ಬೆಂಗಳೂರು: ನದಿ, ಕೆರೆಗಳ ನೀರನ್ನು ಕಲುಷಿತ ಮಾಡುವುದರಿಂದ ಹಾಗೂ ದೀಪಾವಳಿಯಂದು ಪಟಾಕಿ ಸಿಡಿಸುವುದರಿಂದ ವನ್ಯಜೀವಿಗಳಿಗೆ ತೊಂದರೆಯಾಗುತ್ತದೆ ಎಂದು ಆರ್ಟ್ ಆಫ್ ಲಿವಿಂಗ್ ಮುಖ್ಯಸ್ಥ ರವಿಶಂಕರ ಗುರೂಜಿ ಕಳವಳ ವ್ಯಕ್ತಪಡಿಸಿದರು. ಮಲ್ಲೇಶ್ವರದ ಭಾರತೀಯ ವಿಜ್ಞಾನ ಸಂಸ್ಥೆಯ ಜೆ.ಎನ್.ಟಾಟಾ ಸಭಾಂಗಣದಲ್ಲಿ ಸೋಮವಾರ ಹಮ್ಮಿಕೊಂಡಿದ್ದ ಅರಣ್ಯ ಇಲಾಖೆಯ 63ನೇ ವನ್ಯಜೀವಿ ಸಪ್ತಾಹದ ಸಮಾರೋಪ ಸಮಾರಂಭದಲ್ಲಿ ಅವರು ಆಶೀರ್ವಚನ ನೀಡಿದರು.
ನದಿ ಹಾಗೂ ಕೆರೆಗಳಿಗೆ ವಿಷಾನಿಲ ಬಿಡುವುದರೊಂದಿಗೆ ನೀರನ್ನು ಕಲುಷಿತ ಮಾಡುತ್ತಿದ್ದೇವೆ. ಇದರ ಅರಿವಿಲ್ಲದೇ ನೀರು ಕುಡಿಯುವ ವನ್ಯಜೀವಿಗಳು ಹಲವು ಸಮಸ್ಯೆಗಳಿಗೆ ತುತ್ತಾಗುತ್ತಿವೆ. ಮುಂದಿನ ವಾರ ದೀಪಾವಳಿ ಹಬ್ಬವಿದ್ದು, ಅಂದು ಪಟಾಕಿ ಹೊಡೆಯುವುದನ್ನು ಕಡಿಮೆ ಮಾಡಬೇಕು. ಪಟಾಕಿ ಶಬ್ಧ ವನ್ಯಜೀವಿಗಳ ಮೇಲೆ ನೇರ ಪರಿಣಾಮ ಬೀರುತ್ತಿದೆ ಎಂದು ಎಚ್ಚರಿಕೆ ನೀಡಿದರು.
ಜಿಂಕೆ ಬೇಟೆ ಜೀವಂತ: ಬನ್ನೇರುಘಟ್ಟ ರಾಷ್ಟ್ರೀಯ ಉದ್ಯಾನವನದ ಸುತ್ತಮುತ್ತಲಿನ ಹಳ್ಳಿಗಳಲ್ಲಿ ಇಂದಿಗೂ ಜಿಂಕೆ ಬೇಟಿ ಮಾಡುತ್ತಿದ್ದಾರೆ. ಇತ್ತೀಚೆಗೆ ಅಮ್ಮನನ್ನು ಕಳೆದುಕೊಂಡಿದ್ದ ಮರಿ ಜಿಂಕೆಯೊಂದು ನಮ್ಮ ಆಶ್ರಮಕ್ಕೆ ಬಂದಿತ್ತು. ಅದರ ಕಾಲಿಗೂ ಗಾಯವಾಗಿತ್ತು. ಪಶು ವೈದ್ಯರ ಸಹಾಯದ ಮೂಲಕ ಸೂಕ್ತ ಚಿಕಿತ್ಸೆ ನೀಡಲಾಗಿದೆ. ಜಿಂಕೆ ಬೇಟಿ ಇಂದಿಗೂ ಜೀವಂತವಾಗಿದೆ. ಮನುಷ್ಯರಂತೆ ಪ್ರಾಣಿ, ಪಕ್ಷಿಗಳಿಗೂ ಬದುಕುವ ಸಮಾನ ಹಕ್ಕಿದೆ. ಅದನ್ನು ನಾವೆಲ್ಲರೂ ಅರ್ಥಮಾಡಿಕೊಳ್ಳಬೇಕು ಎಂದು ಹೇಳಿದರು.
ಶಾಸಕ ಡಾ.ಸಿ.ಎನ್.ಅಶ್ವಥ್ ನಾರಾಯಣ ಮಾತನಾಡಿ, ವನ್ಯಜೀವಿಗಳ ಸಂರಕ್ಷಣೆ ಬಗ್ಗೆ ಶಿಕ್ಷಣ ಸಂಸ್ಥೆಗಳು ವಿದ್ಯಾರ್ಥಿಗಳಲ್ಲಿ ಅರಿವು ಮೂಡಿಸುವ ಕಾರ್ಯ ಮಾಡಬೇಕು. ಸರ್ಕಾರವೇ ಎಲ್ಲವನ್ನು ಮಾಡಬೇಕು ಎಂದು ಕಾಯುವುದು ಸರಿಯಲ್ಲ.ವನ್ಯ ಜೀವಿಗಳ ರಕ್ಷಣೆ ನಮ್ಮೆಲ್ಲರ ಹೊಣೆ, ಅದನ್ನು ನಿಷ್ಠೆಯಿಂದ ನಿಭಾಯಿಸಬೇಕು ಎಂದರು.
ಬಿಬಿಎಂಪಿ ಸದಸ್ಯೆ ಬಿ.ಸುಮಂಗಳಾ, ವನ್ಯಜೀವಿ ವಿಭಾಗದ ಪ್ರಧಾನ ಮುಖ್ಯ ಅರಣ್ಯ ಸಂರûಾಧಿಕಾರಿ ಪುನಾಟಿ ಶ್ರೀಧರ್, ಅರಣ್ಯ ಜೀವಿ ಪರಿಸ್ಥಿತಿ ಮತ್ತು ಪರಿಸರ ಇಲಾಖೆಯ ಅಪರ ಮುಖ್ಯ ಕಾರ್ಯದರ್ಶಿ ಪಿ.ರವಿಕುಮಾರ್, ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಸುಗಾರ, ವನ್ಯಜೀವಿಯ ಅಪರ ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಸಿ.ಜಯರಾಂ, ಹಿರಿಯ ಅರಣ್ಯಾಧಿಕಾರಿಗಳಾದ ವಿಜಯ್‌ಕುಮಾರ್ ಗೋಗಿ, ಶಾಶ್ವತಿ ಮಿಶ್ರಾ ಮೊದಲಾದವರು ಭಾಗವಹಿಸಿದ್ದರು.
ವಿಶ್ವದಲ್ಲಿ ಭಾರತ, ದೇಶದಲ್ಲಿ ಕರ್ನಾಟಕ ನಂ.1: ವಿಶ್ವದಲ್ಲಿ 3891 ಹುಲಿ ಇದೆ. ಅದರಲ್ಲಿ 2226 ಹುಲಿ ಭಾರತದಲ್ಲಿದೆ. ಕರ್ನಾಟಕದಲ್ಲಿ 406 ಹುಲಿಗಳು ಇವೆ. ಇಷ್ಟು ಹುಲಿಗಳು ದೇಶದ ಯಾವ ರಾಜ್ಯದಲ್ಲೂ ಇಲ್ಲ. ರಾಜ್ಯದಲ್ಲಿ 6,049 ಆನೆಗಳಿವೆ. ನಮಲ್ಲಿ 10 ಸಾವಿರ ಚದರ ಕಿ.ಮೀ. ಸಂರಕ್ಷಿತ ಕಾಡುಗಳು ಹಾಗೂ ಶೇ.22ರಷ್ಟು ಕಾಡುಗಳಿವೆ.
ಕಾಡು ಕಡಿಮೆಯಾಗುತ್ತಿರುವುದರಿಂದ ವನ್ಯಜೀವಿಗಳು ನಾಡಿಗೆ ಬರುತ್ತಿದೆ. ಮನುಷ್ಯ ಮತ್ತು ಪ್ರಾಣಿಗಳ ನಡುವೆ ಸಂಘರ್ಷ ಆರಂಭವಾಗಿದೆ. ಪ್ರತಿ ವರ್ಷ ವನ್ಯಜೀವಿಗಳಿಂದ 35ರಿಂದ 40 ಜನ ಸಾಯುತ್ತಿದ್ದಾರೆ. ಈ ವರ್ಷ 24 ಅರಣ್ಯಾಧಿಕಾರಿಗಳು ಸಾವನ್ನಪ್ಪಿದ್ದಾರೆ ಎಂದು ಪ್ರಧಾನ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿ ಕೆ.ಎಸ್.ಸುಗಾರ ಮಾಹಿತಿ ನೀಡಿದರು.