ಬಾಲ್ಯದಲ್ಲಿ ನನಗೆ ಶಾಲೆಗೆ ಹೋಗೋದು ಅಂದರೆ ಅಲರ್ಜಿ. ಚಕ್ಕರ್ ಹೊಡೆಯಲು ದಿನವೂ ಏನಾದರೂ ಉಪಾಯ ಮಾಡುತ್ತಿದ್ದೆ. ಅದಾವುದೂ ಅಮ್ಮನ ಬಳಿ ನಡೆಯುತ್ತಿರಲಿಲ್ಲ. ಅಮ್ಮನಿಗೆ ಒಂದು ಸಾರಿ ನಿಜಕ್ಕೂ ವಾಂತಿ ಹಾಗೂ ಹೊಟ್ಟೆ ನೋವು ಶುರುವಾಯಿತು. ಆಸ್ಪತ್ರೆಗೆ ಹೋದಾಗ, “ಸಮಯಕ್ಕೆ ಸರಿಯಾಗಿ ಊಟ ತಿಂಡಿ ಮಾಡದೇ ಇರುವುದರಿಂದ ಗ್ಯಾಸ್ಟ್ರಿಕ್ ಆಗಿ ಹೀಗಾಗಿದೆ’ ಎಂದು ಡಾಕ್ಟರ್ ಹೇಳಿದರು. ಸ್ವಲ್ಪ ದಿನ ಬೆಡ್ ರೆಸ್ಟ್ ಮಾಡುವಂತೆ ಅಮ್ಮನಿಗೆ ಹೇಳಿದರು.
ಅದನ್ನು ಕೇಳಿ ನನಗೆ ಖುಷಿಯಾಯ್ತು. ಅಮ್ಮನಿಗೆ ಸಹಾಯ ಮಾಡಿಕೊಂಡು ಮನೆಯಲ್ಲಿ ಇರುತ್ತೇನೆ. ಅವರ ಆರೋಗ್ಯ ಸರಿಯಾದ ಮೇಲೆ ಶಾಲೆಗೆ ಹೋಗುತ್ತೇನೆ ಅಂದೆ. ಆದರೆ ಅಮ್ಮ, “ಬೇಡ ಮಗಳೇ, ನನ್ನಿಂದಾಗಿ ನೀನು ಶಾಲೆ ತಪ್ಪಿಸುವುದು ಬೇಡ. ಊರಿನಿಂದ ಅಜ್ಜಿಗೆ ಬರಲು ಹೇಳಿದ್ದೇನೆ’ ಎಂದರು.
ಅಲ್ಲೂ ನನ್ನ ಉಪಾಯ ಫಲ ನೀಡಲಿಲ್ಲ. ಕೊನೆಗೆ ಇನ್ನೇನು ಮಾಡುವುದು? ಡಾಕ್ಟರ್ ಹೇಳಿದ್ದನ್ನು ಕೇಳಿದ್ದೆನಲ್ಲ; ಪೇಶೆಂಟ್ ಆಗಿಬಿಟ್ಟರೆ ನನಗೂ ಧಾರಾಳವಾಗಿ ರಜೆ ಸಿಗುತ್ತದೆ ಅನ್ನಿಸಿತು. ಅಂದಿನಿಂದ ನಾನೇ ರಾತ್ರಿ ಊಟ ಬಿಡತೊಡಗಿದೆ. ಬೆಳಿಗ್ಗೆ ಕೂಡ ಸರಿಯಾಗಿ ತಿಂಡಿ ಮಾಡುತ್ತಿರಲಿಲ್ಲ. ಕೆಲವೇ ದಿನಗಳಲ್ಲಿ ನನಗೂ ಶುರುವಾಯಿತು ನೋಡಿ ಹೊಟ್ಟೆ ನೋವು, ವಾಂತಿ. ಅಪ್ಪ ಡಾಕ್ಟರ್ ಬಳಿ ಕರೆದುಕೊಂಡು ಹೋದರು. ನಿಶ್ಶಕ್ತಿಯಿಂದ ಹೀಗಾಗುತ್ತಿದೆ. ಸ್ವಲ್ಪ ದಿನ ತಪ್ಪದೇ ಇಂಜೆಕ್ಷನ್, ಮಾತ್ರೆಗಳನ್ನು ತೆಗೆದುಕೊಳ್ಳಬೇಕು ಎಂದರು. ಅದರಂತೆ ಟ್ರೀಟ್‌ಮೆಂಟ್ ಶುರುವಾಯಿತು!
ದಿನ ಬಿಟ್ಟು ದಿನ ಇಂಜೆಕ್ಷನ್, ಅಸಾಧ್ಯ ನೋವು ಬೇರೆ,ಜೊತೆಗೆ ಪಥ್ಯದ ಊಟ… ಇವೆಲ್ಲದರ ಹೊಡೆತದಿಂದಾಗಿ ಹೈರಾಣಾಗಿ ಹೋದೆ. ಗೈರುಹಾಜರಾದ ಕಾರಣ ಶಾಲೆಯ ಹೋಂ ವರ್ಕ್ ಹೆಚ್ಚಾಗಿ ಬಾಕಿ ಉಳಿಯಿತು. ಚಕ್ಕರ್‌ವ್ಯೂಹ ರಚಿಸಲು ಹೋಗಿ ನಾನೇ ತೊಂದರೆಗಳ ಚಕ್ರವ್ಯೂಹದಲ್ಲಿ ಸಿಲುಕಿದೆ.
ಹುಷಾರಾದ ತಕ್ಷಣ ಶಾಲೆಗೆ ಹೊರಟೆ. ಅನಾರೋಗ್ಯದಿಂದ ಸುಸ್ತಾಗಿದ್ದೆನಲ್ಲ; ಬಾಕಿಯಿದ್ದ ಹೋಂವರ್ಕ್ ಮಾಡುವಾಗ ಅದರ ಎರಡುಪಟ್ಟು ಸುಸ್ತಾಗಿ ಹೋದೆ. ಆನಂತರದಲ್ಲಿ, ಅಮ್ಮನೇ ಹೇಳಿದರೂ ಶಾಲೆ ತಪ್ಪಿಸಿಕೊಳ್ಳಲು ಹಿಂಜರಿಯುತ್ತಿದ್ದೆ. ಈಗ ಟೀಚರ್ ಆಗಿದ್ದೇನೆ. ನನ್ನ ವಿದ್ಯಾರ್ಥಿಗಳು ಚಕ್ಕರ್ ಹೊಡೆದಾಗ ಹಿಂದಿನ ದಿನಗಳು ನೆನಪಾಗಿ ನಗು ಬರುತ್ತದೆ.
ಎ.ಆರ್. ರತ್ನ, ಅರಕಲಗೂಡು