ಹುಣಸೂರು: ಪ್ಲಾಸ್ಟಿಕ್ ಬಳಕೆ ಪರಿಸರಕ್ಕೆ ದೊಡ್ಡ ಕಂಟಕವಾಗಿದ್ದು, ಸ್ವಯಂ ಕಡಿವಾಣ ಹಾಕಿಕೊಳ್ಳಬೇಕು. ಹಿಂದಿನಂತೆ ಬಟ್ಟೆ ಬ್ಯಾಗ್‌ಗಳನ್ನು ಬಳಸಬೇಕು ಎಂದು ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಜಿಲ್ಲಾ ಯೋಜನಾಧಿಕಾರಿ ವಿಜಯಕುಮಾರ ನಾಗನಾಳ ಸಲಹೆ ನೀಡಿದರು.
ನಗರದ ಗುರುಬೂದಿ ಮಂಗಳ ಮಂಟಪದಲ್ಲಿ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯ ಕಸಬಾ ವಲಯದ ವತಿಯಿಂದ ಆಯೋಜಿಸಿದ್ದ ಪರಿಸರ ದಿನಾಚರಣೆಯಲ್ಲಿ ಮಹಿಳೆಯರಿಗೆ ಸಸಿ ವಿತರಿಸಿ ಅವರು ಮಾತನಾಡಿದರು.
ಭೂಮಿ ತಾಯಿ ಉಳಿಸಿ-ನಮ್ಮ ಮುಂದಿನ ಪೀಳಿಗೆಗೆ ವರ್ಗಾಯಿಸಿ ಎಂಬುದು ಈ ವರ್ಷದ ಧ್ಯೇಯವಾಗಿದ್ದು, ನೆಲ, ಜಲ, ಗಾಳಿ ಕಲುಷಿತಗೊಳ್ಳದಂತೆ ನಿತ್ಯವು ಪರಿಸರ ಸಂರಕ್ಷಣೆಗೆ ಮಹಿಳೆಯರು ಮುಂದಾಗಬೇಕೆಂದು ಮನವಿ ಮಾಡಿದರು.
ತಾಪಂ ಇಒ ಕೃಷ್ಣಕುಮಾರ್ ಮಾತನಾಡಿ, ಮನೆ-ಗ್ರಾಮಗಳಲ್ಲಿ ಸ್ವಚ್ಛತೆ ಕಾಪಾಡಿಕೊಳ್ಳುವ ಮೂಲಕ ಸಾಂಕ್ರಾಮಿಕ ರೋಗಗಳನ್ನು ತಡೆಗಟ್ಟುವುದು, ಕುಟುಂಬದಲ್ಲಿ ಹುಟ್ಟುಹಬ್ಬ ಸೇರಿದಂತೆ ಯಾವುದೇ ಸಮಾರಂಭದ ನೆನಪಿಗಾಗಿ ಸಸಿನೆಟ್ಟು ಪೋಷಿಸಬೇಕು. ಕಡ್ಡಾಯವಾಗಿ ಶೌಚಾಲಯ ಬಳಸಿ ಶುಚಿತ್ವ ಕಾಪಾಡಬೇಕು ಎಂದು ಕಿವಿಮಾತು ಹೇಳಿದರು.
ಕಾರ್ಯಕ್ರಮದಲ್ಲಿ ನೂರಕ್ಕೂ ಹೆಚ್ಚು ಸಸಿಗಳನ್ನು ವಿತರಿಸಲಾಯಿತು. ತಾಲೂಕು ಯೋಜನಾಧಿಕಾರಿ ಯಶೋಧಾಶೆಟ್ಟಿ, ಮೇಲ್ವಿಚಾರಕಿ ರಾಣಿ, ಸೇವಾ ಪ್ರತಿನಿಧಿಗಳು, ಒಕ್ಕೂಟದ ಪದಾಧಿಕಾರಿಗಳು ಸೇರಿದಂತೆ 200ಕ್ಕೂ ಹೆಚ್ಚು ಮಹಿಳೆಯರು ಉಪಸ್ಥಿತರಿದ್ದರು.