ಚಿಕ್ಕಮಗಳೂರು: ಮಸಗಲಿಯಲ್ಲಿ ಭೂಮಿಯನ್ನು ಕೃಷಿ ಮಾಡಿ ಕಾಫಿ ಬೆಳೆಯಲಾಗಿದೆ. ಅದನ್ನು ತೆರವುಗೊಳಿಸಲು ಜಿಲ್ಲಾಡಳಿತ ಮುಂದಾಗಿದ್ದು, ಕೂಡಲೇ ನಿಲ್ಲಿಸಬೇಕೆಂದು ಕೆಪಿಸಿಸಿ ವಕ್ತಾರ ಎಚ್. ಎಚ್. ದೇವರಾಜ್ ಆಗ್ರಹಿಸಿದರು.
ಸೋಮವಾರ ಈ ಸಂಬಂಧ ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ ಅವರಿಗೆ ಮನವಿ ಸಲ್ಲಿಸಿದ ಕಾಂಗ್ರೆಸ್ ಮುಖಂಡರು, ಗ್ರಾಮದಲ್ಲಿ ಸರ್ಕಾರ ನಾಗರಿಕ ಸೌಲಭ್ಯ ಕಲ್ಪಿಸಿದೆ. ಈಗ ಏಕಾಏಕಿ ತೆರವು ಕಾರ್ಯಕ್ಕೆ ಮುಂದಾಗಿರುವುದು ಸರಿಯಲ್ಲ. ನಮ್ಮ ಭೂಮಿಯನ್ನು ನಮಗೆ ಬಿಟ್ಟು ಕೊಡಬೇಕೆಂದು ಒತ್ತಾಯಿಸಿದರು.
ಸಾಗುವಳಿ ಭೂಮಿಯನ್ನು ತೆರವುಗೊಳಿಸಿದರೆ ಕುಟುಂಬಗಳು ಬೀದಿಗೆ ಬರಲಿದ್ದು, ಪರಿಸ್ಥಿತಿ ಗಂಭೀರವಾಗಲಿದೆ. ಅವರಿಗೆ ಬದಲಿ ಭೂಮಿ ನೀಡಿ, ನಾಗರಿಕ ಸೌಲಭ್ಯ ಕಲ್ಪಿಸುವ ತನಕ ತೆರವುಗೊಳಿಸಬಾರದು ಎಂದು ಆಗ್ರಹಿಸಿದರು.
ವಿಧಾನ ಪರಿಷತ್ ಮಾಜಿ ಸದಸ್ಯೆ ಗಾಯತ್ರಿ ಶಾಂತೇಗೌಡ ಮಾತನಾಡಿ, ಪರಿಹಾರ ರೂಪದಲ್ಲಿ ನಿವೇಶನ ಮನೆ ನಿರ್ಮಿಸಿಕೊಡಬೇಕು. ಅಲ್ಲಿಯತನಕ ತೆರವುಗೊಳಿಸಬಾರದು. ಕಂದಾಯ ಮತ್ತು ಅರಣ್ಯ ಸಚಿವರು ಮತ್ತು ಮುಖ್ಯಮಂತ್ರಿಗಳು ತೆರವು ಕಾರ್ಯಕ್ಕೆ ಮುಂದಾಗಬಾರದೆಂದು ಮನವಿ ಮಾಡಿದರು.
ಕಾಂಗ್ರೆಸ್ ಜಿಲ್ಲಾಧ್ಯಕ್ಷ ಡಾ| ಕೆ.ಪಿ. ಅಂಶುಮಂತ್ ಮಾತನಾಡಿ, ನಿಷೇಧಾಜ್ಞೆ ಜಾರಿಗೊಳಿಸಿ ತೆರವು ಕಾರ್ಯಕ್ಕೆ ಮುಂದಾಗಿರುವುದು ಸರಿಯಲ್ಲ. ಮಾನವೀಯತೆ ತೋರಬೇಕಿದೆ. ನಾಗರಿಕರ ರಕ್ಷಣೆ ಜಿಲ್ಲಾಡಳಿತದ ಜವಾಬ್ದಾರಿ. ಒತ್ತಾಯಪೂರ್ವಕವಾಗಿ ತೆರವು ಕಾರ್ಯಕ್ಕೆ ಮುಂದಾಗದೆ ಜನರನ್ನು ವಿಶ್ವಾಸಕ್ಕೆ ಪಡೆದುಕೊಳ್ಳಬೇಕಿದೆ ಎಂದು ಹೇಳಿದರು.
ಮನವಿ ಸ್ವೀಕರಿಸಿದ ಅಪರ ಜಿಲ್ಲಾಧಿಕಾರಿ ಬಿ.ಆರ್. ರೂಪ ಅವರು ಜಿಲ್ಲಾಧಿಕಾರಿಗಳ ಗಮನಕ್ಕೆ ವಿಷಯ ತರುವ ಭರವಸೆ ನೀಡಿದರು. ಕಾಂಗ್ರೆಸ್ ಮುಖಂಡ ಬಿ.ಎಚ್. ಹರೀಶ್ ಸೇರಿದಂತೆ ಅನೇಕರು ಇದ್ದರು.