ಬೆಂಗಳೂರು: ವಾತಾವರಣದಲ್ಲಿ ಉಂಟಾದ ಬದಲಾವಣೆಗಳಿಂದ ಕಡಿಮೆ ಒತ್ತಡದ ತಗ್ಗು (ಟ್ರಫ್) ಮತ್ತು ಚಂಡಮಾರುತದ ಪರಿಚಲನೆಯಿಂದಾಗಿ ಭಾನುವಾರ ಹಾಗೂ ಸೋಮವಾರ ಧಾರಾಕಾರ ಮಳೆಯಾಗಿದ್ದು, ಮುಂದಿನ ಎರಡು ದಿನ ಕೂಡ ದಕ್ಷಿಣ ಒಳನಾಡಿನಲ್ಲಿ ಮಳೆ ಅಬ್ಬರಿಸುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.
ರಾಜ್ಯದ ದಕ್ಷಿಣ ಭಾಗ, ತಮಿಳುನಾಡು ಹಾಗೂ ಕೇರಳ ಭಾಗದಲ್ಲಿ ಗಾಳಿಯ ಒತ್ತಡ (ವಿಂಡ್ ಡಿ ಕನೆಕ್ಟ್) ಕಡಿಮೆಯಾದ ಪರಿಣಾಮ ಹೆಚ್ಚಿನ ಮಳೆಯಾಗಿದೆ. ಅದರಂತೆ ಬೆಂಗಳೂರು ನಗರ, ಗ್ರಾಮಾಂತರ, ಚಿಕ್ಕಬಳ್ಳಾಪುರ, ಕೋಲಾರ, ತುಮಕೂರು, ಚಿತ್ರದುರ್ಗ, ರಾಮನಗರ, ಚಾಮರಾಜನಗರ, ಮಂಡ್ಯ, ಮೈಸೂರು, ಹಾಸನ ಹಾಗೂ ಕೊಡಗು ಜಿಲ್ಲೆಗಳಲ್ಲಿ ಉತ್ತಮ ಮಳೆಯಾಗಿದೆ.
ಮುಂದಿನ 24 ಗಂಟೆಗಳಲ್ಲಿ ದಕ್ಷಿಣ ಒಳನಾಡಿನಲ್ಲಿ ಗುಡುಗು ಸಹಿತ ಮಳೆಯಾಗಲಿದ್ದು, ಕರಾವಳಿ ಹಾಗೂ ಉತ್ತರ ಒಳನಾಡಿನ ಹಲವೆಡೆ ಮಳೆಯಾಗುವ ಸಾಧ್ಯತೆಯಿದೆ. ರಾಜ್ಯ ಹಲವಾರು ಭಾನುವಾರ ಸುರಿದ ಮಳೆಗೆ ಚಂಡಮಾರುತ ಕಾರಣವಲ್ಲ.
ಬದಲಿಗೆ ವಾತಾವರಣದಲ್ಲಿ ಉಂಟಾದ ಬದಲಾವಣೆಗಳಿಂದ ಕಡಿಮೆ ಒತ್ತಡದ ತಗ್ಗು ನಿರ್ಮಾಣವಾಗಿದ್ದು, ಭಾರಿ ಮಳೆಗೆ ಕಾರಣವಾಗಿದೆ. ಇನ್ನು ಎರಡು ದಿನಗಳು ಇದೇ ರೀತಿಯ ವಾತಾವರಣ ಮುಂದುವರಿಲಿದ್ದು, ರಾಜ್ಯದ ಹಲವೆಡೆ ಸಾಧಾರಣದಿಂದ ಕೂಡಿದ ಹಗುರ ಮಳೆಯಾಗಲಿದೆ ಎಂದು ರಾಜ್ಯ ನೈಸರ್ಗಿಕ ವಿಪತ್ತು ನಿರ್ವಹಣಾ ಕೇಂದ್ರದ ನಿರ್ದೇಶಕ ಶ್ರೀನಿವಾಸ ರೆಡ್ಡಿ ತಿಳಿಸಿದ್ದಾರೆ.
ಬೆಂಗಳೂರಲ್ಲೂ ಭಾರೀ ಮಳೆ: ಮೇಲ್ಮೆ„ಸುಳಿಗಾಳಿಯಿಂದಾಗಿ ಭಾನುವಾರ ಹಲವಾರು ಭಾಗಗಳಲ್ಲಿ ಭಾರಿ ಮಳೆಯಾಗಿದೆ. ಬೆಂಗಳೂರು ನಗರ ಜಿಲ್ಲೆಯ ಹಲವಾರು ಭಾಗಗಳಲ್ಲಿ ಮುಂದಿನ ಎರಡು ದಿನಗಳು ಭಾರೀ ಮಳೆಯಾಗುವ ಸಾಧ್ಯತೆಯಿದ್ದು, ಬೆಂಗಳೂರಿನ ಹಲವೆಡೆಯೂ ಹೆಚ್ಚಿನ ಮಳೆಯಾಗುವ ಸಾಧ್ಯತೆಯಿದೆ ಎಂದು ಹವಾಮಾನ ಇಲಾಖೆ ಬೆಂಗಳೂರು ಕೇಂದ್ರದ ನಿರ್ದೇಶಕಿ ಗೀತಾ ಅಗ್ನಿಹೋತ್ರಿ ತಿಳಿಸಿದ್ದಾರೆ.