Advertisement
ಇದು ಸಂಗೀತ, ನಾಟಕ ಮತ್ತು ಸಾಹಿತ್ಯದ ಕೊಲಾಜ್ ಎನ್ನುತ್ತದೆ ಕರಪತ್ರ. ನಾಟಕದಲ್ಲಿ ಸಂಗೀತ ಮತ್ತು ಹಾಡುಗಳು ಪೂರಕವಾಗಿಯೋ ಹಿನ್ನೆಲೆಯಲ್ಲಿಯೋ ಇದ್ದುಕೊಂಡು ಒಟ್ಟಂದಕ್ಕೆ ದೇಣಿಗೆ ನೀಡುವುದು ಎಲ್ಲರಿಗೂ ತಿಳಿದ ವಿಷಯವೇ. ಸಂಗೀತ ನಾಟಕ, ಗೀತ ನಾಟಕಗಳನ್ನು ನಾವೆಲ್ಲ ಕಂಡಿದ್ದೇವೆ, ಕೇಳಿದ್ದೇವೆ. ಆದರೆ ಇಲ್ಲಿಯ ಕಥೆ ಕುತೂಹಲಕಾರಿಯಾಗಿದೆ. ಖ್ಯಾತ ಗಾಯಕಿ ಶುಭಾ ಮುದ್ಗಲ್ ಅವರ ಮಾತೊಂದನ್ನು ಸವಾಲೆಂಬಂತೆ ಸ್ವೀಕರಿಸಿ, ಶುಭಾ- ಅನೀಶ್ ಪ್ರಧಾನ್ ದಂಪತಿಯ ಪರಿಕಲ್ಪನೆ, ಸಂಶೋಧನೆ ಹಾಗೂ ಸಂಗೀತ ಸಂಯೋಜನೆಯಲ್ಲಿ , ಸಂಗೀತವನ್ನು ಮುನ್ನೆಲೆಯಾಗಿ ಮತ್ತು ನಾಟಕವನ್ನು ಹಿನ್ನೆಲೆಯಾಗಿಟ್ಟುಕೊಂಡು ಸೂತ್ರಧಾರ ಶಾನ್‌ಭಾಗ್ ಕಟ್ಟಿಕೊಡುವ ಯಶಸ್ವಿ ಪ್ರಯೋಗವಿದು.
Related Articles
Advertisement
ಲಖನೌವನ್ನು ಕೇಂದ್ರವಾಗಿಟ್ಟುಕೊಂಡು ಚಿತ್ರಿತವಾದ ಒಂದು ಕಾದಂಬರಿಯ ಹೆಸರು ಚಾಂದನಿ ಬೇಗಂ. ಇದರ ಪಾತ್ರವರ್ಗಕ್ಕೆ ಸೇರುತ್ತದೆ ಜನಪದ ಶೈಲಿಯ ಹಾಡುಗಾರ ಮೋಗ್ರೆ ಮಾಸ್ತರರ ಕುಟುಂಬ. ಬದಲಾಗುತ್ತಿರುವ ಕಾಲದೊಂದಿಗೆ ಹೆಜ್ಜೆ ಹಾಕಲು ಈ ಕಲಾವಿದರು ಪಡುವ ಪಾಡನ್ನು ಉತ್ತಮ ದೃಶ್ಯ ಸಂಯೋಜನೆ ಯಲ್ಲಿ ತೋರಿಸುತ್ತದೆ ಎರಡನೆಯ ಪ್ರಸಂಗ.
ಉತ್ತರ ಭಾರತದಲ್ಲಿ ನೌಟಂಕಿ ಎಂಬ ಶೈಲಿ ಇಂದಿಗೂ ಕಾಣಸಿಗುತ್ತದೆ. ಈ ಜನಪ್ರಿಯ ಕಲಾ ಪ್ರಕಾರದಲ್ಲಿ ಸಂಗೀತ, ಕುಣಿತಗಳ ಜೊತೆಗಿನ ವಿಡಂಬನೆ ಮತ್ತು ವಿನೋದ ಪ್ರೇಕ್ಷಕ ರನ್ನು ಸೆಳೆಯುತ್ತದೆ. ಇಲ್ಲಿ ಬಹದ್ದೂರ್ ಲಡಕಿ ಎಂಬ ಪುಟ್ಟ ಭಾಗದಲ್ಲಿ ದಿಟ್ಟ ಹುಡುಗಿ ಗುಲಾಬ್ ತನ್ನನ್ನು ಶೋಷಿಸ ಹೊರಟ ಬ್ರಿಟಿಷ್ ಸೈನಿಕನಿಗೆ ಚಳ್ಳೆಹಣ್ಣು ತಿನ್ನಿಸುವ ಪರಿ ಅತ್ಯಂತ ಆಹ್ಲಾದಕರವಾಗಿದೆ.
ನಾಟಕದ ಮೊದಲರ್ಧದ ಹೈಲೈಟ್ ಇದು ಎನ್ನಲಡ್ಡಿಯಿಲ್ಲ. ನೌಟಂಕಿಯ ಎನರ್ಜಿಗೆ ಸಿಳ್ಳೆಹೊಡೆದು ಚಪ್ಪಾಳೆ ತಟ್ಟಿದ ಪ್ರೇಕ್ಷಕರನ್ನು ವಿರಾಮದ ನಂತರ ಸೂಫೀ ಬಸಂತ್ ಎಂಬ ಪ್ರಶಾಂತ ಸನ್ನಿವೇಶ ಕೈಬೀಸಿ ಕರೆಯುತ್ತದೆ. ದೆಹಲಿಯ ನಿಜಾಮುದ್ದೀನ್ ದರ್ಗಾದಲ್ಲಿ ಮತ್ತು ಉತ್ತರದ ಇತರ ಸೂಫೀ ಮಂದಿರಗಳಲ್ಲಿ ಬಸಂತ ಋತುವಿನ ಆಚರಣೆಗೆ ವಿಶೇಷ ಮಹತ್ವವಿದೆ. ಸೂಫೀ ಸಂತ ಹಜರತ್ ನಿಜಾಮುದ್ದೀನ್ ಔಲಿಯಾ ಮತ್ತವರ ಶಿಷ್ಯ ಅಮಿರ್ ಖುಸ್ರೋರ ಹಿನ್ನೆಲೆ ಇದಕ್ಕಿದೆಯಂತೆ. ಸಂಗೀತದಿಂದ ಎಂತಹ ಕಟು ದುಃಖವನ್ನೂ ಸ್ವೀಕರಿಸುವ ಮನೋಭಾವ ಪಡೆಯುವುದು ಸಾಧ್ಯ ಎಂಬುವುದನ್ನು ಈ ಪ್ರಸಂಗ ಅತ್ಯಂತ ಮಾರ್ಮಿಕವಾಗಿ ಸೂಚಿಸುತ್ತದೆ.
ಎರಡು ಭಿನ್ನ ಸಂಸ್ಕೃತಿಗಳ ಮುಖಾಮುಖೀ ಮುಂದಿನ ಪ್ರಸಂಗದಲ್ಲಿ ನಮ್ಮ ಅರಿವಿಗೆ ಬರುತ್ತದೆ. ಈ ಕಾಲ್ಪನಿಕ ಸನ್ನಿವೇಶದಲ್ಲಿ ಮೇಮ್‌ಸಾಬ್ ಲೇಡಿ ಇಸಾಬೆಲ್ ಹಾರ್ಡಿಂಗ್ ದೇಸೀ ಕಲಾವಿದೆ ಖಾನುಮ್ ಜಾನಳಿಂದ ಅವಳ ಗಾಯನ ಶೈಲಿಯನ್ನು ಕಲಿಯ ಹೊರಡುತ್ತಾಳೆ.
ಇಂತಹ ಕೊಡುಕೊಳ್ಳುವಿಕೆಯ ಸಂದರ್ಭಗಳ ಪೇಚು, ಗಲಿಬಿಲಿ, ಸಮಸ್ಯೆ ಸಂದಿಗ್ಧತೆಗಳನ್ನು ಇಲ್ಲಿಯ ಸ್ಕ್ರಿಪ್ಟ್ ಸಂಯಮದಿಂದ ಕಟ್ಟಿಕೊಡುತ್ತದೆ. ಇಬ್ಬರು ಕಲಾವಿದೆಯರ ಪರ್ಫಾರ್ಮೆನ್ಸ್ ಕೂಡ ಬೇಷ್ ಎನ್ನುವಂಥದ್ದೇ.
ಹಾಡೊಂದು ಕಾಲಾಂತರದಲ್ಲಿ ಬದಲಾಗುತ್ತಾ ಇಂದಿನ ರೀಮಿಕ್ಸ್ ಯುಗದಲ್ಲಿ ಯಾವ ರೂಪ ತಾಳುತ್ತದೆ, ಅದು ಪ್ರತಿನಿಧಿಸುವ ಮೌಲ್ಯಗಳ ಪಾಡೇನು ಎಂಬುದೇ ಆರನೆಯ ಕಥೆ. ಕೊಂಚ ನಿರೀಕ್ಷಿತವೆನಿಸುವ, ಪರಿಣಾಮಕ್ಕಾಗಿ ಸ್ವಲ್ಪ ಹೆಚ್ಚೇ ಪ್ರಯತ್ನಿಸುವ ಸ್ಕ್ರಿಪ್ಟ್ ಎನಿಸಿದರೂ ಸಂಗೀತ ಕ್ಷೇತ್ರದಲ್ಲಿ ಸಂಪ್ರದಾಯ, ಒಡೆತನ, ಕಾಪಿರೈಟ್ ಮತ್ತು ಎಲ್ಲವನ್ನೂ ಒಳಗೊಳ್ಳುವ ಅರ್ಥವ್ಯವಸ್ಥೆ ಇವುಗಳನ್ನು ಟೀಕಿಸುತ್ತ ವ್ಯಾವ ಹಾರಿಕ ಲೋಕದ ವಾರೆನೋಟ ನೀಡುತ್ತದೆ.
ನಮ್ಮಲ್ಲಿ ಹೆಚ್ಚಿನವರು ಕೇಳಿಯೇ ಇರದ ಕಜರೀ ಎಂಬ ಹಾಡಿನ ಪರಿಚಯವೇ ಕೊನೆಯ ಪ್ರಸಂಗ. ಇದು ಗುಂಪುಗಳಲ್ಲಿ ನಡೆಯುತ್ತದಂತೆ. ಕಾವ್ಯದ ಒಂದು ತುಣುಕನ್ನು ಸವಾಲಿನಂತೆ ಎಸೆದು ಎದುರಾಳಿ ತಂಡದಿಂದ ಉತ್ತರ ಅಪೇಕ್ಷಿಸುವ ಈ ಮೋಜಿನಾಟ ಮನರಂಜನೆಗೆ ಅತ್ಯುತ್ತಮ ಉದಾಹರಣೆ. ಇದನ್ನು ಈ ನಾಟಕ ಅತ್ಯಂತ ಸುಶ್ರಾವ್ಯವಾಗಿ ನಮ್ಮೆದುರು ತೆರೆದಿಡುತ್ತದೆ. ಇಲ್ಲಿ ಪ್ರೇಕ್ಷಕರ ಭಾಗವಹಿಸುವಿಕೆಯಂತೂ ಶಿಖರಕ್ಕೇರುತ್ತದೆ.
ಶ್ರೇಷ್ಠ ಪರಿಕಲ್ಪನೆ; ಬುದ್ಧಿ ಭಾವಗಳಿಗೆ ಸುಗ್ರಾಸವಾಗುವ ನಿರ್ವಹಣೆ; ಮನಮುಟ್ಟುವ ನಟನೆ ಮತ್ತು ಗಾಯನ (ಕೇತಕಿ ಥತ್ತೆ, ಮಾನ್ಸಿà ಮುಲ್ತಾನಿ, ಅವಂತಿಕಾ ಗಾಂಗೂಲಿ, ತೃಪ್ತಿ ಖಾಮ್ಕರ್, ಮೆಹೆರ್ ಮಿಸ್ತ್ರೀ, ನಮಿತ್ ದಾಸ್, ಶುಭ್ರಜ್ಯೋತಿ ಬರತ್, ಗೋಪಾಲ್ ತಿವಾರಿ, ಮಕರಂದ ದೇಶ್ಪಾಂಡೆ, ಗಗನ್ ರಿಯರ್ ಮುಂತಾದವರು); ಮಾತು-ಮೌನ-ಸಂಗೀತವನ್ನು ಹಿತಮಿತವಾಗಿ ಬಳಸುವ ಉತ್ತಮ ಮೇಳ, ನಂಬಲರ್ಹವಾದ ಪಾತ್ರ ಚಿತ್ರಣ/ಸನ್ನಿವೇಶ ನಿರ್ಮಾಣ, ಮೆಲುಕು ಹಾಕುವಂತಹ ಹಾಡುಗಳು, ಮಹಿಳಾ Perspective ಅನ್ನು ಸೂಕ್ಷ್ಮ ಸಹೃದತೆಯಿಂದ ಚಿತ್ರಿಸುವ ಅನನ್ಯತೆ; ಒಂದೇ ಎರಡೇ..! ಏನೆಂದು ಹಾಡಿ ಹೊಗಳಲಿ ! ನಮ್ಮ ದಕ್ಷಿಣದ ಸಂಗೀತಕ್ಕೂ ಇಂಥದ್ದೊಂದು ಪ್ರಯೋಗ ಸಿಕ್ಕರೆ ಹೇಗಿರಬಹುದು? ರಂಗಾಧಿದೇವತೆಗಳೇ, ಕೇಳಿಸುತ್ತಿದೆಯೇ?.
ಲೇಖಕಿ:ಅಹಲ್ಯಾ ಬಲ್ಲಾಳ