ಆಕಾಶದಲ್ಲಿ ಹಾರುತ್ತಲೇ ಬೇಟೆಯನ್ನು ಗುರುತಿಸಿ ಬೇಟೆಯಾಡಲು ದೊಡ್ಡ ಮಿಂಚುಳ್ಳಿಗೆ ಬರುವುದಿಲ್ಲ. ತೇಲುತ್ತಿರುವ ಮೀನುಗಳನ್ನು ಸಮೀಪದಿಂದ ಗಮನಿಸಿ, ಅವುಗಳನ್ನು ಗಬಕ್ಕನೆ ಹಿಡಿಯುವುದು ಇದರ ಬೇಟೆಯ ವೈಖರಿ.
Stork Billed Kingfisher- -Halcyon capensis- R Pigeon +ಮೀನು ತಿನ್ನುವ ಹಕ್ಕಿಗಳಲ್ಲಿಯೇ ದೊಡ್ಡದಾದ ಹಕ್ಕಿ ಹೆಮ್ಮಿಂಚುಳ್ಳಿ. ಹಳ್ಳದ ದಂಡೆಯಲ್ಲಿರುವ ಮರಗಳ ಮೇಲೆ ಕುಳಿತು ನೀರಿನಲ್ಲಿ ಕಾಣುವ ಮೀನನ್ನು ಬೇಟೆಯಾಡುತ್ತದೆ. ಒಂಥರಾ ನಕ್ಕಂತೆ ಕೂಗುತ್ತದೆ . ಕುಳಿತಾಗ, ಕೂಗುತ್ತಿರುವಾಗ ಕೂಗಿಗೊಮ್ಮೆ ಬಾಲದ ಪುಕ್ಕ ಕುಣಿಸುತ್ತದೆ. ಕೆಂಪು ಕಂದುಬಣ್ಣದ ಹೊಳೆವ ಬಣ್ಣ ಹಾರುವಾಗ ಬಣ್ಣದ ಚುಂಚು ಹೊಳೆದಂತೆ ಕಾಣುತ್ತದೆ. ಹಾಗಾಗಿ ಇದಕ್ಕೆ ಮಿಂಚುಳ್ಳಿ ಎಂಬ ಹೆಸರು ಬಂದಿರಬಹುದು. ಇದು 38 ಸೆಂಮೀ ದೊಡ್ಡದು. ಇತರ ಮಿಂಚುಳ್ಳಿಗಳಂತೆ ಕೆಂಪು ಬಣ್ಣದ ಕಾಲಿನ ಹಿಂದಿನ ಬೆರಳು ದಪ್ಪ ಹಾಗೂ ಸಣ್ಣಗಿದೆ. ಮುಂದಿನ ಮೂರು ಬೆರಳುಗಳಲ್ಲಿ ಮಧ್ಯದ ಬೆರಳು ಉದ್ದವಾಗಿದೆ. ಬೆರಳುಗಳ ತುದಿಯಲ್ಲಿ ಕಂದು ಬಣ್ಣದ ಉಗುರುಗಳಿವೆ. ಇದರ ಕೆಂಪು ಬಣ್ಣದ ದೊಡ್ಡ ಚುಂಚು ಎದ್ದು ಕಾಣುತ್ತದೆ. ಇದನ್ನು ಗುರುತಿಸುವುದು ಸುಲಭ. ದೊಡ್ಡ ತಲೆ ಕೆಂಪು ಮಿಶ್ರಿತ ಕಂದುಬಣ್ಣ. ಎದೆಯ ಭಾಗದ ಬಿಳಿಬಣ್ಣ ಕುತ್ತಿಗೆ ಪಟ್ಟಿಯಂತೆ ಹಿಂದಿನಿಂದ ಕಾಣುತ್ತದೆ. ಕೆಂಪು ಕಂದು ಬಣ್ಣದ ಮಕಮಲ್ ಟೋಪಿ ತಲೆಯಲ್ಲಿರುವಂತೆ ಭಾಸವಾಗುವುದು.
ಇದಕ್ಕೆ ಉಳಿದ ಮಿಂಚುಳ್ಳಿಗಳಂತೆ ಆಕಾಶದಲ್ಲೆ ನಿಂತು ಹಾರುತ್ತಾ ಗುರಿ ಇಡಲು ಬರುವುದಿಲ್ಲ. ತೇಲುವ ಮೀನಿನ ಚಲನ ವಲನ ಗಮನಿಸಿ ಗುರಿ ಇಟ್ಟು ಮೀನು ಹಿಡಿಯುವಲ್ಲಿ ನಿಪುಣ ಹಕ್ಕಿ. ಇದೇ ಈ ಮಿಂಚುಳ್ಳಿಯ ಬೇಟೆ ವೈಖರಿ. ನೀಲಿ ವರ್ಣದ ಪುಕ್ಕ ಇದರ ಚೆಲುವನ್ನು ಹೆಚ್ಚಿಸಿದೆ. ಜಲಾವೃತ ಪ್ರದೇಶ, ಗಜನಿ ಪ್ರದೇಶ, ಕಾಡಿನಲ್ಲಿ ನೀರಿರುವ ಜಾಗದಲ್ಲಿ ಇದು ಟೆಲಿಫೋನ್ ತಂತಿ ಅಥವಾ ಮರದ ಟೊಂಗೆಗಳಲ್ಲಿ ಕುಳಿತು ಕೂಗುವುದರಿಂದ ಇದರ ಇರುವನ್ನು ಸುಲಭವಾಗಿ ತಿಳಿಯಬಹುದು. ಹಾರುವಾಗ ಬಣ್ಣದ ಬೀಸಣಿಗೆಯಂತೆ ಕಾಣುವುದನ್ನು ಸೆರೆ ಹಿಡಿಯುವುದು ಹಕ್ಕಿ ಪ್ರಿಯರಿಗೆ ಸವಾಲು.
ರಾಜಸ್ಥಾನ ಒಂದನ್ನು ಬಿಟ್ಟು ಭಾರತದ ತುಂಬೆಲ್ಲಾ ಇದೆ. ಬಾಂಗ್ಲಾದೇಶ. ಸಿಲೋನ್ ಬರ್ಮಾ ದೇಶದಲ್ಲೂ ಕಾಣಸಿಗುತ್ತದೆ. ಕುಮಟಾ, ಮೂರೂರು, ಹೊನ್ನಾವರ, ಸಿದ್ದಾಪುರ, ಯಲ್ಲಾಪುರ, ಮಾಸೂರು, ತದಡಿ, ಬಾಡ, ಹೆಗಡೆ, ಬಡಾಳ ಈ ಭಾಗದಲ್ಲಿ ಅಘನಾಶಿನಿ ನದಿಯ ಗುಂಟ ಕಾಣುತ್ತಲೇ ಇರುತ್ತದೆ. ಮೀನು, ಏಡಿ, ಕಪ್ಪೆ ಹಾವು, ಕೆಲವೊಮ್ಮೆ ಹಕ್ಕಿಗಳ ಮೊಟ್ಟೆ ಮರಿಗಳನ್ನೂ ಕಬಳಿಸಿಬಿಡುತ್ತದೆ. ಬೆಳ್ಳಕ್ಕಿ, ಐಬೀಸ್, ಬಕ, ಕೊಕ್ಕರೆಗಳಿರುವ ಭತ್ತದ ಗದ್ದೆಗಳ ಸಮೀಪದ ನೀರಿನ ಹರಿವಿನ ಹತ್ತಿರ ಇದು ಇದ್ದೇ ಇರುವುದು.
ಜನವರಿಯಿಂದ ಜುಲೈ ಇದು ಮರಿಮಾಡುವ ಸಮಯ. ನದಿಗಳ ಅಂಚಿನ ಗೋಡೆಗಳಲ್ಲಿ ಭೂಮಿಗೆ ಸಮಾನಾಂತರದಲ್ಲಿ ಬಿಲ ಕೊರೆದು ಗೂಡು ಮಾಡುತ್ತದೆ. ಹೆಣ್ಣು-ಮರಿಗಳಿಗೆ ಹೆಚ್ಚು ಸಮಯ ಆಹಾರ ಪೂರೈಸುತ್ತದೆ. ಗಂಡು ಮರಿಗಳ ರಕ್ಷಣೆಗೆ ದೂರದಲ್ಲಿ ಕುಳಿತು ಕಾವಲು ಕಾಯುವುದು. ಯಾರಾದರೂ ಗೂಡಿನ ಸಮೀಪ ಬಂದರೆ ಅಥವಾ ಇತರ ಪಕ್ಷಿಗಳು ಬಂದರೆ ತನ್ನ ಕೂಗಿನಿಂದ ಹೆಣ್ಣಿಗೆ ಸೂಚನೆ ನೀಡುತ್ತದೆ. ಹೀಗೆ, ಮರಿಗಳ ರಕ್ಷಣೆ ಜವಾಬ್ದಾರಿ ಗಂಡಿನದು. ಗಂಡು ಹೆಣ್ಣು ಎರಡೂ ಮರಿಗಳ ಪೋಷಣೆ ಪಾಲನೆಯಲ್ಲಿ ಭಾಗಿಯಾದರೂ ಮರಿಗಳಿಗೆ ಆಹಾರ, ಗುಟುಕು ನೀಡುವಲ್ಲಿ ಹೆಚ್ಚಿನ ಮುತುವರ್ಜಿ ವಹಿಸುವುದು ಹೆಣ್ಣು ಹಕ್ಕಿ. ಬಣ್ಣ , ಆಕಾರಗಳು ಹಾಗೂ ಆಹಾರ ವೈವಿಧ್ಯತೆಯಿಂದ ಈ ಹಕ್ಕಿಗಳನ್ನು ಬೇರೆ ಬೇರೆ ಗುಂಪಾಗಿ ವಿಂಗಡಿಸಲಾಗಿದೆ. ಆದರೆ ಸ್ವಭಾವದಲ್ಲಿ ಏಕಸೂತ್ರಇದೆ. ಈ ಹಕ್ಕಿಗೆ ವಯಸ್ಸಾದಂತೆ ಚುಂಚು ರೆಕ್ಕೆಗಳ ಬಣ್ಣ ಮಾಸುವುದು. ಇದಕ್ಕೆ ಕಾರಣ ತಿಳಿದಿಲ್ಲ.