ಸಂಡೂರು: ತಾಲೂಕಿನ ಐತಿಹಾಸಿಕ ಕ್ಷೇತ್ರ ಶ್ರೀಕುಮಾರಸ್ವಾಮಿ ದೇವಸ್ಥಾನದ ಸುತ್ತಮುತ್ತಲ ಪ್ರದೇಶದ 3 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಲ್ಲಿಸಿ ದೇವಸ್ಥಾನ ರಕ್ಷಿಸಬೇಕೆಂದು ಒತ್ತಾಯಿಸಿ ಜನಸಂಗ್ರಾಮ ಪರಿಷತ್ ಹಾಗೂ ಎಐಡಿಎಸ್‌ಒ ಪದಾಧಿಕಾರಿಗಳು ತಹಶೀಲ್ದಾರ್ ಎಚ್. ಎಂ.ರಮೇಶ್ ಅವರಿಗೆ ಮನವಿ ಸಲ್ಲಿಸಿದರು.
ಈ ಸಂದರ್ಭದಲ್ಲಿ ಮಾತನಾಡಿದ ಜನಸಂಗ್ರಾಮ ಪರಿಷತ್ ಮುಖಂಡ ಶ್ರೀಶೈಲ ಅಲ್ದಳ್ಳಿ, ಈಗಾಗಲೇ ಹಲವಾರು ಬಾರಿ ದೇವಸ್ಥಾನ ಉಳಿಸಿ ಎಂದು ಒತ್ತಾಯಿಸಿ ಪಾದಯಾತ್ರೆ ಮೂಲಕ ಹೋರಾಟ ಮಾಡಿದ್ದು, ಜನಪ್ರತಿನಿಧಿಗಳು, ಅಧಿಕಾರಿಗಳು ದೇವಸ್ಥಾನ ರಕ್ಷಿಸುವುದಾಗಿ ಭರವಸೆ ನೀಡಿದ್ದರು.
ಆದರೆ ಈಗ ಎಚ್.ಟಿ. ಮೈನಿಂಗ್ ಕಂಪನಿಯ ಪ್ರದೇಶದಲ್ಲಿ ಜಿಂದಾಲ್ ಕಂಪನಿಯ ಒಡೆತನದ ನಂದಿ ಮೈನಿಂಗ್ ಕಂಪನಿಗೆ ಅದಿರು ಉತ್ಪಾದನೆ ಮಾಡಲು ಗಣಿ ಮತ್ತು ಭೂ ವಿಜ್ಞಾನ ಇಲಾಖೆ ದಿನಾಂಕ: 31.05.2018ರಂದು ಪರವಾನಗಿ ನೀಡಿದ್ದು, ಕೂಡಲೇ ಗಣಿಗಾರಿಕೆ ನಿಲ್ಲಿಸಬೇಕು.ದೇವಸ್ಥಾನದ ಸುತ್ತ 3 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದು. ಅಲ್ಲದೇ ಆ ಪ್ರದೇಶವನ್ನು ರಾಷ್ಟ್ರೀಯ ಪಾರಂಪರಿಕ ತಾಣ ಎಂದು ಘೋಷಿಸಬೇಕೆಂದು ಆಗ್ರಹಿಸಿದರು.
ಜನಸಂಗ್ರಾಮ ಪರಿಷತ್ ಜಿಲ್ಲಾ ಮುಖಂಡ ಟಿ.ಎಂ.ಶಿವಕುಮಾರ್ ಮಾತನಾಡಿ, ತಾಲೂಕಿನ ಆರಾಧ್ಯ ದೈವ ಶ್ರೀಪಾರ್ವತಿ ಮತ್ತು ಕುಮಾರಸ್ವಾಮಿ ದೇವಸ್ಥಾನಗಳು ಸಮುದ್ರ ಮಟ್ಟದಿಂದ 3500 ಅಡಿ ಎತ್ತರದಲ್ಲಿವೆ. ಇದು ಐತಿಹಾಸಿಕ ಸ್ವಾಮಿ ಮಲೈ ಬೆಟ್ಟವೆಂದು ರಾಮಾಯಣ, ಮಹಾಭಾರತಗಳಲ್ಲಿ ಪ್ರಸಿದ್ಧವಾಗಿವೆ. 12 ವರ್ಷಕ್ಕೊಮ್ಮೆ ನೀಲಕುರಂಜಿ ಎನ್ನುವ ವಿಶೇಷ ಸಸ್ಯ ಪ್ರಭೇದ ಹೊಂದಿದೆ.
ಅಲ್ಲದೇ ಶ್ರೀಗಂಧ, ತೇಗದಂತಹ ಅಪರೂಪದ ಸಸ್ಯ ವರ್ಗವಿದೆ. ಸಾವಿರಾರು ಔಷಧ ಸಸ್ಯಗಳ ತಾಣವಾಗಿದೆ. ರಾಷ್ಟ್ರೀಯ ಪಕ್ಷಿ ನವಿಲು ವಾಸಿಸುವ ತಾಣವೂ ಇದಾಗಿದೆ. ಆದ್ದರಿಂದ ದೇವಸ್ಥಾನದ ಸುತ್ತ 3 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ಮಾಡಬಾರದು. 1978ರಲ್ಲಿ ಹೊರಡಿಸಿದ ಅಧಿಸೂಚನೆಯನ್ನು ರಾಜ್ಯ ಸರ್ಕಾರ ಹಿಂಪಡೆದು ಕೇವಲ 200 ಮೀಟರ್‌ಗೆ ನಿಗದಿ ಮಾಡಿದ್ದು, ಇದು ದೇವಸ್ಥಾನಕ್ಕೆ ಅಪಾಯ ತಂದೊಡ್ಡಿದೆ. ಆದ್ದರಿಂದ ಕೂಡಲೇ ಪರವಾನಗಿ ರದ್ದು ಮಾಡಬೇಕು. ಇಲ್ಲವಾದರೆ ಉಗ್ರ ಹೋರಾಟ ನಡೆಸಲಾಗುವುದು ಎಂದು ಎಚ್ಚರಿಸಿದರು.
ದೇವಸ್ಥಾನದ ಉಳುವಿಗಾಗಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ದಿನಾಂಕ: 12.03.2001 ಹಾಗೂ 2005ರ ಸುತ್ತೋಲೆಯ ಮೂಲಕ ಸರ್ಕಾರದ ಗಮನ ಸೆಳೆದಿದೆ. ಅಲ್ಲದೇ, ಈ ಪ್ರದೇಶ ಅಕ್ರಮ ಗಣಿಗಾರಿಕೆ ಎಂದು ಸಾಬೀತಾಗಿ ಗಣಿಗಾರಿಕೆ ಸ್ಥಗಿತಕ್ಕೆಲೋಕಾಯುಕ್ತ ಆದೇಶಿಸಿದೆ. ಆದರೆ ಸರ್ಕಾರ ಸಿ ಕ್ಯಾಟಗರಿ ಗಣಿ ಕಂಪನಿಗಳನ್ನು ಇ-ಹರಾಜು ಮೂಲಕ ಪ್ರಾರಂಭಸಿದ್ದು, ಕೂಡಲೇ ದೇವಸ್ಥಾನದ ಸುತ್ತ ಗಣಿಗಾರಿಕೆ ನಿಲ್ಲಬೇಕು.
ರಾಷ್ಟ್ರೀಯ ಪಾರಂಪಾರಿಕೆ ಅರಣ್ಯ ಪ್ರದೇಶ ಎಂದು ಘೋಷಿಸಬೇಕೆಂದು ಒತ್ತಾಯಿಸಿದರು. ಈ ಸಂದರ್ಭದಲ್ಲಿ ಎಐಡಿಎಸ್‌ಒ ಜಿಲ್ಲಾ ಕಾರ್ಯದರ್ಶಿ ಗೋವಿಂದ, ಮುಖಂಡರಾದ ಮಂಜು, ಹನುಮಂತಪ್ಪ, ಸೋಮಶೇಖರ್,
ಸೋಮಶೇಖರಗೌಡ ಸೇರಿದಂತೆ ಇನ್ನಿತರರಿದ್ದರು.