ಹುಬ್ಬಳ್ಳಿ: ಒಳ್ಳೆಯ ಪಾತ್ರಗಳು ಬಂದರೆ ಈಗಲೂ ನಟಿಸಲು ಸಿದ್ಧವಾಗಿದ್ದೇನೆ. ಆದರೆ ಜನರು ಹೊಸ ಜವಾಬ್ದಾರಿ ನೀಡಿರುವುದರಿಂದ ಅವರ ನಿರೀಕ್ಷೆ ಪೂರ್ಣಗೊಳಿಸುವುದು ನನ್ನ ಮುಂದಿರುವ ಮೊದಲ ಕರ್ತವ್ಯವಾಗಿದೆ ಎಂದು ಸಂಸದೆ ಸುಲಮತಾ ಅಂಬರೀಷ ಹೇಳಿದರು.
ಇಲ್ಲಿನ ಬಿವಿಬಿ ಕಾಲೇಜಿನಲ್ಲಿ ‘ಅಮರ್’ ಚಿತ್ರದ ಪ್ರಚಾರಾರ್ಥ ವಿದ್ಯಾರ್ಥಿಗಳೊಂದಿಗೆ ಆಯೋಜಿಸಿದ್ದ ಸಂವಾದದಲ್ಲಿ ವಿದ್ಯಾರ್ಥಿಗಳ ಪ್ರಶ್ನೆಯೊಂದಕ್ಕೆ ಉತ್ತರಿಸಿದ ಅವರು, ಮಂಡ್ಯದ ಜನರು ನನ್ನ ಮೇಲೆ ಹಲವು ನಿರೀಕ್ಷೆಗಳನ್ನಿಟ್ಟುಕೊಂಡು ಸಂಸದೆಯಾಗಿ ಆಯ್ಕೆ ಮಾಡಿದ್ದಾರೆ. ಅವರ ನಿರೀಕ್ಷೆಗೆ ದ್ರೋಹ ಬಗೆಯುವ ಕೆಲಸ ಮಾಡುವುದಿಲ್ಲ. ಹೀಗಾಗಿ ಕ್ಷೇತ್ರದ ಅಭಿವೃದ್ಧಿ ದೃಷ್ಟಿಯಿಂದ ಜನರ ಸೇವೆ ನನ್ನ ಮೊದಲ ಕಾರ್ಯವಾಗಿದೆ ಎಂದರು.
ಸಿನಿಮಾ ರಂಗಕ್ಕೆ ಆಗಮಿಸುತ್ತೇನೆ ಎನ್ನುವ ನಿರೀಕ್ಷೆ ಇರಲಿಲ್ಲ. ಆಕಸ್ಮಿಕವಾಗಿ 16ನೇ ವಯಸ್ಸಿನಲ್ಲಿ ಬಂದ ಅವಕಾಶದಿಂದ ಈ ಹಂತಕ್ಕೆ ಬಂದು ತಲುಪಿದ್ದೇನೆ. ಸಾರ್ವಜನಿಕ ಬದುಕನ್ನು ಆಯ್ದುಕೊಂಡಾಗ ಎಲ್ಲರಂತೆ ಸಾಮಾನ್ಯ ಜೀವನ ನಡೆಸುವುದು ಕಷ್ಟಸಾಧ್ಯ. ಆದರೆ ಜನರ ಪ್ರೀತಿಯಲ್ಲಿ ನಾವು ತ್ಯಾಗ ಮಾಡಿರುವುದು ಮರೆಯುತ್ತೇವೆ. ನಾವು ಆಯ್ದುಕೊಳ್ಳುವ ಕ್ಷೇತ್ರ ನಮ್ಮ ಬದುಕನ್ನು ರೂಪಿಸುತ್ತದೆ. ಇದೀಗ ರಾಜಕೀಯ ಕ್ಷೇತ್ರ ಆಯ್ದುಕೊಂಡಿದ್ದು, ಜನರ ಭಾವನೆ, ಗೌರವಕ್ಕೆ ಧಕ್ಕೆಯಾಗದಂತೆ ನೋಡಿಕೊಳ್ಳುತ್ತೇನೆ ಎಂದರು.
ಅಂಬರೀಷರ ಕನಸು: ಅಮರ ಚಿತ್ರ ಅಂಬರೀಶ ಅವರ ಕನಸಾಗಿತ್ತು. ಈ ಚಿತ್ರವನ್ನು ನೋಡಬೇಕು ಎನ್ನುವ ಆಸೆ ಅವರದ್ದಾಗಿತ್ತು. ಆದರೆ ಆ ಭಾಗ್ಯ ಅವರಿಗೆ ದೊರೆಯಲಿಲ್ಲ. ಚಿತ್ರರಂಗದಲ್ಲಿ ಅವರನ್ನು ಎತ್ತರಕ್ಕೆ ಬೆಳೆಸಿದ ನಾಡಿನ ಜನರು ಈ ಚಿತ್ರ ವೀಕ್ಷಿಸಿ ಅಭಿಷೇಕಗೆ ಆಶೀರ್ವಾದ ಮಾಡುವ ಮೂಲಕ ಅಂಬರೀಷ ಅವರ ಕೊನೆ ಆಸೆ ಈಡೇರಿಸಬೇಕು. ಪರಿಸರದ ಕುರಿತಾಗಿ ಉತ್ತಮ ಸಂದೇಶವನ್ನು ಇಟ್ಟುಕೊಂಡು ಈ ಚಿತ್ರ ನಿರ್ಮಿಸಲಾಗಿದೆ ಎಂದರು.
ನಾಯಕ ನಟ ಅಭಿಷೇಕ ಅಂಬರೀಶ ಮಾತನಾಡಿ, ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುವಂತಹ ಚಿತ್ರಗಳಲ್ಲಿ ನಟಿಸಬೇಕು ಎಂಬುದು ನನ್ನ ಆಸೆ. ಎರಡು ಗಂಟೆಯ ಚಿತ್ರದಲ್ಲಿ ಇಡೀ ಜೀವನ ತೋರಿಸಲಾಗುತ್ತದೆ. ಕೊನೆಗೆ ಸತ್ಯಕ್ಕೆ ಮಾತ್ರ ಜಯ ಎಂಬುದು ತಿರುಳಾಗಿರುತ್ತದೆ. ನಮ್ಮ ಜೀವನಕ್ಕೆ ಪ್ರೇರಣೆ ನೀಡುವಂತಹ ವಿಷಯಗಳನ್ನು ಮಾತ್ರ ಸಿನಿಮಾಗಳಿಂದ ಸ್ವೀಕರಿಸಬೇಕು. ಜೀವನದಲ್ಲಿ ತಂದೆ ಗುಣ ಹಾಗೂ ತಾಯಿಯ ಶಿಸ್ತು ರೂಢಿಸಿಕೊಂಡಿದ್ದೇನೆ. ನನ್ನ ಮೊದಲ ಸಿನಿಮಾ ವೀಕ್ಷಿಸಿ ಆಶೀರ್ವಾದ ಮಾಡಬೇಕು ಎಂದು ಮನವಿ ಮಾಡಿದರು.
ಚಿತ್ರದ ನಿರ್ದೇಶಕ ನಾಗಶೇಖರ, ನಟ ದೊಡ್ಡಣ್ಣ, ನಿರ್ಮಾಪಕ ರಾಕ್‌ಲೈನ್ ವೆಂಕಟೇಶ, ನಿರ್ದೇಶಕ ಯೋಗರಾಜ ಭಟ್ಟ ಇನ್ನಿತರರಿದ್ದರು.