ಬೀದರ: ಕಲ್ಲುಗಣಿ ಗುತ್ತಿಗೆಯನ್ನು ಅತ್ಯಂತ ಸುರಕ್ಷತೆಯಿಂದ ನಡೆಸುವ ಸ್ಫೋಟಕ ವಸ್ತು ಬಳಕೆ ಮಾಡುವಾಗ ಎಚ್ಚರ ವಹಿಸಬೇಕು. ಇದಕ್ಕೆ ಸಂಬಂಧಿ ಸಿದಂತೆ ಕಾನೂನು ಪಾಲನೆ ಆಗಬೇಕು. ಜೀವಹಾನಿ ಆಗದಂತೆ ಸುರಕ್ಷತಾ ಕ್ರಮ ಮತ್ತು ನಿಯಮಗಳನ್ನು ಉಲ್ಲಂಘಿಸಿದವರಿಗೆ ದಂಡ ವಿ ಧಿಸಿ ಎಚ್ಚರಿಕೆ ನೀಡಬೇಕು ಡಿಸಿ ರಾಮಚಂದ್ರನ್ ಆರ್. ಅ ಧಿಕಾರಿಗಳಿಗೆ ಸೂಚಿಸಿದರು.
ನಗರದ ಡಿಸಿ ಕಚೇರಿ ಸಭಾಂಗಣದಲ್ಲಿ ಜಿಲ್ಲಾ ಟಾಸ್ಕ್ಪೋರ್ಸ್ ಸಮಿತಿ (ಗಣಿ) ಜಿಲ್ಲಾ ಕಲ್ಲು ಪುಡಿ ಮಾಡುವ ಘಟಕಗಳ ಲೈಸೆನ್ಸ್ ನೀಡಿಕೆ ಮತ್ತು ನಿಯಂತ್ರಣ ಪ್ರಾಧಿಕಾರ ಮತ್ತು ಜಿಲ್ಲಾ ಮರಳು ಸಮಿತಿ ಸಭೆಯಲ್ಲಿ ಮಾತನಾಡಿದ ಅವರು, ಬೇರೆಡೆಗಳಲ್ಲಿ ಈಗಾಗಲೇ ಸಂಭವಿಸಿರುವಂತಹ ಅನಾಹುತಗಳು ಬೀದರನಲ್ಲಿ ಘಟಿಸದಂತೆ ಎಚ್ಚರಿಕೆ ವಹಿಸಬೇಕು ಎಂದು ಹೇಳಿದರು.
ಕರ್ನಾಟಕ ಮಾಲಿನ್ಯ ನಿಯಂತ್ರಣ ಮಂಡಳಿಯು ಕಲ್ಲುಗಣಿ ಗುತ್ತಿಗೆ ಪ್ರದೇಶಗಳಿಗೆ ಆಗಿಂದ್ದಾಗೆ ಭೇಟಿ ನೀಡಿ ಪರಿಶೀಲಿಸಿ ಧೂಳು ಹಾರದಂತೆ ಜಿಂಕ್‌ಶೀಟ್ ಅಳವಡಿಸಿರುವ ಬಗ್ಗೆ ಪರಿಶೀಲಿಸಬೇಕೆಂದು ತಿಳಿಸಿದ ಜಿಲ್ಲಾಧಿಕಾರಿಗಳು, ಗಣಿಗಾರಿಕೆ ಮುಗಿದ ನಂತರ ಆ ಪ್ರದೇಶವನ್ನು ಪುನಶ್ಚೇತನಗೊಳಿಸಲು ಸಂಬಂಧಿಸಿದ ಇಲಾಖೆಯ ಅ ಧಿಕಾರಿಗಳು ಮುಂದಾಗಬೇಕೆಂದು ಸೂಚಿಸಿದರು.
ಎಸ್‌ಪಿ ನಾಗೇಶ ಡಿ.ಎಲ್. ಮಾತನಾಡಿ, ಜಿಲ್ಲೆಯಲ್ಲಿ ಅನಧಿಕೃತವಾಗಿ ಕಲ್ಲುಗಣಿ ಗುತ್ತಿಗೆ ಮಾಡುವ ಕಡೆಗಳಲ್ಲಿ ಅನಿರೀಕ್ಷಿತ ಭೇಟಿ ನೀಡಿ ಪ್ರಕರಣ ದಾಖಲಿಸಲು ತಿಳಿಸಲಾಗಿದೆ. ಅನುಮತಿ ಪಡೆದ ಕಲ್ಲುಗಣಿ ಗುತ್ತಿಗೆಗಳಿಗೆ ಮಾತ್ರ ಅವಕಾಶ ನೀಡಲಾಗುತ್ತಿದೆ ಎಂದರು. ಹಿರಿಯ ಭೂ ವಿಜ್ಞಾನಿ ಉಮೇಶ ಮಾತನಾಡಿ, ಜಿಲ್ಲೆಯಲ್ಲಿ 35 ಕಲ್ಲು ಗಣಿ ಗುತ್ತಿಗೆಗಳು ಮತ್ತು 34 ಜಲ್ಲಿಪುಡಿ ಮಾಡುವ ಘಟಕಗಳು ಇವೆ ಎಂದು ಸಭೆಗೆ ಮಾಹಿತಿ ನೀಡಿದರು.
ಸಭೆಯಲ್ಲಿ ಜಿಲ್ಲಾ ವ್ಯಾಪ್ತಿಯಲ್ಲಿ ಕಲ್ಲು ಗಣಿ ಗುತ್ತಿಗೆಗಳ ಪ್ರದೇಶದಲ್ಲಿ ಬ್ಲಾಸ್ಟಿಂಗ್ ಬಳಕೆ ಕುರಿತು ಚರ್ಚೆ ನಡೆಯಿತು. ಬೀದರ ಜಿಲ್ಲೆಯಲ್ಲಿ ಮೊಟ್ಟ ಮೊದಲನೇ ಬಾರಿಗೆ ಹೊಸದಾಗಿ ಕೃತಕ ಮರಳು ಉತ್ಪಾದನಾ ಘಟಕಕ್ಕೆ ಇದೆ ವೇಳೆ ಅನುಮೋದನೆ ನೀಡಲಾಯಿತು. ಜೊತೆಗೆ ಹೊಸದಾಗಿ 2 ಜಲ್ಲಿ ಪುಡಿ ಮಾಡುವ ಘಟಕಗಳಿಗೂ ಅನುಮೋದನೆ ಸಿಕ್ಕಿತು. ಜಿಪಂ ಸಿಇಒ ಜಹೀರಾ ನಸೀಮ್, ಸಹಾಯಕ ಆಯುಕ್ತರಾದ ಗರೀಮಾ ಪನ್ವಾರ, ಭುವನೇಶ ಪಟೇಲ್, ಗಣಿ ಮತ್ತು ಭೂ ವಿಜ್ಞಾನ ಇಲಾಖೆಯ ಲೋಕೇಶ ಹೂಗಾರ ಹಾಗೂ ಇನ್ನಿತರ ಇಲಾಖೆಗಳ ಅಧಿಕಾರಿಗಳು ಇದ್ದರು.