ಕಲಬುರಗಿ: ಮಹಾನಗರದಲ್ಲಿನ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪಾಲಿಕೆ ಕೊನೆಗೂ ಮುಂದಾಗಿದ್ದು, ತಿಂಗಳ ಕಾಲ ಕಾರ್ಯಾಚರಣೆ ಕೈಗೊಳ್ಳಲು ನಿರ್ಧರಿಸಿದೆ. ಈಗಾಗಲೇ ನಗರದಲ್ಲಿ ಬೀದಿ ನಾಯಗಳ ಹಿಡಿದು ದೂರದ ಪ್ರದೇಶಗಳಿಗೆ ಹೋಗಿ ಬಿಟ್ಟು ಬರುವ ಕಾರ್ಯಾಚರಣೆ ಆರಂಭವಾಗಿದೆ. ನಾಯಿಗಳನ್ನು ಹಿಡಿಯಲು ಬಳ್ಳಾರಿಯಿಂದ ನುರಿತ ತಂಡವೊಂದು ಬರುತ್ತಿದ್ದು, ಮಂಗಳವಾರ ಇಲ್ಲವೇ ಬುಧವಾರ ತಂಡ ಕಾರ್ಯಾಚರಣೆಗೆ ಇಳಿಯಲಿದೆ.
ನಗರದ ಹಾಗರಗಾ ರಸ್ತೆಯ ಅಮನ್ ನಗರದಲ್ಲಿ ಶನಿವಾರ ಸಂಜೆ 10ಕ್ಕೂ ಹೆಚ್ಚು ಮಕ್ಕಳಿಗೆ ನಾಯಿಗಳು ಕಡಿದು ಭೀಕರವಾಗಿ ಗಾಯಗೊಳಿಸಿವೆ. ಇದರಿಂದ ಜನರು ಆತಂಕಕ್ಕೆ ಒಳಗಾಗಿದ್ದರಿಂದ ಪಾಲಿಕೆ ಈಗ ಕಾರ್ಯಾಚರಣೆಗೆ ಇಳಿದಿದೆ.
ಮಹಾನಗರದಲ್ಲಿ ತಿಂಗಳ ಕಾಲ ಬೀದಿ ನಾಯಿಗಳ ಕಾರ್ಯಾಚರಣೆ ನಡೆಯುತ್ತಿರುವುದು ಇದೇ ಮೊದಲು. ರವಿವಾರ ಹಾಗೂ ಸೋಮವಾರ ನಗರದಲ್ಲಿ 30ಕ್ಕೂ ಹೆಚ್ಚು ಬೀದಿ ನಾಯಿಗಳನ್ನು ಹಿಡಿಯಲಾಗಿದೆ.
ಮಹಾನಗರದಲ್ಲಿ ಅಂದಾಜು 8000 ದಿಂದ 9000 ಬೀದಿ ನಾಯಿಗಳು ಇವೆ ಎಂದು ಲೆಕ್ಕೆ ಹಾಕಲಾಗಿದೆ. ಕಲಬುರಗಿ ಉತ್ತರ ಮತಕ್ಷೇತದಲ್ಲಿಯೇ ಸಂಖ್ಯೆ ಹೆಚ್ಚಳವಿದೆ. ಈಗ ಹಿಡಿಯುವ ನಾಯಿಗಳನ್ನು 50ರಿಂದ 70 ಕಿಮೀ ದೂರದವರೆಗೂ ಜಿಲ್ಲೆಯ ಗಡಿ ಭಾಗದಲ್ಲಿ ಹೋಗಿ ಬಯಲು ಇಲ್ಲದೇ ದಟ್ಟ ಗಿಡಮರಗಳ ಪೋದೆಯಲ್ಲಿ ಹೋಗಿ ಬಿಟ್ಟು ಬರಲು ರೂಪು ರೇಷೆ ಹಾಕಿಕೊಳ್ಳಲಾಗಿದೆ.
ಒಂದು ವೇಳೆ ಪರಿಣಾಮಕಾರಿ ಬೀದಿ ನಾಯಿಗಳ ಕಾರ್ಯಾಚರಣೆ ನಡೆದರೆ ಈಗಿರುವ ನಾಯಿಗಳ ಹಾವಳಿ ಅರ್ಧಕ್ಕಿಂತಲೂ ಹೆಚ್ಚು ಕಡಿಮೆಯಾಗಲಿದೆ. ನಾಯಿಗಳನ್ನು ಹಿಡಿದು ದೂರು ಬಿಡಲು ಪಾಲಿಕೆಯಲ್ಲಿ ಅನುದಾನ ಹೊಂದಾಣಿಕೆ ಮಾಡಲು ಕಾರ್ಯಸೂಚಿ ರೂಪಿಸಲಾಗಿದೆ.
ನಾಯಿಗಳ ಹಾವಳಿಗೆ ಮಾಂಸದಂಗಡಿಗಳು ತ್ಯಾಜ್ಯವನ್ನು ರಸ್ತೆ ಬದಿ ಚೆಲ್ಲುತ್ತಿರುವುದೇ ಕಾರಣ ಎಂಬುದನ್ನು ಪಾಲಿಕೆ ಅರಿತುಕೊಂಡಿದೆ. ಹೀಗಾಗಿ ಮಾಂಸದಂಗಡಿಗಳ ಮಾಲೀಕರಿಗೆ ನೋಟಿಸ್ ನೀಡಲು ಪಾಲಿಕೆ ಮುಂದಾಗಿದೆ. ಯಾವುದೇ ಕಾರಣಕ್ಕೂ ತ್ಯಾಜ್ಯ ರಸ್ತೆ ಬದಿಯಲ್ಲಿ ಎಸೆಯಬಾರದು. ಒಂದು ವೇಳೆ ಎಸೆದರೆ ಅಂಗಡಿ ಲೈಸನ್ಸು ರದ್ದುಪಡಿಸುವುದಾಗಿ ಎಚ್ಚರಿಕೆ ನೀಡಲು ಉದ್ದೇಶಿಸಿದೆ. ಮನೆ-ಮನೆಗೆ ಬಂದು ಕಸ ಸಂಗ್ರಹಿಸುವವರಿಗೆ ಕಡ್ಡಾಯವಾಗಿ ನೀಡಬೇಕು ಎಂದು ಸೂಚಿಸಲಾಗುತ್ತಿದೆ.
ಕಲಬುರಗಿ ಮಹಾನಗರದಲ್ಲಿ ಬೀದಿ ನಾಯಿಗಳ ಹಾವಳಿ ಹೆಚ್ಚಾಗಿದ್ದರಿಂದ ಕಾರ್ಯಾಚರಣೆಗೆ ಇಳಿಯಲಾಗಿದೆ. ನಾಯಿಗಳನ್ನು ಹಿಡಿಯಲು ಬಳ್ಳಾರಿಯಿಂದ ನುರಿತ ತಂಡವೊಂದನ್ನು ಕರೆಯಿಸಲಾಗುತ್ತಿದೆ. ಒಟ್ಟಾರೆ ಬೀದಿ ನಾಯಿಗಳ ಹಾವಳಿಗೆ ಕಡಿವಾಣ ಹಾಕಲು ಪಾಲಿಕೆ ಬದ್ಧವಿದೆ.
ಪೆದ್ಧಪ್ಪಯ್ಯ ಆರ್.ಎಸ್., ಆಯುಕ್ತರು, ಪಾಲಿಕೆ, ಕಲಬುರಗಿ