ಬಾಗೇಪಲ್ಲಿ: ಚೇಳೂರು ನೂತನ ತಾಲೂಕಿನ ನಾರೇಮದ್ದೇಪಲ್ಲಿ ಗ್ರಾಪಂ ವ್ಯಾಪ್ತಿಯ ಕಲ್ಲುರಾಯನಕುಂಟೆ ಬಳಿ ಅಧಿಕಾರಿಗಳ ಕುಮ್ಮಕ್ಕಿನಿಂದ ಕಲ್ಲು ಗಣಿಗಾರಿಕೆಗೆ ಅನುಮತಿ ನೀಡಿದ್ದು, ಸುತ್ತಮುತ್ತಲಿನ ಜನರಿಗೆ ಹಾಗೂ ಜಾನುವಾರುಗಳಿಗೆ ತೊಂದರೆ ಆಗುತ್ತಿದೆ. ಅನುಮತಿಯನ್ನು ಸಂಬಂಧಪಟ್ಟ ಅಧಿಕಾರಿಗಳು ರದ್ದುಪಡಿಸಬೇಕು ಎಂದು ಶಾಸಕ ಎಸ್. ಎನ್.ಸುಬ್ಟಾರೆಡ್ಡಿ ಸರ್ಕಾರಕ್ಕೆ ಒತ್ತಾಯಿಸಿದರು.
ನಾರೇಮದ್ದೇಪಲ್ಲಿ ಗ್ರಾಮ ಪಂಚಾಯಿತಿಯ ರೇಚನಾಯಕನಪಲ್ಲಿ ಗ್ರಾಮದ ಬಳಿ ಇರುವ ಕಲ್ಲುರಾಯನಕುಂಟೆಯ ಸ್ಥಳಕ್ಕೆ ಶಾಸಕ ಎಸ್.ಎನ್. ಸುಬ್ಟಾರೆಡ್ಡಿ, ಜಿಲ್ಲಾ ಹಾಗೂ ತಾಲೂಕು ಅಧಿಕಾರಿಗಳ ಜೊತೆ ಭೇಟಿ ಮಾಡಿ ಪರಿಶೀಲನೆ ನಡೆಸಿದರು. ಈ ಸಂದರ್ಭದಲ್ಲಿ ಗ್ರಾಮಸ್ಥರು ಗಣಿಗಾರಿಕೆಯಿಂದ ಜನಜೀವನಕ್ಕೆ ಆಗುತ್ತಿರುವ ತೊಂದರೆ ಹಾಗೂ ಅನಾಹುತಗಳ ಬಗ್ಗೆ ಶಾಸಕರಿಗೆ ಮನವರಿಕೆ ಮಾಡಿಕೊಟ್ಟರು.
ಜನರು ಮತ್ತು ಜಾನುವಾರುಗಳು ಇಲ್ಲಿ ಓಡಾಡಲು ಬಿಡುತ್ತಿಲ್ಲ. ದೊಡ್ಡ ಪ್ರಮಾಣದಲ್ಲಿ ಸ್ಫೋಟ ಮಾಡುತ್ತಿರುವುದರಿಂದ ಮನೆಗಳು ಬಿರುಕು ಬಿಡುತ್ತಿವೆ ಎಂದು ಗ್ರಾಮಸ್ಥರು ಅಳಲು ತೋಡಿಕೊಂಡರು.
ಫಲವತ್ತಾದ ರೈತರ ಕೃಷಿ ಭೂಮಿ ಇರುವ ಗುಂಡಂವಾರಿಪಲ್ಲಿಯಲ್ಲಿ ಕಲ್ಲುಗಣಿಗಾರಿಕೆ ಮಾಡಲು ಅನುಮತಿ ಕೊಟ್ಟಿದ್ದಾರೆ. ತಹಶೀಲ್ದಾರ್, ಅರಣ್ಯ ಇಲಾಖೆ ಎನ್‌ಒಸಿ ನೀಡಿದ್ದಾರೆಂದು ಆರೋಪಿಸಿದರು. ಶಾಸಕ ಎಸ್.ಎನ್.ಸುಬ್ಟಾರೆಡ್ಡಿ ಮಾತನಾಡಿ, ಅಧಿಕಾರಿಗಳು ಕೂಡಲೇ ಅನುಮತಿಯನ್ನು ರದ್ದುಪಡಿಸಬೇಕು ಎಂದು ಸೂಚಿಸಿದ್ದೇನೆ. ಈ ಬಗ್ಗೆ ರಾಜ್ಯ ಸರ್ಕಾರಕ್ಕೂ ಪತ್ರ ಬರೆಯುತ್ತೇನೆ. ಕಲ್ಲುಗಣಿಗಾರಿಕೆಯ ಸ್ಥಳ ಪರಿಶೀಲನೆ ಮಾಡಿದ್ದೇನೆ, ಸಾಧಕ-ಭಾದಕಗಳ ಬಗ್ಗೆ ಚರ್ಚೆ ಮಾಡಲಾಗುವುದು. ಕಲ್ಲು ಗಣಿಗಾರಿಕೆಯಿಂದ ಜನರಿಗೆ ಹಾಗೂ ಜಾನುವಾರುಗಳಿಗೆ ರೈತರಿಗೆ ತೊಂದರೆ ಆಗಿದೆ ಎಂದು ಮೇಲ್ನೋಟಕ್ಕೆ ಸಾಬೀತಾಗಿದೆ. ಇದರಿಂದ ಈ ಕಲ್ಲುಗಣಿಗಾರಿಕೆ ಅನುಮತಿಯನ್ನು ಸರ್ಕಾರ ವಾಪಸ್ ಪಡೆಯಬೇಕು ಎಂದು ಶಾಸಕರು ಒತ್ತಾಯಿಸಿದರು.
ಈ ಸಂದರ್ಭದಲ್ಲಿ ತಹಶೀಲ್ದಾರ್ ಸಿ.ರಾಮಲಕ್ಷ್ಮಯ್ಯ, ಸರ್ಕಲ್ ಇನ್ಸ್‌ಪೆಕ್ಟರ್ ಸಿ.ರವಿಕುಮಾರ್, ಗಣಿ ಮತ್ತು ಭೂ ವಿಜ್ಞಾನ ಅಧಿಕಾರಿಗಳು ಸೇರಿದಂತೆ ಮುಖಂಡರು, ಗ್ರಾಮಸ್ಥರು ಹಾಜರಿದ್ದರು.