ಕೋಲಾರ: ಐದು ದಿನಗಳ ಹಿಂದೆ ಜಿಲ್ಲೆಯಿಂದ ನಾಪತ್ತೆಯಾಗಿರುವ ಕೋವಿಡ್ 19 ಪಾಸಿಟಿವ್ ವ್ಯಕ್ತಿಗಾಗಿ ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆ ಹುಡುಕಾಟ ಮುಂದುವರಿಸಿದೆ. ನಗರದ ಎಪಿಎಂಸಿ ಸಮೀಪದ ಹೋಟೆಲ್ ಒಂದರಲ್ಲಿ ಕೆಲಸ ಮಾಡಲು ಆಗಮಿಸಿದ್ದ ಮಂಡ್ಯ ಜಿಲ್ಲೆ ಮೂಲದ ನಲವತ್ತು ವರ್ಷದ ವ್ಯಕ್ತಿ ತಾನಾಗಿಯೇ ಕೋವಿಡ್ 19 ಪರೀಕ್ಷೆಗಾಗಿ ಗಂಟಲ ದ್ರವ ನೀಡಿದ್ದನು.
ಈತನಿಗೆ ಕೋವಿಡ್ 19 ಪಾಸಿಟಿವ್ ಇರುವುದು ಪತ್ತೆಯಾದ ಕ್ಷಣದಿಂದ ತನ್ನ ಮೊಬೈಲ್ ಆಫ್ ಮಾಡಿಕೊಂಡು ನಾಪತ್ತೆಯಾಗಿದ್ದನು. ಕೊನೆಯ ಕರೆ ಸ್ಪೀಕರಿಸಿದ ಸಂದರ್ಭದಲ್ಲಿ ತಾನು ಬಂಗಾರಪೇಟೆಯಲ್ಲಿದ್ದೇನೆ ಎಂದು ತಿಳಿಸಿದ್ದ ವ್ಯಕ್ತಿ, ಆನಂತರ ಮೊಬೈಲ್ ಆಫ್ ಮಾಡಿಕೊಂಡು ಜಿಲ್ಲಾಡಳಿತ ಹಾಗೂ ಪೊಲೀಸ್ ಇಲಾಖೆಯ ತಲೆಬಿಸಿಗೆ ಕಾರಣವಾಗಿದ್ದಾನೆ.
ದೂರು ದಾಖಲು: ಕೋವಿಡ್ 19 ಪಾಸಿಟಿವ್ ವ್ಯಕ್ತಿ ನಾಪತ್ತೆಯಾದ ಘಟನೆಯನ್ನು ಗಂಭೀರವಾಗಿ ಸ್ಪೀಕರಿಸಿರುವ ಜಿಲ್ಲಾ ಆರೋಗ್ಯ ಇಲಾಖೆಯು ಪಾಸಿಟಿವ್ ವ್ಯಕ್ತಿ ನಾಪತ್ತೆಯಾಗಿರುವ ಕುರಿತು ಪೊಲೀಸರಿಗೆ ದೂರು ನೀಡಿದ್ದಾರೆ. ಹಾಗೆಯೇ ಈತನನ್ನು ಹೋಟೆಲ್ ಕೆಲಸಕ್ಕೆ ಇಟ್ಟುಕೊಂಡು ಮೂರು ದಿನ ಕೆಲಸ ಮಾಡಿಸಿಕೊಂಡು ಊಟ ಹಾಕಿ, ಹೋಟೆಲ್ ಪಾರ್ಸೆಲ್ ಕಟ್ಟಿಕೊಡುವ ಕೆಲಸ ನೀಡಿ, ಅಂತಿಮವಾಗಿ 600 ರೂ. ನೀಡಿ ನಾಪತ್ತೆಯಾಗಲು ಕಾರಣರಾಗಿರುವ ಹೋಟೆಲ್ ಮಾಲಿಕ ಚೇತನ್ ಎಂಬುವರ ಮೇಲೂ ಮಾಹಿತಿ ನೀಡದ ಆರೋಪದ ಮೇಲೆ ದೂರು ದಾಖಲಿಸಲಾಗಿದೆ.
ಹೋಟೆಲ್ ಮಾಲಿಕ ಚೇತನ್ ತನ್ನ ಹೋಟೆಲ್‌ನಲ್ಲಿ ಕೆಲಸಕ್ಕಿದ್ದ ವ್ಯಕ್ತಿ ಪಾಸಿಟಿವ್ ಎಂದು ತಿಳಿಯುತ್ತಿದ್ದಂತೆಯೇ ಹೋಟೆಲ್ ಮುಚ್ಚಿಸುತ್ತಾರೆಂಬ ಭೀತಿಯಲ್ಲಿ ಆತನನ್ನು ಕಳುಹಿಸಿಕೊಟ್ಟಿದ್ದಾರೆಂದು ಆರೋಗ್ಯ ಇಲಾಖೆ ಅಧಿಕಾರಿಗಳು ದೂರುತ್ತಾರೆ. ಆದರೂ, ಇದೀಗ ಹೋಟೆಲ್ ಮುಚ್ಚಿಸಿದ್ದು, ಅದರ ಮಾಲೀಕರು ಹಾಗೂ ಪಾರ್ಸೆಲ್ ಪಡೆದವರನ್ನು ಗುರುತಿಸಿ ಕ್ವಾರಂಟೈನ್ ಮಾಡಲಾಗಿದೆ.
ತಂಡ ರಚನೆ: ಕೋವಿಡ್ 19 ಪಾಸಿಟಿವ್ ವ್ಯಕ್ತಿ ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡು ರಾಜ್ಯಗಳಲ್ಲಿ ತಲೆ ಮರೆಸಿಕೊಂಡಿರಬಹುದು ಎಂಬ ಶಂಕೆಯ ಮೇಲೆ ಆತನನ್ನು ಹುಡುಕಲು ಪೊಲೀಸ್ ಇಲಾಖೆ ತಂಡವೊಂದನ್ನು ರಚಿಸಿದೆ. ಇಲಾಖೆಯ ಮೇಲಧಿಕಾರಿಗಳು ನೆರೆ ರಾಜ್ಯಗಳ ಪೊಲೀಸ್ ಇಲಾಖೆಗೂ ಈ ಕುರಿತು ಮಾಹಿತಿ ನೀಡಿ ಹುಡುಕಾಟಕ್ಕೆ ಸಹಕರಿಸುವಂತೆ ಕೋರಿದ್ದಾರೆ. ಕೋವಿಡ್ 19 ಪಾಸಿಟಿವ್ ವ್ಯಕ್ತಿಯ ಮೊಬೈಲ್‌ನಿಂದ ಹೊರ ಹೋಗಿರುವ ಕರೆಗಳ ಜಾಡು ಹಿಡಿದು ತನಿಖೆ ಮುಂದುವರಿಸುತ್ತಿರುವ ಪೊಲೀಸರಿಗೆ ಪಾಸಿಟಿವ್ ವ್ಯಕ್ತಿ ಆಂಧ್ರಪ್ರದೇಶದ ಕುಪ್ಪಂನಲ್ಲಿರಬಹುದು ಎಂಬ ಸುಳಿವು ದೊರೆ ತಿದ್ದು, ಹುಡುಕಾಟ ಸಾಗಿದೆ.
ಮತ್ತೂಂದು ಮೂಲದ ಪ್ರಕಾರ ನಾಪತ್ತೆಯಾಗಿರುವ ವ್ಯಕ್ತಿ ಕಳ್ಳತನ ಮಾಡುವ ಹವ್ಯಾಸ ಹೊಂದಿದ್ದು, ತನ್ನ ಜಾಡು ಪೊಲೀಸರಿಗೆ ಸಿಗಬಾರದೆಂಬ ಉದ್ದೇಶ ದಿಂದಲೇ ನಾಪತ್ತೆಯಾಗಿದ್ದಾನೆಂಬ ಮಾಹಿತಿ ಯೂ ಹೊರ ಬಿದ್ದಿದೆ. ಒಂದು ವೇಳೆ ಈತ ಗಡಿಯ ಮೂರು ರಾಜ್ಯಗಳಲ್ಲಿ ಓಡಾಡಿದ್ದರೆ ಈತನ ಜಾಡನ್ನು ಪತ್ತೆ ಹಚ್ಚಿ ಈತನಿಂದ ಸೋಂಕು ಹರಡಿರಬಹುದಾದ ವ್ಯಕ್ತಿಗಳನ್ನು ಗುರುತಿಸಿ ಕ್ವಾರಂಟೈನ್ ಮಾಡುವುದು ಕರ್ನಾಟಕ, ಆಂಧ್ರಪ್ರದೇಶ ಹಾಗೂ ತಮಿಳುನಾಡು ಪೊಲೀಸ್ ಅಧಿಕಾರಿಗಳಿಗೆ ದೊಡ್ಡ ಕೆಲಸವಾಗಲಿದೆ.
ಕೋಲಾರ ಜಿಲ್ಲೆಯಿಂದ ಕೋವಿಡ್ 19 ಪಾಸಿಟಿವ್ ವ್ಯಕ್ತಿ ನಾಪತ್ತೆಯಾಗಿರುವ ಬಗ್ಗೆ ಹಾಗೂ ಈತನ ಮಾಹಿತಿ ಮುಚ್ಚಿಟ್ಟ ಹೋಟೆಲ್ ಮಾಲೀಕರ ಮೇಲೆ ಎರಡು ಪ್ರತ್ಯೇಕ ದೂರುಗಳನ್ನು ದಾಖಲಿಸಲಾಗಿದೆ. ಪಾಸಿಟಿವ್ ವ್ಯಕ್ತಿಯನ್ನು ನೆರೆಯ ಆಂಧ್ರಪ್ರದೇಶ ಹಾಗೂ ತಮಿಳುನಾಡುಗಳಲ್ಲಿ ಹುಡುಕಲಾಗುತ್ತಿದೆ.
-ಡಾ.ಚಾರಿಣಿ, ಕೋವಿಡ್-19, ಜಿಲ್ಲಾ ನೋಡಲ್ ಅಧಿಕಾರಿ
* ಕೆ.ಎಸ್.ಗಣೇಶ್