Advertisement
2000. ಮಿಯಾಮಿ, ಫ್ಲೋರಿಡಾ- “ಹರಿಕೇನ್ ಡೆಬ್ಬಿ ಯಾವುದೇ ಸಮಯಕ್ಕೆ ಬರುವ ಸಾಧ್ಯತೆ ಇದೆ. ಹಾಗಾಗಿ ಎಚ್ಚರಿಕೆ ವಹಿಸಿ, ಎಲ್ಲಾ ಸಿದ್ಧತೆ ಮಾಡಿಟ್ಟುಕೊಳ್ಳಿ’- ಹೀಗೆಂದು ಪದೇಪದೆ ಟಿವಿ, ಪೇಪರ್, ರೇಡಿಯೋಗಳಲ್ಲಿ ಸುದ್ದಿ ಬರುತ್ತಿದ್ದರೆ, ಅಮೆರಿಕದ ಫ್ಲೋರಿಡಾದಲ್ಲಿ ವಾಸವಾಗಿದ್ದ ನಮಗೆ ಎದೆ ನಡುಗಿತ್ತು. ಮರಗಳನ್ನೇ ಉರುಳಿಸುವ ಪ್ರಬಲ ಗಾಳಿ, ಮನೆ ಮುಳುಗಿಸುವ ನೀರು, ಎಲ್ಲೆಂದರಲ್ಲಿ ಧೂಳು-ಮರಳು, ಕವಿದ ಕತ್ತಲು… ಹೀಗೆ ಅದೊಂದು ದುಃಸ್ವಪ್ನ! ಎಲ್ಲರೂ ಡೆಬ್ಬಿಗೆ ಮನಸೋ ಇಚ್ಛೆ ಬಯ್ಯುವವರೇ. ಪಾಪ, ನಮ್ಮ ನೆರೆಯ ಹುಡುಗಿ ಡೆಬ್ಬಿ , “ಛೆ, ನನಗೆ ಒಂಥರಾ ಆಗುತ್ತೆ, ಇದಕ್ಕೇಕೆ ನನ್ನ ಹೆಸರು?’ ಎಂದು ಬೇಸರ ಮಾಡಿಕೊಂಡಿದ್ದಳು. “ಹೆಸರಿನಲ್ಲಿ ಏನಿದೆ?’ ಎಂದು ಅವಳನ್ನು ಸಮಾಧಾನಪಡಿಸಿದರೂ ಈ ಚಂಡಮಾರುತಗಳ ಹೆಸರಿನ ಹಿಂದಿನ ಕತೆ ದೊಡ್ಡದೇ!
ಹರಿಕೇನ್, ಸೈಕ್ಲೋನ್, ತೂಫಾನು ಎಲ್ಲವೂ ಸಮುದ್ರದಲ್ಲಿ ವಾಯುಭಾರ ಕುಸಿತವಾಗಿ ಕಡಿಮೆ ಒತ್ತಡದ ಪ್ರದೇಶದತ್ತ ರಭಸವಾಗಿ ಮುನ್ನುಗ್ಗುವ ಗಾಳಿ. ಜಗತ್ತಿನ ಬೇರೆ ಬೇರೆ ಹೆಸರಿನಿಂದ ಕರೆಯುತ್ತಾರೆ. ಅನಾದಿ ಕಾಲದಿಂದಲೂ ಚಂಡಮಾರುತಗಳು ಅಪಾರ ಹಾನಿ ಮಾಡುತ್ತಲೇ ಬಂದಿವೆ. ಅವುಗಳಿಗೆ ಹೆಸರಿಟ್ಟು ಗುರುತಿಸುವ ಕೆಲಸ ಕಳೆದೊಂದು ಶತಮಾನದಿಂದ ನಡೆದುಬಂದಿದೆ. ಆರಂಭದಲ್ಲಿ ಹವಾಮಾನಕ್ಕೆ ಸಂಬಂಧಿಸಿದ ಈ ವಿದ್ಯಮಾನ ಗುರುತಿಸಲು ತಜ್ಞರು ಭೂಮಿಯ ಅಕ್ಷಾಂಶ ಮತ್ತು ರೇಖಾಂಶವನ್ನು ಬಳಸುತ್ತಿದ್ದರು. ವಿಶ್ವ ಹವಾಮಾನ ಸಂಸ್ಥೆ ಪ್ರಕಾರ, ಇದು ಗುರುತಿಸಲು ಕಠಿಣ. ಹೆಸರಿಟ್ಟಾಗ ಜನರಿಗೆ ನೆನಪಿಟ್ಟುಕೊಳ್ಳಲು ಸುಲಭ. ಮಾಧ್ಯಮಗಳಲ್ಲಿ ಸುದ್ದಿ ಕೊಡುವಾಗ ಬರೀ ಸಂಖ್ಯೆ ಅಥವಾ ವೈಜ್ಞಾನಿಕ ಹೆಸರು ನೀಡಿ ಜನರನ್ನು ಎಚ್ಚರಿಸುವುದು ಸುಲಭವಲ್ಲ. ಹೆಸರಿದ್ದಾಗ ಬೇಗನೆ ಮನಸ್ಸಿನಲ್ಲಿ ಉಳಿದು, ಬಾಯಿಂದ ಬಾಯಿಗೆ ಸುದ್ದಿ ಹರಡಿ ಜನರು ಪೂರ್ವ ಸಿದ್ಧತೆ ಕೈಗೊಳ್ಳಲು ಸಹಾಯಕ. ಹಾಗೆಯೇ ಯಾವ ಪ್ರದೇಶದಿಂದ ಎಲ್ಲಿಗೆ ಚಂಡಮಾರುತ ಧಾವಿಸುತ್ತಿದೆ ಎಂದು ಜನರ ಮೂಲಕ ಪತ್ತೆ ಸುಲಭಸಾಧ್ಯ.
Related Articles
Advertisement
ಮಹಿಳೆಯರ ಹೆಸರೇ ಏಕೆ?ನಿಖರವಾಗಿ ಇಂಥದ್ದೇ ಕಾರಣ ಎಂದು ತಿಳಿದಿಲ್ಲವಾದರೂ ಇತಿಹಾಸ ಮತ್ತು ಹಳೆಯ ಕೃತಿಗಳ ಪ್ರಕಾರ ಹೆಸರಿನ ಹಿಂದಿನ ಉದ್ದೇಶ ಹೀಗಿರಬಹುದು. .ನಾವಿಕರಲ್ಲಿ ಸಮುದ್ರ ಮತ್ತು ನೌಕೆಯನ್ನು ಸ್ತ್ರೀಲಿಂಗವೆಂದು ಪರಿಗಣಿಸಲಾಗುತ್ತದೆ. ಹೀಗಾಗಿ ಸಮುದ್ರದಲ್ಲಿ ಹುಟ್ಟುವ ಚಂಡಮಾರುತಕ್ಕೆ ಮಹಿಳೆಯರ ಹೆಸರಿಟ್ಟಿರಬಹುದು. .ದೀರ್ಘಕಾಲ ಸಮುದ್ರಯಾನ ಕೈಗೊಳ್ಳುತ್ತಿದ್ದ ನಾವಿಕರು ತಮ್ಮ ಪ್ರೇಯಸಿಯರಿಂದ ದೂರ ಇರುತ್ತಿದ್ದರು. ವಿರಹದಿಂದ ಬಳಲುತ್ತಿದ್ದ ನಾವಿಕರು ಅದೇ ನೆನಪಿನಲ್ಲಿ ಚಂಡಮಾರುತಕ್ಕೆ ತಮಗಿಷ್ಟವಾದ ಹೆಸರಿಟ್ಟಿರಬಹುದು. .ಕೆಲವೊಮ್ಮೆ ತೀರಕ್ಕೆ ಹತ್ತಿರ ಬಂದು ಕೆಣಕಿ, ಮತ್ತೆ ಹಲವು ಬಾರಿ ಅಪ್ಪಳಿಸುತ್ತಿದ್ದ ಚಂಡಮಾರುತಗಳು ಮಹಿಳೆಯರ ಸ್ವಭಾವದಂತೆ ಹೇಳಲಸಾಧ್ಯ. ಪ್ರಕ್ಷುಬ್ಧ ಎಂಬ ಅಭಿಪ್ರಾಯ. ಹಾಗಾಗಿ ಅಂಥ ಹೆಸರುಗಳು! ಮಾಧ್ಯಮಗಳಲ್ಲೂ ಚಂಡಮಾರುತಗಳಿಗೆ ಸ್ತ್ರೀಲಿಂಗವನ್ನೇ ಬಳಸಲಾಗುತ್ತಿತ್ತು. .ಮಹಿಳೆ ಎಂದರೆ ಹೇಗೋ ಜೀವನದಲ್ಲಿ ಪ್ರವೇಶಿಸಿ ನಂತರ ಆಸ್ತಿ, ದುಡ್ಡು ಎಲ್ಲಾ ಕೊಂಡೊಯ್ಯುವವಳು ಎಂಬ ತಮಾಷೆ, ವ್ಯಂಗ್ಯ ಮತ್ತು ತಿರಸ್ಕಾರ. ಮೇಲಿನ ಅಭಿಪ್ರಾಯಕ್ಕೆ ವಿರುದ್ಧವಾಗಿ ಕೆಲವು ಹಿರಿಯ ನಾವಿಕರು, “ಚಂಡಮಾರುತ ಎಂದೊಡನೆ ಜನರು ಹೆದರಿ ಕಂಗಾಲಾಗುತ್ತಾರೆ. ಮಹಿಳೆಯರ ಹೆಸರಿಟ್ಟರೆ ತಾಯಿಯ ನೆನಪಾಗುತ್ತದೆ. ತಾಯಿ ಎಂದರೆ ಕರುಣಾಮಯಿ, ಅಂಥ ತೊಂದರೆ ಇಲ್ಲ. ಜನ ಹೆದರದಿರಲಿ ಎನ್ನುವ ಕಾರಣಕ್ಕೆ ಹೀಗೆ ಇಡಲಾಗುತ್ತಿತ್ತು’ ಎನ್ನುತ್ತಾರೆ. ಅರವತ್ತರ ದಶಕದಲ್ಲಿ ಮಹಿಳಾ ಸಮಾನತೆಯ ಕೂಗು ಬಲವಾದಾಗ ಚಂಡಮಾರುತಗಳ ಹೆಸರೂ ಚರ್ಚೆಗೆ ಬಂತು. ಸಾಕಷ್ಟು ಜನ ಪತ್ರ ಬರೆದು, ಮನವಿ ಸಲ್ಲಿಸಿದರೂ ಹವಾವಾನ ತಜ್ಞರು ಮಹಿಳೆಯರ ಹೆಸರನ್ನೇ ಇಡಲು ಬಯಸುತ್ತಾರೆ. ಪುರುಷರ ಹೆಸರು ಇಡಬೇಕೆಂಬುದು ಕೆಲವರ ವೈಯಕ್ತಿಕ ಅಭಿಪ್ರಾಯ. ಹಾಗೆ ನೋಡಿದರೆ, ತುಂಬಾ ಮಹಿಳೆಯರು ತಮ್ಮ ಹೆಸರನ್ನು ಚಂಡಮಾರುತಗಳಿಗೆ ಇಡಬೇಕು ಎಂದು ಕೋರುತ್ತಾರೆ ಎಂದು ರಾಷ್ಟ್ರೀಯ ಚಂಡಮಾರುತ ಸಮಿತಿಯ ಅರ್ನಾಲ್ಡ್ ವಾದಿಸಿದ್ದರು. ಈ ಹೋರಾಟ ಅಲ್ಲಿಗೇ ನಿಲ್ಲಲಿಲ್ಲ. ಸತತ ಪ್ರಯತ್ನದ ಫಲವಾಗಿ 1978ರಲ್ಲಿ ಮೊದಲ ಬಾರಿಗೆ ಪುರುಷರ ಹೆಸರನ್ನು ಚಂಡಮಾರುತಕ್ಕೆ ಇಡಲು ಆರಂಭಿಸಿದರು. “ಬಾಬ್’ ಎನ್ನುವುದು ಮೊದಲ ಪುರುಷ ಹೆಸರಿನ ಚಂಡಮಾರುತ. ಕಡೆಗೂ ಹೆಸರಿನಲ್ಲಾದರೂ ಸಮಾನತೆ ದೊರೆಯಿತು! ಕೊನೆಯಾದ ಕತ್ರಿನಾ
ಚಂಡಮಾರುತಗಳ ಹೆಸರಿಗೂ ನಿವೃತ್ತಿ ಎಂಬುದಿದೆ. ಅಪಾರ ನಷ್ಟ ಉಂಟುಮಾಡಿದ, ಜಾಗತಿಕ ಮಟ್ಟದಲ್ಲಿ ಕಳವಳ ಮೂಡಿಸಿದ ಚಂಡಮಾರುತಗಳ ಹೆಸರನ್ನು ಮತ್ತೆ ಬಳಸಲಾಗುವುದಿಲ್ಲ. ಆ ಹೆಸರನ್ನು ಮತ್ತೆ ಇಟ್ಟರೆ ಅದೇ ರೀತಿ ಮರುಕಳಿಸಬಹುದು ಎಂಬ ಶಂಕೆ, ಚರಿತ್ರೆಯಲ್ಲಿ ಅಪಾಯಕಾರಿ ಎಂದು ದಾಖಲಾಗಿದ್ದು ಮತ್ತೆ ಬೇಡ ಎಂಬ ಉದ್ದೇಶ ಹಾಗೂ ಮಡಿದವರಿಗೆ ಗೌರವ ಸಲ್ಲಿಸುವ ಉದ್ದೇಶ ಇದರ ಹಿಂದಿದೆ. ಉದಾಹರಣೆಗೆ 2005ರಲ್ಲಿ ಬಂದಿದ್ದ “ಕತ್ರಿನಾ’ ಹೆಸರನ್ನು ನಿವೃತ್ತಗೊಳಿಸಲಾಗಿದೆ. ಹಾಗೆಯೇ ಕತ್ರಿನಾ ಜನಪ್ರಿಯ ಹೆಸರಾಗಿದ್ದರೂ ಆ ವರ್ಷ ಜನಿಸಿದ ಮಕ್ಕಳಿಗೆ ಈ ಹೆಸರಿಟ್ಟವರು ತೀರಾ ಕಡಿಮೆ ಜನ! ರಾಕ್ಸಿ ಬೋಲ್ಟನ್
“ಕೆರೋಲ್, ಬೆಟ್ಸೆ , ಕತ್ರಿನಾ ಹೀಗೆ ಸುಮ್ಮನೇ ತಮ್ಮ ಹೆಸರನ್ನು ದುರಂತ-ಹಾನಿ ಉಂಟುಮಾಡುವ ಚಂಡಮಾರುತದೊಂದಿಗೆ ಬೆಸೆಯುವುದಕ್ಕೆ ಮಹಿಳೆಯರ ವಿರೋಧವಿದೆ’ ಎಂದು ಹವಾಮಾನ ತಜ್ಞರ ಏಕಪಕ್ಷೀಯ ಧೋರಣೆ ವಿರುದ್ಧ ಬಹಿರಂಗವಾಗಿ ಅರವತ್ತರ ದಶಕದಲ್ಲಿ ಅಸಮಾಧಾನ ವ್ಯಕ್ತಪಡಿಸಿದ ದಿಟ್ಟ ಮಹಿಳೆ ಅಮೆರಿಕೆಯ ಫ್ಲೋರಿಡಾದ ರಾಕ್ಸಿ ಬೋಲ್ಟನ್. ಈ ರೀತಿಯ ಹೆಸರುಗಳು ಮಹಿಳೆಯರ ಕುರಿತ ಅವಹೇಳನಕಾರಿ ಧೋರಣೆಯ ಪ್ರತಿಫಲನ. ಹಾಗಾಗಿ, ಇದು ಬದಲಾಗಬೇಕು. ಮಾತ್ರವಲ್ಲ ಹರಿಕೇನ್ ಶಬ್ದದಲ್ಲಿ ಇರುವ ಹರ್ (“ಹರ್’ ಅಂದರೆ “ಅವಳ’) ತೆಗೆದು ಹಿಮಿಕೇನ್ (ಹಿಮ್-ಅವನು) ಎಂದು ಹೆಸರಿಸಬೇಕೆಂದು ಆಕೆ ಒತ್ತಾಯಿಸಿದ್ದರು. “ಇಲ್ಲದಿದ್ದರೆ ಬೀದಿ, ಸೇತುವೆ ಮತ್ತು ಕಟ್ಟಡಗಳಿಗೆ ತಮ್ಮ ಹೆಸರಿಟ್ಟರೆ ಖುಷಿ ಪಡುವ ರಾಜಕಾರಣಿಗಳ ಹೆಸರನ್ನು ಈ ಚಂಡಮಾರುತಗಳಿಗೆ ಇಡಿ!’ ಎಂದೂ ಅವರು ಆಗ್ರಹಿಸಿದ್ದರು. ಆದರೆ, ಅದನ್ನು “ಬಾಲಿಶ’ ಎಂದು ಹವಾಮಾನ ಸಂಸ್ಥೆ ತಿರಸ್ಕರಿಸಿತ್ತು. ರಾಕ್ಸಿ ಹೋರಾಟ ಒಂದೂವರೆ ದಶಕದ ತನಕವೂ ಮುಂದುವರಿದಿತ್ತು. ಕೆ. ಎಸ್. ಚೈತ್ರಾ