Advertisement

ಬಿರುಸಿನ ಮತದಾನ: ಹಲವೆಡೆ ಕೈಕೊಟ್ಟ ಮತಯಂತ್ರಗಳು

11:35 PM Apr 23, 2019 | Team Udayavani |

ಕಾಸರಗೋಡು: ತ್ರಿಕೋನ ಸ್ಪರ್ಧೆಯ ಕಣವಾಗಿರುವ ಕಾಸರಗೋಡು ಲೋಕಸಭಾ ಕ್ಷೇತ್ರದ ಬಹುತೇಕ ಮತಗಟ್ಟೆಗಳಲ್ಲಿ ಬಿರುಸಿನ ಮತದಾನ ನಡೆಯಿತು. ಬಹುತೇಕ ಬೂತ್‌ಗಳಲ್ಲಿ ಬೆಳಗ್ಗಿನಿಂದಲೇ ಮಹಿಳೆಯರ ಉದ್ದನೆಯ ಸರದಿ ಕಂಡು ಬಂತು. ಮತದಾನ ಆರಂಭಗೊಂಡು ಮೊದಲ ಎರಡು ತಾಸಿನೊಳಗೆ ಕಾಸರಗೋಡು ಲೋಕಸಭಾ ಕ್ಷೇತ್ರದಲ್ಲಿ ಶೇ. 11.7ರಷ್ಟು ಮತದಾನವಾಗಿದೆ. ಅದೇ ಸಂದರ್ಭದಲ್ಲಿ ರಾಜ್ಯದಲ್ಲಿ ಶೇ. 12.40ರಷ್ಟು ಮತದಾನವಾಗಿದೆ. ಮಧ್ಯಾಹ್ನದವರೆಗಿನ ಮತದಾನ ಬಹುತೇಕ ಶಾಂತಿಯುತವಾಗಿತ್ತು.

Advertisement

ಕೈಕೊಟ್ಟ ಯಂತ್ರಗಳು
ಮತದಾನ ಆರಂಭಗೊಳ್ಳುತ್ತಿದ್ದಂತೆ ಕೆಲವೆಡೆ ಮತಯಂತ್ರಗಳು ಹಾಗೂ ವಿವಿ ಪ್ಯಾಟ್‌ ಯಂತ್ರ ಕೈಕೊಟ್ಟಿದ್ದರಿಂದ ಕೆಲವೆಡೆ ಮತದಾನ ವಿಳಂಬವಾಗಿ ಆರಂಭಗೊಂಡಿತು.

ಇಚ್ಲಂಗೋಡು ಮಲಂದೂರು ಶಾಲೆಯ 93ನೇ ಮತಗಟ್ಟೆಯಲ್ಲಿ ಮತಯಂತ್ರ ಸ್ತಬ್ದಗೊಂಡಿತು. ಅದೇ ರೀತಿ ಕುಂಬಳೆ ಜಿಎಸ್‌ಬಿಎಸ್‌ನ 142ನೇ ಮತಗಟ್ಟೆಯಲ್ಲಿ ವಿವಿ ಪ್ಯಾಟ್‌ ಯಂತ್ರ ಕೈಕೊಟ್ಟಿದೆ. ಕುಂಬಳೆ ಜಿಎಚ್‌ಎಸ್‌ಎಸ್‌ನ 138ನೇ ಮತಗಟ್ಟೆಯಲ್ಲಿ ಮತಯಂತ್ರ ಮೊಟಕುಗೊಂಡ ಹಿನ್ನೆಲೆಯಲ್ಲಿ ವಿಳಂಬವಾಗಿ ಮತದಾನ ಮುಂದುವರಿಯಿತು.

ಬೆಳಗ್ಗಿನಿಂದಲೇ ಮತದಾನದ ಸರದಿ ಕಂಡು ಬಂತು. ಆದರೆ ಯಂತ್ರಗಳು ಕೈಕೊಟ್ಟಿರುವುದರಿಂದ ಮತದಾರರು ಮಾತ್ರವಲ್ಲದೆ ಅಧಿಕಾರಿಗಳೂ ತೀವ್ರ ಗೊಂದಲದಲ್ಲಿ ಸಿಲುಕಿದರು. ಮಾನ್ಯದ 71ನೇ ಮತಗಟ್ಟೆ, ಮುಳ್ಳೇರಿಯದ 174ನೇ ಮತಗಟ್ಟೆ, ಆದೂರಿನ 180ನೇ ಮತಗಟ್ಟೆ, ಪಣಿಯದ 184ನೇ ಮತಗಟ್ಟೆ, ಮುಳ್ಳೇರಿಯದ 187ನೇ ಮತಗಟ್ಟೆ, ಮಾರ್ಪನಡ್ಕದ 80 ನೇ ಮತಗಟ್ಟೆ ಸಹಿತ ನೀರ್ಚಾಲು, ಬದಿಯಡ್ಕ ಪ್ರದೇಶ ವ್ಯಾಪ್ತಿಯಲ್ಲಿ ಒಟ್ಟು 15ರಷ್ಟು ಮತಗಟ್ಟೆಗಳಲ್ಲಿ ಮತಯಂತ್ರ ಕೈಕೊಟ್ಟಿತು. ಬೆಳಗ್ಗೆ ಮತದಾನ ಆರಂಭಗೊಳ್ಳುವ ಹಂತದಲ್ಲೇ ಯಂತ್ರಗಳು ಮೊಟಕುಗೊಂಡಿದ್ದು, ಇದರಿಂದ ಅರ್ಧ ಗಂಟೆಯಿಂದ ಒಂದು ಗಂಟೆ ತನಕ ಮತದಾನ ವಿಳಂಬವಾಗಿ ನಡೆಯಿತು. ಅದೇ ರೀತಿ ಬದಿಯಡ್ಕ ಮತಗಟ್ಟೆಯೊಂದರಲ್ಲಿ ಅಭ್ಯರ್ಥಿಯೋರ್ವರ ಚಿಹ್ನೆ ಮುಂದಿನ ಗುಂಡಿಗೆಯನ್ನು ಅದುಮಲು ಸಾಧ್ಯವಾಗಿರಲಿಲ್ಲ ಎಂಬ ಆರೋಪವೂ ಕೇಳಿ ಬಂದಿತ್ತು. ಬಳಿಕ ಆ ಯಂತ್ರವನ್ನು ದುರಸ್ತಿಗೊಳಿಸಲಾಯಿತು.

ಉದುಮ ವಿಧಾನಸಭಾ ಕ್ಷೇತ್ರದ 70 ನೇ ಮತಗಟ್ಟೆ ಅಡೂರಿನಲ್ಲಿ ಯಂತ್ರ ಕೈಕೊಟ್ಟ ಹಿನ್ನೆಲೆಯಲ್ಲಿ ಮತದಾನಕ್ಕೆ ಒಂದು ಗಂಟೆ ವಿಳಂಬವಾಯಿತು. ಮಂಗಲ್ಪಾಡಿ ಪಂಚಾಯತ್‌ನ ಹಲವು ಕಡೆಗಳಲ್ಲಿ ಮತಯಂತ್ರ ಹಾನಿಯಾಗಿ ಮತದಾನ ಸುಮಾರು ಒಂದು ಗಂಟೆ ಕಾಲ ವಿಬಂಬವಾಯಿತು. ಕೆಲವೆಡೆ ಮತದಾನ ಆರಂಭಕ್ಕೂ ಮುನ್ನ ಟ್ರಯಲ್‌ ನೋಡುವಾಗಲೇ ಯಂತ್ರ ಹಾನಿಯಾದ ಬಗ್ಗೆ ತಿಳಿದು ಬಂತು.

Advertisement

ಉಪ್ಪಳ 3 ಬೂತ್‌ಗಳಲ್ಲಿ ವಿಳಂಬ
ಉಪ್ಪಳ ಜಿಎಚ್‌ಎಸ್‌ಎಸ್‌ನ 3 ಬೂತ್‌ಗಳಲ್ಲಿ 69ನೇ ನಂಬ್ರದ ಬೂತ್‌ನಲ್ಲಿ ಯಂತ್ರ ಹಾಳಾಗಿ ಮತದಾನ ವಿಳಂಬವಾಗಿ ಆರಂಭಗೊಂಡಿತು. ಬಳಿಕ ಅಧಿಕಾರಿಗಳು ತಲುಪಿ ದುರಸ್ತಿ ನಡೆಸಿದ್ದಾರೆ. ಇಲ್ಲಿ ಬೆಳಗ್ಗಿನಿಂದಲೇ ಭಾರೀ ಸರದಿ ಸಾಲು ಕಂಡು ಬಂತು. ಮೂರು ಬೂತ್‌ಗಳಿರುವ ಕುರ್ಚಿಪಳ್ಳ ಹಿಂದೂಸ್ಥಾನಿ ಶಾಲೆಯಲ್ಲಿ 79ನೇ ನಂಬ್ರದ ಬೂತ್‌ನಲ್ಲಿ ಮತಯಂತ್ರ ಹಾನಿಯಾಗಿದೆ. ಇದರಿಂದಾಗಿ ಸಮಯಕ್ಕೆ ಸರಿಯಾಗಿ ಮತದಾನ ಆರಂಭಗೊಂಡಿಲ್ಲ.

ಇದೇ ರೀತಿ ಮಂಗಲ್ಪಾಡಿ ಹೈಯರ್‌ ಸೆಕೆಂಡರಿ ಶಾಲೆಯಲ್ಲಿ, ಮಂಗಲ್ಪಾಡಿ ಜಿಎಚ್‌ಎಸ್‌ಎಸ್‌ನಲ್ಲೂ ಒಂದೊಂದು ಬೂತ್‌ನಲ್ಲಿ ಮತಯಂತ್ರ ಹಾನಿಯಾಗಿದೆ. ಹೈಯರ್‌ ಸೆಕೆಂಡರಿ ಶಾಲೆಯ 85ನೇ ನಂಬ್ರ ಬೂತ್‌ನಲ್ಲಿ ಮತದಾನ ಆರಂಭಕ್ಕೆ ಮುನ್ನ ಮತಯಂತ್ರ ಹಾನಿಯಾಗಿದೆ.

ಜಿಎಚ್‌ಎಸ್‌ಎಸ್‌ನ 90 ನೇ ನಂಬ್ರ ಬೂತ್‌ನಲ್ಲಿ ಆರಂಭದಲ್ಲಿ ಮತಯಂತ್ರ ಕೈಕೊಟ್ಟರೆ ಮತ್ತೆ ಸರಿಪಡಿಸಲಾಗಿದೆ. ಆದರೆ 91 ನೇ ನಂಬ್ರ ಬೂತ್‌ನಲ್ಲಿ ಮತದಾನ ವಿಳಂಬವಾಯಿತು. ಚೆರುಗೋಳಿ ಜಿಡಬ್ಲ್ಯುಎಲ್‌ಪಿ ಶಾಲೆಯಲ್ಲಿ ಎರಡು ಬೂತ್‌ನಲ್ಲಿ 88ನೇ ಬೂತ್‌ನಲ್ಲಿ ಮತದಾನ ಆರಂಭಗೊಂಡು ಕೆಲವೇ ಹೊತ್ತಿನಲ್ಲೇ ಮತಯಂತ್ರ ಕೈಕೊಟ್ಟಿತು. ಬಳಿಕ ಅದನ್ನು ಸರಿಪಡಿಸಲಾದರೂ ಕೆಲವು ಹೊತ್ತಿನ ಬಳಿಕ ಮತದಾನ ಆರಂಭಗೊಂಡಿತು.

ಕುಳೂರು ಜಿಎಲ್‌ಪಿ ಶಾಲೆಯಲ್ಲಿ 55ನೇ ನಂಬ್ರದ ಬೂತ್‌ನ ಮತಯಂತ್ರದಲ್ಲಿ ಐಕ್ಯರಂಗದ ಅಭ್ಯರ್ಥಿಯ ಬಟನ್‌ ಹಾನಿಯಾಗಿದೆ ಎಂದು ದೂರಲಾಗಿದೆ. ಈ ಬಗ್ಗೆ ಕರ್ಷಕ ಕಾಂಗ್ರೆಸ್‌ ಜಿಲ್ಲಾ ಕಾರ್ಯದರ್ಶಿ ಕಂಚಿಲ ಮೊಹಮ್ಮದ್‌ ಸಂಬಂಧಪಟ್ಟ ಅಧಿಕಾರಿಗಳಿಗೆ ದೂರು ನೀಡಿದ್ದಾರೆ. ಇದೇ ರೀತಿ ಪೈವಳಿಕೆ ಪಂಚಾಯತ್‌ನ ಚೇವಾರು ಶ್ರೀ ಶಾರದಾ ಎಯುಪಿ ಶಾಲೆಯ 114ನೇ ನಂಬ್ರ ಬೂತ್‌ನಲ್ಲೂ ಮತಯಂತ್ರ ಹಾಳಾಗಿದೆ. ಬಳಿಕ ದುರಸ್ತಿಗೊಳಿಸಲಾಯಿತು. ಬಂಗ್ರಮಂಜೇಶ್ವರ ಶಾಲೆಯಲ್ಲಿ ಮತಯಂತ್ರ ಹಾನಿಯಾದ ಕಾರಣ ಮತದಾನ ವಿಳಂಬಗೊಂಡಿದೆ. ಬೆಳಗ್ಗೆ 8.30ಕ್ಕೆ ಯಂತ್ರ ಕೈಕೊಟ್ಟಿದ್ದು ಆ ಬಳಿಕ ಅಧಿಕಾರಿಗಳು ಬದಲಿ ವ್ಯವಸ್ಥೆ ಮಾಡಿದರು.

ಕುಸಿದು ಬಿದ್ದು ಮಹಿಳೆ ಸಾವು
ಕಾಸರಗೋಡು: ಮತ ಚಲಾಯಿಸಲು ಸರದಿಯಲ್ಲಿ ನಿಂತಿದ್ದ ಮಹಿಳೆ ಕುಸಿದು ಬಿದ್ದು ಸಾವಿಗೀಡಾದ ಘಟನೆ ಕಣ್ಣೂರು ಜಿಲ್ಲೆಯ ಚೊಕ್ಲಿ ರಾಮವಿಲಾಸಂ ಹೈಸ್ಕೂಲ್‌ನಲ್ಲಿ ನಡೆದಿದೆ. ಮತ ಚಲಾಯಿಸಲು ಬಂದಿದ್ದ 64ರ ಹರೆಯದ ಮಹಿಳೆ ಸಾವಿಗೀಡಾದರು.

Advertisement

Udayavani is now on Telegram. Click here to join our channel and stay updated with the latest news.

Next