ಬೀದರ: ಜಿಲ್ಲೆಯಲ್ಲಿ ಕೌಟುಂಬಿಕ ಪ್ರಕರಣಗಳಾದ ವರದಕ್ಷಿಣೆ ಕಿರುಕುಳ ಪತಿ-ಪತ್ನಿಯರ ಕಲಹ ಸೇರಿದಂತೆ ಇತರೆ ಪ್ರಕರಣಗಳನ್ನು ಎನ್‌ಜಿಒಗಳು ಕೌನ್ಸೆಲಿಂಗ್ ಮೂಲಕ ಸರಿಪಡಿಸಿ ಉತ್ತಮ ಜೀವನ ನಡೆಸುವಂತೆ ಒಳ್ಳೆಯ ಕೆಲಸ ಮಾಡುತ್ತಿವೆ ಎಂದು ಜಿಲ್ಲಾಧಿಕಾರಿ ಗೋವಿಂದರೆಡ್ಡಿ ಹೇಳಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಕೌಟುಂಬಿಕ ಹಿಂಸೆಯಿಂದ ಮಹಿಳೆಯರ ಸಂರಕ್ಷಣಾ ಅನಿಯಮ ತಡೆಯುವ ಜಿಲ್ಲಾಮಟ್ಟದ ಸಮನ್ವಯ ಮತ್ತು ಪರಿಶೀಲನಾ ಸಮಿತಿ ಸಭೆಯ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, ಮಹಿಳೆಯರ ಮೇಲೆ ಕೌಟುಂಬಿಕ ಹಿಂಸೆ ಮಾಡುವುದು ಅಪರಾಧವಾಗಿದ್ದು, ಈ ರೀತಿ ಮಾಡುವವರು ವಿರುದ್ಧ ಕಾನೂನು ಕ್ರಮ ಜರುಗಿಸಲಾಗುತ್ತದೆ. ಅಂತಹ ಮಹಿಳೆಯರ ರಕ್ಷಣೆಗಾಗಿ ಜಿಲ್ಲೆಯಲ್ಲಿ ಒನ್ ಸ್ಟಾಫ್ ಸೆಂಟರ್ ಹಾಗೂ ಎನ್ ಜಿಒಗಳು, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ನೊಂದ ಮಹಿಳೆಯರ ಪರವಾಗಿ ಇದ್ದು, ಅವರಿಗೆ ಕಾನೂನು ಒದಗಿಸುವುದರ ಜೊತೆಗೆ ಅವರಿಗೆ ರಕ್ಷಣೆ ನೀಡುತ್ತವೆ ಎಂದರು.
ಬಾಲ್ಯ ವಿವಾಹ ಪ್ರಕರಣಗಳನ್ನು ಜಿಲ್ಲೆಯಲ್ಲಿ ತಡೆಯಲು ಗ್ರಾಪಂ ಮಟ್ಟದಲ್ಲಿ ಪಿಡಿಒಗಳು, ಗ್ರಾಮ ಮಟ್ಟದಲ್ಲಿ ಗ್ರಾಮ ಸೇವಕರು ಹಾಗೂ ಶಾಲೆಯ ಮುಖ್ಯ ಗುರುಗಳ ಪಾತ್ರವು ಬಹಳ ಮುಖ್ಯವಾಗಿದ್ದು ಇಂಥ ಪ್ರಕರಣಗಳು ಗಮನಕ್ಕೆ ಬಂದ ತಕ್ಷಣ ಸಂಬಂಧಿಸಿದ ಮೇಲಧಿಕಾರಿಗಳ ಗಮನಕ್ಕೆ ತಂದು ಬಾಲ್ಯ ವಿವಾಹ ಮಾಡುವವರ ವಿರುದ್ಧ ಕೇಸ್ ಬುಕ್ ಮಾಡಿ ಅಂಥವರಿಗೆ ಕಾನೂನಿನ ಪ್ರಕಾರ ಶಿಕ್ಷೆಯಾಗುವಂತೆ ಮಾಡಬೇಕು. ಅಂದಾಗ ಬಾಲ್ಯ ವಿವಾಹ ಮುಕ್ತ ಜಿಲ್ಲೆಯಾಗಲಿದೆ ಎಂದರು.
ಜಿಪಂ ಸಿಇಒ ಜಹೀರಾ ನಸೀಮ್ ಮಾತನಾಡಿ, ಎಷ್ಟೋ ಮಹಿಳೆಯರಿಗೆ ಅವರ ಮೇಲೆ ಕೌಟುಂಬಿಕ ದೌರ್ಜನ್ಯಗಳು ನಡೆದಾಗ ಸಾಂತ್ವನ ಕೇಂದ್ರಗಳ ಬಗ್ಗೆ ಅವರಿಗೆ ಗೊತ್ತಿಲ್ಲ. ಕೋವಿಡ್ ಸಂದರ್ಭದಲ್ಲಿ ಅವರ ಅಕ್ಕ ಪಕ್ಕದ ಜನರು ಮಹಿಳೆಯರ ಮೇಲೆ ದೌರ್ಜನ್ಯ ಆದಾಗ ಪೋನ್ ಮಾಡಿ ನಮಗೆ ತಿಳಿಸಿದ್ದಾರೆ. ಮಹಿಳೆಯರ ಸಾಂತ್ವಾನ ಕೇಂದ್ರಗಳ ಕುರಿತು ಹೆಚ್ಚು ಪ್ರಚಾರ ಆಗಬೇಕಾಗಿದೆ ಮತ್ತು ಮಹಿಳೆಯರಿಗೆ ಕೌಟುಂಬಿಕವಾಗಿ ಕಿರುಕುಳ ನೀಡುವುದು ಅಪರಾಧವಾಗಿದ್ದು, ಅವರ ರಕ್ಷಣೆಗಾಗಿ ಹಲವಾರು ಕಾಯ್ದೆ ಕಾನೂನುಗಳು ಮಾತ್ರವಲ್ಲದೆ ಸಂಘ-ಸಂಸ್ಥೆಗಳು ಕೆಲಸ ಮಾಡುತ್ತವೆ ಎಂದರು.
ಜಿಲ್ಲೆಯ ಅಂಗನವಾಡಿಗಳಲ್ಲಿ ಎಲ್ಲಾ ರೀತಿಯ ಸೌಲಭ್ಯಗಳನ್ನು ನೀಡಿತ್ತು, ಅವುಗಳ ಸಮರ್ಪಕ ನಿರ್ವಹಣೆಗಾಗಿ ಮಕ್ಕಳ ಅಭಿವೃದ್ಧಿ ಇಲಾಖೆಯ ಅಧಿಕಾರಿಗಳು ಆಗಾಗ ಅಂಗನವಾಡಿ ಕೇಂದ್ರಗಳಿಗೆ ಖುದ್ದಾಗಿ ಭೇಟಿ ನೀಡಿ ಅಲ್ಲಿಯ ಸ್ಥಿತಿಗತಿಗಳನ್ನು ಪರಿಶೀಲನೆ ಮಾಡಬೇಕು. ಸರಿಯಾಗಿ ನಿರ್ವಹಣೆ ಆಗಿದುರುವುದು ಕಂಡುಬಂದಲ್ಲಿ ಅಧಿಕಾರಿಗಳ ವಿರುದ್ಧ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಕೆ ನೀಡಿದರು.
ಸಭೆಯಲ್ಲಿ ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯ ಉಪ ನಿರ್ದೇಶಕ ರವೀಂದ್ರ ರತ್ನಾಕರ್, ಡಿವೈಎಸ್‌ಪಿ ಕೆ.ಎಂ ಸತೀಶ್, ಕಿತ್ತೂರು ರಾಣಿ ಚೆನ್ನಮ್ಮ ಮಹಿಳಾ ಮಂಡಲ ಅಧ್ಯಕ್ಷೆ ಡಾ| ಗುರಮ್ಮ ಸಿದ್ದಾರೆಡ್ಡಿ, ಶಿಶು ಯೋಜನಾ ಅಭಿವೃದ್ಧಿ ಅಧಿಕಾರಿಗಳು, ಜಿಲ್ಲಾ ನಿರೂಪಣಾಧಿಕಾರಿಗಳು ಮತ್ತು ಎನ್ ಜಿಒಗಳ ಮುಖ್ಯಸ್ಥರು ಭಾಗವಹಿಸಿದ್ದರು.