Advertisement
ಕೊಲ್ಲೂರಿನ ಬೃಹತ್ ಶಿಲಾಯುಗ ನಿವೇಶನದ ಶೋಧ, ಕೊಲ್ಲೂರು ಮತ್ತು ಕೊಲ್ಲೂರಿನ ಮೂಕಾಂಬಿಕೆಯ ಪ್ರಾಚೀನತೆಯನ್ನು ಸುಮಾರು ಕ್ರಿ.ಪೂ. 1000 ವರ್ಷಗಳಷ್ಟು ಪ್ರಾಚೀನ ಪರಂಪರೆ ಎಂಬುದನ್ನು ದೃಡೀಕರಿಸಲಿದೆ. ದೇವಿ ಪುರಾಣದ ಪ್ರಕಾರ ಮೂಕಾಸುರನನ್ನು ದೇವಿ ಸಂಹರಿಸಿ ಮೂಕಾಂಬಿಕೆ ಎಂಬ ಅಭಿದಾನವನ್ನು ಪಡೆದುಕೊಂಡು ಕೊಲ್ಲೂರಿನಲ್ಲಿ ನೆಲೆಸಿದ್ದಾಳೆ. ಬಹುಶಃ ಮೂಕಾಸುರನ ಸಮಾಧಿಯ ಸಮೀಪ ಆತನ ಸ್ಮಾರಕವಾಗಿ ಈ ಶಿಲೆಯನ್ನು ನಿಲ್ಲಿಸಿರಬಹುದು.
ಬೃಹತ್ ಶಿಲಾಯುಗ ಕಾಲದ ಸಮಾಧಿಗಳ ಸಮೀಪದಲ್ಲಿ ಮೃತ ವ್ಯಕ್ತಿಗಳ ನೆನಪಿಗಾಗಿ ನೆಟ್ಟಿರುವ ಸ್ಮಾರಕಶಿಲೆಗಳಿವು. ಸುಮಾರು 1.5 ಮೀ.ನಿಂದ 3 ಮೀ. ಎತ್ತರದವರೆಗಿನ ಕಲ್ಲುಗಳನ್ನು ಬಹುತೇಕ ಪೂರ್ವದ ದಿಕ್ಕಿಗೆ ಸ್ವಲ್ಪ ವಾಲಿದಂತೆ ನಿಲ್ಲಿಸಲಾಗಿದೆ. ನಿಲ್ಸ್‌ಕಲ್ ಹೆಸರೇ ಸೂಚಿಸುವಂತೆ ಇವು ನಿಲ್ಲಿಸಿದ ಕಲ್ಲು. ಇವು ಸುಮಾರು 2.10 ಮೀ. ಎತ್ತರವಾಗಿದ್ದು, ಬುಡದಲ್ಲಿ 0.65 ಮೀ., ತುದಿಯಲ್ಲಿ 0.55 ಮೀ. ಅಗಲವಾಗಿದೆ. ಗ್ರಾನೈಟ್ ಶಿಲೆಯನ್ನೇ ಈ ನಿಲ್ಸ್‌ಕಲ್‌ಗೆ ಬಳಸಲಾಗಿದೆ. ಬೃಹತ್ ಶಿಲಾಯುಗದ ಜನ ದಕ್ಷಿಣ ಭಾರತದಾದ್ಯಂತ ಗ್ರಾನೈಟ್ ಶಿಲೆಯನ್ನೇ ಸಮಾಧಿಗಳ ರಚನೆಗಾಗಿ ಬಳಸಿಕೊಂಡಿರುವುದು ಸಂಸ್ಕೃತಿಯ ವೈಶಿಷ್ಟ್ಯವಾಗಿದೆ.