ನವದೆಹಲಿ/ಉತ್ತರಪ್ರದೇಶ: ರಾಜಕೀಯವಾಗಿ ಸೂಕ್ಷ್ಮವಾಗಿರುವ ರಾಮಜನ್ಮಭೂಮಿ-ಬಾಬ್ರಿ ಮಸೀದಿ ಭೂ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂಕೋರ್ಟ್ ಸಿಜೆಐ ರಂಜನ್ ಗೋಗೊಯಿ ನೇತೃತ್ವದ ಪಂಚ ಸದಸ್ಯ ಸಾಂವಿಧಾನಿಕ ಪೀಠ ಶನಿವಾರ ಸರ್ವಾನುಮತದ ತೀರ್ಪನ್ನು ನೀಡಿದೆ.
ಅಯೋಧ್ಯೆಯಲ್ಲಿಯೇ ರಾಮಮಂದಿರ ನಿರ್ಮಾಣಕ್ಕೆ ಕಾನೂನು ರೂಪಿಸುವಂತೆ ಸುಪ್ರೀಂಪೀಠ ಕೇಂದ್ರಕ್ಕೆ ಸೂಚನೆ ನೀಡಿದ್ದು, ಸುನ್ನಿ ವಕ್ಫ್ ಬೋರ್ಡ್ ಗೆ ಅಯೋಧ್ಯೆಯಲ್ಲಿಯೇ ಐದು ಎಕರೆ ಜಾಗ ನೀಡಬೇಕೆಂದು ಹೇಳಿದೆ. 2.77ಎಕರೆ ರಾಮಲಲ್ಲಾ ವಶಕ್ಕೆ ನೀಡಿದೆ. ಈ ಹಿನ್ನೆಲೆಯಲ್ಲಿ ಕಳೆದ ಎರಡು ದಶಕಗಳಿಂದ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಹೇಗೆ ನಡೆಯುತ್ತಿದೆ ಎಂಬ ಸಂಕ್ಷಿಪ್ತ ನೋಟ ಇಲ್ಲಿದೆ.
1992ರ ಡಿಸೆಂಬರ್ 6ರಂದು ಬಾಬ್ರಿ ಮಸೀದಿ ಧ್ವಂಸಗೊಳ್ಳುವ ಘಟನೆಯ ಮುನ್ನವೇ ಅಯೋಧ್ಯೆಯ ಕರಸೇವಕಪುರಂನಲ್ಲಿ ರಾಮಮಂದಿರ ನಿರ್ಮಾಣಕ್ಕೆ ಸಂಬಂಧಿಸಿದ ಚಟುವಟಿಕೆ 1990ರಿಂದಲೇ ಆರಂಭಗೊಂಡಿತ್ತು. ನಂತರವೂ ಕೂಡಾ ಪ್ರಕರಣ ಕೋರ್ಟ್ ಕಟಕಟೆಯಲ್ಲಿ ಇದ್ದಾಗಲೂ ಅಯೋಧ್ಯೆಯಲ್ಲಿ ರಾಮಮಂದಿರ ನಿರ್ಮಾಣ ಕಾರ್ಯ ಮುಂದುವರಿದಿತ್ತು.
1990ರಲ್ಲಿ 150 ಮಂದಿ ಕುಶಲ ಕರ್ಮಿಗಳು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದರು. ಪ್ರತಿದಿನ ಬೆಳಗ್ಗೆ 7ಗಂಟೆಯಿಂದ ಸಂಜೆ 5ಗಂಟೆವರೆಗೆ ಕೆಲಸ ಮಾಡುತ್ತಿದ್ದರು. ಅಮಾವಾಸ್ಯೆ ದಿನ ಮಾತ್ರ ಕೆಲಸ ಸ್ಥಗಿತಗೊಳಿಸುತ್ತಿದ್ದರು ಎಂದು ಕಾರ್ಯಶಾಲಾದ ಉಸ್ತುವಾರಿ ವಹಿಸಿಕೊಂಡಿದ್ದ ಅನ್ನು ಭಾಯ್ ಸೋಮಪುರ್ ಅಭಿಪ್ರಾಯವ್ಯಕ್ತಪಡಿಸಿದ್ದರು.
ಸದ್ಯ ಕೆಲವೇ ಕೆಲವು ಕುಶಲಕರ್ಮಿಗಳು ರಾಮಮಂದಿರ ನಿರ್ಮಾಣ ಕಾರ್ಯದಲ್ಲಿ ತೊಡಗಿದ್ದು, ಇನ್ನು ಕುಶಲಕರ್ಮಿಗಳ ಸಂಖ್ಯೆ ಹೆಚ್ಚಿಸಲಾಗುವುದು ಎಂದು ತಿಳಿಸಿದ್ದಾರೆ. ಈಗ ಸುಮಾರು ಶೇ.60ರಷ್ಟು ಕೆಲಸ ಮುಕ್ತಾಯಗೊಂಡಿದ್ದು, ಮೊದಲ ಮಹಡಿಗೆ ಸಂಬಂಧಿಸಿದ ಕಾರ್ಯ ಮುಕ್ತಾಯಗೊಂಡಿದೆ.