ಅಂಬಿಕಾತನಯದತ್ತ ವೇದಿಕೆ: ಕನ್ನಡ ಮತ್ತು ಅದರ ಸಂಸ್ಕೃತಿಯ ಅಳಿವು, ಉಳಿವಿಗೂ ಕನ್ನಡ ಶಾಲೆಗಳ ಅಳಿವು, ಉಳಿವಿಗೂ ನೇರ ಸಂಬಂಧವಿದೆ. ಇಂತಹ ಮಹತ್ತರ ಪಾತ್ರ ಹೊಂದಿರುವ ಸರ್ಕಾರಿ ಕನ್ನಡ ಶಾಲೆಗಳು ವೇಗವಾಗಿ ಮುಚ್ಚಿಕೊಳ್ಳುತ್ತಿವೆ. ಅದರ ಬದಲು ಸರ್ಕಾರವೇ ಇಂಗ್ಲಿಷ್ ಮಾಧ್ಯಮ ಶಾಲೆ ಆರಂಭಿಸಲು ತೀರ್ಮಾನಿಸಿದೆ.
ಈ ನಡೆಯ ಹಿಂದಿನ ಅಪಾಯವನ್ನು ಪ್ರಸ್ತುತ ಗೋಷ್ಠಿಯಲ್ಲಿ ತೆರೆದಿಡಲಾಯಿತು. ಇಂಗ್ಲಿಷ್ ಶಾಲೆಗಳು ಯಾಕೆ ಬೇಡ, ಕನ್ನಡ ಶಾಲೆಗಳು ಯಾಕೆ ಬೇಕು, ಕನ್ನಡ ಶಾಲೆ ಉಳಿಯಬೇಕಾದರೆ ಸರ್ಕಾರ ಮಾಡಬೇಕಾಗಿದ್ದಾದರೂ ಏನೆಂಬುದು ಈ ಗೋಷ್ಠಿಯಲ್ಲಿ ವಿಚಾರ ಮಂಡಿಸಿದ ಮೂವರ ಕೇಂದ್ರ ನೋಟವಾಗಿತ್ತು.
ಸರ್ಕಾರಿ ಶಾಲೆಗಳು ಮತ್ತು ಆರ್‌ಟಿಇ ಪ್ರಲೋಭನೆ ಎಂಬ ವಿಷಯವನ್ನಿಟ್ಟುಕೊಂಡು ಸಾಮಾಜಿಕ ಕಾರ್ಯಕರ್ತೆ ನಾಗರತ್ನ ಬಂಜಗೆರೆ, ವ್ಯವಸ್ಥೆಯಲ್ಲಿ ಮುಚ್ಚಿಹೋಗಿರುವ ಹಲವು ಸಂಗತಿಗಳನ್ನು ಬಹಿರಂಗಪಡಿಸಿದರು. ಖಾಸಗಿ ಶಾಲೆಗಳಲ್ಲಿ ಆರ್‌ಟಿಇ ಸ್ಥಾನ ನಿಗದಿಪಡಿಸಿ, ಆ ಮೂಲಕ ಸರ್ಕಾರಿ ಶಾಲೆಯ ಬಡ ವಿದ್ಯಾರ್ಥಿಗಳಿಗೆ ಸ್ಥಾನ ಕೊಡುವ ಮೀಸಲಾತಿಯ ಉದ್ದೇಶ ಘನವಾದದ್ದೇ. ಆದರೆ ಅದು ಪಡೆದುಕೊಂಡಿರುವ ರೂಪಗಳು ಬೇರೆಯೇ ಆಗಿವೆ. ಶ್ರೀಮಂತ ವ್ಯಕ್ತಿಗಳೇ ಬಿಪಿಎಲ್ ಕಾರ್ಡ್ ಬಳಸಿ ತಮ್ಮ ಮಕ್ಕಳನ್ನು ಈ ಶಾಲೆಗೆ ಸೇರಿಸುತ್ತಿದ್ದಾರೆ. ಮೊದಲು ಬಂದವರಿಗೆ ಆದ್ಯತೆ ಎಂಬ ಮಾನದಂಡ ಇಲ್ಲಿ ಪಾಲನೆಯಾಗುತ್ತಿಲ್ಲ. ತಮಗೆ ಯಾರು ಬೇಕೋ ಅವರಿಗೆ ಶಾಲೆಗಳು ಆದ್ಯತೆ ನೀಡುತ್ತಿವೆ ಎನ್ನುವುದು ನಾಗರತ್ನ ಆರೋಪ.
ಮಾತೃಭಾಷಾ ಶಿಕ್ಷಣವಲ್ಲ, ಕನ್ನಡದಲ್ಲಿ ಶಿಕ್ಷಣ ಕನ್ನಡದ ಬಿಕ್ಕಟ್ಟುಗಳ ಬಗ್ಗೆ ಮಾತನಾಡಿದ ಅಬ್ದುಲ್ ರೆಹಮಾನ್ ಪಾಷಾ ನೀಡಿದ ವಿವರಣೆ, ಕೇಳುಗರನ್ನು ಚಿಂತನೆಗೆ ಹಚ್ಚುವಂತಿತ್ತು. ಸರ್ಕಾರ ಮಾತೃಭಾಷೆಯಲ್ಲಿ ಶಿಕ್ಷಣ ಎಂದು ಮಾತನಾಡುತ್ತಿದೆ. ಆದರೆ ಕರ್ನಾಟಕದಲ್ಲಿ 156 ಮಾತೃಭಾಷೆಗಳಿವೆ. ಆಗ ಪ್ರತಿಯೊಬ್ಬರೂ ತಮ್ಮ ಮಾತೃಭಾಷೆಯಲ್ಲಿ ಶಿಕ್ಷಣ ನೀಡಿ ಎಂದು ಕೇಳುವ ಪರಿಸ್ಥಿತಿ ಉದ್ಭವವಾಗಬಹುದು. ಮಾತೃಭಾಷೆಯಲ್ಲಿ ಶಿಕ್ಷಣ ಎಂಬ ಪದಬಳಕೆಯೇ ತಪ್ಪು. ಕರ್ನಾಟಕದಲ್ಲಿ ಕನ್ನಡ ಭಾಷೆಯಲ್ಲಿ ಶಿಕ್ಷಣ ಎಂದೇ ಹೇಳಬೇಕೆಂಬ ಪಾಷಾ ಅಭಿಪ್ರಾಯ ಕೇಳುಗರ ಮೆಚ್ಚುಗೆಗೆ ಪಾತ್ರವಾಯಿತು.
ನಾನೊಬ್ಬ ಉರ್ದು ಮಾತೃಭಾಷಿಗ. ನನ್ನ ತಂದೆ ಇಂಗ್ಲಿಷ್ ಶಾಲೆಗಳು ಸಿಕ್ಕದಿದ್ದಕ್ಕೆ ನನ್ನನ್ನು ಉರ್ದು ಶಾಲೆಗೆ ಸೇರಿಸಿದರು. ಹಾಗೆ ನಾನು ಕನ್ನಡ ಕಲಿತೆ. ಈಗ ನನ್ನ ಮಕ್ಕಳನ್ನು ಕನ್ನಡದಲ್ಲಿಯೇ ಓದಿಸುತ್ತಿದ್ದೇನೆ. ಕನ್ನಡ ಉಳಿಯಬೇಕಾದರೆ ಕನ್ನಡದಲ್ಲಿ ಕಲಿಯುವ ಅನಿವಾರ್ಯತೆಯನ್ನು ಸೃಷ್ಟಿಸಬೇಕು ಎಂಬ ಅವರ ನಿಲುವು ಗಂಭೀರವಾಗಿತ್ತು.
ಧರ್ಮವನ್ನು ಅಫೀಮು ಎಂದು ಹೇಳಲಾಗುತ್ತದೆ. ಅದೇ ರೀತಿ ಇಂಗ್ಲಿಷ್ ಒಂದು ಅಫೀಮಿನಂತಾಗಿದೆ. ಅದರ ಮೇಲೆ ವ್ಯಾಮೋಹವನ್ನು ಹುಟ್ಟಿಸಲಾಗುತ್ತಿದೆ. ರಾಜ್ಯದಲ್ಲಿ ಕೇವಲ ಶೇ.25ರಷ್ಟಿರುವ ಈ ಶಾಲೆಗಳು ಲಾಭಕ್ಕೋಸ್ಕರ ಇವೆ, ಇವು ಮೋಸ ಮಾಡುತ್ತಿವೆ. ಕನ್ನಡಿಗರಿಗೆ ಇದು ಮನದಟ್ಟಾಗಬೇಕು ಎಂದು ಅವರು ವಸ್ತುಸ್ಥಿತಿಯನ್ನು ಬಿಡಿಸಿಟ್ಟರು.
12,000 ಕೋಟಿ ರೂ.ಮೀಸಲಿಡಿ: ಸಿದ್ದರಾಮ
ರೈತರ ಸಾಲ ಮನ್ನಾ ಮಾಡುವುದಕ್ಕಾಗಿ ಸರ್ಕಾರ, 46,000 ಕೋಟಿ ರೂ. ಮೀಸಲಿಟ್ಟಿದೆ. ಇದೇ ಸರ್ಕಾರ ಕನ್ನಡ ಶಾಲೆಗಳಿಗಾಗಿ 12,000 ಕೋಟಿ ರೂ. ಮೀಸಲಿಟ್ಟರೆ ಸಾಕು, ಪರಿಸ್ಥಿತಿ ಬದಲಾಗುತ್ತದೆ. ಕನ್ನಡ ಶಾಲೆಗಳಲ್ಲಿ ಈಗಲೂ 30 ವರ್ಷದ ಹಿಂದಿನ ಕೊಠಡಿ, ಅದೇ ಬೋರ್ಡ್, ಅದೇ ಮಾತು ಎನ್ನುವಂತಹ ಸ್ಥಿತಿಯಿದೆ. ಅದನ್ನು ಬದಲಿಸಿ ಸುಸಜ್ಜಿತ ಶಾಲೆಗಳನ್ನು ನಿರ್ಮಿಸಿ. ಈ ಶಾಲೆಗಳಲ್ಲಿ ಕಂಪ್ಯೂಟರ್ ಶಿಕ್ಷಣ ಕೊಡಿ, ಆಗ ಸಹಜವಾಗಿಯೇ ಈ ಶಾಲೆಗಳ ಮಕ್ಕಳ ಸಂಖ್ಯೆ ಏರುತ್ತದೆ ಎಂದು ಸಿದ್ದರಾಮ ಮನಹಳ್ಳಿ ಹೇಳಿದರು.
ಕರ್ನಾಟಕದಲ್ಲಿ ಸರ್ಕಾರದ್ದೇ ಆದ 12 ರೀತಿಯ ಅತ್ಯುತ್ತಮ ಶಾಲೆಗಳಿವೆ. ನವೋದಯ, ಮೊರಾರ್ಜಿ, ಅಂಬೇಡ್ಕರ್ ಸೇರಿ ವಿವಿಧ ಹೆಸರಿನ ಈ ಕನ್ನಡ ಶಾಲೆಗಳಲ್ಲಿ ಶೇ.100 ಫಲಿತಾಂಶವಿದೆ. ದಾಖಲಾತಿಯೂ ಇದೆ. ಹಾಗಿದ್ದರೆ ಉಳಿದ ಕನ್ನಡ ಶಾಲೆಗಳು ಹೀಗೇಕಿಲ್ಲ? ಇದಕ್ಕೆ ಕಾರಣ ಸೌಲಭ್ಯದ ಕೊರತೆ. ಶಿಕ್ಷಣ ಹೇಗಿರಬೇಕೆಂಬ ದೃಷ್ಟಿಕೋನದ ಕೊರತೆ. ಇದು ಸರಿಯಾದರೆ ಎಲ್ಲವೂ ಸರಿಯಾಗುತ್ತದೆ ಎನ್ನುವ ಸಿದ್ದರಾಮ ಮನಹಳ್ಳಿ ಚಿಂತನೆಗಳು ವಿಚಾರ ಪ್ರಚೋದಕವಾಗಿದ್ದವು.
– ಕೆ. ಪೃಥ್ವಿಜಿತ್