Advertisement

ಶಿರಾಡಿ ಪರಿಸರದಲ್ಲಿ ಬಿರುಗಾಳಿ; ನೂರಾರು ಅಡಿಕೆ ಮರ ನೆಲಸಮ

11:47 PM Jun 09, 2024 | Team Udayavani |

ಉಪ್ಪಿನಂಗಡಿ: ಶಿರಾಡಿ ಗ್ರಾಮದ ಕಡೆಂಬುರ ಪರಿಸರದಲ್ಲಿ ಬಿರುಗಾಳಿಯಿಂದಾಗಿ ಕೃಷಿ ಬೆಳೆಗಳಿಗೆ ಹಾನಿಯಾಗಿದೆ.

Advertisement

ಕಡೆಂಬುರ ನಿವಾಸಿ ವೆಂಕಟರಮಣ ಗೌಡ ಅವರ ತೋಟದಲ್ಲಿ ಬಿರುಗಾಳಿ ಭಾರೀ ಹಾನಿಯನ್ನುಂಟು ಮಾಡಿದ್ದು, 100ಕ್ಕೂ ಮಿಕ್ಕಿದ ಅಡಿಕೆ ಮರಗಳು ಮುರಿದು ಬಿದ್ದಿವೆ. ಅಡಿಕೆ ಒಣಗಿಸಲೆಂದು ಮಾಡಿರುವ ಸೋಲಾರ್‌ ಗೂಡು ಸಂಪೂರ್ಣ ಧ್ವಂಸವಾಗಿದೆ. 1 ಲಕ್ಷ ರೂಪಾಯಿಗೂ ಅಧಿಕ ನಷ್ಟ ಅಂದಾಜಿಸಲಾಗಿದೆ.

ಪರಿಸರದ ಹಲವೆಡೆ ಇದೇ ರೀತಿ ಹಾನಿಯಾಗಿದ್ದು ಸ್ಥಳಗಳಿಗೆ ಕಂದಾಯ ಇಲಾಖಾಧಿಕಾರಿಗಳು ಭೇಟಿ ನೀಡಿ ನಷ್ಟದ ಮಾಹಿತಿ ಕಲೆಹಾಕಿದ್ದಾರೆ.

ರಸ್ತೆಗೆ ಉರುಳಿದ ಮರ
ಬೆಳ್ತಂಗಡಿ: ತಾಲೂಕಿನೆಲ್ಲೆಡೆ ರವಿವಾರವೂ ಉತ್ತಮ ಮಳೆಯಾಗಿದೆ. ಶನಿವಾರ ಕೊಯ್ಯೂರು ಪಿಜಕಳದಲ್ಲಿ ರಸ್ತೆಗೆ ಅಡ್ಡಲಾಗಿ ಮರ ಬಿದ್ದ ಪರಿಣಾಮ ವಾಹನ ಸಂಚಾರಕ್ಕೆ ಅಡಚಣೆಯುಂಟಾಯಿತು. ತತ್‌ಕ್ಷಣ ಸ್ಥಳೀಯರ ಸಹಕಾರದೊಂದಿಗೆ ತೆರವು ಮಾಡಲಾಯಿತು.

ಬರೆ ಕುಸಿದು ಮನೆಗೆ ಅಪಾಯ
ಬಂಟ್ವಾಳ: ನಿರಂತರ ಮಳೆಯ ಪರಿಣಾಮ ನರಿ ಕೊಂಬು ಗ್ರಾಮದ ನೆಹರೂ ನಗರದಲ್ಲಿ ಬರೆ ಕುಸಿದು ರಾಜು ಕೋಟ್ಯಾನ್‌ ಅವರ ಮನೆ ಅಪಾಯಕ್ಕೆ ಸಿಲುಕಿದೆ.

Advertisement

ಬರೆಯೊಂದಿಗೆ ಮನೆಯ ಆವರಣ ಗೋಡೆಯೂ ಕೂಡ ಕುಸಿ ದಿದ್ದು, ಇನ್ನಷ್ಟು ಕುಸಿದರೆ ಮನೆ ಕೂಡ ಅಪಾಯಕ್ಕೆ ಸಿಲುಕುವ ಸಾಧ್ಯತೆ ಇದೆ ಎನ್ನಲಾಗಿದೆ. ನರಿಕೊಂಬು ಗ್ರಾಮ ಆಡಳಿತ ಅಧಿಕಾರಿಗಳಿಗೆ ಮಾಹಿತಿ ನೀಡಲಾಗಿದ್ದು, ಗ್ರಾಮ ಸಹಾಯಕರು ಭೇಟಿ ನೀಡಿ ಪರಿಶೀಲಿಸಿದ್ದಾರೆ.ಬಂಟ್ವಾಳ ತಾಲೂಕಿನಾದ್ಯಂತ ರವಿವಾರವೂ ಉತ್ತಮ ಮಳೆಯಾಗಿದೆ.

ಎಂಟು ವಿದ್ಯುತ್‌ ಕಂಬಗಳಿಗೆ ಹಾನಿ
ಪುತ್ತೂರು: ತಾಲೂಕಿನಲ್ಲಿ ರವಿವಾರ ಸುರಿದ ಮಳೆಗೆ ಬಪ್ಪಳಿಗೆಯಲ್ಲಿ ರಸ್ತೆ ಬದಿಯ ಭಾರೀ ಗಾತ್ರದ ಮರವೊಂದು ಧರೆಗುರುಳಿ 8 ವಿದ್ಯುತ್‌ ಕಂಬಗಳು ಹಾನಿಗೀಡಾಗಿವೆ.

ಶಾಸಕ ಅಶೋಕ್‌ ಕುಮಾರ್‌ ರೈ ಸ್ಥಳ ಪರಿಶೀಲನೆ ನಡೆಸಿದರು. ಮೆಸ್ಕಾಂ ಮತ್ತು ಅರಣ್ಯ ಅಧಿಕಾರಿಗಳನ್ನು ಕರೆಸಿ ರಸ್ತೆ ಬದಿಯಲ್ಲಿರುವ ಅಪಾಯಕಾರಿ ಮರಗಳನ್ನು ತೆರವು ಮಾಡುವಂತೆ ಸೂಚಿಸಿದರು.

ಲಾೖಲ: ರಸ್ತೆ ಬದಿಯ ತಡೆಗೋಡೆ ಕುಸಿತ
ಬೆಳ್ತಂಗಡಿ: ತಾಲೂಕಿನಾದ್ಯಂತ ರವಿವಾರ ಸಂಜೆ ಬಳಿಕ ಉತ್ತಮ ಮಳೆಯಾಗಿದ್ದು ಲಾೖಲ ಗ್ರಾಮದ ಬಜಕ್ರೆಸಾಲು ಎಂಬಲ್ಲಿ ಲಾೖಲ – ಮುಂಡೂರು ಸಡಕ್‌ ರಸ್ತೆಯ ಬದಿ ಕಟ್ಟಿದ್ದ ತಡೆಗೋಡೆ ಕುಸಿದು ವಾಹನ ಸಂಚಾರಕ್ಕೆ ಅಡಚಣೆಯಾಗಿದೆ. ಸ್ಥಳೀಯರು ರಸ್ತೆಯಿಂದ ಕಲ್ಲನ್ನು ಬದಿಗೆ ಸರಿಸಿ ವಾಹನ ಸಂಚಾರಕ್ಕೆ ಅನುವು ಮಾಡಿ ಕೊಟ್ಟರು.

ಬಿಳಿನೆಲೆ: ರಸ್ತೆಗೆ ಉರುಳಿದ ಮರ
ಸುಬ್ರಹ್ಮಣ್ಯ/ಸುಳ್ಯ: ಭಾರೀ ಗಾಳಿ – ಮಳೆಯಿಂದಾಗಿ ಉಪ್ಪಿನಂಗಡಿ-ಕಡಬ-ಸುಬ್ರಹ್ಮಣ್ಯ ಹೆದ್ದಾರಿಯ ನೆಟ್ಟಣ-ಸುಂಕದಕಟ್ಟೆ ನಡುವೆ ಬಿಳಿನೆಲೆ ಸಮೀಪ ಶನಿವಾರ ಅಪರಾಹ್ನ ಹಾಲುಮಡ್ಡಿ ಮರ ರಸ್ತೆಗೆ ಬಿದ್ದು 1 ಗಂಟೆಗೂ ಅಧಿಕ ಸಮಯ ರಸ್ತೆ ತಡೆ ಉಂಟಾಯಿತು. ನಾಲ್ಕು ವಿದ್ಯುತ್‌ ಕಂಬಗಳು ಮುರಿದಿವೆ.

ರವಿವಾರ ಬೆಳಗ್ಗೆ ಕಡಬ ತಾಲೂಕಿನ ನೂಜಿಬಾಳ್ತಿಲ ಗ್ರಾಮದ ಬದಿಬಾಗಿಲು ಸಮೀಪ ವಿಜಯಕುಮಾರಿ ಅವರ ಮನೆಗೆ ರಬ್ಬರ್‌ ಮರ ಬಿದ್ದಿದೆ. ಮನೆ ಮಂದಿಗೆ ಯಾವುದೇ ಅಪಾಯ ಸಂಭವಿಸಿಲ್ಲ.

Advertisement

Udayavani is now on Telegram. Click here to join our channel and stay updated with the latest news.

Next