ಸೂರತ್: ಕೆಲ ಅಪ್ರಾಪ್ತ ಬಾಲಕರು ಗಣೇಶ ಪೆಂಡಾಲ್‌ಗೆ(Ganesh pandal) ಕಲ್ಲು ಎಸೆದ(Stone throwing) ಪರಿಣಾಮ ಉದ್ವಿಗ್ನ ಪರಿಸ್ಥಿತಿ ಉಂಟಾಗಿರುವ ಘಟನೆ ಗುಜರಾತ್‌ನ ಸೂರತ್(Surat) ಜಿಲ್ಲೆಯಲ್ಲಿ ಸೋಮವಾರ(ಸೆ.9ರಂದು) ಮುಂಜಾನೆ ನಡೆದಿದೆ.
ನಗರದ ಸಯೀದ್‌ಪುರ ಪ್ರದೇಶದಲ್ಲಿ ಈ ಘಟನೆ ನಡೆದಿದ್ದು, ಆರೋಪಿಗಳ ವಿರುದ್ಧ ಕ್ರಮ ಕೈಗೊಳ್ಳುವಂತೆ ಆಗ್ರಹಿಸಿ ಸಾವಿರಾರು ಸ್ಥಳೀಯರು ಪೊಲೀಸರಿಗೆ ಆಗ್ರಹಿಸಿದ್ದಾರೆ.
ಪರಿಣಾಮ ಸ್ಥಳೀಯರು ಒಟ್ಟಾಗಿ ರಾದ್ಧಾಂತ ಸೃಷ್ಟಿಸಿದ್ದಾರೆ. ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದ್ದಾರೆ. ಪರಿಸ್ಥಿತಿ ಕೈಮೀರುವ ಹಂತಕ್ಕೆ ಬಂದಾಗ ಪೊಲೀಸರು ಸ್ಥಳಕ್ಕಾಗಮಿಸಿ ಪರಿಸ್ಥಿತಿಯನ್ನು ಹತೋಟಿಗೆ ತಂದಿದ್ದಾರೆ. ಲಾಠಿ ಪ್ರಹಾರವನ್ನು ನಡೆಸಿ, ಆಕ್ರೋಶಗೊಂಡ ಗುಂಪನ್ನು ನಿಯಂತ್ರಿಸಲು ಅಶ್ರುವಾಯು ಪ್ರಯೋಗಿಸಿದ್ದಾರೆ.
“ಕೆಲ ಮಕ್ಕಳು ಗಣೇಶ್ ಪೆಂಡಾಲ್ ಮೇಲೆ ಕಲ್ಲು ತೂರಾಟ ನಡೆಸಿದ್ದು, ಘರ್ಷಣೆ ನಡೆದಿದೆ. ತಕ್ಷಣ ಪೊಲೀಸರು ಆ ಮಕ್ಕಳನ್ನು ಅಲ್ಲಿಂದ ಕರೆದೊಯ್ದರು. ಕೂಡಲೇ ಆ ಪ್ರದೇಶದಲ್ಲಿ ಪೊಲೀಸರನ್ನು ನಿಯೋಜಿಸಲಾಯಿತು. ಬೇಕಾದ ಕಡೆಗಳಲ್ಲಿ ಲಾಠಿ ಚಾರ್ಜ್, ಅಶ್ರುವಾಯು ಪ್ರಯೋಗ ನಡೆಸಲಾಗಿದೆ. ಶಾಂತಿ ಕದಡುತ್ತಿದ್ದ ಎಲ್ಲ ಆರೋಪಿಗಳನ್ನು ಬಂಧಿಸಲಾಗುತ್ತಿದೆ. ಸುತ್ತಮುತ್ತ ಸುಮಾರು 1,000 ಪೊಲೀಸ್ ಸಿಬ್ಬಂದಿಯನ್ನು ನಿಯೋಜಿಸಲಾಗಿದೆ” ಎಂದು ಸೂರತ್ ಪೊಲೀಸ್ ಕಮಿಷನರ್ ಅನುಪಮ್ ಗೆಹ್ಲೋಟ್ ಹೇಳಿದ್ದಾರೆ.
ಒಂದು ಸಮುದಾಯ ಮೊದಲು ಕಲ್ಲು ತೂರಾಟ ನಡೆಸಿದೆ ಆ ಬಳಿಕ ಅತ್ತ ಕಡೆಯಿಂದ ಮತ್ತೊಂದು ಸಮುದಾಯದ ಜನರು ಕಲ್ಲು ತೂರಾಟ ನಡೆಸಿದ್ದಾರೆ. ಇದರಿಂದ ಪೊಲೀಸರಿಗೂ ಗಾಯಗಳಾಗಿವೆ ಎಂದು ಅವರು ಹೇಳಿದ್ದಾರೆ.
ಸದ್ಯದ ಮಾಹಿತಿಯ ಪ್ರಕಾರ ಇದುವರೆಗೆ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಹೇಳಲಾಗಿದೆ.
ಮುಂಜಾನೆ 2.30ರ ಸುಮಾರಿಗೆ ಗುಜರಾತ್ ಗೃಹ ಸಚಿವ ಹರ್ಷ ಸಾಂಘವಿ ಮತ್ತು ಸ್ಥಳೀಯ ಬಿಜೆಪಿ ಶಾಸಕ ಕಾಂತಿ ಬಲರ್ ಕೂಡ ಸ್ಥಳಕ್ಕೆ ಭೇಟಿ ನೀಡಿ, ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಕಡಿಮೆ ಮಾಡಲು ಸ್ಥಳೀಯರೊಂದಿಗೆ ಮಾತನಾಡಿದರು.
ಗಣೇಶ ಪೆಂಡಾಲ್ ಮೇಲೆ ಕಲ್ಲು ಎಸೆದ ಆರು ಮಂದಿ ಅಪ್ರಾಪ್ತರನ್ನು ಪೊಲೀಸರು ಬಂಧಿಸಿದ್ದಾರೆ. ಜೊತೆಗೆ ಕಲ್ಲು ತೂರಾಟಕ್ಕೆ ಪ್ರಚೋದನೆ ನೀಡಿದ 27 ಮಂದಿಯನ್ನು ಪೊಲೀಸರು ಬಂಧಿಸಿದ್ದಾರೆ ಎಂದು ಸಾಂಘವಿ ಹೇಳಿದ್ದಾರೆ.