Advertisement

ಪ್ಲಾಸ್ಟಿಕ್‌ ಬಳಕೆ ನಿಲ್ಲಿಸಿ-ಜೀವಸಂಕುಲ ಉಳಿಸಿ ಜಾಗೃತಿ

04:19 PM Aug 09, 2022 | Team Udayavani |

ಶಹಾಬಾದ: ಪ್ಲಾಸ್ಟಿಕ್‌ ತ್ಯಜಿಸಿ-ಪರಿಸರ ಉಳಿಸಿ, ಪ್ಲಾಸ್ಟಿಕ್‌ ಬಳಸುವುದನ್ನು ನಿಲ್ಲಿಸಿ-ಜೀವ ಸಂಕುಲ ಉಳಿಸಿ, ಪ್ಲಾಸ್ಟಿಕ್‌ ಬಳಕೆ ಜೀವ ಸಂಕುಲಕ್ಕೆ ಹಾನಿ, ಪ್ಲಾಸ್ಟಿಕ್‌ ಬಳಕೆಯ ಬದಲಾಗಿ ಕಾಗದ ಅಥವಾ ನಾರಿನ ಚೀಲ ಬಳಸಿ, ಪರಿಸರ ಸಂರಕ್ಷಣೆ ಪ್ರಜ್ಞೆ ಬೆಳೆಸೋಣ-ಮುಂದಿನ ಪೀಳಿಗೆ ಉಳಿಸೋಣ. ಹೀಗೆ ನೂರಾರು ಜಾಗೃತಿ ಮೂಡಿಸುವ ಸಾಲುಗಳಿರುವ ಫಲಕವನ್ನು ಹಿಡಿದ ನಗರದ ಎಂಸಿಸಿ ಶಾಲೆಯ ಸಾವಿರಕ್ಕೂ ಹೆಚ್ಚು ಮಕ್ಕಳು ನಗರದಲ್ಲಿ ಸುರಕ್ಷತಾ ನಡಿಗೆಯ ಮೂಲಕ ಪ್ಲಾಸ್ಟಿಕ್‌ ಬಳಕೆ ಕುರಿತು ಘೋಷಣೆ ಕೂಗುತ್ತಾ ಸಾರ್ವಜನಿಕರಲ್ಲಿ ಜಾಗೃತಿ ಮೂಡಿಸಿದರು.

Advertisement

ಜಾಗೃತಿ ಜಾಥಾದೊಂದಿಗೆ ಮಕ್ಕಳು ಕೈಯಲ್ಲಿ ನಾಮಫಲಕಗಳಿರುವ ಹಾಗೂ ಪರಿಕರಗಳನ್ನು ಪ್ರದರ್ಶಿಸುವ ಮೂಲಕ ಜನಸಾಮಾನ್ಯರಲ್ಲಿ ಅರಿವು ಮೂಡಿಸುವ ಪ್ರಯತ್ನ ಮಾಡಿದರು. ಮೆರವಣಿಗೆ ಕೇವಲ ಜಾಗೃತಿ ನಾಮಪಲಗಳಿಗೆ ಸೀಮಿತವಾಗದೆ ಹತ್ತಾರು ಸ್ತಬ್ಧ ಚಿತ್ರಗಳು ಮತ್ತಷ್ಟು ಕಳೆ ನೀಡಿದವು. ನಗರದ ಭಂಕೂರ ವೃತ್ತ, ವಾಡಿವೃತ್ತ, ನೆಹರು ವೃತ್ತದ ವರೆಗೆ ಪ್ರಭಾತ ಪೇರಿ ನಡೆಸಿದ ಮಕ್ಕಳು ಪ್ಲಾಸ್ಟಿಕ್‌ ಬಳಕೆಯಿಂದಾಗುವ ಹಾನಿಗಳ ಬಗ್ಗೆ ಸಾರ್ವಜನಿಕರಿಗೆ ಶಾಲಾ ಮಕ್ಕಳು ನಾಟಕವನ್ನು ಪ್ರದರ್ಶಿಸಿ ಸಾರ್ವಜನಿಕರಿಂದ ಮೆಚ್ಚುಗೆ ಪಡೆದರು. ಅಲ್ಲದೆ ಪ್ರಾಥಮಿಕ ಶಾಲೆ ಮಕ್ಕಳಿಂದ ನೃತ್ಯ ಏರ್ಪಡಿಸಿ ಜನರನ್ನು ತಮ್ಮ ಕಡೆಗೆ ಗಮನ ಸೆಳೆದರು.

ಪ್ರೌಢಶಾಲೆಯ ಮಕ್ಕಳು ವಿಶೇಷ ವೇಷಭೂಷಣದೊಂದಿಗೆ ಆಗಮಿಸಿ ನೃತ್ಯ ನಾಟಕದ ಮೂಲಕ ಕನ್ನಡ ಹಿಂದಿ ಹಾಗೂ ಆಂಗ್ಲ ಭಾಷೆಯಲ್ಲಿ ವಿಷಕಾರಿ ಆಗಿರುವ ಪ್ಲಾಸ್ಟಿಕ್‌ ಮಣ್ಣಿನಲ್ಲಿ ಸೇರಿದರೆ ನೂರಾರು ವರ್ಷ ಕರಗದೆ ಮಣ್ಣಿನ ಫಲವತ್ತತೆ ಕಡಿಮೆ ಆಗುತ್ತದೆ. ಭೂಮಿಯಲ್ಲಿ ಸೇರುವುದರಿಂದ ನೀರು ಇಳಿದಂತೆ ಮಾಡುತ್ತದೆ. ಮೂಕ ಪ್ರಾಣಿಗಳು ತಿಂದರೆ ಸಾಯುತ್ತವೆ. ಪ್ಲಾಸ್ಟಿಕ್‌ ಸುಡುವುದರಿಂದ ಓಝೋನ್‌ ಪದರಕ್ಕೆ ಹಾನಿ ಆಗುವುದರ ಜೊತೆಗೆ ಪರಿಸರ ಮಾಲಿನ್ಯಕ್ಕೂ ಕಾರಣವಾಗುತ್ತದೆ. ಬಳಸಿದ ಪ್ಲಾಸ್ಟಿಕ್‌ ಹೊರಗೆ ಎಸೆಯದೆ ಮನೆಯಲ್ಲಿಯೇ ಸಂಗ್ರಹಿಸಬೇಕು ಬಳಸಿದ ಪ್ಲಾಸ್ಟಿಕ್‌ ಹಾಗೂ ತ್ಯಾಜ್ಯ ವಸ್ತುಗಳನ್ನು ಪುನರ್‌ ಬಳಕೆ ಕೇಂದ್ರಕ್ಕೆ ಕಳುಹಿಸಬೇಕು. ಪ್ಲಾಸ್ಟಿಕ್‌ ಬದಲಾಗಿ ಬಟ್ಟೆ ಚೀಲಗಳನ್ನು ಮತ್ತು ಕಾಗದ ಚೀಲಗಳನ್ನು ಬಳಸಿ ಪ್ಲಾಸ್ಟಿಕ್‌ ಬಳಕೆಗೆ ಕಡಿವಾಣ ಹಾಕಿ ಪರಿಸರ ಸಂರಕ್ಷಣೆಯಲ್ಲಿ ಪಾಲ್ಗೊಳ್ಳಿ ಎಂದು ಮಕ್ಕಳು ಕಿರು ನಾಟಕದ ಮೂಲಕ ಸಾರ್ವಜನಿಕರಿಗೆ ಮನವಿ ಮಾಡಿದರು. ಶಾಲಾ ಸಿಬ್ಬಂದಿಗಳು ಮಕ್ಕಳಿಗೆ ಬೆನ್ನೆಲುಬಾಗಿ ಜಾಥಾದಲ್ಲಿ ಪಾಲ್ಗೊಂಡಿದ್ದರು.

Advertisement

Udayavani is now on Telegram. Click here to join our channel and stay updated with the latest news.

Next