Advertisement
ಪಟ್ಟಣದ ಹೊರವಲಯದ ಕೆಂಚೇಗೌಡನಕೊಪ್ಪಲು ಗ್ರಾಮದ ಲೋಕೇಶ್ ಅವರಿಗೆ ಸೇರಿದ ನಾಟಿಕೋಳಿ ಫಾರಂನ ಕಟ್ಟಡ ಬಿರುಗಾಳಿ ಮಳೆಗೆ ಸಿಲುಕಿ ಸಂಪೂರ್ಣ ನೆಲಕಚ್ಚಿದೆ. ಈ ವೇಳೆ ಫಾರಂನಲ್ಲಿದ್ದ ಸಾವಿರಕ್ಕೂ ಹೆಚ್ಚು ನಾಟಿ ಕೋಳಿ ಮರಿಗಳು ಮೃತಪಟ್ಟಿವೆ. ಇದರಿಂದಾಗಿ 3 ಲಕ್ಷ ರೂ.ಗೂ ಅಧಿಕ ನಷ್ಟ ಉಂಟಾಗಿದೆ ಎನ್ನಲಾಗಿದೆ.
Related Articles
Advertisement
ತಪ್ಪಿದ ಭಾರೀ ಅನಾಹುತ: ಹಾಗೆಯೇ ಬಿಂಡಿಗನವಿಲೆ-ಕದಬಹಳ್ಳಿ ಮುಖ್ಯ ರಸ್ತೆಯ ಮಾಯಣ್ಣಗೌಡನಕೊಪ್ಪಲು ಗೇಟ್ ಬಳಿ ಬೃಹತ್ ಆಲದ ಮರವೊಂದು ಬುಧವಾರ ಬೆಳಗ್ಗೆ ರಸ್ತೆಗೆ ಅಡ್ಡಲಾಗಿ ವಿದ್ಯುತ್ ಕಂಬದ ಮೇಲೆ ಬೀಳುವ ಸಮಯದಲ್ಲಿ ಅದೇ ಮಾರ್ಗದಲ್ಲಿ ಬಂದ ಬಸ್ ಕ್ಷಣಾರ್ಧದಲ್ಲಿ ಮುಂದೆ ಸಾಗಿದ್ದರಿಂದ ಸಂಭವಿಸಬಹುದಾಗಿದ್ದ ಭಾರೀ ಅನಾಹುತವೊಂದು ತಪ್ಪಿದಂತಾಗಿದೆ.
ಮರಗಳ ತೆರವು: ತಾಲೂಕಿನ ಹಲವು ಗ್ರಾಮಗಳಲ್ಲಿ ರೈತರ ತೆಂಗಿನ ಮರಗಳು ಧರೆಗುರುಳಿ ಬಿದ್ದರೆ, ರಸ್ತೆ ಬದಿಯಲ್ಲಿ ಒಣಗಿ ನಿಂತಿದ್ದ ಮರಗಳು ಬಿರುಗಾಳಿಗೆ ಸಿಲುಕಿ ನೆಲಕಚ್ಚಿವೆ. ಇದರಿಂದಾಗಿ ರಸ್ತೆ ಸಂಚಾರಕ್ಕೆ ಕೆಲ ಹೊತ್ತು ಅಡ್ಡಿಯಾದ ಹಿನ್ನೆಲೆಯಲ್ಲಿ ತಕ್ಷಣ ಕಾರ್ಯಪ್ರವೃತ್ತರಾದ ಸ್ಥಳೀಯರು ಅರಣ್ಯ ಇಲಾಖೆ ಅಧಿಕಾರಿಗಳಿಗೆ ಮಾಹಿತಿ ನೀಡಿ ರಸ್ತೆಗೆ ಅಡ್ಡಲಾಗಿ ಬಿದ್ದಿದ್ದ ಮರಗಳನ್ನು ತೆರವುಗೊಳಿಸಿದ್ದಾರೆ.
ಕಗ್ಗತ್ತಲಲ್ಲಿ ಮುಳುಗಿದ ಗ್ರಾಮಗಳು:ತಾಲೂಕಿನ ವಿವಿಧ ಗ್ರಾಮಗಳಲ್ಲಿ ನೂರಕ್ಕೂ ಹೆಚ್ಚು ವಿದ್ಯುತ್ ಕಂಬಗಳು ನೆಲಕ್ಕುರುಳಿ ಬಿದ್ದಿದ್ದು, ಈ ಪ್ರದೇಶದಲ್ಲಿ ಮಂಗಳವಾರ ಇಡೀ ರಾತ್ರಿ ವಿದ್ಯುತ್ ಇಲ್ಲದೆ ಹಳ್ಳಿಗಳು ಕಗ್ಗತ್ತಲಲ್ಲಿ ಮುಳುಗಿದ್ದವು.