ಮಂಡ್ಯ: ಕೃಷ್ಣರಾಜಸಾಗರ ಜಲಾಶಯದ ಸುತ್ತಮುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆಗೆ ಅಪಾಯ ಎದುರಾಗಿದೆ. ಸುರಕ್ಷತೆ ದೃಷ್ಟಿಯಿಂದ ತಕ್ಷಣವೇ ಅಣೆಕಟ್ಟು ಸುತ್ತಲಿನ 20 ಕಿ.ಮೀ. ವ್ಯಾಪ್ತಿಯಲ್ಲಿ ಗಣಿಗಾರಿಕೆ ನಿಷೇಧಿಸುವಂತೆ ಸಂಸತ್ತಿನಲ್ಲಿ ಸಂಸದೆ ಸುಮಲತಾ ಆಗ್ರಹಿಸಿದ್ದಾರೆ.
ಮೊಟ್ಟ ಮೊದಲ ಬಾರಿಗೆ ಅಣೆಕಟ್ಟು ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆ ವಿರುದ್ಧ ಹೋರಾಟದ ಕಹಳೆ ಮೊಳಗಿಸಿರುವ ಸುಮಲತಾ, ಅಣೆಕಟ್ಟೆಗೆ ಸೂಕ್ತ ಭದ್ರತೆ ಬಗ್ಗೆ ಕಾಳಜಿ ವಹಿಸುವಂತೆಯೂ ಕೂಗೆಬ್ಬಿಸಿದ್ದಾರೆ.
ನನ್ನ ಕ್ಷೇತ್ರವಾದ ಮಂಡ್ಯ ಜಿಲ್ಲೆಯಲ್ಲಿರುವ ಕೃಷ್ಣರಾಜಸಾಗರ ಸುಮಾರು ನೂರು ವರ್ಷ ಹಳೆಯದ್ದಾಗಿದೆ. ಅಣೆಕಟ್ಟೆಯ ವಿನ್ಯಾಸವಿರುವ ಹಲವು ಭಾಗಗಳಲ್ಲಿ ಈಗಾಗಲೇ ಸಣ್ಣ ಸಣ್ಣ ಬಿರುಕುಗಳು ಕಾಣಿಸಿಕೊಂಡು ದುರಸ್ತಿ ಕಾರ್ಯವನ್ನೂ ನಡೆಸಲಾಗಿದೆ. ಜಲಾಶಯದ ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಿಂದ ಅಣೆಕಟ್ಟೆ ಸುರಕ್ಷತೆಗೆ ಗಂಡಾಂತರ ಎದುರಾಗಿದೆ ಎಂದು ಅನೇಕ ಪರಿಣಿತ ತಜ್ಞರು ಅಭಿಪ್ರಾಯಪಟ್ಟಿದ್ದಾರೆ. ಗಣಿ ಮಾಲೀಕರು ಕಲ್ಲು ಸಿಡಿಸಲು ನಿಷೇಧಿತ ಸ್ಫೋಟಗಳನ್ನು ಬಳಸುತ್ತಿರುವುದೇ ಅಣೆಕಟ್ಟೆಗೆ ಗಂಡಾಂತರ ಎದುರಾಗಲು ಪ್ರಮುಖ ಕಾರಣವಾಗಿದೆ ಎಂದು ತಿಳಿಸಿದರು.
ಅಣೆಕಟ್ಟು ಸುತ್ತ ನಡೆಯುತ್ತಿರುವ ಅಕ್ರಮ ಕಲ್ಲು ಗಣಿಗಾರಿಕೆಯಲ್ಲಿ ಸ್ಥಳೀಯ ಪ್ರಭಾವಿ ರಾಜಕಾರಣಿಗಳು, ಅಪರಾಧದ ಹಿನ್ನೆಲೆಯುಳ್ಳವರು ಹಾಗೂ ಅಧಿಕಾರಿಗಳು ಕೈಜೋಡಿಸಿರುವ ಆರೋಪಗಳು ಕೇಳಿಬಂದಿವೆ. ಕಲ್ಲು ಗಣಿ ಪ್ರದೇಶದಲ್ಲಿ ನಿರಂತರವಾಗಿ ಸ್ಫೋಟಗಳು ಸಂಭವಿಸುತ್ತಿರುವು ದರಿಂದ ಅಣೆಕಟ್ಟೆಗೆ ಅಪಾಯದ ಆತಂಕ ಹೆಚ್ಚುತ್ತಲೇ ಇದೆ. ಇದನ್ನು ತಡೆಯುವ ತುರ್ತು ಅಗತ್ಯವಿದೆ ಎಂದು ಹೇಳಿದರು.
ತೀವ್ರ ಸ್ವರೂಪದ ಸ್ಫೋಟಗಳಿಂದ ಅಣೆಕಟ್ಟೆಗೆ ಧಕ್ಕೆಯಾಗುವ ಸಾಧ್ಯತೆಗಳಿವೆ. ಕಲ್ಲು ಸ್ಫೋಟಗಳ ಬಗ್ಗೆ ನಿರ್ಲಕ್ಷ್ಯ ವಹಿಸಿದರೆ ಮುಂದೊಂದು ದಿನ ರೈತರ ಬದುಕು ಸರ್ವನಾಶವಾಗುವ ಭೀತಿ ಸೃಷ್ಟಿಯಾಗಿದೆ. ಲಕ್ಷಾಂತರ ಎಕರೆಗೆ ನೀರುಣಿಸುವ ಕೃಷ್ಣರಾಜಸಾಗರ ಅಣೆಕಟ್ಟೆಯ ಭದ್ರತೆ ಒದಗಿಸುವುದು ರೈತರ ಹಿತದೃಷ್ಟಿಯಿಂದ ಅಗತ್ಯ ಮತ್ತು ಅನಿವಾರ್ಯವಾಗಿದೆ. ಆದ ಕಾರಣ ಈ ಕೂಡಲೇ ಅಣೆಕಟ್ಟು ಸುತ್ತ 20 ಕಿ.ಮೀ. ವ್ಯಾಪ್ತಿಯಲ್ಲಿ ನಡೆಯುತ್ತಿರುವ ಕಲ್ಲು ಗಣಿಗಾರಿಕೆಯನ್ನು ಶಾಶ್ವತವಾಗಿ ನಿಷೇಧಿಸಬೇಕು. ಇದರ ಬಗ್ಗೆ ಜಲಶಕ್ತಿ ಹಾಗೂ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಸಚಿವರು ತ್ವರಿತ ಕ್ರಮ ಕೈಗೊಳ್ಳುವಂತೆ ಮನವಿ ಮಾಡಿದರು.