Advertisement

ಮೋದಿ ಬಂದ್ರೂ ಮಣಿದಿಲ್ಲ, ಸವದಿ ಏನ್‌ ಮಾಡ್ತಾನ್‌?

04:22 PM May 01, 2022 | Team Udayavani |

ವಿಜಯಪುರ: ರಾಜ್ಯ ವಿಧಾನಸಭೆ ಚುನಾವಣೆಗೆ ಇನ್ನೂ ಒಂದು ವರ್ಷ ಬಾಕಿ ಇರುವಾಗಲೇ ರಾಜಕೀಯ ಪಕ್ಷಗಳಲ್ಲಿ ಬಿರುಸಿನ ಚಟುವಟಿಕೆ ಆರಂಭಗೊಂಡಿವೆ.

Advertisement

“ಉದಯವಾಣಿ’ ಕಳೆದ ಏ.20ರಂದು “ಎಂ.ಬಿ.ಪಾಟೀಲ ವಿರುದ್ಧ ಲಕ್ಷ್ಮಣ ಸವದಿ ಸ್ಪರ್ಧೆ?’ ಎಂಬ ತಲೆಬರಹದಲ್ಲಿ ಪ್ರಕಟವಾಗಿದ್ದ ವಿಶೇಷ ವರದಿ ಇದೀಗ ಸಾಕಷ್ಟು ಸದ್ದು ಮಾಡಿದೆ.

“ಬಬಲೇಶ್ವರ ಕ್ಷೇತ್ರದಲ್ಲಿ ಮೋದಿ ಬಂದ್ರೂ ಏನೂ ಮಾಡಿಕೊಳ್ಳಲಾಗಿಲ್ಲ, ಮಣಿಸಲಾಗಿಲ್ಲ. ಇನ್ನ ಸವದಿ ಬಂದೇನ್‌ ಮಾಡ್ತಾನ್‌’ ಎಂದು ಬಬಲೇಶ್ವರ ಹಾಲಿ ಶಾಸಕರೂ ಆಗಿರುವ ಮಾಜಿ ಮಂತ್ರಿ, ಕೆಪಿಸಿಸಿ ಪ್ರಚಾರ ಸಮಿತಿ ಅಧ್ಯಕ್ಷ ಎಂ.ಬಿ.ಪಾಟೀಲ ಬೆಂಬಲಿಗರು ತಿರುಗೇಟು ನೀಡುತ್ತಿದ್ದಾರೆ.

ಪಾಟೀಲ ಅವರು ಸಾರ್ವಜನಿಕ ವೇದಿಕೆಗಳು ಹಾಗೂ ಸಾರ್ವಜನಿಕ ಸಮಾರಂಭಗಳು ಹಾಗೂ ಪತ್ರಿಕಾಗೋಷ್ಠಿಗಳಲ್ಲಿ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ವಿರುದ್ಧ ಮಾಡಿರುವ ಭಾಷಣಗಳನ್ನು ಹಾಗೂ “ಉದಯವಾಣಿ’ ವಿಶೇಷ ವರದಿಯ ತುಣಕನ್ನು ಸಂಕಲಿಸಿ ಸಾಮಾಜಿಕ ಜಾಲತಾಣಗಳಲ್ಲಿ ಹರಿ ಬಿಟ್ಟಿದ್ದಾರೆ.

ಸವದಿ ವಿರುದ್ಧ ಬರ್ತದ ಪಾಳಿ, ನಾನು ಕೈ ಹಚ್ಚಿದ್ರ ಬಾಳಷ್ಟು ಕೈ ಹಚ್ಚಾಕ ಬರತೈತಿ. ನನ್ನ ಹೊಡತಕ್ಕ ಎಂತೆಂಥವ್ರೋ ತಾಳಿಲ್ಲ, ಏನ್ರಿ..! ಸವದಿ ಯಾವ ಲೆಕ್ಕ. ಲಕ್ಷ್ಮಣ ಸವದಿ ಬಾಯಿ ಹರಕ ಕೌದಿ..! ಹೀಗೆ ಎಂ.ಬಿ. ಪಾಟೀಲ ಅವರು ಮಾಡಿರುವ ಟೀಕಾಸ್ತ್ರಗಳ ಎಡಿಟ್‌ ಮಾಡಿದ ವಿಡಿಯೋ ವೈರಲ್‌ ಆಗಿದೆ.

Advertisement

ಯಾರು ತಲೆ ಕೆಳಗ ಮಾಡಿ, ಕಾಲ ಮ್ಯಾಲೆ ಮಾಡಿ ನಿಂತ್ರೂ ಎಂ.ಬಿ. ಪಾಟೀಲಗೆ ಏನೂ ಹಾನಿಯಾಗಲ್ಲ. ಬಬಲೇಶ್ವರ ಕ್ಷೇತ್ರದಲ್ಲಿ ಯಾರೇ ಬಂದ್ರೂ..ಯಾರೆ ಬಂದ್ರೂ ಎಂದು ಬರೆದುಕೊಳ್ಳಿ.. ನನಗೇನೂ ಫರಕ ಆಗಲ್ಲ, ನನ್ನನ್ನು ಸೋಲಿಸಲು ಯಾರಿಂದಲೂ ಸಾಧ್ಯವಿಲ್ಲ.. ಐದು ವರ್ಷ ನಾನೇನು ಕೆಲಸ ಮಾಡದೇ ಕುಳಿತಿಲ್ಲ.. ಹರಿ ಬ್ರಹ್ಮ, ವಿಷ್ಣು ಬಂದರೂ ನನ್ನನ್ನು ಸೋಲಿಸಲು ಸಾಧ್ಯವಿಲ್ಲ. ಬದಲಾಗಿ 50 ಸಾವಿರ ಮತಗಳಿಂದ ಮತ್ತೆ ಗೆದ್ದು ತೋರಿಸುತ್ತೇನೆ..! ಇಂಥ ಹೇಳಿಕೆಗಳ ವಿಡಿಯೋ ತುಣುಕುಗಳೊಂದಿಗೆ “ಉದಯವಾಣಿ’ ವಿಶೇಷ ವರದಿ ಎಡಿಟ್‌ ಮಾಡಿದ ವಿಡಿಯೋಗಳು ಬಬಲೇಶ್ವರ ಕ್ಷೇತ್ರದಲ್ಲಿ ದೊಡ್ಡ ಮಟ್ಟದಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಇದೀಗ ಭಾರಿ ಸದ್ದು ಮಾಡುತ್ತಿವೆ.

ಇದನ್ನೂಓದಿ: PSI ಪರೀಕ್ಷೆ ಅಕ್ರಮ ಪ್ರಕರಣ : CID ಎದುರು ಶರಣಾದ ಮತ್ತೋರ್ವ ಕಿಂಗ್ ಪಿನ್

ಮತ್ತೊಂದೆಡೆ ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಒಂದೊಮ್ಮೆ ಬಬಲೇಶ್ವರ ಕ್ಷೇತ್ರದಲ್ಲಿ ಬಿಜೆಪಿ ಅಭ್ಯರ್ಥಿಯೇ ಆದಲ್ಲಿ ಗೆಲುವು ಇನ್ನೂ ಸುಲಭ ಎಂಬುದು ಎಂ.ಬಿ. ಪಾಟೀಲ ಬೆಂಬಲಿಗರ ಮಾತು. ಕುಡಿಯಲು ನೀರೇ ಸಿಗದೇ ಬ್ಯಾರಲ್‌ನಲ್ಲಿ ನೀರು ಸಂಗ್ರಹಿಸಿ, ಬೀಗ ಹಾಕಿ, ಹಗಲು-ರಾತ್ರಿ ಕಾವಲು ಕಾಯುವ ದುಸ್ಥಿತಿ ಇದ್ದ ನೆಲದಲ್ಲೀಗ ಗಂಗೆ ಉಕ್ಕುತ್ತಿದ್ದಾಳೆ. ಹೀಗಾಗಿ ಭಗೀರಥ ಪಾಟೀಲ ವಿರುದ್ಧ ಸವದಿ ಮಾತ್ರವಲ್ಲ ಯಾರೇ ಸ್ಪರ್ಧಿಸಿದರೂ ಸೋಲಿಸಲು ಸಾಧ್ಯವಿಲ್ಲ ಎಂಬಂಥ ಹೇಳಿಕೆಗಳ ವಿಡಿಯೋಗಳು ವೈರಲ್‌ ಆಗಿವೆ.

ರಾಜ್ಯ ರಾಜಕೀಯಕ್ಕೆ ಬರ್ತೆನೆ

ಸದರಿ ವರದಿಯಲ್ಲೇ ಕೇಂದ್ರದ ಮಾಜಿ ಸಚಿವರಾದ ವಿಜಯಪುರ ಹಾಲಿ ಸಂಸದ ರಮೇಶ ಜಿಗಜಿಣಗಿ ರಾಜ್ಯ ರಾಜಕೀಯಕ್ಕೆ ಬರುವ ಇಂಗಿತ ವ್ಯಕ್ತಪಡಿಸಿದ್ದಾರೆ. ಆ ಮೂಲಕ “ಉದಯವಾಣಿ’ ಪ್ರಕಟಿಸಿದ್ದ ವರದಿಯನ್ನು ದೃಢೀಕರಿಸಿದ್ದಾರೆ. ಪಕ್ಷದ ಹೈಕಮಾಂಡ್‌ ನಿರ್ಧಾರದಂತೆ ನನ್ನ ನಿರ್ಧಾರ ಇರುತ್ತದೆ. ವರಿಷ್ಠರು ಬಯಸಿದಲ್ಲಿ ರಾಜ್ಯ ರಾಜಕೀಯಕ್ಕೆ ಬರುತ್ತೇನೆ. ವಿಜಯಪುರ ಜಿಲ್ಲೆಯಲ್ಲಿ ಪರಿಶಿಷ್ಟ ಜಾತಿಗೆ ಮೀಸಲಾಗಿರುವ ನಾಗಠಾಣ ವಿಧಾನಸಭೆ ಕ್ಷೇತ್ರದಿಂದಲೇ ಸ್ಪರ್ಧೆಗೆ ಸಿದ್ಧನಿದ್ದೇನೆ ಎಂದು ಪತ್ರಿಕಾಗೋಷ್ಠಿಯಲ್ಲೇ ಬಹಿರಂಗವಾಗಿ ಹೇಳಿದ್ದಾರೆ.

ಪ್ರೊಪೋಸಲ್‏ಗೆ ನಿರೀಕ್ಷಿಸುತ್ತಿದ್ದೀರಾ? ಕನ್ನಡ ಮ್ಯಾಟ್ರಿಮೋನಿಯಲ್ಲಿ - ಉಚಿತ ನೋಂದಣಿ !

Advertisement

Udayavani is now on Telegram. Click here to join our channel and stay updated with the latest news.

Next