ಮುಂಬಯಿ : ಆರ್‌ಬಿಐ ಇಂದು ಬುಧವಾರ ತನ್ನ ಹಣಕಾಸು ನೀತಿಯ ಸಭೆ ನಡೆಸಲಿದ್ದು ಅದರ ಫಲಿತಾಂಶವನ್ನು ಕಾತರದಿಂದ ಎದುರು ನೋಡುತ್ತಿರುವ ಮುಂಬಯಿ ಶೇರು ಪೇಟೆಯ ಸೆನ್ಸೆಕ್ಸ್ ಸೂಚ್ಯಂಕ ಇಂದು ಬುಧವಾರದ ತನ್ನ ಆರಂಭಿಕ ವಹಿವಾಟಿನಲ್ಲಿ 44.16 ಅಂಕಗಳ ಏರಿಕೆಯನ್ನು ದಾಖಲಿಸಿದೆ.
ಕಳೆದ ಮೂರು ದಿನಗಳ ವಹಿವಾಟಿನಲ್ಲಿ ಒಟ್ಟಾರೆಯಾಗಿ 337.57 ಅಂಕಗಳ ಏರಿಕೆಯನ್ನು ದಾಖಲಿಸಿರುವ ಸೆನ್ಸೆಕ್ಸ್ ಇಂದು ಬುಧವಾರ ಬೆಳಗ್ಗೆ 11.30ರ ಹೊತ್ತಿಗೆ 163.78 ಅಂಕಗಳ ಏರಿಕೆಯನ್ನು ದಾಖಲಿಸಿ 31,166.16 ಅಂಕಗಳ ಮಟ್ಟವನ್ನು ಏರುವಲ್ಲಿ ಸಫಲವಾಗಿದೆ.
ಇದೇ ರೀತಿ ರಾಷ್ಟ್ರೀಯ ಶೇರು ಮಾರುಕಟ್ಟೆಯ ನಿಫ್ಟಿ ಸೂಚ್ಯಂಕ 54.55 ಅಂಕಗಳ ಮುನ್ನಡೆಯನ್ನು ಸಾಧಿಸಿ 9,914.05 ಅಂಕಗಳ ಮಟ್ಟಕ್ಕೇರಿ ವಹಿವಾಟು ನಿರತವಾಗಿತ್ತು.
ಇಂದಿನ ಸಭೆಯಲ್ಲಿ ಆರ್‌ಬಿಐ ರೇಟ್ ಕಟ್ ಕ್ರಮ ಕೈಗೊಂಡೀತು ಎಂದು ಹೂಡಿಕೆದಾರರು ಹಾರೈಸುತ್ತಿದ್ದಾರೆ. ಆದರೆ ಹಣದುಬ್ಬರದ ಒತ್ತಡ ಹೆಚ್ಚುತ್ತಿರುವ ಪರಿಣಾಮವಾಗಿ ಆರ್ಥಿಕಾಭಿವೃದ್ಧಿಯು ಮಂದ ಗತಿಯಲ್ಲಿ ಸಾಗುತ್ತಿರುವ ಕಾರಣ ಆರ್‌ಬಿಐ ರೇಟ್ ಕಟ್ ಮಾಡುವ ಸಾಧ್ಯತೆ ಇಲ್ಲವೆಂದು ವಿಶ್ಲೇಷಕರು ಅಭಿಪ್ರಾಯಪಟ್ಟಿದ್ದಾರೆ.
ಇಂದಿನ ಆರಂಭಿಕ ವಹಿವಾಟಿನಲ್ಲಿ ಲೂಪಿನ್, ಒಎನ್‌ಜಿಸಿ ಏಶ್ಯನ್ ಪೇಂಟ್, ಐಟಿಸಿ ಮತ್ತು ರಿಲಯನ್ಸ್ ಇಂಡಸ್ಟ್ರೀಸ್ ಶೇರುಗಳು ಟಾಪ್ ಗೇನರ್ ಎನಿಸಿಕೊಂಡಿದ್ದವು. ಡಾಲರ್ ಎದುರು ರೂಪಾಯಿ ವಿನಿಮಯ ದರ ತಕ್ಕ ಮಟ್ಟಿಗೆ ಸುಧಾರಿಸಿರುವುದೇ ಇಂದು ಶೇರು ಮಾರುಕಟ್ಟೆಯಲ್ಲಿ ಉತ್ಸಾಹ ಕುದುರಲು ಕಾರಣವಾಗಿತ್ತು.
ಏಶ್ಯನ್ ಶೇರು ಮಾರುಕಟ್ಟೆಗಳ ಪೈಕಿ ಹಾಂಕಾಂಗ್‌ನ ಹ್ಯಾಂಗ್ ಸೆಂಗ್ ಶೇ. 0.70 ಮತ್ತು ಜಪಾನಿನ ನಿಕ್ಕಿ ಶೇ.0.22 ಏರಿಕೆಯನ್ನು ಇಂದಿನ ಆರಂಭಿಕ ವಹಿವಾಟಿನಲ್ಲಿ ಸಾಧಿಸಿವೆ.