ಬೆಳಗಾವಿ: ನಗರದ ಭೇಂಡಿ ಬಜಾರ್ ರಸ್ತೆಯ ಮೋತಿಲಾಲ್ ಚೌಕ್‌ನಲ್ಲಿ ಪ್ರತಿಷ್ಠಾಪಿಸಲಾಗಿದ್ದ ಗಣೇಶ ಮೂರ್ತಿ ಮೇಲೆ ಶನಿವಾರ ಬೆಳಗಿನ ಸಮಯದಲ್ಲಿ ದುಷ್ಕರ್ಮಿಗಳು ಕಲ್ಲೆಸೆದು ಮೂರ್ತಿ ಭಗ್ನಗೊಳಿಸಿದ್ದರಿಂದ ಸ್ಥಳದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ.
ನಗರದ ಮಧ್ಯ ಭಾಗದಲ್ಲಿರುವ ಟೆಂಗಿನಕೇರಿ ಗಲ್ಲಿ ಪಕ್ಕದ ಮೋತಿಲಾಲ್ ಚೌಕ್‌ನಲ್ಲಿ ಸಾರ್ವಜನಿಕ ಗಣೇಶ ಮೂರ್ತಿ ಪ್ರತಿಷ್ಠಾಪಿಸಲಾಗಿದೆ. ಶುಕ್ರವಾರ ರಾತ್ರಿ ಮೊಹರಂ ಹಬ್ಬದ ಪಂಜಾ ಹಾಗೂ ತಾಬೂತಗಳ ವಿಸರ್ಜನೆ ನಿಮಿತ್ತ ಮೆರವಣಿಗೆ ಹಮ್ಮಿಕೊಳ್ಳಲಾಗಿತ್ತು. ಮಧ್ಯರಾತ್ರಿವರೆಗೂ ಮೆರವಣಿಗೆ ಇತ್ತು. ಶನಿವಾರ ನಸುಕಿನಲ್ಲಿ 3 ಗಂಟೆ ಸುಮಾರಿಗೆ ಬೈಕ್ ಮೇಲೆ ಬಂದ ಕಿಡಿಗೇಡಿಗಳು ಮೂರ್ತಿ ಮೇಲೆ ಕಲ್ಲೆಸೆದು ಭಗ್ನಗೊಳಿಸಿ ಪರಾರಿಯಾಗಿದ್ದಾರೆ.
ಗಣಪತಿ ಮೂರ್ತಿಯ ಕಿವಿ ಹಾಗೂ ಕಾಲಿನ ಭಾಗ ಭಗ್ನಗೊಂಡಿದೆ. ಇದಾದ ನಂತರ, ಆಝಾದ ಗಲ್ಲಿಯಲ್ಲಿರುವ ಪ್ರಾರ್ಥನಾ ಮಂದಿರದ ಮೇಲೂ ಕಲ್ಲು ತೂರಾಟ ನಡೆಸಲಾಗಿದೆ. ಈ ವೇಳೆ, ಆಟೋ ಜಖಂಗೊಳಿಸಿ ಗಾಜು ಪುಡಿ, ಪುಡಿ ಮಾಡಲಾಗಿದೆ. ಇದರಿಂದಾಗಿ ಈ ಪ್ರದೇಶದಲ್ಲಿ ಉದ್ವಿಘ್ನ ವಾತಾವರಣ ನಿರ್ಮಾಣವಾಗಿತ್ತು. ಬೆಳಗ್ಗೆ 4 ಗಂಟೆಗೆ ಪೊಲೀಸರು ಸ್ಥಳಕ್ಕೆ ಧಾವಿಸಿ ಪರಿಸ್ಥಿತಿ ತಿಳಿಗೊಳಿಸಿದ್ದಾರೆ. ಸಿಸಿ ಕ್ಯಾಮರಾ ದೃಶ್ಯಾವಳಿ ಆಧರಿಸಿ ಕಲ್ಲು ತೂರಾಟ ನಡೆಸಿದ ಕಿಡಿಗೇಡಿಗಳ ಬಂಧನಕ್ಕೆ ಪೊಲೀಸರು ಶೋಧ ಕಾರ್ಯ ನಡೆಸಿದ್ದಾರೆ.
ಈ ಮಧ್ಯೆ, ಶುಕ್ರವಾರ ಮಧ್ಯರಾತ್ರಿ 1 ಗಂಟೆ ಸುಮಾರಿಗೆ ಮುಜಾವರ ಗಲ್ಲಿಯಿಂದ ಮೊಹರಂ ತಾಬೂತ್ ಮೆರವಣಿಗೆ ಭೇಂಡಿ ಬಜಾರಕ್ಕೆ ಬಂದಿತ್ತು. ಇಲ್ಲಿಗೆ ಮೆರವಣಿಗೆ ಬರಲು ಅನುಮತಿ ಇರಲಿಲ್ಲ. ಆದರೂ ಮೆರವಣಿಗೆ ಸಾಗಿದ್ದರಿಂದ ಇದೇ ಓಣಿಯ ಓರ್ವ ಯುವಕ ಮೊಬೈಲ್‌ನಲ್ಲಿ ವಿಡಿಯೋ ಮಾಡಿಕೊಂಡಿದ್ದ. ಇದನ್ನು ನೋಡಿದ ಪೊಲೀಸರು ಯುವಕನನ್ನು ಬೆದರಿಸಿ ವಿಡಿಯೋ ಡಿಲೀಟ್ ಮಾಡಿಸಿದ್ದಾರೆ ಎಂದು ಸ್ಥಳೀಯರು ಆರೋಪಿಸಿದ್ದಾರೆ.
ಘಟನೆ ಹಿನ್ನೆಲೆಯಲ್ಲಿ ಭೇಂಡಿ ಬಜಾರದಲ್ಲಿಯ ಎಲ್ಲ ಅಂಗಡಿ ಮುಂಗಟ್ಟುಗಳನ್ನು ಬಂದ್ ಮಾಡಲಾಗಿತ್ತು. ಸದ್ಯ ನಗರದಲ್ಲಿ ಶಾಂತಿ ನೆಲೆಸಿದ್ದು, ಮುಂಜಾಗ್ರತಾ ಕ್ರಮವಾಗಿ ಈ ಪ್ರದೇಶದಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ.