ ವಿಚಾರದಾಗ ಸಿದ್ರಾಮಯ್ಯನ ಹವಾ ಜೋರಾಗಿತ್ತು. ಅದ್ಕ ಮೋದಿ, ಶಾ, ಯಡಿಯೂರಪ್ಪಗ ಜೈ ಅಂದ ಮ್ಯಾಲ ಈಗ ಬಿಜೆಪ್ಯಾಗೂ ಸ್ವಲ್ಪ ಅರಿಬಿ ಇಸ್ತ್ರಿ ಮಾಡ್ಸಿ ಇಟ್ಕೊಬೌದು ಅಂತ ಅನ್ನುವಂಗ ಆಗೇತಿ.

ಆದ್ರೂ, ಅವರಿಗೆ ಸಿದ್ರಾಮಯ್ಯನ ಹೆದರಿಕಿ ಭಾಳ ಇದ್ದಂಗ ಕಾಣತೈತಿ. ಇತ್ತೀಚೆಗೆ ಬಿಜೆಪ್ಯಾರ ಬಾಯಾಗ ಮೋದಿಗಿಂತ ಸಿದ್ರಾಮಯ್ಯನ ಹೆಸರ ಜಾಸ್ತಿ ಓಡಾಕತ್ತೇತಿ ಅಂತ ಅನಸ್ತೈತಿ. ಅದ್ಕ ಅವನ ಗಾಡಿಗಿ ತತ್ತಿ ಒಗದು ಸಿಟ್‌ ಹೊರಗ ಹಾಕಾಕತ್ತಾರು. ವೈರಿಗೋಳು ಹೆಚ್ಚಾದಷ್ಟು ಮನಷ್ಯಾ ಸ್ಟ್ರಾಂಗ್‌ ಅಕ್ಕಾನು. ಇದಕ್ಕ ಮೋದಿನ ಉದಾಹರಣೆ.

ಬ್ಯಾರೇದಾರ್ನ ದ್ವೇಷಾ ಮಾಡಿ ಬಾಳ ದಿನಾ ಜೀವನಾ ಮಾಡಾಕ್‌ ಆಗೂದಿಲ್ಲ. ಸಾಧ್ಯ ಆದ್ರ ಜನರಿಗಿ ಚೊಲೊದು ಮಾಡಬೇಕು. ಅಂದ್ಕೊಂಡ ಅವಂಗ ಹತ್ತು ರೂಪಾಯಿ ಕೊಟ್ಟು ಯಜಮಾನ್ತಿನ ರೌಂಡ್‌ ಬೈಕ್ನ್ಯಾಗ ಹೊಡಿಸಿ ಸಮಾಧಾನ ಮಾಡಿದ್ನಿ.

ಶಂಕರ ಪಾಗೋಜಿ

Advertisement

Udayavani is now on Telegram. Click here to join our channel and stay updated with the latest news.

Next