ಪಣಜಿ: ರಾಹುಲ್ ಗಾಂಧಿ ಅವರು ಕೂಡಲೇ ಭಾರತ್ ಜೋಡೋ ಯಾತ್ರೆಯನ್ನು ನಿಲ್ಲಿಸಬೇಕು. ಅಲ್ಲದೆ ವಿಧಾನಸಭೆ ಚುನಾವಣೆ ಇರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ರಾಜ್ಯಗಳಿಗೆ ಹೋಗಬೇಕು ಎಂದು ಗೋವಾದ ಸಂಸದ ಮತ್ತು ಮಾಜಿ ಮುಖ್ಯಮಂತ್ರಿ ಫ್ರಾನ್ಸಿಸ್ಕೊ ಸರ್ಡಿನ್ಹಾ ಹೇಳಿದ್ದಾರೆ.
ಭಾರತೀಯ ಜನತಾ ಪಕ್ಷವನ್ನು ಸೋಲಿಸಲು ಕೇವಲ ಕಾಂಗ್ರೆಸ್ ಗೆ ಮಾತ್ರ ಸಾಧ್ಯ ಎಂದು ಫ್ರಾನ್ಸಿಸ್ಕೊ ಸರ್ಡಿನ್ಹಾ ಅಭಿಪ್ರಾಯ ಪಟ್ಟಿದ್ದಾರೆ.
‘ಭಾರತ್ ಜೋಡೋ ಯಾತ್ರೆಯು ಕಾಂಗ್ರೆಸ್ ಗೆ ಬಹಳ ಮುಖ್ಯ. ಪಕ್ಷವು ತಳಮಟ್ಟದವರೆಗೆ ತಲುಪಬೇಕು ಎನ್ನುವುದು ನಮ್ಮ ಆಶಯ. ರಾಹುಲ್ ಗಾಂಧಿ ಅದ್ಭುತ ಕೆಲಸ ಮಾಡುತ್ತಿದ್ದಾರೆ. ಆದರೆ ಇದೀಗ ರಾಹುಲ್ ಕೂಡಲೇ ಇದನ್ನೆಲ್ಲಾ ನಿಲ್ಲಿಸಿ ಚುನಾವಣೆಗೆ ಸಿದ್ದವಾಗಿರುವ ಹಿಮಾಚಲ ಪ್ರದೇಶ ಮತ್ತು ಗುಜರಾತ್ ಗೆ ಹೋಗಬೇಕು” ಎಂದು ಪಣಜಿಯಲ್ಲಿ ಗೋವಾ ಮಾಜಿ ಸಿಎಂ ಫ್ರಾನ್ಸಿಸ್ಕೊ ಸರ್ಡಿನ್ಹಾ ಹೇಳಿದರು.
ಹಿಮಾಚಲ ಪ್ರದೇಶ ವಿಧಾನಸಭೆ ಚುನಾವಣೆಯು ನವೆಂಬರ್ 12ರಂದು ಒಂದೇ ಹಂತದಲ್ಲಿ ನಡೆಯಲಿದೆ. ಡಿಸೆಂಬರ್ 8ರಂದು ಚುನಾವಣೆಯ ಮತ ಎಣಿಕೆ ಕಾರ್ಯ ನಡೆಯಲಿದೆ. ಗುಜರಾತ್ ವಿಧಾನಸಭೆ ಚುನಾವಣೆಯ ದಿನಾಂಕವನ್ನು ಚುನಾವಣಾ ಆಯೋಗ ಇನ್ನೂ ಘೋಷಣೆ ಮಾಡಿಲ್ಲ.
ಇದನ್ನೂ ಓದಿ:300 ಕಿಮೀ ಸ್ಪೀಡ್… ಫೇಸ್ ಬುಕ್ ಲೈವ್; ಬಿಎಂಡಬ್ಲ್ಯು ನಾಗಾಲೋಟ…ನಾಲ್ವರ ದೇಹ ಛಿದ್ರ, ಛಿದ್ರ!
ಕಾಂಗ್ರೆಸ್ ನ ಭಾರತ್ ಜೋಡೋ ಯಾತ್ರೆಯು ಸೆ.7ರಂದು ಕನ್ಯಾಕುಮಾರಿಯಲ್ಲಿ ಆರಂಭವಾಗಿತ್ತು. 150 ದಿನಗಳಲ್ಲಿ 3,570 ಕಿ.ಮೀ. ಗಳಷ್ಟು ದೂರ ಭಾರತ್ ಜೋಡೋ ಯಾತ್ರೆಯು ಕ್ರಮಿಸಲಿದೆ. ರಾಹುಲ್ ಗಾಂಧಿ ನೇತೃತ್ವದ ಯಾತ್ರೆಯು ತಮಿಳುನಾಡು, ಕೇರಳ, ಕರ್ನಾಟಕದ ಬಳಿಕ ಇದೀಗ ಆಂಧ್ರ ಪ್ರದೇಶದಲ್ಲಿದೆ.