ನವದೆಹಲಿ:ಬರೋಬ್ಬರಿ 185 ಕಿಲೋ ಮೀಟರ್ ವೇಗದಲ್ಲಿ ಬೀಸಲಿರುವ ಆಂಫಾನ್ ಚಂಡಮಾರುತ ಬುಧವಾರ 4ಗಂಟೆ ಅಥವಾ 6ಗಂಟೆ ನಡುವೆ ಪಶ್ಚಿಮಬಂಗಾಳ ಕರಾವಳಿ ತೀರಕ್ಕೆ ಅಪ್ಪಳಿಸಲಿದ್ದು, ಒಡಿಶಾ ಮತ್ತು ಪಶ್ಚಿಮಬಂಗಾಳ ಕರಾವಳಿ ತೀರ ಪ್ರದೇಶದಲ್ಲಿ ಭಾರೀ ಗಾಳಿ, ಮಳೆ ಸುರಿಯಲಿದೆ ಎಂದು ತಿಳಿಸಿದೆ.
ಪಶ್ಚಿಮಬಂಗಾಳದ ದಿಘಾ ಮತ್ತು ಬಾಂಗ್ಲಾದೇಶದ ಹತಿಯಾ ನಡುವಣ ಪ್ರದೇಶದಲ್ಲಿ ಚಂಡಮಾರುತ ತೀರವನ್ನು ಪ್ರವೇಶಿಸಲಿದೆ ಎಂದು ಹವಾಮಾನ ಇಲಾಖೆ ಹೇಳಿದೆ.
ಗಂಟೆಗೆ 185 ಕಿಲೋ ಮೀಟರ್ ವೇಗದಲ್ಲಿ ಚಂಡಮಾರುತ ಬೀಸುವುದರ ಜತೆಗೆ ಪಶ್ಚಿಮಬಂಗಾಳದ ಕರಾವಳಿ ಪ್ರದೇಶದಲ್ಲಿ ಸಮುದ್ರದ ಅಲೆಗಳು 5 ಮೀಟರ್ ನಷ್ಟು ಎತ್ತರಕ್ಕೆ ಮೇಲೇಳುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ಎಚ್ಚರಿಸಿದೆ.
ಒಂದೆಡೆ ಕೋವಿಡ್ ವೈರಸ್ ಹಾಗೂ ಮತ್ತೊಂದೆಡೆ ಚಂಡಮಾರುತದ ಭೀತಿ. ಎರಡನ್ನೂ ಒಟ್ಟಾಗಿ ಎದುರಿಸುವುದು ತುಂಬಾ ದೊಡ್ಡ ಸವಾಲಿನ ಕೆಲಸವಾಗಿದೆ ಎಂದು ಎನ್ ಡಿಆರ್ ಎಫ್ ಮುಖ್ಯಸ್ಥ ಎಸ್ ಎನ್ ಪ್ರಧಾನ್ ತಿಳಿಸಿದ್ದಾರೆ.
ಆಂಫಾನ್ ಸೂಪರ್ ಸೈಕ್ಲೋನ್ ಭೀತಿಯ ಹಿನ್ನೆಲೆಯಲ್ಲಿ ಮುಂಜಾಗ್ರತಾ ಕ್ರಮವಾಗಿ ಒಡಿಶಾದಲ್ಲಿ 3 ಲಕ್ಷ ಜನರನ್ನು ಹಾಗೂ ಬಂಗಾಳದಲ್ಲಿ ಮೂರು ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷಿತ ಸ್ಥಳಕ್ಕೆ ಸ್ಥಳಾಂತರಿಸಲಾಗಿದೆ. ಬಾಂಗ್ಲಾದೇಶದಲ್ಲಿ ಒಟ್ಟು 20 ಲಕ್ಷಕ್ಕೂ ಅಧಿಕ ಜನರನ್ನು ಸುರಕ್ಷತೆಯ ದೃಷ್ಟಿಯಿಂದ ಸ್ಥಳಾಂತರಿಸಲಾಗಿತ್ತು ಎಂದು ತಿಳಿಸಿದ್ದಾರೆ.