ಲಿಂಗಸುಗೂರು: ಖಾಸಗಿ ಶಾಲೆಗಳಲ್ಲಿ ಹೆಚ್ಚಿನ ಡೊನೇಷನ್ ಪಡೆಯುತ್ತಿರುವುದರಿಂದ ಪಾಲಕರಿಗೆ ಹೊರೆಯಾಗುತ್ತಿದೆ. ಇದಕ್ಕೆ ಕಡಿವಾಣ ಹಾಕುವಂತೆ ಲೋಕಾಯುಕ್ತ ಡಿವೈಎಸ್‌ಪಿ ಅಯ್ಯನಗೌಡ ಪಾಟೀಲ ಶಿಕ್ಷಣಾಧಿಕಾರಿಗೆ ಸೂಚಿಸಿದರು.
ಪಟ್ಟಣದ ತಾಲೂಕು ಪಂಚಾಯಿತಿ ಸಭಾಂಗಣದಲ್ಲಿ ಶುಕ್ರವಾರ ಹಮ್ಮಿಕೊಂಡಿದ್ದ ರಾಯಚೂರು ಜಿಲ್ಲಾ ಲೋಕಾಯುಕ್ತ ಪೊಲೀಸ್ ರಿಂದ ಅಹವಾಲು ಸ್ವೀಕಾರ ಸಭೆಯಲ್ಲಿ ಅವರು ಮಾತನಾಡಿದರು. ತಾಲೂಕಿನ ಖಾಸಗಿ ಶಿಕ್ಷಣ ಸಂಸ್ಥೆಗಳಲ್ಲಿ ಹೆಚ್ಚಿನ ಮಟ್ಟದಲ್ಲಿ ಡೊನೇಷನ್ ತೆಗೆದುಕೊಳ್ಳುತ್ತಿರುವ ಬಗ್ಗೆ ನಮಗೆ ಸಾಕಷ್ಟು ದೂರುಗಳು ಬಂದಿವೆ. ಖಾಸಗಿ ಶಾಲೆಗಳಿಗೆ ತೆರಳಿ ಪರಿಶೀಲನೆ ನಡೆಸುವಂತೆ ಸಿಆರ್‌ಪಿ ಬಸವರಾಜ ಅವರಿಗೆ ಸೂಚಿಸಿದರು.
ಇದಕ್ಕೆ ಸ್ಪಷ್ಟನೆ ನೀಡಿದ ಸಿಆರ್‌ಪಿ ಬಸವರಾಜ, ಡೊನೇಷನ್ ನೀಡಿದ ಬಗ್ಗೆ ಈವರೆಗೆ ಸಾರ್ವಜನಿಕರಿಂದ ಯಾವುದೇ ದೂರುಗಳು ಬಂದಿಲ್ಲ, ದೂರು ಬಂದರೆ ಅಂತಹ ಶಾಲೆಗಳ ವಿರುದ್ಧ ಕ್ರಮ ಕೈಗೊಳ್ಳಲು ಮೇಲಾಧಿಕಾರಿಗಳ ಗಮನಕ್ಕೆ ತರಲಾಗುವುದು ಎಂದು ತಿಳಿಸಿದರು. ಇದಕ್ಕೆ ಪ್ರತಿಕ್ರಿಯಿಸಿದ ಲೋಕಾಯುಕ್ತ ಅಧಿಕಾರಿಗಳು, ಯಾವುದೇ ಕ್ಷಣದಲ್ಲಿದಾರೂ ಶಾಲೆಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸುತ್ತೇವೆ. ಶಾಲೆಗಳ ಮೇಲೆ ನಿಗಾ ವಹಿಸುವಂತೆ ಸಿಆರ್‌ಪಿಗೆ ಸೂಚಿಸಿದರು.
ಸರ್ಕಾರಿ ಕಚೇರಿಯಲ್ಲಿ ಸಾರ್ವಜನಿಕರ ಕೆಲಸಗಳು ಆಗುತ್ತಿಲ್ಲ. ಇದಕ್ಕೆ ಅಧಿಕಾರಿಗಳು ಸ್ಪಂದಿಸುತ್ತಿಲ್ಲ ಎಂಬ ಕಾರಣಕ್ಕೆ ಬೆಂಗಳೂರಿನ ಲೋಕಾಯುಕ್ತರ ಕಚೇರಿಯಲ್ಲಿ ದೂರು ನೀಡುತ್ತಿದ್ದಾರೆ. ಬೆಂಗಳೂರಿಗೆ ಅಲೆದಾಟ ತಪ್ಪಿಸಲು ಮುಖ್ಯ ಲೋಕಾಯುಕ್ತರು ಪ್ರತಿ ತಾಲೂಕಿನಲ್ಲಿ ಪ್ರತಿ ತಿಂಗಳು ಸಭೆ ನಡೆಸುವಂತೆ ಆದೇಶ ಮಾಡಿದ್ದಾರೆ. ಆದರೂ ಎರಡು ತಿಂಗಳೊಮ್ಮೆ ಸಭೆ ನಡೆಸಲಾಗುತ್ತಿದೆ. ಇಲ್ಲಿನ ಸಮಸ್ಯೆಗಳು ನೀವೇ ಪರಿಹರಿಸಿದರೆ ಬೆಂಗಳೂರಿಗೆ ತೆರಳುವ ಅನಿವಾರ್ಯತೆ ಇರುವುದಿಲ್ಲ. ಹೀಗಾಗಿ ಸಾರ್ವಜನಿಕರ ಕೆಲಸಗಳಲ್ಲಿ ವಿಳಂಬ ಮಾಡದೇ ತ್ವರಿತವಾಗಿ ಕೆಲಸ ಮಾಡಬೇಕು.
ಕೆಲವೊಂದು ಇಲಾಖೆಯಲ್ಲಿ ಅಧಿಕಾರಿಗಳು ಹೇಳಿದರೂ ಕೆಳ ಹಂತದ ಸಿಬ್ಬಂದಿಗಳು ಕೆಲಸ ಮಾಡುತ್ತಿಲ್ಲ, ಇದರಿಂದ ಕೆಲಸಗಳು ನನೆಗುದಿಗೆ ಬಿದ್ದು ಸಾರ್ವಜನಿಕರಿಗೆ ತೊಂದರೆ ಹಾಗೂ ಅಧಿಕಾರಿಗೆ ಕೆಟ್ಟ ಹೆಸರು ಬರುತ್ತಿದೆ. ಅಧಿಕಾರಿಗಳು ಹಾಗೂ ಸಿಬ್ಬಂದಿ ಸರ್ಕಾರ ನಿಮಗೆ ವೇತನ ನೀಡುವುದು ಸಾರ್ವಜನಿಕ ಕೆಲಸಕ್ಕಾಗಿ ವಿನಃ ಸುಮ್ಮನೆಯಲ್ಲ, ಮಾನವೀಯ ಗುಣಗಳನ್ನು ಅಳವಡಿಸಿಕೊಂಡು ಕೆಲಸ ಮಾಡಿದರೆ ಸಾರ್ವಜನಿಕರು ನಿಮ್ಮನ್ನು ನೆನೆಸುತ್ತಾರೆ ಎಂದು ಅಧಿಕಾರಿಗಳಿಗೆ ತಿಳಿ ಹೇಳಿದರು. ಲೋಕಾಯುಕ್ತ ಸಿಪಿಐ ವಿಕಾಸ, ತಾಪಂ ಅಧಿಕಾರಿ ಪಂಪಾಪತಿ ಸ್ವಾಮಿ, ಲೋಕಾಯುಕ್ತ ಸಿಬ್ಬಂದಿಗಳಾದ ಖಾದರ್, ಮಲ್ಲೇಶ್ವರಯ್ಯ, ವಿಜಯಕುಮಾರ ಇದ್ದರು.