Advertisement

ಮೆಟ್ರೋ ಬಳಿ ಬಸ್‌ ನಿಲ್ಸಿ

12:12 PM Feb 07, 2018 | |

ಬೆಂಗಳೂರು: ಕೋಲಾರದಿಂದ ಬಂದ ಕೆಎಸ್‌ಆರ್‌ಟಿಸಿ ಬಸ್‌ ನಗರದ ಪ್ರವೇಶ ದ್ವಾರದಲ್ಲಿದೆ. ಎದುರಿಗೆ ಕಿ.ಮೀ.ಗಟ್ಟಲೆ ವಾಹನಗಳು ಸಾಲುಗಟ್ಟಿ ನಿಂತಿವೆ. ಪಕ್ಕದಲ್ಲೇ ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣ ಇದೆ. ಅಲ್ಲಿಯೇ ಬಸ್‌ ಇಳಿದು ಅನಾಯಾಸವಾಗಿ ಮಹೇಶ್‌ ಮೆಟ್ರೋ ಏರಬಹುದು. ಆದರೆ, ಇದಕ್ಕೆ ಅವಕಾಶ ಇಲ್ಲ!

Advertisement

ಕಾರಣ, ಮೆಟ್ರೋ ನಿಲ್ದಾಣಗಳ ಬಳಿ ಬಸ್‌ ನಿಲುಗಡೆಗೆ ಸಂಬಂಧಿಸಿದಂತೆ ಬಸ್‌ ನಿರ್ವಾಹಕನಿಗೆ ಅಧಿಕಾರಿಗಳಿಂದ ಯಾವುದೇ ಅಧಿಕೃತ ಆದೇಶ ಅಥವಾ ಸೂಚನೆ ಬಂದಿಲ್ಲ. ಆದಾಗ್ಯೂ ನಿಲ್ಲಿಸಿದರೆ, ಸಂಚಾರ ಪೊಲೀಸರು ಮತ್ತು ಬಿಎಂಟಿಸಿ ಕೆಂಗಣ್ಣಿಗೆ ಗುರಿಯಾಗಬೇಕಾಗುತ್ತದೆ ಎಂಬ ಭಯ ಚಾಲಕನದ್ದು. ಹಾಗಾಗಿ, ಅನಿವಾರ್ಯವಾಗಿ ಆ ಪ್ರಯಾಣಿಕ ನಿಲ್ದಾಣದಿಂದ ಒಂದು ಕಿ.ಮೀ ದೂರದವಿರುವ ಟಿನ್‌ ಫ್ಯಾಕ್ಟರಿ ಬಳಿ ಇಳಿದು, ನಡೆದು ಬಂದು ಮೆಟ್ರೋ ರೈಲು ಹಿಡಿಯಬೇಕು. 

ಇದು ಕೇವಲ ಕೋಲಾರದಿಂದ ಬಂದ ಮಹೇಶ್‌ ಅವರ ಸಮಸ್ಯೆ ಅಲ್ಲ. ನಾನಾ ಭಾಗಗಳಿಂದ ಕೆಎಸ್‌ಆರ್‌ಟಿಸಿ ಬಸ್‌ಗಳಲ್ಲಿ ನಗರ ಪ್ರವೇಶಿಸುವ ಸಾವಿರಾರು ಪ್ರಯಾಣಿಕರ ನಿತ್ಯದ ಗೋಳು. ನಿತ್ಯ ನೂರಾರು ಕೆಎಸ್‌ಆರ್‌ಟಿಸಿ ಬಸ್‌ಗಳು ಮೆಟ್ರೋ ನಿಲ್ದಾಣಗಳ ಎದುರಿನಿಂದಲೇ ನಗರ ಪ್ರವೇಶಿಸುತ್ತವೆ. ಬಸ್‌ಗಳ್ಲಲಿ ಬರುವ ಪ್ರಯಾಣಿಕರು ಈ ನಿಲ್ದಾಣಗಳ ಬಳಿಯೇ ಇಳಿದು ಮೆಟ್ರೋ ರೈಲಿನಲ್ಲಿ ಪ್ರಯಾಣಿಸಿ, ಸಾಕಷ್ಟು ಸಮಯ ಉಳಿಸಬಹುದು. ಆದರೆ, ನಿಗಮದಲ್ಲಿ ಈ ಸಂಬಂಧ ಸ್ಪಷ್ಟ ಸೂಚನೆ ಅಥವಾ ಆದೇಶಗಳು ಇಲ್ಲ. ಹಾಗಾಗಿ, ಈ “ನಿಲುಗಡೆ’ಯು ಚಾಲಕನ ಮನಃಸ್ಥಿತಿ ಅವಲಂಬಿಸಿದೆ. 

ಎಂಟು ತಿಂಗಳಾದರೂ ಆದೇಶವಿಲ್ಲ: ನಮ್ಮ ಮೆಟ್ರೋ ನಗರದ ನಾಲ್ಕೂ ದಿಕ್ಕುಗಳಿಗೆ ವಿಸ್ತಾರಗೊಂಡು ಎಂಟು ತಿಂಗಳು ಕಳೆದಿವೆ. ಸಾರ್ವಜನಿಕ ಸಾರಿಗೆ ಉತ್ತೇಜನ ಉದ್ದೇಶದಿಂದ, ನಷ್ಟದ ನಡುವೆಯೂ ಮೆಟ್ರೋಗೆ ಬಿಎಂಟಿಸಿ ಫೀಡರ್‌ ಬಸ್‌ ಸೇವೆ ಕಲ್ಪಿಸಿದೆ. ಆದರೆ, ಕೆಎಸ್‌ಆರ್‌ಟಿಸಿ ಮಾತ್ರ ಈ “ಸಂಪರ್ಕ ಸೇವೆ’ಯಿಂದ ವಿಮುಖವಾಗಿದೆ. ಮೆಟ್ರೋ ಪಕ್ಕದಲ್ಲಿಯೇ ಬಸ್‌ ಹಾದುಹೋಗುತ್ತಿದ್ದರೂ ಅಲ್ಲಿ ನಿಲುಗಡೆ ನೀಡುತ್ತಿಲ್ಲ. ಇದರಿಂದ ಮೆಟ್ರೋ ಸೇವೆಯ ನಿಜ ಉದ್ದೇಶ ಸಾಕಾರಗೊಳ್ಳುತ್ತಿಲ್ಲ ಎಂಬ ಆರೋಪ ಕೇಳಿಬರುತ್ತಿದೆ.

ಕೆಎಸ್‌ಆರ್‌ಟಿಸಿ, ವಾಯವ್ಯ ಮತ್ತು ಈಶಾನ್ಯ ಕರ್ನಾಟಕ ರಸ್ತೆ ಸಾರಿಗೆ ನಿಗಮಗಳಿಂದ ಅಂದಾಜು 7ರಿಂದ 8 ಸಾವಿರ ಬಸ್‌ಗಳು ನಿತ್ಯ ನಗರವನ್ನು ಪ್ರವೇಶಿಸುತ್ತವೆ. ಈ ಬಸ್‌ಗಲ್ಲಿ 3ರಿಂದ 3.5 ಲಕ್ಷ ಜನ ನಗರಕ್ಕೆ ಬಂದಿಳಿಯುತ್ತಾರೆ. ಈ ಪೈಕಿ ಬಸ್ಸು ನಗರದ ಹೃದಯಭಾಗ ಮೆಜೆಸ್ಟಿಕ್‌ ಪ್ರವೇಶಿಸುವಷ್ಟರಲ್ಲಿ ಶೇ.60 ಪ್ರಯಾಣಿಕರು ಇಳಿದಿರುತ್ತಾರೆ. ಈ ಸಂಬಂಧ ಅಂದಾಜು 20 ಡ್ರಾಪ್‌/ ಪಿಕ್‌ಅಪ್‌ ಪಾಯಿಂಟ್‌ಗಳನ್ನು ಮಾಡಲಾಗಿದೆ. ಆದರೆ, ಮೆಟ್ರೋ ನಿಲ್ದಾಣಗಳ ಬಳಿ ನಿಲ್ಲುವುದು ಬೆರಳೆಣಿಕೆ ಬಸ್‌ಗಳು. ಅದೂ ಕೂಡ ಕೋರಿಕೆಯ ನಿಲುಗಡೆ.

Advertisement

ಸಮಸ್ಯೆ ಏನು?: ಮಂಡ್ಯ, ಮೈಸೂರು ಭಾಗಗಳಿಂದ ಬರುವ ಬಸ್‌ಗಳಿಗೆ ಮೈಸೂರು ರಸ್ತೆ ಮೆಟ್ರೋ ನಿಲ್ದಾಣದ ಮೂಲಕ ಹಾದುಹೋಗಲು ಅವಕಾಶವಿದೆ. ಆದರೆ, ಬಹುತೇಕ ಎಲ್ಲ ಬಸ್‌ಗಳು ನಾಯಂಡಹಳ್ಳಿ ಫ್ಲೈಓವರ್‌ ಕಡೆ ಮುಖಮಾಡುತ್ತವೆ. ಹಾಗಾಗಿ, ಪ್ರಯಾಣಿಕರು ಲಗೇಜ್‌ ಹೊತ್ತುಕೊಂಡು ಫ್ಲೈಓವರ್‌ನಿಂದ ಕನಿಷ್ಠ ಅರ್ಧ ಕಿ.ಮೀ. ದೂರದಲ್ಲಿರುವ ಮೆಟ್ರೋ ನಿಲ್ದಾಣಕ್ಕೆ ಬರಬೇಕು. ಫ್ಲೈಓವರ್‌ ಕೆಳಗೆ ಹೋಗಲು ಏನು ಸಮಸ್ಯೆ ಎಂದು ಮಂಡ್ಯದ ಲೋಕೇಶ್‌ ಕೇಳುತ್ತಾರೆ.

ಕೋಲಾರ ಸುತ್ತಲ ಊರುಗಳಿಂದ ಬರುವ ಬಸ್ಸು, ಬೈಯಪ್ಪನಹಳ್ಳಿ ಮೆಟ್ರೋ ನಿಲ್ದಾಣದ ಮೂಲಕ ಹಾದುಹೋದರೂ ಅಲ್ಲಿ ಬಸ್‌ ನಿಲ್ಲಿಸುವುದಿಲ್ಲ. ಟಿನ್‌ಫ್ಯಾಕ್ಟರಿ, ಇಲ್ಲವೇ ಟ್ರಿನಿಟಿ ವೃತ್ತದ ಹಿಂಭಾಗದ ರಸ್ತೆಯಲ್ಲಿ ಇಳಿದು ಸಂಚಾರ ದಟ್ಟಣೆ ಕಿರಿಕಿರಿ ನಡುವೆ ಮೆಟ್ರೋ ನಿಲ್ದಾಣಕ್ಕೆ ಬರಬೇಕು. ಒಂದೆಡೆ ಸಾರ್ವಜನಿಕ ಸಾರಿಗೆಗಳನ್ನು “ಇಂಟಿಗ್ರೇಟ್‌’ ಮಾಡುವುದಾಗಿ ಸರ್ಕಾರ ಹೇಳುತ್ತದೆ. ಆದರೆ, ಮತ್ತೂಂದೆಡೆ ಮೆಟ್ರೋ ನಿಲ್ದಾಣಗಳ ಬಳಿ ಬಸ್‌ ನಿಲ್ಲಿಸಲು ಅವಕಾಶ ನೀಡುತ್ತಿಲ್ಲ ಎಂದು ಮಂಜುನಾಥ್‌ ಬೇಸರ ವ್ಯಕ್ತಪಡಿಸುತ್ತಾರೆ. 

ಸಾಲು ರಜೆ ವೇಳೆ ನರಕಯಾತನೆ: ತುಮಕೂರು ರಸ್ತೆಯ ಗೊರಗುಂಟೆಪಾಳ್ಯ, ಯಶವಂತಪುರ ಮೆಟ್ರೋ ನಿಲ್ದಾಣಗಳ ಬಳಿ ಕೆಎಸ್‌ಆರ್‌ಟಿಸಿ ಬಸ್‌ ನಿಲ್ಲಿಸುತ್ತಾರೆ. ಆದರೆ, ನಾಗಸಂದ್ರ ಮತ್ತು ಸ್ಯಾಂಡಲ್‌ ಸೋಪ್‌ ಫ್ಯಾಕ್ಟರಿ ಬಳಿ ನಿಲ್ಲಿಸುವುದಿಲ್ಲ. ಸಾಲುಸಾಲು ರಜೆ ವೇಳೆ ಈ ಮಾರ್ಗದಲ್ಲಿ ಬಸ್‌ ಸಂಚಾರ ನರಕಯಾತನೆಗೆ ಸಮ. ನಾಗಸಂದ್ರದ ಬಳಿ ನಿಲುಗಡೆ ನೀಡಲು ಚಾಲಕ-ನಿರ್ವಾಹಕರಿಗೆ ದುಂಬಾಲು ಬೀಳಬೇಕು ಎಂಬುದು ಹುಬ್ಬಳ್ಳಿಯ ಬಸವರಾಜು ಅವರ ಅಳಲು.

ಹಳೆಯ ಪಾಯಿಂಟ್‌ಗಳಲ್ಲಿ ನಾವು ಈಗಾಗಲೇ ಬಸ್‌ ನಿಲುಗಡೆ ನೀಡುತ್ತಿದ್ದೇವೆ. ಆದರೆ, ಮೆಟ್ರೋ ನಿರ್ಮಾಣಗೊಂಡ ನಂತರ ಹೊಸ ಪಾಯಿಂಟ್‌ಗಳಾಗಿವೆ. ಅಲ್ಲಿ ನಿಲುಗಡೆಗೆ ಜಾಗ, ಬೇಡಿಕೆ ಇರಬೇಕಾಗುತ್ತದೆ. ಮೆಟ್ರೋ ನಿಲ್ದಾಣಗಳ ಬಳಿ ಬಸ್‌ ನಿಲ್ಲಿಸಲು ಶೀಘ್ರವೇ ಕ್ರಮ ಕೂಡ ಕೈಗೊಳ್ಳಲಾಗುವುದು.
-ಎಸ್‌.ಆರ್‌.ಉಮಾಶಂಕರ್‌, ಕೆಎಸ್‌ಆರ್‌ಟಿಸಿ ಎಂಡಿ

* ವಿಜಯಕುಮಾರ್‌ ಚಂದರಗಿ

Advertisement

Udayavani is now on Telegram. Click here to join our channel and stay updated with the latest news.

Next