Advertisement
ತುಳು ಪಂಚಾಂಗ ಆಚರಣೆಯಂತೆ ಜು. 17ರಿಂದ ಆಟಿ ತಿಂಗಳು ಆರಂಭಗೊಂಡಿದೆ. ಬುಧವಾರ ರಾತ್ರಿಯಿಂದ ಬೆಳಗ್ಗಿನ ತನಕ ಉತ್ತಮ ಮಳೆಯೂ ಸುರಿದಿತ್ತು. ಅನಂತರ ಬಿಸಿಲು ಕಂಡುಬಂದರೂ ಗುರುವಾರ ರಾತ್ರಿಯಿಂದ ನಿರಂತರ ಮಳೆ ಸುರಿದಿದೆ. ಆಟಿ ತಿಂಗಳು ಉತ್ತಮ ಮಳೆ ಸುರಿಯುವ ಅವಧಿ. ಹೀಗಾಗಿ ಈ ತಿಂಗಳಲ್ಲಿ ತುಳುನಾಡಿನಲ್ಲಿ ಶುಭ ಕಾರ್ಯಕ್ರಮಗಳು ನಡೆಯುವುದಿಲ್ಲ. ಹಿಂದಿನ ಕಾಲದಿಂದಲೇ ಆಟಿ ತಿಂಗಳಲ್ಲಿ ವ್ಯಾಪಕ ಮಳೆ ಸುರಿಯುವ ನಂಬಿಕೆಯಂತೆ ಈ ವರ್ಷ ಉತ್ತಮ ಮಳೆಯಾಗಿದೆ. ಮಳೆಯ ಮಹಾನಕ್ಷತ್ರ ಶುಕ್ರವಾರಕ್ಕೆ ಕೊನೆಯಾಗುತ್ತಿದ್ದು, ಶನಿವಾರದಿಂದ ಮಹಾನಕ್ಷತ್ರ ಪುಷ್ಯ ಆರಂಭಗೊಳ್ಳಲಿದೆ.
ಈ ವರ್ಷ ಜನವರಿ ತಿಂಗಳಿನಿಂದ ಜುಲೈ 15ರ ತನಕ ಪುತ್ತೂರು ತಾಲೂಕಿನಲ್ಲಿ 819.2 ಮಿ.ಮೀ. ಮಳೆಯಷ್ಟೇ ಸುರಿದಿದೆ. 2018ರಲ್ಲಿ 2368.4 ಮಿ.ಮೀ., 2017ರಲ್ಲಿ 1344 ಮಿ.ಮೀ., 2016 ರಲ್ಲಿ 1495. 6 ಮಿ.ಮೀ., 2015ರಲ್ಲಿ 1351.7 ಮಿ.ಮೀ. ಮಳೆ ಸುರಿದಿದೆ. ಈ ಬಾರಿ ಸುರಿದ ಮಳೆ ಕಳೆದ 10 ವರ್ಷಗಳಲ್ಲೇ ಕಡಿಮೆ ಮಳೆ. 127 ಮಿ.ಮೀ.
ಗುರುವಾರ ಬೆಳಗ್ಗಿನಿಂದ ಶುಕ್ರವಾರ ಬೆಳಗ್ಗಿನ 24 ಗಂಟೆಗಳ ಅವಧಿಯಲ್ಲಿ
ಪುತ್ತೂರು ನಗರದಲ್ಲಿ 46 ಮಿ.ಮೀ, ಉಪ್ಪಿನಂಗಡಿಯಲ್ಲಿ 10 ಮಿ.ಮೀ., ಶಿರಾಡಿಯಲ್ಲಿ 26.4 ಮಿ.ಮೀ., ಕೊೖಲದಲ್ಲಿ 16.8 ಮಿ.ಮೀ., ಐತೂರುವಿನಲ್ಲಿ 20 ಮಿ.ಮೀ., ಕಡಬದಲ್ಲಿ 8.4 ಮಿ.ಮೀ. ಮಳೆ ಸುರಿದಿದೆ. ತಾಲೂಕಿನಲ್ಲಿ ಸರಾಸರಿ 21.2 ಮಿ.ಮೀ. ಹಾಗೂ ಒಟ್ಟು 127.6 ಮಿ.ಮೀ. ಮಳೆಯಾಗಿದೆ.
Related Articles
Advertisement
ಸುಳ್ಯ: ದಿನವಿಡೀ ಮಳೆ ಸಿಂಚನಸುಳ್ಯ : ಎರಡು ದಿನಗಳಿಂದ ಬಿಸಿಲಿನ ವಾತಾವರಣ ಇದ್ದು, ಶುಕ್ರವಾರ ದಿನವಿಡೀ ಸಾಧಾರಣ ಮಳೆಯಾಗಿದೆ. ಬೆಳಗ್ಗೆಯಿಂದ ಸಂಜೆ ತನಕವೂ ಮಳೆಯಾಗಿದ್ದು, ಮೋಡ ಕವಿದ ವಾತಾವರಣ ಮುಂದುವರಿದಿತ್ತು. ತಾಲೂಕಿನ ಬಹುತೇಕ ಗ್ರಾಮಗಳಲ್ಲಿ ಮಳೆಯಾಗಿದೆ. ಆದರೆ ಯಾವುದೇ ಅನಾಹುತ ಸಂಭವಿಸಿಲ್ಲ. ಜಡಿಮಳೆಯಿಲ್ಲದೆ ಸಾಧಾರಣ ಮಳೆ ಸುರಿದಿದೆ. ನಗರ ಮತ್ತು ಗ್ರಾಮಾಂತರ ಪ್ರದೇಶದ ರಸ್ತೆಗಳಲ್ಲಿ ಚರಂಡಿ ಅವ್ಯವಸ್ಥೆಯಿಂದ ಮಳೆ ನೀರು ರಸ್ತೆಯಲ್ಲೇ ಹರಿಯಿತು. ಕುಮಾರಧಾರಾ ನದಿಯಲ್ಲಿ ನೀರಿನ ಪ್ರಮಾಣ ಹೆಚ್ಚಳ ಸುಬ್ರಹ್ಮಣ್ಯ: ಸುಬ್ರಹ್ಮಣ್ಯ ಹಾಗೂ ಸುತ್ತಮುತ್ತಲ ಪರಿಸರದಲ್ಲಿ ಶುಕ್ರವಾರ ಮಳೆಯಾಗಿದೆ. ಸುರಿದ ಭಾರೀ ಮಳೆಗೆ ಈ ಭಾಗದಲ್ಲಿ ಜನಜೀವನ ಅಸ್ತವ್ಯಸ್ತಗೊಂಡಿದೆ. ಸುಬ್ರಹ್ಮಣ್ಯ ನಗರದ ರಸ್ತೆ ಬದಿಯ ಚರಂಡಿಯಲ್ಲಿ ಹೂಳು ತುಂಬಿಕೊಂಡು ಮುಚ್ಚಿರುವ ಪರಿಣಾಮ ನೀರು ಹರಿದು ಹೋಗಲು ಸಾಧ್ಯವಾಗದೆ ರಸ್ತೆ ಮೇಲೆಯೇ ಹಲವು ಕಡೆಗಳಲ್ಲಿ ನೀರು ಹರಿದಿದೆ. ವಾಹನ ಸಂಚಾರ ಜತೆಗೆ ಪಾದಚಾರಿಗಳಿಗೆ ತೊಂದರೆಗಳು ಕಾಣಿಸಿಕೊಂಡವು. ಆಯಕಟ್ಟಿನ ಸ್ಥಳಗಳಲ್ಲಿ ಹಾಗೂ ಆದಿಸುಬ್ರಹ್ಮಣ್ಯದಲ್ಲಿ ರಸ್ತೆಯಲ್ಲಿ ನೀರು ತುಂಬಿಕೊಂಡಿದ್ದಲ್ಲದೆ ತಗ್ಗು ಪ್ರದೇಶಗಳ ಅಂಗಡಿಗಳಿಗೆ ನುಗ್ಗಿ ಸಮಸ್ಯೆಯಾಯಿತು. ಸುರಕ್ಷತೆ ಕ್ರಮಗಳಿಲ್ಲ
ಕ್ಷೇತ್ರದಲ್ಲಿ ಹರಿಯುತ್ತಿರುವ ಎರಡು ಪ್ರಮುಖ ನದಿಗಳಾದ ದರ್ಪಣತೀರ್ಥ ಹಾಗೂ ಕುಮಾರಧಾರಾ ನದಿಯಲ್ಲಿ ನೀರಿನ ಮಟ್ಟ ಹೆಚ್ಚಳವಾಗಿದೆ. ಈ ಭಾಗದಲ್ಲಿ ಮತ್ತು ಘಟ್ಟ ಪ್ರದೇಶದಲ್ಲಿ ನಿರಂತರವಾಗಿ ಮಳೆ ಮುಂದುವರಿದಲ್ಲಿ ನೆರೆ ಮತ್ತಷ್ಟು ಏರುವ ಸಾಧ್ಯತೆಗಳಿವೆ. ಕುಮಾರಧಾರಾ ನೆರೆ ನೀರಿನಿಂದ ತುಂಬಿ ಹರಿಯುತ್ತಿದ್ದರೂ ಭಕ್ತರು ತೀರ್ಥ ಸ್ನಾನ ಮಾಡುವ ಕುಮಾರಧಾರಾ ಸ್ನಾನ ಘಟ್ಟದ ಬಳಿ ಹೆಚ್ಚಿನ ಸಿಬಂದಿಯನ್ನು ನಿಯೋಜಿಸದೆ, ಸುರಕ್ಷತೆಗೆ ಕ್ರಮ ಕೈಗೊಳ್ಳದಿರುವುದು ಶುಕ್ರವಾರ ಕಂಡುಬಂದಿದೆ. ಭಕ್ತರಿಂದ ತೀರ್ಥಸ್ನಾನ
ಸ್ನಾನಘಟ್ಟ ಬಳಿ ತೀರ್ಥ ಸ್ನಾನಕ್ಕಿಳಿಯುವ ಭಕ್ತರು ನೀರಿನ ಸೆಳೆತದ ಮತ್ತು ಆಳದ ಅರಿವಿಲ್ಲದೆ ಆಪತ್ತು ತಂದುಕೊಳ್ಳುತ್ತಾರೆ. ಮಳೆಗಾಲದ ಸಂದರ್ಭ ಇಲ್ಲಿ ಸ್ನಾನಕ್ಕೆ ಇಳಿಯಲು ಪ್ರಯತ್ನಿಸಿ ನೀರಿನಲ್ಲಿ ಕೊಚ್ಚಿ ಹೋಗಿ ಜೀವ ಹಾನಿಯಂತಹ ಘಟನೆಗಳು ನಡೆಯುತ್ತಿರುತ್ತವೆ. ಹೀಗಾಗಿ ಮಳೆಗಾಲದ ಆರಂಭದಲ್ಲೇ ಎಲ್ಲ ಸಿದ್ಧತೆಗಳನ್ನು ಮಾಡುವುದು ಸೂಕ್ತ. ಕ್ಷೇತ್ರದಲ್ಲಿ ಶುಕ್ರವಾರ ಭಕ್ತರ ಪ್ರಮಾಣ ಕಡಿಮೆ ಇತ್ತು. ಕ್ಷೇತ್ರಕ್ಕೆ ಆಗಮಿಸಿದ್ದ ಭಕ್ತರು ಮಳೆಯ ನಡುವೆಯೂ ದರ್ಪಣ ತೀರ್ಥ ಮತ್ತು ಕುಮಾರಧಾರಾ ನದಿಗಿಳಿದು ತೀರ್ಥ ಸ್ನಾನ ಮಾಡಿದರು. ಸಂಜೆ ಬಳಿಕ ಮಳೆ ಬಿರುಸು
ಹರಿಹರ, ಕೊಲ್ಲಮೊಗ್ರು, ಬಾಳುಗೋಡು, ಐನಕಿದು, ಮಡಪ್ಪಾಡಿ, ಗುತ್ತಿಗಾರು, ಪಂಜ ಭಾಗಗಳಲ್ಲಿ ವ್ಯಾಪಕ ಮಳೆಯಾಗಿದೆ. ಮಧ್ಯಾಹ್ನದ ಬಳಿಕ ಮಳೆ ಬಿರುಸು ಪಡಕೊಂಡಿದೆ. ಈ ಭಾಗದಲ್ಲಿ ಹರಿಯುವ ಸಣ್ಣಪುಟ್ಟ ನದಿ, ಹೊಳೆ ತೊರೆಗಳು ತುಂಬಿ ಹರಿಯಲಾರಂಭಿಸಿದೆ. ಕೆಲವು ಕಡೆಗಳಲ್ಲಿ ನೀರಿನ ಒರತೆ ಸೃಷ್ಟಿಯಾಗಿದೆ. ಎಚ್ಚರಿಕೆ ವಹಿಸಲು ಸೂಚನೆ
ಕಳೆದ ಅಗಸ್ಟ್ ತಿಂಗಳಲ್ಲಿ ಕಲ್ಮಕಾರು ಭಾಗದಲ್ಲಿ ಪ್ರಾಕೃತಿಕ ವಿಕೋಪ ಸಂಭವಿಸಿದ್ದಲ್ಲದೆ ಭೂಕುಸಿತ ಘಟನೆಗಳು ಸಂಭವಿಸಿತ್ತು. ಸಂಪರ್ಕ ಸೇತುವೆಗಳು ನೆರೆ ನೀರಿನಲ್ಲಿ ಕೊಚ್ಚಿ ಹೋಗಿದ್ದವು. ಗುಡ್ಡ ಬಿರುಕು ಬಿಟ್ಟು ಎಂಟು ಕುಟುಂಬಗಳು ಮನೆ ತೊರೆದು ಹೊರ ಬಂದು ತಾತ್ಕಾಲಿಕ ನಿರಾಶ್ರಿತ ಕೇಂದ್ರಗಳಲ್ಲಿ ಆಶ್ರಯ ಪಡೆದಿದ್ದರು. ಮಳೆ ಬಿರುಸುಗೊಂಡ ಪರಿಣಾಮ ಈ ಭಾಗದಲ್ಲಿ ಎಚ್ಚರಿಕೆ ವಹಿಸಲು ನಿವಾಸಿಗಳಿಗೆ ಸಂಬಂಧಪಟ್ಟ ಅಧಿಕಾರಿಗಳು ಸೂಚಿಸಿದ್ದಾರೆ. ಕಳೆದ ವರ್ಷ ಮುಳುಗಡೆಯಾದ ಸುಬ್ರಹ್ಮಣ್ಯ ಕುಮಾರಧಾರಾ ನದಿ ತಟದ ನಿವಾಸಿಗಳ ಸಹಿತ ಇತರೆಡೆಗಳ ಅಪಾಯಕಾರಿ ಸ್ಥಳಗಳಲ್ಲಿ ವಾಸವಿರುವ ಕುಟುಂಬಗಳಿಗೂ ಎಚ್ಚರಿಕೆಯಿಂದ ಇರಲು ಸೂಚಿಸಲಾಗಿದೆ.