ಮುಂಬೈ: ಆಪತ್ತುಗಳನ್ನು ಎದುರಿಸುತ್ತಿರುವ ಭೂಮಿಯನ್ನು ಉಳಿಸಲು, ಈ ಗ್ರಹವನ್ನು ಇನ್ನಷ್ಟು ಉತ್ತಮವಾಗಿಸಲು ಪಣತೊಟ್ಟ ಸಾಧಕರ ಸ್ಫೂರ್ತಿ ಕಥೆಗಳಿಗೆ ವಿಶ್ವವನ್ನೇ ಬದಲಿಸುವ ಶಕ್ತಿಯಿದೆ. ನ್ಯಾಷನಲ್ ಜಿಯಾಗ್ರಫಿ ಚಾನೆಲ್ ರೂಪಿಸಿರುವ 10 ಸಾಧಕರ ಸಾಕ್ಷ್ಯಚಿತ್ರಗಳು ನಮ್ಮನ್ನೂ ಬದಲಾಣೆಯ ಹಾದಿಗೆ ಪ್ರೇರೇಪಿಸುತ್ತವೆ ಎಂದು ಬಾಲಿವುಡ್ ನಟಿ ದಿಯಾ ಮಿರ್ಜಾ ಹೇಳಿದರು.
“ಒನ್ ಫಾರ್ ಚೇಂಜ್’ ಎಂಬ ಪರಿಕಲ್ಪನೆ ಅಡಿಯಲ್ಲಿ, ವಿಶ್ವ ಭೂ ದಿನ ಪ್ರಯುಕ್ತ, ನ್ಯಾಷನಲ್ ಜಿಯೋಗ್ರಫಿ ಸಂಸ್ಥೆ ಹಮ್ಮಿಕೊಂಡಿದ್ದ ಕಾರ್ಯಕ್ರಮ ದಲ್ಲಿ ದೇಶದ ವಿವಿಧೆಡೆಯ 10 ಸಾಧಕರ ಜತೆ ನಟಿ ಸಂವಾದ ನಡೆಸಿದರು. ಚಾನೆಲ್ ರೂಪಿಸಿರುವ ಈ ಸಾಧಕರ ಸಾಕ್ಷ್ಯಚಿತ್ರಗಳು ಏ.22ರ ಶುಕ್ರವಾರ ವಿಶ್ವ ಭೂದಿನದಂದು ಇಡೀ ದಿನ ಪ್ರಸಾರಗೊಳ್ಳಲಿದೆ.
ಇಬ್ಬರು ಕನ್ನಡತಿಯರು: ಈ 10 ಸಾಧಕರ ಪೈಕಿ ಇಬ್ಬರು ಕನ್ನಡತಿಯರು ಇರುವುದು ವಿಶೇಷ. ತಮ್ಮ 50 ವರ್ಷದ ಜೀವನವನ್ನು ಅರಣ್ಯ ಪಾಲನೆಗಾಗಿ ಮೀಸಲಿಟ್ಟ, ಪದ್ಮಶ್ರೀ ಪುರಸ್ಕೃತೆ ತುಳಸಿ ಗೌಡರ ಕುರಿತೂ ಸಾಕ್ಷ್ಯಚಿತ್ರ ನಿರ್ಮಾಣವಾಗಿದೆ. ಸಮಾರಂಭಕ್ಕೆ ಸಾಕ್ಷಿಯಾಗಿದ್ದ, “ಎರೆಹುಳು ರಾಣಿ’ (ವರ್ಮ್ ಕ್ವೀನ್) ಖ್ಯಾತಿಯ ಬೆಂಗಳೂರಿನ ವಾಣಿ ಮೂರ್ತಿ, ನೈಸರ್ಗಿಕ ಗೊಬ್ಬರ ಮತ್ತು ತಾರಸಿ ಕೃಷಿ ಕುರಿತು ಸಾಕಷ್ಟು ಜಾಗೃತಿ ಮೂಡಿಸಿದ ಸಾಧಕಿ ಕೂಡ ಹೌದು.
ತೆರೆಯ ಮೇಲೆ ಸಾಧಕರು: ಅಳಿವಿನಂಚಿನಲ್ಲಿರುವ ಸೈನಿಕ ಕೊಕ್ಕರೆಯ ರಕ್ಷಣೆಯಲ್ಲಿ ತೊಡಗಿರುವ ಪೂರ್ಣಿಮಾ ಬರ್ಮನ್ ದೇವಿ, ಕಾರ್ಬನ್ ತ್ಯಾಜ್ಯ ದಿಂದ ವಿಶಿಷ್ಟ ಟೈಲ್ಸ್ ನಿರ್ಮಿಸಿದ ತೇಜಸ್ ಸಿದ್ನಾಳ್, ಹವಳದ ದಂಡೆಗಳನ್ನು ಪ್ಲಾಸ್ಟಿಕ್‌ಮುಕ್ತಗೊಳಿಸುತ್ತಿರುವ ವೆಂಕಟೇಶ್ ಚಾರ್ಲೂ, ರೇಡಿಯೋ ಜಾಕಿಯಾಗಿ ಹವಾಮಾನ ಬದಲಾವಣೆ ಕುರಿತು ಜಾಗೃತಿ ಮೂಡಿಸುತ್ತಿರುವ ವರ್ಷಾ ರಾಯ್ಕರ್, ಅತ್ಯಂತ ಕಡಿಮೆ ದರದಲ್ಲಿ ಕೃಷಿಸ್ನೇಹಿ ವಿದ್ಯುತ್ ಉಪಕರಣಗಳನ್ನು ಪರಿಚಯಿಸಿದ ವಿದ್ಯುತ್ ಮೋಹನ್, ಹಳ್ಳಿಯಲ್ಲಿದ್ದೂ ತನ್ನದೇ ಸೋಲಾರ್ ಸಂಸ್ಥೆ ಕಟ್ಟಿದ ರುಕ್ಮಣಿ ಕಟಾರ, “ಇಕೋ ಆರ್ಕಿಟೆಕ್ಟ್’ ಖ್ಯಾತಿಯ ಸೋನಮ್ ವಾಂಗುcಕ್‌ರ ಸಾಕ್ಷ್ಯಚಿತ್ರಗಳು ಪ್ರಸಾರಗೊಳ್ಳಲಿವೆ.
ಪರಿಸರ ಸಾಧಕರ ಸಾಕ್ಷ್ಯಚಿತ್ರಗಳನ್ನು ಕೇವಲ ಭೂದಿನಕ್ಕೆ ಸೀಮಿತಗೊಳಿಸುವುದಿಲ್ಲ. ವರ್ಷವಿಡೀ ಮತ್ತಷ್ಟು ಸಾಧಕರನ್ನು ಪರಿಚಯಿಸುವ ಉದ್ದೇಶ ಚಾನೆಲ್‌ಗಿದೆ.
● ಕೆವಿನ್ ವಾಝ್, ಡಿಸ್ನಿ ಸ್ಟಾರ್
ಮನರಂಜನೆ ಚಾನೆಲ್ಸ್ ನೆಟ್ವರ್ಕ್ ಮುಖ್ಯಸ್ಥ