ಹೊಸದಿಲ್ಲಿ : ಪಾಕಿಸ್ಥಾನ ತನ್ನ ನೆಲದಲ್ಲಿ ಭಾರತದ ವಿರುದ್ಧ ಕಾರ್ಯಾಚರಿಸುತ್ತಿರುವ ಉಗ್ರರನ್ನು ಮತ್ತು ಉಗ್ರ ಸಮೂಹಗಳನ್ನು ಬೆಂಬಲಿಸುವುದನ್ನು ಕೂಡಲೇ ನಿಲ್ಲಿಸಬೇಕು ಎಂದು ಭಾರತ, ಪಾಕಿಗೆ ಅತ್ಯಂತ ನಿಷ್ಠುರ ಮತ್ತು ಕಠಿನ ಎಚ್ಚರಿಕೆಯನ್ನು ನೀಡಿದೆ.
ಜಮ್ಮು ಕಾಶ್ಮೀರದ ಪುಲ್ವಾಮಾದ ಆವಂತಿಪೋರಾದಲ್ಲಿ ಜೈಶ್ ಎ ಮೊಹಮ್ಮದ ಸಂಘಟನೆಯ ಉಗ್ರ ಆತ್ಮಾಹುತಿ ದಾಳಿ ನಡೆಸಿ 44 ಯೋಧರನ್ನು ಬಲಿ ಪಡೆದುದನ್ನು ಅನುಸರಿಸಿ ಭಾರತ, ಪಾಕಿಸ್ಥಾನಕ್ಕೆ ಈ ಕಟುವಾದ ಎಚ್ಚರಿಕೆಯನ್ನು ನೀಡಿದೆ.
ಆವಂತಿಪೋರಾ ಉಗ್ರ ದಾಳಿಯ ಸ್ಪಷ್ಟ ಚಿತ್ರಣ ಗುರುವಾರ ಸಂಜೆಯ ವೇಳೆಗೆ ದೊರಕಿದ ತತ್‌ಕ್ಷಣ ಕೇಂದ್ರ ಗೃಹ ಸಚಿವಾಲಯ ಅಧಿಕೃತ ಪ್ರಕಟನೆ ಹೊರಡಿಸಿ ಪಾಕಿಸ್ಥಾನಕ್ಕೆ ಈ ಕಟು ಎಚ್ಚರಿಕೆಯನ್ನು ನೀಡಿತಲ್ಲದೆ ವಿಶ್ವಸಂಸ್ಥೆಯ ಭದ್ರತಾ ಮಂಡಳಿಯ 1267 ನಿಷೇಧಗಳ ಸಮಿತಿಯ ಪ್ರಕಾರ ಘೋಷಿತ ಉಗ್ರ ಎನಿಸಿಕೊಂಡಿರುವ ಜೆಇಎಂ ಮುಖ್ಯಸ್ಥ ಮಸೂದ್ ಅಜರ್ ನನ್ನು ನಿಷೇಧಿತ ಉಗ್ರನೆಂದು ಸಾರಿತು.
ಜಮ್ಮು ಶ್ರೀನಗರ ಹೆದ್ದಾರಿಯಲ್ಲಿ ನಡೆದಿದ್ದ ಜೈಶ್ ಉಗ್ರನ ಆತ್ಮಾಹುತಿ ದಾಳಿಯಲ್ಲಿ 44 ಸಿಆರ್‌ಪಿಎಫ್ ಯೋಧರು ಮೃತಪಟ್ಟಿರುವುದು ಮತ್ತು ಅವರ ದೇಹಗಳು ನುಚ್ಚುನೂರಾಗಿ ಚೆಲ್ಲಾಪಿಲ್ಲಿಯಾಗಿ ರಸ್ತೆ ತುಂಬ ಹರಡಿಕೊಂಡು ಬಿದ್ದಿರುವ ದೃಶ್ಯವನ್ನು ಕಂಡು ಇಡಿಯ ದೇಶದ ಜನರು ಸಹಜವಾಗಿಯೇ ಆಕ್ರೋಶಿತರಾಗಿದ್ದಾರೆ.
ಭಾರತದ ವಿರುದ್ಧ ದಾಳಿ ಎಸಗುವ ಉದ್ದೇಶದಲ್ಲಿ ಅಸಂಖ್ಯ ಉಗ್ರರನ್ನು ಮತ್ತು ಹಲವಾರು ಉಗ್ರ ಸಂಘಟನೆಗಳನ್ನು ತನ್ನ ನೆಲದಲ್ಲಿ ಪೋಷಿಸಿ ಬೆಳೆಸಿ ಬೆಂಬಲಿಸುತ್ತಿರುವ ಪಾಕಿಗೆ ಎಂದೂ ಮರೆಯದ ಘೋರ ಪಾಠವನ್ನು ನಾವು ಕಲಿಸುವೆವು ಎಂದು ಪ್ರಧಾನಿ ಮೋದಿ ಘೋಷಿಸಿದ್ದಾರೆ.