Advertisement

ಇಂದಿರಾ ಕ್ಯಾಂಟಿನ್‌ ಆಹಾರದಲ್ಲಿ ಕಲ್ಲಿನ ಚೂರು!

04:29 PM Sep 10, 2019 | Team Udayavani |

ಕುಣಿಗಲ್: ತಾಲೂಕು ಕಚೇರಿ ಆವರಣದಲ್ಲಿ ನಾಗರಿಕರಿಗೆ ಕಡಿಮೆ ದರದಲ್ಲಿ ಉಪಾಹಾರ ಮತ್ತು ಊಟ ಒದಗಿಸಲು ಪ್ರಾರಂಭಿಸಿರುವ ಇಂದಿರಾ ಕ್ಯಾಂಟಿನ್‌ ಗುಣಮಟ್ಟದ ಆಹಾರ ವಿತರಿಸುವಲ್ಲಿ ವಿಫಲವಾಗಿದೆ ಎಂಬ ಸಾರ್ವಜನಿಕರಿಂದ ಆರೋಪ ಕೇಳಿ ಬಂದಿದೆ.

Advertisement

ಬೆಳಗ್ಗೆ ಉಪಾಹಾರ, ಮಧ್ಯಾಹ್ನ ಮತ್ತು ರಾತ್ರಿ ಊಟದ ವ್ಯವಸ್ಥೆ ಮಾಡಲಾಗಿದ್ದು, ರೈತರು, ಕೂಲಿ ಕಾರ್ಮಿಕರು, ಬೀದಿಬದಿ ವ್ಯಾಪಾರಿಗಳು, ಆಟೋ ಚಾಲಕರಿಗೆ ನೆರವಾಗಿದೆ ಆದರೆ ಪ್ರಾರಂಭದ ಮೊದಲ ಕೆಲ ದಿನ ಉತ್ತಮ ಹಾಗೂ ಗುಣಮಟ್ಟದ ಆಹಾರ ನೀಡಲಾಗುತಿತ್ತು. ಇತ್ತೀಚಿನ ದಿನದಿಂದ ಆಹಾರ ಗುಣಮಟ್ಟ ಕಳೆದುಕೊಳ್ಳುತ್ತಿರುವುದು ಆಕ್ರೋಶಕ್ಕೆ ಕಾರಣವಾಗಿದೆ.

ಕ್ಯಾಂಟಿನ್‌ನಲ್ಲಿ ಒಂದು ಉಪಾಹಾರ, ಮಧ್ಯಾಹ್ನ ಹಾಗೂ ರಾತ್ರಿ ಹೊತ್ತಿನ ಊಟಕ್ಕೆ ತಲಾ 300 ಜನರಿಗೆ ಟೋಕನ್‌ ನೀಡಲಾಗುತ್ತಿದೆ. ಆಹಾರ ಸಿದ್ಧಪಡಿಸಿ ವಿತರಿಸಲು ಗುತ್ತಿಗೆ ನೀಡಲಾಗಿದೆ. ಕೆಲವರಿಗೆ ಊಟ ಸಿಕ್ಕಿದರೆ ಮತ್ತೆ ಕೆಲವರು ಊಟ ಸಿಗದೆ ವಾಪಸ್‌ ಹೋಗುತ್ತಿರುವುದು ನಿತ್ಯ ಕಾಣಬಹುದಾಗಿದೆ.

ಆಹಾರದಲ್ಲಿ ಕಲ್ಲು: ಆರಂಭದಲ್ಲಿ ಕೆಲವು ದಿನ ತಹಶೀಲ್ದಾರ್‌ ವಿ.ಆರ್‌. ವಿಶ್ವನಾಥ್‌, ಪುರಸಭಾ ಮುಖ್ಯಾಧಿಕಾರಿ ಆರ್‌. ರಮೇಶ್‌ ಸೇರಿ ಜನಪ್ರತಿ ನಿಧಿಗಳು ಪರಿಶೀಲನೆ ಆಗಮಿಸುತ್ತಿದ್ದಾಗ ಶುಚಿ, ರುಚಿಕರ ತಿಂಡಿ ಹಾಗೂ ಊಟ ನೀಡಲಾಗುತಿತ್ತು. ಆದರೆ ಅಧಿಕಾರಿಗಳು ಇತ್ತಕಡೆ ಬರುವುದು ಕಡಿಮೆ ಯಾದ ಕಾರಣ ಆಹಾರದಲ್ಲಿ ಗುಣಮಟ್ಟ ಕಡಿಮೆಯಾಗಿದ್ದು, ತಿಂಡಿ ಮತ್ತು ಊಟದಲ್ಲಿ ಕಲ್ಲಿನ ಚೂರು ಸಿಗುತ್ತಿದೆ. ಅನ್ನ ಸರಿಯಾಗಿ ಬೇಯಿಸದೆ ಅರ್ಧ ಬೆಂದ ಅನ್ನ ವಿತರಿಸಲಾಗುತ್ತಿದೆ. ಸಾಂಬಾರ್‌ನಲ್ಲಿ ತರಕಾರಿ ಹುಡುಕುವಂತಾಗಿದೆ ಎಂಬುದು ಮಲ್ಲಿ ಪಾಳ್ಯದ ಆಟೋ ಚಾಲಕ ನಾಗರಾಜು ಆರೋಪ.

ತೂಕದಲ್ಲಿ ಮೋಸ: ಬೆಳಗ್ಗೆ ಉಪಾಹಾರಕ್ಕೆ 5 ರೂ. ಹಾಗೂ ಮಧ್ಯಾಹ್ನ ಹಾಗೂ ರಾತ್ರಿ ಊಟಕ್ಕೆ 10 ರೂ. ನಿಗದಿಪಡಿಸಲಾಗಿದೆ. ಸರ್ಕಾರ ಒಂದು ತಿಂಡಿ ಹಾಗೂ ಎರಡು ಊಟಕ್ಕೆ ಒಬ್ಬ ವ್ಯಕ್ತಿಗೆ 57 ರೂ. ಸಹಾಯಧನ ನೀಡುತ್ತಿದೆ. ಆದರೆ ಸರ್ಕಾರ ನಿಗದಿಪಡಿಸಿರುವ ಪ್ರಮಾಣದಲ್ಲಿ ಆಹಾರ ನೀಡದೆ ಕಡಿಮೆ ಪ್ರಮಾಣದ ಆಹಾರ ನೀಡಲಾಗುತ್ತಿದೆ ಎಂದು ಲಂಚಮುಕ್ತ ತಾಲೂಕು ಅಧ್ಯಕ್ಷ ಎಂ.ಡಿ. ಮೋಹನ್‌ ದೂರು.

Advertisement

ಹೆಸರಿಗಷ್ಟೇ ಆಹಾರ ವಿತರಣಾ ಪಟ್ಟಿ: ಬೆಳಗ್ಗೆ ಇಡ್ಲಿ, ಪುಳಿಯೊಗರೆ, ಖಾರಬಾತ್‌, ಪೋಂಗಲ್, ರವಾ ಕಿಚಡಿ, ಚಿತ್ರಾನ್ನ, ವಾಂಗಿ ಬಾತ್‌, ಮತ್ತು ಕೇಸರಿ ಬಾತ್‌, ಮಧ್ಯಾಹ್ನ ಅನ್ನ, ತರಕಾರಿ ಸಾಂಬಾರ್‌, ಮೊಸರನ್ನ ಹಾಗೂ ರಾತ್ರಿ ಟೊಮ್ಯಾಟೋ ಬಾತ್‌, ಚಿತ್ರಾನ್ನ, ವಾಂಗಿಬಾತ್‌, ಬಿಸಿಬೇಳೆಬಾತ್‌, ಮೆಂತೆ ಪಲಾವ್‌, ಪುಳಿಯೊಗರೆ, ಮತ್ತು ಮೊಸರನ್ನ, ಪಲಾವ್‌, ಮೊಸರನ್ನ ಪ್ರತಿದಿನ ನೀಡಲಾಗುವುದೆಂದು ಆಹಾರ ವಿತರಣಾ ಪಟ್ಟಿಯಲ್ಲಿ ಹಾಕ ಲಾಗಿದೆ. ಆದರೆ ಕ್ಯಾಂಟಿನ್‌ ಪ್ರಾರಂಭವಾಗಿ ಎರಡು ತಿಂಗಳು ಕಳೆದರೂ ಇಡ್ಲಿ ಹಾಗೂ ರವಾ ಕಿಚಡಿ ರುಚಿ ಜನ ನೋಡಿಲ್ಲ. ಇಡ್ಲಿ ಕೇಳಿದರೆ ಸ್ಟೀಮ್‌ ಬಂದಿಲ್ಲ ಎಂದು ಆಹಾರ ವಿತರಕರು ಸಬೂಬು ಹೇಳುತ್ತಾರೆ.

ಕ್ಯಾಂಟಿನ್‌ ಅವವ್ಯಸ್ಥೆ: ಬಡಜನರ ಹೊಟ್ಟೆ ತುಂಬಿಸಲು ಸರ್ಕಾರ ಕೋಟ್ಯಂತರ ರೂ. ಖರ್ಚು ಮಾಡಿ ಇಂದಿರಾ ಕ್ಯಾಂಟಿನ್‌ ಪ್ರಾರಂಭಿಸಿ ಕಡಿಮೆ ದರದಲ್ಲಿ ಆಹಾರ ಪೂರೈಕೆಗೆ ಕ್ರಮ ಕೈಗೊಂಡಿದೆ. ಆಹಾರ ಪೂರೈಕೆ ಜವಾಬ್ದಾರಿ ಕೆಲ ಗುತ್ತಿಗೆದಾರರಿಗೆ ನೀಡಿದೆ. ಗುತ್ತಿಗೆಯಲ್ಲಿ ಕೆಲ ಷರತ್ತು ಸರ್ಕಾರ ವಿಧಿಸಿದೆ. ಗುಣಮಟ್ಟದ ಆಹಾರ, ಸಮರ್ಪಕ ತೂಕ ಹಾಗೂ ಶುಚಿ, ರುಚಿ ವ್ಯವಸ್ಥೆ ಮಾಡಬೇಕೆಂದು ಕಟ್ಟುನಿಟ್ಟಿನ ಆದೇಶ ನೀಡಿದ್ದರೂ, ಗುತ್ತಿಗೆದಾರರು ನೇಮಿಸಿರುವ ಹುಡುಗರು ತಮಗೆ ಇಷ್ಟ ಬಂದ ಹಾಗೆ ಆಹಾರ ವಿತರಣೆ ಮಾಡುತ್ತಿರುವುದು ಅವ್ಯವಸ್ಥೆಗೆ ಕಾರಣವಾಗಿದೆ. ತಹಶೀಲ್ದಾರ್‌ ಹಾಗೂ ಸಂಬಂಧ ಪಟ್ಟ ಅಧಿಕಾರಿಗಳು ಸಮರ್ಪಕ ಹಾಗೂ ಗುಣಮಟ್ಟದ ಆಹಾರ ಪೂರೈಕೆಗೆ ಕ್ರಮ ಕೈಗೊಳ್ಳಬೇಕಿದೆ.

 

● ಕೆ.ಎನ್‌. ಲೋಕೇಶ್‌

Advertisement

Udayavani is now on Telegram. Click here to join our channel and stay updated with the latest news.

Next