Advertisement

Cyclone; ಚಂಡಮಾರುತಗಳೂ ಈ ವರ್ಷ ಮೌನ !

12:59 AM Nov 28, 2023 | Team Udayavani |

ಮಂಗಳೂರು: ಮುಂಗಾರು ಮುಗಿದು ಹಿಂಗಾರು ಮಳೆಯೂ ಕೊನೆ ಹಂತದಲ್ಲಿದೆ. ಈ ಬಾರಿ ಚಂಡಮಾರುತ ಪರಿಣಾಮ ಕಡಿಮೆ. ಅರಬಿ ಸಮುದ್ರದಲ್ಲಿ ಎರಡು ಚಂಡಮಾರುತಗಳಷ್ಟೇ ಉಂಟಾಗಿದ್ದು, ಒಂದು ಕರಾವಳಿಯತ್ತ ಮುಖವನ್ನೇ ಮಾಡಿಲ್ಲ.

Advertisement

ಈ ಬಾರಿ ಕರಾವಳಿಗೆ ಜೂ. 10ರಂದು ಮುಂಗಾರು ಪ್ರವೇಶಿಸಿತ್ತು. ಕೇರಳ ಪ್ರವೇಶಿ ಸುತ್ತಲೇ ವರ್ಷದ ಮೊದಲ ಚಂಡಮಾರುತ “ಬಿಪರ್‌ಜಾಯ್‌’ ಅರಬಿ ಸಮುದ್ರದಲ್ಲಿ ಉಂಟಾಗಿತ್ತು. ಇದು ಮೂರ್ನಾಲ್ಕು ದಿನ ಮಳೆ ಸುರಿಸಿ ಕರಾವಳಿಗೆ ಅಬ್ಬರಿಸಬೇಕಾಗಿದ್ದ ಮುಂಗಾರನ್ನು ದೂರ ಮಾಡಿತು.

ಪ್ರತೀ ಮಳೆಗಾಲದಲ್ಲಿ ವಾಯುಭಾರ ಕುಸಿತ, ಚಂಡಮಾರುತಗಳು ಮಳೆ ಪ್ರಮಾಣವನ್ನು ಹೆಚ್ಚಿಸುತ್ತವೆ. ಕಳೆದ ಬಾರಿ ಅರಬಿ ಸಮುದ್ರದಲ್ಲಿ ಒಂದೇ ಒಂದು ಚಂಡಮಾರುತ ಉಂಟಾಗಿಲ್ಲವಾದರೂ ನಾಲ್ಕೆçದು ಬಾರಿ ತೀವ್ರ ತರದ ವಾಯುಭಾರ ಕುಸಿತ ಉಂಟಾಗಿತ್ತು. ಇದರಿಂದ ಮಳೆ ಯಲ್ಲಿ ನಿರಂತರತೆ ಕಂಡು ಬಂದಿತ್ತು. ಈ ಬಾರಿ “ಬಿಪರ್‌ಜಾಯ್‌’ ಮತ್ತು ಹಿಂಗಾರು ಅವಧಿಯ ಅಕ್ಟೋಬರ್‌ನಲ್ಲಿ ಕಾಣಿಸಿಕೊಂಡ “ತೇಜ್‌’ ಚಂಡಮಾರುತ ಹೊರತುಪಡಿಸಿ ವಾಯುಭಾರ ಕುಸಿತ ದಂಥ ಪೂರಕ ವಾತಾವರಣ ಇರಲಿಲ್ಲ.

ಬಂಗಾಲ ಕೊಲ್ಲಿಯಲ್ಲಿ ಮೇಯಲ್ಲಿ ಉಂಟಾಗಿದ್ದ “ಮೋಚ’ ಚಂಡಮಾರುತ ಮತ್ತು ಎರಡು ಬಾರಿ ವಾಯುಭಾರ ಕುಸಿತಗಳು ಉಂಟಾಗಿವೆ. “ಹಮೂನ್‌’ ಮತ್ತು “ಮೈಧಿಲಿ’ ಚಂಡಮಾರುತಗಳು ಪೂರ್ವ ಕರಾವಳಿಗೆ ಪರಿಣಾಮ ಬೀರಿಲ್ಲ. ಹವಾಮಾನ ವೈಪರೀತ್ಯದಿಂದ ಚಂಡಮಾರುತಕ್ಕೆ ಪೂರಕವಾದ ಕಡಿಮೆ ಒತ್ತಡ ಪ್ರದೇಶ, ವಾಯುಭಾರ ಕುಸಿತ ಆಗದಿರುವುದು, ಎಲ್‌-ನಿನೋ ಪ್ರಭಾವದಿಂದಾಗಿ ಈ ಬಾರಿ ಚಂಡಮಾರುತವೂ ಕಡಿಮೆ ಎನ್ನುತ್ತಾರೆ ತಜ್ಞರು.

ಮಳೆ ಇನ್ನಷ್ಟು ಕಡಿಮೆ
ಈ ಮಾಸಾಂತ್ಯದ ವರೆಗೆ ಹಿಂಗಾರು ಮಳೆ ಇರುವ ಸಾಧ್ಯತೆಯಿದೆ. ಮುಂದಿನ ತಿಂಗಳಿಂದ ಸಾಧ್ಯತೆ ಬಹಳಷ್ಟು ಕಡಿಮೆಯಿದೆ. ಚಳಿಗಾಲ ಪ್ರಾರಂಭವಾಗುತ್ತಿದ್ದು, ಚಂಡಮಾರುತ ಪ್ರಭಾವವೂ ಕಾಣಿಸುತ್ತಿಲ್ಲ. ತುಂತುರು ಮಳೆ- ಹಗುರ, ಸಾಧಾರಣ ಮಳೆ ಇರಬಹುದು. ಭಾರೀ ಮಳೆ ಸುರಿಯುವ ಲಕ್ಷಣಗಳೂ ಇಲ್ಲ ಎನ್ನುವುದು ಹವಾಮಾನ ತಜ್ಞರ ಮಾತು.

Advertisement

ಈ ವರ್ಷದ ಚಂಡಮಾರುತಗಳು ಮೇ 9-15: ಮೋಚ (ಉತ್ತರ ಹಿಂದೂ ಮಹಾಸಾಗರ, ಬಂಗಾಲಕೊಲ್ಲಿ,) . 6-19: ಬಿಪರ್‌ಜಾಯ್‌ (ಅರಬಿ ಸಮುದ್ರ) ಅ. 20-24: ತೇಜ್‌ (ಅರಬಿ ಸಮುದ್ರ) ಅ. 21-25:ಹಮೂನ್‌ (ಉತ್ತರ ಹಿಂದೂ ಮಹಾಸಾಗರ, ಬಂಗಾಲಕೊಲ್ಲಿ) ನ. 14-18: ಮೈಧಿಲಿ (ಉತ್ತರ ಹಿಂದೂ ಮಹಾಸಾಗರ, ಬಂಗಾಲಕೊಲ್ಲಿ)

ಹಿಂದಿನ ವರ್ಷಗಳ ಚಂಡಮಾರುತಗಳ ಸಂಖ್ಯೆ
ವರ್ಷ ಅರಬಿ ಸಮುದ್ರ ಬಂಗಾಲಕೊಲ್ಲಿ

2019    5    3
2020    2   3
2021     2   3
2022 —      3

ಎಲ್‌- ನಿನೋ ಪ್ರಭಾವ ಈ ಬಾರಿ ಕಾಣಿಸಿಕೊಂಡಿದ್ದು, ಇದು ಮುಂದಿನ ವರ್ಷವೂ ಮುಂದುವರಿಯುವ ಸಾಧ್ಯತೆಯಿದೆ. ಇದರ ಪ್ರಭಾವದಿಂದ ಗರಿಷ್ಠ ಉಷ್ಣಾಂಶ ಕೂಡ ಹೆಚ್ಚಾಗಿದ್ದು, ಮಳೆ ಪ್ರಮಾಣ ಕಡಿಮೆಯಾಗಿದೆ. ಚಂಡಮಾರುತಗಳೂ ಕಡಿಮೆ ಇತ್ತು. ಒಂದೆರಡು ಬಂದರೂ ಅದರಿಂದ ನಮಗೆ ಯಾವುದೇ ಲಾಭವಾಗಿಲ್ಲ.
– ಎ. ಪ್ರಸಾದ್‌,ಹವಾಮಾನ ತಜ್ಞ , ಐಎಂಡಿ ಬೆಂಗಳೂರು

ಭರತ್‌ ಶೆಟ್ಟಿಗಾರ್‌

Advertisement

Udayavani is now on Telegram. Click here to join our channel and stay updated with the latest news.

Next